BANGALORE WATER CRISIS | ತ್ಯಾಜ್ಯ ನೀರು ಸಂಸ್ಕರಣೆಗೆ ಮುಂದಾದ ಸರ್ಕಾರ!

ಸಿಲಿಕಾನ ಸಿಟಿಯ ನೀರಿನ ಹಾಹಾಕಾರ ನೀಗಿಸಲು ತ್ಯಾಜ್ಯ ನೀರು ಬಳಕೆಗೆ ಸಿದ್ಧತೆ! | ಇನ್ನೊಂದು ವಾರದಲ್ಲಿ ನಿಯಮ ರೂಪಿಸುವ ಸಾಧ್ಯತೆ;

Update: 2024-03-07 13:30 GMT
ಬೆಂಗಳೂರು ನೀರು ಸಮಸ್ಯೆ

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ. ಇದೀಗ ರಾಜ್ಯ ಸರ್ಕಾರವು ತ್ಯಾಜ್ಯ ನೀರನ್ನು ಸಂಸ್ಕರಿಸಿ ಬಳಸಲು ಮುಂದಾಗಿದೆ.

ಬೆಂಗಳೂರಿನಲ್ಲಿ ಕಳೆದ ಎರಡು ವಾರಗಳಿಂದ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ. ಹೀಗಾಗಿ, ವಸತಿ ಸಮುಚ್ಛಯಗಳ (ಅಪಾರ್ಟ್ ಮೆಂಟ್‌ಗಳ) ತ್ಯಾಜ್ಯ ನೀರು ಸಂಸ್ಕರಿಸಿ ಅದನ್ನು ಶುದ್ದೀಕರಿಸಿ ಪುನಃ ಬಳಸುವುದರ ಬಗ್ಗೆ ಚರ್ಚೆ ನಡೆದಿದೆ.

ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಬುಧವಾರ, ಬಿಬಿಎಂಪಿ, ಬಿಡಿಎ, ನಗರಾಭಿವೃದ್ಧಿ ಇಲಾಖೆ, ಪರಿಸರ ಇಲಾಖೆಯ ಅಧಿಕಾರಿಗಳು ಮತ್ತು ಅಪಾರ್ಟ್‌ಮೆಂಟ್‌ಗಳ ನಿವಾಸಿಗಳ ಸಂಘದ ಪ್ರತಿನಿಧಿಯೊಂದಿಗೆ ಸಭೆ ನಡೆಸಿದರು. ಸಭೆಯ ನಂತರ ಮಾತನಾಡಿದ ಅವರು, ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚಳವಾಗುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರು ಪೂರೈಕೆ ಮಾಡಲು ಆಗುತ್ತಿಲ್ಲ. ಹೀಗಾಗಿ, ಬೆಂಗಳೂರಿನ ದೊಡ್ಡ ವಸತಿ ಸಮುಚ್ಛಯದಲ್ಲಿ (ಕಾಂಪ್ಲೆಕ್ಸ್‌ಗಳು) ಸಂಸ್ಕರಿಸಿರುವ ನೀರನ್ನು ನಿತ್ಯ ಬಳಕೆಗೆ (ಕುಡಿಯುವುದಕ್ಕೆ ಹೊರತುಪಡಿಸಿ) ಬಳಸಬಹುದು. ಹೀಗಾಗಿ, ಈ ನೀರನ್ನು ಸಂಸ್ಕರಣೆ ಮಾಡಿ ಮಾರಾಟ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಇದಕ್ಕೆ ಪೂರಕವಾಗಿ ಮಾರ್ಗಸೂಚಿ, ಮಾನದಂಡಗಳನ್ನು ಅಳವಡಿಸಲಾಗುವುದು ಎಂದರು.

ಬೆಂಗಳೂರಿನ ನೀರಿನ ಅವಶ್ಯಕತೆಯು ದಿನಕ್ಕೆ 2,600 ದಶಲಕ್ಷ ಲೀಟರ್ ತಲುಪಿದೆ. ಕಾವೇರಿಯ ಮೂಲಕ 1,460 ಎಂಎಲ್‌ಡಿ ನೀರನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತಿದೆ. ಇನ್ನುಳಿದ 1,392 ಎಂಎಲ್‌ಡಿಯಷ್ಟು ನೀರನ್ನು ಬೋರ್ ವೆಲ್‌ಗಳ ಮೂಲಕ ಪೂರೈಸಲಾಗುತ್ತಿದೆ ಎಂದರು.

ಇನ್ನೊಂದು ವಾರದಲ್ಲಿ ಆದೇಶ ಸಾಧ್ಯತೆ

ಬೆಂಗಳೂರಿನ ವಸತಿ ಸಮುಚ್ಛಯಗಳ ನೀರನ್ನು ಸಂಸ್ಕರಿಸಿ ಮರು ಬಳಕೆ ಮಾಡುವ ವಿಚಾರವಾಗಿ ಇನ್ನೊಂದು ವಾರದಲ್ಲಿ ಮಾನದಂಡ ರೂಪಿಸುವ ಸಾಧ್ಯತೆ ಇದೆ.

ಇನ್ನು ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಇದ್ದರೂ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳುತ್ತಿಲ್ಲ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ಮಳೆ ನೀರು ಕೊಯ್ಲು ಪದ್ಧತಿಯನ್ನು ಉಲ್ಲಂಘಿಸಿರುವ ಕಾರಣಕ್ಕಾಗಿ ಫೆಬ್ರವರಿಯ ಅಂತ್ಯಕ್ಕೆ 39,291 ವಸತಿ ಸಮುಚ್ಛಯಗಳು ಪ್ರತಿ ತಿಂಗಳು ಬರೋಬ್ಬರಿ 1.94 ಲಕ್ಷ ದಂಡ ಪಾವತಿ ಮಾಡಿವೆ ಎಂದು ಅವರು ಮಾಹಿತಿ ನೀಡಿದರು.

ಇನ್ನು ಬಿಬಿಎಂಪಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ 20 ವಸತಿ ಘಟಕ ಹೊಂದಿರುವ ವಸತಿ ಸಮುಚ್ಛಯಗಳಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಿಸಲಾಗುವುದು ಎಂದು ತಿಳಿಸಿದರು.

Tags:    

Similar News