ನಕಲಿ ವೈದ್ಯರಿಂದ ಮೃತಪಟ್ಟ ವೈದ್ಯರ ಪರವಾನಿಗೆ ಬಳಕೆ!

ಕಳೆದ ವರ್ಷ ಭಾರೀ ಸದ್ದು ಮಾಡಿದ್ದ ಅನಧಿಕೃತ ಭ್ರೂಣ ಲಿಂಗ ಪತ್ತೆ ಪರೀಕ್ಷೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ಬಳಿಕ ಈ ವಿಚಾರದಲ್ಲಿ ಕಠಿಣ ನಿಲುವು ತಳೆದಿರುವ ಸರ್ಕಾರ ಇದುವರೆಗೂ 1093 ನಕಲಿ ಕ್ಲಿನಿಕ್‌ಗಳಿಗೆ ಬೀಗ ಜಡಿದಿದೆ.

Update: 2024-03-24 02:40 GMT
ಸಾಂದರ್ಭಿಕ ಚಿತ್ರ | ಫೋಟೋ: linkedin

ರಾಜ್ಯದಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ನಕಲಿ ವೈದ್ಯರು, ಆಸ್ಪತ್ರೆ, ಕ್ಲಿನಿಕ್‌ ಮತ್ತು ಪ್ರಯೋಗಾಲಯಗಳ ಪತ್ತೆ ಕಾರ್ಯವನ್ನು ತೀವ್ರಗೊಳಿಸಿರುವ ಆರೋಗ್ಯ ಇಲಾಖೆ ಬರೋಬ್ಬರಿ 1,775 ನಕಲಿ ವೈದ್ಯರನ್ನು ಪತ್ತೆ ಹಚ್ಚಿದೆ.

ಕಳೆದ ವರ್ಷ ಭಾರೀ ಸದ್ದು ಮಾಡಿದ್ದ ಅನಧಿಕೃತ ಭ್ರೂಣ ಲಿಂಗ ಪತ್ತೆ ಪರೀಕ್ಷೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ಬಳಿಕ ಈ ವಿಚಾರದಲ್ಲಿ ಕಠಿಣ ನಿಲುವು ತಳೆದಿರುವ ಸರ್ಕಾರ ಇದುವರೆಗೂ 1093 ನಕಲಿ ಕ್ಲಿನಿಕ್‌ಗಳಿಗೆ ಬೀಗ ಜಡಿದಿದೆ.

ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಖಾಸಗಿ ವೈದ್ಯಕೀಯ ಸಂಸ್ಥೆಗಳು ಕೂಡಾ ಕೆಪಿಎಂಇ ಕಾಯ್ದೆಯಡಿ ಕಡ್ಡಾಯವಾಗಿ ನೋಂದಣಿಯಾಗಬೇಕಿದ್ದರೂ, ಕೆಲವು ಕ್ಲಿನಿಕ್‌ಗಳು ನೋಂದಣಿ ಮಾಡಿಕೊಳ್ಳದೆಯೇ ಕಾರ್ಯ ನಿರ್ವಹಿಸುತ್ತಿದೆ.

ರಾಜ್ಯದಲ್ಲಿ ಇದುವರೆಗೆ 1,775 ನಕಲಿ ವೈದ್ಯರು ಪತ್ತೆಯಾದರೆ, 1093 ನಕಲಿ ಕ್ಲಿನಿಕ್‌ಗಳನ್ನು ಮುಚ್ಚಲಾಗಿದೆ. 485 ಕ್ಲಿನಿಕ್‌ಗಳಿಗೆ ನೋಟಿಸ್ ನೀಡಲಾಗಿದ್ದು, 54 ಕ್ಲಿನಿಕ್‌ಗಳನ್ನು ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ.

ಇದುವರೆಗೂ 24 ನಕಲಿ ವೈದ್ಯರಿಂದ ದಂಡವನ್ನು ವಸೂಲಿ ಮಾಡಲಾಗಿದ್ದು, ನಕಲಿ ಕ್ಲಿನಿಕ್‌ಗಳಿಗೆ ಸಂಬಂಧಿಸಿದಂತೆ ಒಟ್ಟು 143 ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗಿವೆ.

ನಕಲಿ ಆರೋಗ್ಯ ಸೇವೆ ನೀಡುತ್ತಿರುವವರನ್ನು ತಡೆಗಟ್ಟಲು ರಾಜ್ಯ ಸರ್ಕಾರವು ಕೆಪಿಎಂಇ ಅಧಿನಿಯಮ 2007, ಸೆಕ್ಷನ್ 21 ರಂತೆ ತಾಲ್ಲೂಕು ಆರೋಗ್ಯ ಅಧಿಕಾರಿಗಳನ್ನು ಪ್ರಾಧಿಕೃತ ಅಧಿಕಾರಿಗಳನ್ನಾಗಿ ನೇಮಿಸಿದೆ. ಈ ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಭೇಟಿ ನೀಡಿ, ಕಲಿ ವೈದ್ಯರು ಕಂಡು ಬಂದಲ್ಲಿ ಕೆಪಿಎಂಇ ಕಾಯ್ದೆಯಡಿ ಕ್ರಮ ಕೈಗೊಳ್ಳುತ್ತಾರೆ.

ಹೊರದೇಶಕ್ಕೆ ಹೋಗುವ ಮತ್ತು ಮೃತಪಟ್ಟ ವೈದ್ಯರ ಪರವಾನಿಗೆ, ನೋಂದಣಿಗಳನ್ನು ಅನಧಿಕೃತವಾಗಿ ಬಳಸಿಕೊಳ್ಳುವ ನಕಲಿ ವೈದ್ಯರು ಅವುಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿ ತಮ್ಮ ಅಕ್ರಮ ಚಟುವಟಿಕೆಯನ್ನು ಮಾಡುತ್ತಾರೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Tags:    

Similar News