ಮಹಿಳಾ ಪಿಜಿಗೆ ನುಗ್ಗಿ ಯುವತಿಗೆ ಲೈಂಗಿಕ ಕಿರುಕುಳ, ದರೋಡೆ; ಆರೋಪಿ ಬಂಧನ

ಆಗಸ್ಟ್ 29ರ ಬೆಳಗಿನ ಜಾವ 3 ರಿಂದ 4ಗಂಟೆಯ ನಡುವೆ ಸುದ್ದುಗುಂಟೆಪಾಳ್ಯದ ಲಕ್ಷ್ಮಣ ದುರ್ಗಾ ಲೇಡೀಸ್ ಪಿಜಿಯ ಬಳಿ ಹಾದು ಹೋಗುತ್ತಿದ್ದಾಗ ಈತ ಪಿಜಿಯ ಬಾಗಿಲು ತೆರೆದಿರುವುದನ್ನು ಕಂಡು ಪಿಜಿಯೊಳಗೆ ಪ್ರವೇಶಿಸಿದ್ದಾನೆ.;

Update: 2025-09-04 12:55 GMT

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ 

ಮಹಿಳಾ ಪಿಜಿ ವಸತಿ ನಿಲಯಕ್ಕೆ ಅಕ್ರಮವಾಗಿ ನುಗ್ಗಿ ಯುವತಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿ ಹಣ ದೋಚಿ ಪರಾರಿಯಾದ ವ್ಯಕ್ತಿಯನ್ನು ಸುದ್ದಗುಂಟೆಪಾಳ್ಯ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಬಂಧಿತನನ್ನು ಆಂಧ್ರಪ್ರದೇಶದ ಮದನಪಳ್ಳಿಯ ನರೇಶ್ ಪಟ್ಟೇಮ್ ಎಂದು ಗುರುತಿಸಲಾಗಿದ್ದು, ಈತ ಬೈಕ್-ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, 2021ರಲ್ಲಿ ತನ್ನ ಊರಲ್ಲಿ ನಡೆದ ಎರಡು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿ ಬಂಧಿತನಾದ ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಆಗಸ್ಟ್ 29ರ ಬೆಳಗಿನ ಜಾವ 3 ರಿಂದ 4ಗಂಟೆಯ ನಡುವೆ ಸುದ್ದಗುಂಟೆಪಾಳ್ಯದ ಲಕ್ಷ್ಮಣ ದುರ್ಗಾ ಲೇಡೀಸ್ ಪಿಜಿಯ ಬಳಿ ಹಾದು ಹೋಗುತ್ತಿದ್ದಾಗ ಈತ ಪಿಜಿಯ ಬಾಗಿಲು ತೆರೆದಿರುವುದನ್ನು ಕಂಡು ಪಿಜಿಯೊಳಗೆ ಪ್ರವೇಶಿಸಿದ್ದಾನೆ. ಈ ವೇಳೆ ಭದ್ರತಾ ಸಿಬ್ಬಂದಿ ನಿದ್ರೆಯಲ್ಲಿದ್ದರು. ಒಳ ಪ್ರವೇಶಿಸಿದ ಈತ ಯುವತಿ ಮಲಗಿದ್ದ ಕೋಣೆಗೆ ನುಗ್ಗಿದ್ದಾನೆ. ಆರಂಭದಲ್ಲಿ, ತನ್ನ ರೂಮ್‌ಮೇಟ್ ಇರಬಹುದೆಂದು ಭಾವಿಸಿದ ಯುವತಿ ನಿದ್ರೆಯಲ್ಲೇ ಇದ್ದಳು. ಆದರೆ, ಆರೋಪಿ ಕೋಣೆಯ ಬಾಗಿಲುಗಳನ್ನು ಮುಚ್ಚಿ, ಯುವತಿಯ ಬಳಿ ಬಂದು  ಅಸಭ್ಯವಾಗಿ ವರ್ತಿಸಿದ್ದ ಎಂದು ದೂರಲಾಗಿತ್ತು.

ತಕ್ಷಣ ಎಚ್ಚೆತ್ತ ಯುವತಿ, ತೀವ್ರವಾಗಿ ಪ್ರತಿರೋಧಿಸಿ ಕಿರುಚಾಡಿದ್ದಾಳೆ. ಆದರೂ, ಆರೋಪಿ  ಆಕೆಯ ಮೇಲೆ ಹಲ್ಲೆ ನಡೆಸಿ, ಆಕೆಯ ಕಪಾಟಿನಲ್ಲಿದ್ದ 2,500 ರೂಪಾಯಿ ನಗದು ದೋಚಿಕೊಂಡು ಸ್ಥಳದಿಂದ ಪರಾರಿಯಾಗಿದ್ದನು.

ಈ ಬಗ್ಗೆ ಸಂತ್ರಸ್ತೆ ದೂರಿನ ಅನ್ವಯ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ ಆತನನ್ನು ಬಂಧಿಸಿದ್ದಾರೆ. 

Tags:    

Similar News