ಗೌರಿ ಲಂಕೇಶ್, ಕಲಬುರ್ಗಿ ಹತ್ಯೆ ಪ್ರಕರಣ: ವಿಶೇಷ ನ್ಯಾಯಾಲಯ ರಚನೆಗೆ ಕುಟುಂಬ ವರ್ಗ ಸ್ವಾಗತ

ವಿಚಾರವಾದಿಗಳಿಬ್ಬರ ಹತ್ಯೆಯ ಹಿಂದೆ ಹಿಂದೂ ಮೂಲಭೂತವಾದಿಗಳ ಕೈವಾಡ;

Update: 2024-02-05 06:30 GMT

ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಮತ್ತು ಖ್ಯಾತ ಸಾಹಿತಿ ಎಂಎಂ ಕಲಬುರ್ಗಿ ಹತ್ಯೆ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಲು ಕ್ರಮಕೈಗೊಳ್ಳುವಂತೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ (ಡಿ.06) ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಗೌರಿ ಲಂಕೇಶ್ ಅವರ ಹತ್ಯೆಯಾಗಿ 6 ವರ್ಷ ಕಳೆದಿವೆ. ಗೌರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿ, 10 ಸಾವಿರ ಪುಟಕ್ಕೂ ಹೆಚ್ಚಿನ ಚಾರ್ಜ್‌ ಶೀಟ್ ಸಲ್ಲಿಸಲಾಗಿದೆ. ಆದರೂ ತಪ್ಪಿತಸ್ಥರಿಗೆ ಇನ್ನೂ ಶಿಕ್ಷೆಯಾಗಿಲ್ಲ, ಇದಕ್ಕೆ ನಿಧಾನಗತಿಯ ವಿಚಾರಣೆಯೇ ಕಾರಣವಾಗಿದೆ. ಹಾಗಾಗಿ ಗೌರಿ ಲಂಕೇಶ್ ಹಾಗೂ ಸಾಹಿತಿ ಎಂಎಂ ಕಲುಬುರ್ಗಿ ಅವರ ಹತ್ಯೆ ಪ್ರಕರಣದ ವಿಚಾರಣೆಯನ್ನು ವಿಶೇಷ ನ್ಯಾಯಾಲಯಕ್ಕೆ ನೀಡಬೇಕು ಎಂದು ಸಾಹಿತಿಗಳು, ಚಿಂತಕರು, ಪತ್ರಕರ್ತರು ಹಾಗೂ ಹೋರಾಟಗಾರರು ಸರ್ಕಾರವನ್ನು ಒತ್ತಾಯಿಸಿದ್ದರು.

ಅಲ್ಲದೆ, ಕಳೆದ ವಾರ ಗೌರಿ ಲಂಕೇಶ್ ಅವರ ಸಹೋದರಿ ಕವಿತಾ ಲಂಕೇಶ್ ಮತ್ತು ಎಂಎಂ ಕಲಬುರ್ಗಿ ಅವರ ಪತ್ನಿ ಉಮಾದೇವಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪ್ರಕರಣದ ವಿಚಾರಣೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಅವರ ಗಮನ ಸೆಳೆದಿದ್ದರು. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಈ ಸೂಚನೆ ಮಹತ್ವ ಪಡೆದುಕೊಂಡಿದೆ.

ಸೆಪ್ಟೆಂಬರ್ 13ರಂದು ಕರ್ನಾಟಕ ವಿಧಿ ವಿಜ್ಞಾನ ಪ್ರಯೋಗಾಲಯ ನೀಡಿದ ಬ್ಯಾಲಿಸ್ಟಿಕ್ ವರದಿ ಪ್ರಕಾರ, ''2015ರಲ್ಲಿ ಸಾಹಿತಿ ಎಂ ಎಂ ಕಲಬುರ್ಗಿ ಅವರನ್ನು ಕೊಲ್ಲಲು ಬಳಸಿದ ಬಂದೂಕಿನಿಂದಲೇ ಗೌರಿ ಲಂಕೇಶ್ ಹತ್ಯೆಯಾಗಿದೆʼʼ ಎಂದು ಹೇಳಲಾಗಿದೆ. ಹಾಗಾಗಿಯೇ ಇದೀಗ ಗೌರಿ ಲಂಕೇಶ್ ಮತ್ತು ಡಾ.ಎಂ ಎಂ ಕಲಬುರ್ಗಿ ಹತ್ಯೆ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಲು ಕ್ರಮಕೈಗೊಳ್ಳಲಾಗಿದೆ.

ಈ ಎರಡೂ ಹತ್ಯೆ ಪ್ರಕರಣಗಳು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲೇ ನಡೆದಿದ್ದವು. ಎರಡು ಪ್ರಕರಣಗಳ ತನಿಖೆಗಾಗಿ ಅವರು ಎಸ್ಐಟಿ ರಚನೆ ಮಾಡಿದ್ದರು. ತನಿಖೆ ಕೂಡ ತೀವ್ರಗತಿಯಲ್ಲಿ ನಡೆಸಲಾಗಿತ್ತು. ವಿಚಾರವಾದಿಗಳಿಬ್ಬರ ಹತ್ಯೆಯ ಹಿಂದೆ ಹಿಂದೂ ಮೂಲಭೂತವಾದಿ ಬಹುರಾಜ್ಯ ಜಾಲ ಕೆಲಸ ಮಾಡಿರುವುದನ್ನು ಬೇಧಿಸಿದ್ದ ಎಸ್‌ ಐಟಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿತ್ತು.

ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಒಟ್ಟು 18 ಆರೋಪಿಗಳ ಪೈಕಿ 17 ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ವಿಕಾಸ್ ಪಾಟೀಲ್ ತಲೆಮರೆಸಿಕೊಂಡಿದ್ದಾನೆ. ಈ ಪ್ರಕರಣದ ಕುರಿತು ತನಿಖೆ ನಡೆಸಿದ ಎಸ್ಐಟಿ ಅಧಿಕಾರಿಗಳು ಬೆಂಗಳೂರಿನ 1ನೇ ಸೆಷನ್ಸ್ ಕೋರ್ಟಿಗೆ ಒಂದು ವರ್ಷದ ಬಳಿಕ 500ಕ್ಕೂ ಹೆಚ್ಚು ಸಾಕ್ಷಿಗಳು ಹಾಗೂ ಒಂದು ಸಾವಿರಕ್ಕೂ ಹೆಚ್ಚು ಪುರಾವೆಗಳನ್ನು ದಾಖಲಿಸಿರುವ ಸುಮಾರು 10 ಸಾವಿರ ಪುಟಕ್ಕೂ ಹೆಚ್ಚಿನ ಆರೋಪಪಟ್ಟಿಯನ್ನು ಸಲ್ಲಿಸಿದ್ದರು.

2022ರ ಜೂನ್‌ನಿಂದ ವಿಚಾರಣೆ ಆರಂಭವಾಗಿದ್ದು ಈ ವರಗೆ ಕೇವಲ 93 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. ಆದರೆ, ಆರೋಪಪಟ್ಟಿಯಲ್ಲಿ 520 ಸಾಕ್ಷಿ ಹಾಗೂ 1200 ಪುರಾವೆಗಳಿದ್ದು, ಅವುಗಳಲ್ಲಿ 200 ಸಾಕ್ಷಿಗಳನ್ನು ಕೈಬಿಡಲಾಗಿದೆ. ಉಳಿದ 320 ಸಾಕ್ಷಿಗಳ ವಿಚಾರಣೆ ಪೂರ್ಣಗೊಳ್ಳಬೇಕಾದರೆ ಸುಮಾರು 3-4 ವರ್ಷ ಸಮಯ ತಗೆದುಕೊಳ್ಳುತ್ತದೆ. ಈಗಾಗಲೇ 6 ವರ್ಷ ಕಳೆದುಹೋಗಿದೆ.

ಆ ಹಿನ್ನೆಲೆಯಲ್ಲಿ ನ್ಯಾಯಾಲಯದ ನಿಧಾನಗತಿಯ ವಿಚಾರಣೆ ಮತ್ತು ವಿಚಾರಣೆ ನಡೆಸಬೇಕಿರುವ ಸಾಕ್ಷಿಗಳ ದೊಡ್ಡ ಸಂಖ್ಯೆಯನ್ನು ಪರಿಗಣಿಸಿ ಈ ಎರಡು ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ರಚಿಸುವಂತೆ ಹತ್ಯೆಗೀಡಾದ ಇಬ್ಬರೂ ವಿಚಾರವಾದಿಗಳ ಕುಟುಂಬ ವರ್ಗ ಮತ್ತು ನಾಡಿನ ಪ್ರಗತಿಪರರು ಸರ್ಕಾರವನ್ನು ಒತ್ತಾಯಿಸಿದ್ದರು.

ವಿಶೇಷ ನ್ಯಾಯಾಲಯ ಸ್ಥಾಪನೆಗೆ ಕುರಿತ ಮುಖ್ಯಮಂತ್ರಿಗಳ ಸೂಚನೆಯ ಬಗ್ಗೆ ʼದ ಫೆಡರಲ್ʼ‌ ಜೊತೆ ಮಾತನಾಡಿದ ಗೌರಿ ಲಂಕೇಶ್ ಸಹೋದರಿ, ಸಿನಿಮಾ ನಿರ್ದೇಶಕಿ ಕವಿತಾ ಲಂಕೇಶ್, ʼʼಕಳೆದ ವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ವಿಶೇಷ ನ್ಯಾಯಾಲಯ ರಚನೆಗೆ ಮನವಿ ಪತ್ರ ಸಲ್ಲಿಸಿದ್ದೆ. ನಮ್ಮ ಬೇಡಿಕೆಗೆ ಸಿದ್ದರಾಮಯ್ಯ ಅವರು ಸ್ಪಂದಿಸಿರುವುದು ಸಂತೋಷದ ವಿಚಾರ. ಏಕೆಂದರೆ ಸೆಷನ್ಸ್‌ ನ್ಯಾಯಾಲಯಗಳಲ್ಲಿ ವಾರದಲ್ಲಿ ಐದು ದಿನ ವಿಚಾರಣೆಗೆ ಅವಕಾಶ ನೀಡಲಾಗುತ್ತಿತ್ತು. ಅದು ಕೂಡ ದಿನಕ್ಕೆ ಎರಡು-ಮೂರು ಗಂಟೆ ಮಾತ್ರ ವಿಚಾರಣೆಗಳು ನಡೆಯುತ್ತಿದ್ದವು. ಹಾಗಾಗಿ ವಿಳಂಬವಾಗುತ್ತಿತ್ತು. ಇದೀಗ ವಿಶೇಷ ನ್ಯಾಯಾಲಯದಿಂದ ಒಂದು ವರ್ಷದಲ್ಲಿ ವಿಚಾರಣೆ ಪೂರ್ಣಗೊಂಡರೆ ಗೌರಿಗೆ ನ್ಯಾಯ ಸಿಕ್ಕಂತಾಗುತ್ತದೆʼʼ ಎಂದು ಹೇಳಿದರು.

ಗೌರಿ ಲಂಕೇಶ್‌ ಅವರಿಗೆ ಆಪ್ತರಾಗಿದ್ದ ಹಿರಿಯ ಪತ್ರಕರ್ತ ಶಿವಸುಂದರ್ ಅವರು ಈ ಬೆಳವಣಿಗೆ ಬಗ್ಗೆ ʼದ ಫೆಡರಲ್ʼ‌ ಜೊತೆ ಮಾತನಾಡಿದ್ದು, ʼʼನಮ್ಮ ಒಂದು ಬೇಡಿಕೆಗೆ ಸರ್ಕಾರ ಇದೀಗ ಸ್ಪಂದಿಸಿ, ವಿಶೇಷ ನ್ಯಾಯಾಲಯ ರಚನೆಗೆ ಆದೇಶ ಕೊಟ್ಟಿದೆ. ಮತ್ತೊಂದು ಬೇಡಿಕೆ ಎಂದರೆ ಆ ನ್ಯಾಯಾಲಯಕ್ಕೆ ವಿಚಾರಣೆ ಮುಗಿಯುವವರೆಗೂ ಒಬ್ಬರೇ ನ್ಯಾಯಾಧೀಶರನ್ನು ನೇಮಕ ಮಾಡಬೇಕು ಎನ್ನುವುದಾಗಿದೆ. ಏಕೆಂದರೆ ಈ ಮೂರು ವರ್ಷದಲ್ಲಿ ಮೂವರು ನ್ಯಾಯಾಧೀಶರ ಬದಲಾವಣೆ ಮಾಡಲಾಯಿತು. ಇದರಿಂದ ನ್ಯಾಯ ಸಿಗಲು ವಿಳಂಬವಾಗುತ್ತದೆ. ಒಬ್ಬರೇ ನ್ಯಾಯಾಧೀಶರನ್ನು ನೇಮಕ ಮಾಡಿದರೆ 1-2 ವರ್ಷದ ಅವಧಿಯಲ್ಲಿ ತೀರ್ಪು ಬರುದ ಸಾಧ್ಯತೆ ಇದೆ” ಎಂದು ತಿಳಿಸಿದರು.

Tags:    

Similar News