ರೋಬೋಟ್ ನಾಯಿ ಕಂಡು ಬೆದರಿದ ಬೀದಿನಾಯಿಗಳು!
ನಾಯಿಗಳು ಸ್ಪಲ್ಪ ಆತಂಕಕ್ಕೊಳಗಾಗಿದ್ದರೂ, ರೊಬೊಟಿಕ್ ನಾಯಿಯೊಂದಿಗೆ ತಮಾಷೆಯಾಗಿ ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತವೆ.
ಇಂದಿನ ಆಧುನಿಕ ಯುಗದಲ್ಲಿ ರೋಬೋಟ್‌ಗಳು ದೈನಂದಿನ ಜೀವನದ ಭಾಗವಾಗಿ ಮಾರ್ಪಟ್ಟಿವೆ. ಇದೀಗ ನಾಯಿ ಪ್ರತಿರೂಪದ ರೋಬೋಟ್ ವೊಂದನ್ನು ನಾಯಿಗಳು ಕುತೂಹಲದಿಂದ ಗಮನಿಸುತ್ತಿರುವ ವಿಡಿಯೋ ಒ೦ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಐಐಟಿ ಕಾನ್ಪುರದ ಟೆಕ್ಕೃತಿ ಎಂಬ ವಾರ್ಷಿಕ ಟೆಕ್ ಫೆಸ್ಟ್ ಕಾರ್ಯಕ್ರಮದಲ್ಲಿ ಈ ರೋಬೋಟ್ ನಾಯಿಯ ಪ್ರತಿರೂಪವನ್ನು ಪ್ರದರ್ಶಿಸಲಾಗಿದೆ. ಮಕ್ಸ್ ರೊಬೊಟಿಕ್ಸ್ ಕಂಪನಿಯು ಈ ರೋಬೋಟ್ ಅನ್ನು ತಯಾರಿಸಿದ್ದು, ಐಐಟಿ ಕಾನ್ಪುರದ ಕ್ಯಾಂಪಸ್ ನ ಹುಲ್ಲುಹಾಸಿನ ಮೇಲೆ ಎಐ ಚಾಲಿತ 'ನಾಲ್ಕು ಕಾಲಿನ' ರೋಬೋಟ್ ಅನ್ನು ನಾಯಿಗಳ ಮುಂದೆ ಪ್ರದರ್ಶಿಸಲಾಯಿತು.
ವೈರಲ್ ಆಗಿರುವ ವಿಡಿಯೋದಲ್ಲಿ ರೋಬೋಟ್ ನಾಯಿಯನ್ನು ಕಂಡು ಕುತೂಹಲಗೊಂಡ ನಾಯಿಯೊಂದು ರೋಬೋಟ್ ನಾಯಿಯ ಸುತ್ತಲೂ ಓಡುತ್ತಿರುವುದನ್ನು ಕಾಣಬಹುದು. ಇಲ್ಲಿ ನಾಯಿಗಳು ಸ್ಪಲ್ಪ ಆತಂಕಕ್ಕೊಳಗಾಗಿದ್ದರೂ, ರೊಬೊಟಿಕ್ ನಾಯಿಯೊಂದಿಗೆ ತಮಾಷೆಯಾಗಿ ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತದೆ. ಇತರ ನಾಯಿಗಳು ತಮ್ಮ ಪ್ರದೇಶದಲ್ಲಿ ಹೊಸ ನಾಯಿ ಬಂದಿರುವುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿರುವುದು ಕಾಣಬಹುದು. ಈ ನಾಯಿಗಳು ಜೋಡಿಯಾಗಿ ರೊಬೊಟಿಕ್ ನಾಯಿಯನ್ನು ಸುತ್ತುತ್ತಿರುವುದು ಕಾಣಬಹುದು.
ಈ ವಿಡಿಯೋವನ್ನು ಮಕ್ಸ್ ರೊಬೊಟಿಕ್ಸ್ ಸಂಸ್ಥಾಪಕ ಮತ್ತು ಸಿಇಒ ಮುಖೇಶ್ ಬಂಗಾರ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಅವರ ಕಂಪನಿಯು ಈ ಆಧುನಿಕ ರೋಬೋಟಿಕ್ ನಾಯಿಯನ್ನು ಅಭಿವೃದ್ಧಿಪಡಿಸಿದೆ.