ಇಸ್ಲಾಮಾಬಾದ್, ಮಾ.3- ನೂತನ ಸಂಸತ್ತಿನಲ್ಲಿ ಬಹುಮತ ಗಳಿಸಿದ ಶೆಹಬಾಜ್ ಷರೀಫ್, ಭಾನುವಾರ ಎರಡನೇ ಬಾರಿಗೆ ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಯಾದರು.
ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ)ಯ ಒಮ್ಮತದ ಅಭ್ಯರ್ಥಿಯಾಗಿದ್ದ ಶೆಹಬಾಜ್(72), 336 ಸದಸ್ಯರಿರುವ ಸದನದಲ್ಲಿ 201 ಮತ ಪಡೆದರು. ಅವರ ಎದುರಾಳಿ ಓಮರ್ ಅಯೂಬ್ ಖಾನ್ 92 ಮತ ಗಳಿಸಿದರು. ನ್ಯಾಷನಲ್ ಅಸೆಂಬ್ಲಿ ಸ್ಪೀಕರ್ ಸರ್ದಾರ್ ಅಯಾಜ್ ಸಾದಿಕ್ ಅವರು ಪಾಕಿಸ್ತಾನದ 24 ನೇ ಪ್ರಧಾನ ಮಂತ್ರಿಯಾಗಿ ಶೆಹಬಾಜ್ ಅವರನ್ನು ನೇಮಕಗೊಳಿಸಿದರು.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಶೆಹಬಾಜ್, ಸೋಮವಾರ ಅಧ್ಯಕ್ಷರ ಭವನ ಐವಾನ್-ಎ-ಸದರ್‌ನಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಪಿಟಿಐ ಬೆಂಬಲಿತ ಶಾಸಕರು ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರನ್ನು ಉಲ್ಲೇಖಿಸಿ 'ಆಜಾದಿ' ಮತ್ತು ಖೈದಿ ನಂ.804' ಘೋಷಣೆ ಕೂಗಿದರು. ಕೆಲವು ಪಿಟಿಐ ಬೆಂಬಲಿತ ಶಾಸಕರು ಇಮ್ರಾನ್ ಖಾನ್ ಅವರ ಪೋಸ್ಟರ್ ಸಹ ಹಿಡಿದಿದ್ದರು.ಪ್ರತಿಯಾಗಿ, ಪಿಎಂಎಲ್-ಎನ್ ಶಾಸಕರು 'ನವಾಜ್ ದೀರ್ಘಾಯುಷಿಯಾಗಲಿ' ಎಂದು ಕೂಗಿದರು.
ಪಿಎಂಎಲ್-ಎನ್ ಪಕ್ಷದ ವರಿಷ್ಠ ನವಾಜ್ ಷರೀಫ್ ಅವರು ಶೆಹಬಾಜ್ ಷರೀಫ್ ಅವರಿಗೆ ಮತ ಚಲಾಯಿಸಿದ ಮೊದಲ ವ್ಯಕ್ತಿ. ಶೆಹಬಾಜ್ ಏಪ್ರಿಲ್ 2022 ರಿಂದ ಆಗಸ್ಟ್ 2023 ರವರೆಗೆ ಸೇವೆ ಸಲ್ಲಿಸಿದ್ದರು.
ಫೆಬ್ರವರಿ 8 ರಂದು ನಡೆದ ಚುನಾವಣೆಯಲ್ಲಿ ಷರೀಫ್ ನೇತೃತ್ವದ ಪಕ್ಷ ಸ್ಪಷ್ಟ ಬಹುಮತ ಗಳಿಸಲು ವಿಫಲವಾಗಿದೆ. ಆದರೆ, 265 ಸ್ಥಾನಗಳಲ್ಲಿ 75 ಸ್ಥಾನ ಗಳಿಸಿದೆ. ಅವರನ್ನು ಪಿಪಿಪಿಯಲ್ಲದೆ, ಮುತ್ತಹಿದಾ ಕ್ವಾಮಿ ಮೂವ್ಮೆಂಟ್ (ಎಂಒಎಂ-ಪಿ), ಪಾಕಿಸ್ತಾನ್ ಮುಸ್ಲಿಂ ಲೀಗ್ (ಕ್ಯು), ಬಲೂಚಿಸ್ತಾನ್ ಅವಾಮಿ ಪಾರ್ಟಿ, ಪಾಕಿಸ್ತಾ ನ್ ಮುಸ್ಲಿಂ ಲೀಗ್ (ಜಡ್), ಇಸ್ತೇಕಾಮ್-ಎ-ಪಾಕಿಸ್ತಾನ್ ಪಾರ್ಟಿ ಮತ್ತು ನ್ಯಾಷನಲ್ ಪಾರ್ಟಿ ಬೆಂಬಲಿಸಿವೆ.