ಪ್ರಜ್ವಲ್‌ ರೇವಣ್ಣನಿಗೆ ಜೈಲು ವಾಸ: ನ್ಯಾಯಾಂಗ ಬಂಧನ ವಿಧಿಸಿದ ನ್ಯಾಯಾಲಯ

ಮಾಜಿ ಸಂಸದ ಪ್ರಜ್ವಲ್‌ ರೇವಣ್ಣಗೆ ಜೂನ್‌ 24ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್​ ಆದೇಶ ಹೊರಡಿಸಿದೆ.;

Update: 2024-06-10 11:09 GMT
ಪ್ರಜ್ವಲ್‌ ರೇವಣ್ಣ ಅವರಿಗೆ 14ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಬೆಂಗಳೂರು: ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣಗೆ ಜೂನ್‌ 24ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್​ ಆದೇಶ ಹೊರಡಿಸಿದೆ.

ಪ್ರಜ್ವಲ್‌ ರೇವಣ್ಣ ಅವರ ಎಸ್‌ಐಟಿ ಕಸ್ಟಡಿ ಸೋಮವಾರ (ಜೂನ್​ 10) ರಂದು ಅಂತ್ಯಗೊಂಡಿದ್ದು, ಇಂದು ಬೆಂಗಳೂರಿನ 42 ನೇ ಎಸಿಎಂಎಂ ಕೋರ್ಟ್​ಗೆ ಹಾಜರುಪಡಿಸಲಾಗಿತ್ತು. ಇದೀಗ ಕೋರ್ಟ್​ ಪ್ರಜ್ವಲ್​ಗೆ ಜೂನ್ 24ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದು, ಪ್ರಜ್ವಲ್‌ ರೇವಣ್ಣನನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್‌ ಮಾಡಲಾಗುತ್ತಿದೆ.

ಪ್ರಜ್ವಲ್ ಬಸವನಗುಡಿ ಮನೆ ಸ್ಥಳ ಮಹಜರು

ಇನ್ನು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಸ್‍ಐಟಿ ಪೊಲೀಸರು ಬಸವನಗುಡಿ ನಿವಾಸಕ್ಕೆ ಅವರನ್ನು ಸೋಮವಾರ ( ಜೂನ್‌ 10) ಕರೆತಂದು ಮಹಜರು ನಡೆಸಿದ್ದಾರೆ. ಪ್ರಜ್ವಲ್ ರೇವಣ್ಣ ಅವರನ್ನು ಸ್ಥಳ ಮಹಜರಿಗೆ ಕರೆತಂದ ವೇಳೆ ಅವರ ತಾಯಿ ಭವಾನಿ ರೇವಣ್ಣ ಮನೆಯ ಮೊದಲ ಮಹಡಿಯಲ್ಲಿರುವ ತುಳಸಿಕಟ್ಟೆಗೆ ಪೂಜೆ ಸಲ್ಲಿಸುತ್ತಿದ್ದರು. ಈ ವೇಳೆ ಅಧಿಕಾರಿಗಳು ಮಹಜರು ಮುಕ್ತಾಯವಾಗುವವರೆಗೂ ಮನೆಯ ಪ್ರತ್ಯೇಕ ಜಾಗದಲ್ಲಿ ಇರುವಂತೆ ಮನೆಯ ಸದಸ್ಯರಿಗೆ ಸೂಚಿಸಿದರು. ಅಲ್ಲದೇ ಪ್ರಜ್ವಲ್‍ರನ್ನು ಭೇಟಿಯಾಗಲು ಮನೆಯ ಸದಸ್ಯರಿಗೆ ಅವಕಾಶ ನೀಡಲಿಲ್ಲ. ಅಶ್ಲೀಲ ವಿಡಿಯೋದಲ್ಲಿ ತಾನಿರುವುದನ್ನು ಪ್ರಜ್ವಲ್‌ ಒಪ್ಪಿಕೊಂಡಿಲ್ಲ. ಹೀಗಾಗಿ, ಅಶ್ಲೀಲ ವಿಡಿಯೋದಲ್ಲಿ ಕಾಣಿಸುವ ಜಾಗಕ್ಕೂ ಬಸವನಗುಡಿ ಮನೆಯ ಕೋಣೆಗೂ ತಾಳೆ ಆಗ್ತಿದೆಯಾ ಎಂದು ಪರಿಶೀಲನೆ ನಡೆಸಲಾಗುತ್ತಿದೆ.

ವಿಚಾರಣೆ ವೇಳೆ ಪೊಲೀಸರಿಂದ ತೊಂದರೆ ಆಯ್ತಾ ಎಂದು ಪ್ರಜ್ವಲ್‌ಗೆ ಜಡ್ಜ್ ಪ್ರಶ್ನೆ ಕೇಳಿದ್ದು, ಇದಕ್ಕೆ ಏನೂ ತೊಂದರೆ ಆಗಿಲ್ಲ ಸ್ವಾಮಿ ಎಂದು ಉತ್ತರಿಸಿದ್ದಾರೆ. ನಂತರ ಎಸ್ಐಟಿಯಿಂದ ಮೆಡಿಕಲ್‌ ಟೆಸ್ಟ್ ಹಾಗೂ ಇನ್ನಿತರ ಮಾಹಿತಿ ಪಡೆದು ಪ್ರಜ್ವಲ್‌ಗೆ ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ಸೂಚಿಸಿದ್ದಾರೆ.

Tags:    

Similar News