ಎತ್ತಿನಹೊಳೆ ಯೋಜನೆ ವಿಳಂಬ| ನೀರಿನ ಬದಲು ಹರಿಯುತ್ತಿದೆ ಹಣದ ಹೊಳೆ
ರಾಜಕಾರಣಿಗಳ ಪಾಲಿನ ʼಎಟಿಎಂʼ ಎಂಬ ಅಪಖ್ಯಾತಿ ಪಡೆದಿರುವ ಯೋಜನೆಯ ಕಾಮಗಾರಿ ವಿಳಂಬವಾಗುವ ಜತೆಗೆ ಯೋಜನಾ ವೆಚ್ಚವೂ ಬೆಟ್ಟದಂತೆ ಬೆಳೆಯುತ್ತಿದೆ. ಆ ಮೂಲಕ ಒಟ್ಟು ಯೋಜನಾ ವೆಚ್ಚ 26 ಸಾವಿರ ಕೋಟಿ. ರೂ. ಗಳಿಗೆ ಏರಿಕೆಯಾಗಿದೆ.;
ಎತ್ತಿನಹೊಳೆ ಯೋಜನೆ ಕಾಮಗಾರಿ
ಬಯಲುಸೀಮೆ ಜಿಲ್ಲೆಗಳ ಕುಡಿಯುವ ನೀರಿನ ಬವಣೆ ನೀಗಿಸುವ ಸಲುವಾಗಿ ರಾಜ್ಯ ಸರ್ಕಾರ ಆರಂಭಿಸಿರುವ ಎತ್ತಿನಹೊಳೆ ಯೋಜನೆ ಕಾಮಗಾರಿಯಲ್ಲಿ ಈವರೆಗೂ ಹನಿ ನೀರು ಹರಿಯದೇ ಹೋದರೂ ಹಣ ಹೊಳೆಯಂತೂ ಹರಿಯುತ್ತಿದೆ.
ರಾಜಕಾರಣಿಗಳ ಪಾಲಿನ ʼಎಟಿಎಂʼ ಎಂಬ ಅಪಖ್ಯಾತಿ ಪಡೆದಿರುವ ಯೋಜನೆಯ ಕಾಮಗಾರಿ ವಿಳಂಬವಾಗುವ ಜತೆಗೆ ಯೋಜನಾ ವೆಚ್ಚವೂ ಬೆಟ್ಟದಂತೆ ಬೆಳೆಯುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಹೆಚ್ಚುವರಿ 3000 ಕೋಟಿ ರೂ. ಹಣ ಬಿಡುಗಡೆಗೆ ರಾಜ್ಯ ಸರ್ಕಾರ ಅನುಮೋದನೆ ಪಡೆದಿದೆ. ಆ ಮೂಲಕ ಒಟ್ಟು ಯೋಜನಾ ವೆಚ್ಚ 26 ಸಾವಿರ ಕೋಟಿ. ರೂ. ಗಳಿಗೆ ಏರಿಕೆಯಾಗಿದೆ.
ನೀರು ಹರಿಯುವ ಬಗ್ಗೆಯೇ ಅನುಮಾನ
ಎತ್ತಿನಹೊಳೆ ಯೋಜನೆಗೆ 26 ಸಾವಿರ ಕೋಟಿ ಖರ್ಚು ಮಾಡಿದರೂ ಬಯಲು ಸೀಮೆ ಜಿಲ್ಲೆಗಳಿಗೆ ನೀರು ಹರಿಯುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಎತ್ತಿನಹೊಳೆಯಲ್ಲೇ ನೀರಿಲ್ಲ, ಇನ್ನು ಬಯಲುಸೀಮೆಗೆ ಹೇಗೆ ನೀರು ಹರಿಸುತ್ತಾರೆ ಎಂಬುದು ನೀರಾವರಿ ಹೋರಾಟಗಾರರ ಪ್ರಶ್ನೆಯಾಗಿದೆ. ಕೆಲ ಪ್ರದೇಶಗಳಲ್ಲಿ ಭೂಸ್ವಾಧೀನವೂ ಸರ್ಕಾರಕ್ಕೆ ಕಗ್ಗಂಟಾಗಿದ್ದು, ಅಂದುಕೊಂಡಂತೆ 2027 ಕ್ಕೆ ನೀರು ಒದಗಿಸುವುದು ಸವಾಲಾಗಿದೆ. ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ 5 ಟಿಎಂಸಿ ನೀರಿನ ಕೊರತೆ ಉಂಟಾಗಲಿದೆ ಎಂದು ಹೇಳಿರುವುದು ಯೋಜನೆಯನ್ನು ಅನುಮಾನದಿಂದ ನೋಡುವಂತೆ ಮಾಡಿದೆ.
ಎತ್ತಿನಹೊಳೆ ಯೋಜನೆಯಡಿ ಜಲಾಶಯ ನಿರ್ಮಾಣಕ್ಕೆ ದೊಡ್ಡಬಳ್ಳಾಪುರದ ಲಕ್ಕೇನಹಳ್ಳಿ ಬಳಿ ಒಟ್ಟು 2,673 ಎಕರೆ ಭೂಸ್ವಾಧೀನ ಅಗತ್ಯವಿದೆ. ಆದರೆ, ಸರ್ಕಾರ ನೀಡುವ ಪರಿಹಾರದ ಬಗ್ಗೆ ರೈತರಲ್ಲಿ ಅಸಮಾಧಾನ ಎದುರಾಗಿದ್ದು, ಇದೂ ಕೂಡ ಯೋಜನೆಗೆ ಹಿನ್ನಡೆ ತಂದಿದೆ.
"ನಮ್ಮ ತಾತನ ಕಾಲದಿಂದಲೂ ನಾವು ಇದೇ ಭೂಮಿಯಲ್ಲಿ ಅನ್ನ ಬೆಳೆದು ತಿನ್ನುತ್ತಿದ್ದೇವೆ. ಯಾವುದೋ ಜಿಲ್ಲೆಗೆ ನೀರು ಒದಗಿಸಲು ಸರ್ಕಾರ ನಮ್ಮ ಜಮೀನನ್ನು ಕಿತ್ತುಕೊಂಡು ನಮ್ಮನ್ನು ಬೀದಿ ಪಾಲು ಮಾಡಲು ಹೊರಟಿದೆ. ಮಕ್ಕಳಂತೆ ಸಾಕಿದ್ದ ಮರಗಿಡಗಳು ನಮ್ಮ ಕಣ್ಣ ಮುಂದೆಯೇ ಕಡಿಯಲು ಮುಂದಾಗುತ್ತಿದ್ದಾರೆ. ಕಷ್ಟ ಪಟ್ಟು ಬದುಕು ಕಟ್ಟಿಕೊಂಡ ನೆಲವನ್ನು ಬಿಟ್ಟು ಏಕಾಏಕಿ ಬೇರೆ ಕಡೆಗೆ ಹೋಗಿ ಎಂದರೆ ನಾವು ಹೋಗುವುದು ಹೇಗೆ, ನಮ್ಮ ಪ್ರಾಣ ಬಿಟ್ಟರೂ ನಾವು ಜಾಗ ಬಿಡಲ್ಲ" ಎಂದು ಬ್ಯಾರೇಜ್ ಗೆ ಜಾಗ ಕಳೆದುಕೊಳ್ಳಲಿರುವ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನ ಪಾಳ್ಯ ನಿವಾಸಿ ಶಿವರಾಜ್ ನೇಸರ ಅವರು 'ದ ಫೆಡರಲ್ ಕರ್ನಾಟಕ'ದ ಬಳಿ ಅಳಲು ತೋಡಿಕೊಂಡರು.
ಎತ್ತಿನಹೊಳೆ ಯೋಜನೆಯಲ್ಲಿ ವರ್ಷಕ್ಕೆ 24 ಟಿಎಂಸಿ ನೀರು ಲಭ್ಯವಾಗಲಿದೆ ಎಂದು ಆರಂಭದಲ್ಲಿ ಅಂದಾಜಿಸಲಾಗಿತ್ತು. ಅದರಲ್ಲಿ 14 ಟಿಎಂಸಿ ನೀರು ಕುಡಿಯುವ ಉದ್ದೇಶಕ್ಕೆ, 9.9 ಟಿಎಂಸಿ ನೀರನ್ನು ಕೆರೆಗಳಿಗೆ ತುಂಬಿಸಲು ಸಮಗ್ರ ಯೋಜನಾ ವರದಿ ಸಿದ್ದಪಡಿಸಲಾಗಿತ್ತು. ಬಯಲುಸೀಮೆಯ 7 ಜಿಲ್ಲೆಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕೆ ಮೊದಲ ಆದ್ಯತೆ ನೀಡಬೇಕೆಂಬ ಗುರಿ ಹೊಂದಲಾಗಿತ್ತು. ಕೊರತೆಯಾಗುವ ನೀರನ್ನು ಪಶ್ಚಿಮ ಘಟ್ಟದ ಬೇರೆ ಹೊಳೆಗಳು, ಮೂಲಗಳಿಂದ ಎತ್ತಿನಹೊಳೆಯ ಭಾಗಕ್ಕೆ ಹರಿಸಿ, ಬಯಲುಸೀಮೆಗೆ ಪೈಪ್ ಲೇನ್ ಅಥವಾ ಗುರುತ್ವಾಕರ್ಷಣಾ ಶಕ್ತಿಯ ಮೂಲಕ ಹರಿಸುವುದಾಗಿ ಸರ್ಕಾರ ಹೇಳಿತ್ತು.
ಏರುತ್ತಲೇ ಇದೆ ಯೋಜನಾ ವೆಚ್ಚ
ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ ನೀರನ್ನು ಪೂರ್ವಕ್ಕೆ ತಿರುಗಿಸಲು 8,323.50 ಕೋಟಿ ರೂ. ವೆಚ್ಚದ ಎತ್ತಿನಹೊಳೆ ಯೋಜನೆಗೆ 2012ರಲ್ಲೇ ಆಡಳಿತಾತ್ಮಕ ಅನುಮೋದನೆ ದೊರೆಯಿತು. 2014ರಲ್ಲಿ ಯೋಜನಾ ವೆಚ್ಚವನ್ನು 12,912.36 ಕೋಟಿ ರೂ.ಗೆ ಏರಿಸಿ, ಚಾಲನೆ ನೀಡಲಾಯಿತು.
2025ರ ಹೊತ್ತಿಗೆ ಎತ್ತಿನಹೊಳೆ ಯೋಜನೆಯ ಒಟ್ಟು ವೆಚ್ಚ 23,251 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಈಗಾಗಲೇ 17,147 ಕೋಟಿ ರೂ. ಖರ್ಚಾಗಿದೆ. ಈಗ ಮತ್ತೆ 3 ಸಾವಿರ ಕೋಟಿ ಹಣ ಬಿಡುಗಡೆಗೆ ಅನುಮೋದನೆ ಪಡೆದಿರುವುದರಿಂದ ಯೋಜನೆ ಬಿಳಿಯಾನೆಯಂತಾಗಿದೆ.
ಯೋಜನೆ ವಿಳಂಬದಿಂದಾಗಿ ಸಿಮೆಂಟ್, ಕಬ್ಬಿಣ, ಉಕ್ಕು, ಕಾರ್ಮಿಕರ ಕೂಲಿ ಸೇರಿದಂತೆ ಎಲ್ಲವೂ ಏರಿಕೆ ಆಗಿರುವುದರಿಂದ ಯೋಜನಾ ವೆಚ್ಚ ದುಪ್ಪಟ್ಟಾಗುತ್ತಿದೆ. ಚೀನಾ, ಜಪಾನ್ ದೇಶಗಳಂತೆ ಕಾಲಮಿತಿಯಲ್ಲಿ ಮುಗಿಯದೇ ಇದ್ದರೆ ಯೋಜನಾ ವೆಚ್ಚ ದುಬಾರಿಯಾಗಲಿದೆ. ಇದರಿಂದ ಜನರಿಗೆ ಉಪಯೋಗವೇನು ಎಂಬುದು ಜನರ ಪ್ರಶ್ನೆಯಾಗಿದೆ.
ಯೋಜನೆಯ ಲೋಪ ಉಲ್ಲೇಖಿಸಿದ್ದ ವರದಿ
2012ರ ಮೇ 9ರಲ್ಲಿ ಕೇಂದ್ರೀಯ ಜಲ ಆಯೋಗವು ಎತ್ತಿನಹೊಳೆ ಯೋಜನೆಯಲ್ಲಿ ಅನೇಕ ಲೋಪಗಳಿವೆ ಎಂದು ವರದಿ ನೀಡಿತ್ತು. ಯೋಜನಾ ಪ್ರದೇಶದ ಮಳೆಯ ಪ್ರಮಾಣ, ಸಂಗ್ರಹ ಸಾಮರ್ಥ್ಯ, ಪಶ್ಚಿಮ ಇಳಿಜಾರಿನಿಂದ ಪೂರ್ವಕ್ಕೆ ಸಾಗಿಸಬಹುದಾದ ನೀರಿನ ಪ್ರಮಾಣ ಅಧ್ಯಯನ ಮಾಡದೆ ಯೋಜನೆ ಜಾರಿಗೊಳಿಸುವುದು ಸೂಕ್ತವಲ್ಲ ಎಂಬ ಎಚ್ಚರಿಕೆ ನೀಡಿ, ಮರು ಅಧ್ಯಯನಕ್ಕೆ ಸೂಚಿಸಿತ್ತು. ಅಗತ್ಯ ಬಿದ್ದರೆ ತಾವೇ ಅಧ್ಯಯನ ನಡೆಸಿ ಸಮಗ್ರ ಯೋಜನೆಯ ಅಂತಿಮ ವರದಿ ನೀಡುತ್ತೇವೆ ಎಂದು ಹೇಳಿತ್ತು. 2014ರಲ್ಲಿ ನ್ಯಾಷನಲ್ ಇನ್ಸ್‌ಸ್ಟಿಟ್ಯೂಟ್ ಆಫ್ ಹೈಡ್ರಾಲಜಿ ಸಂಸ್ಥೆ ಕೂಡ ಎತ್ತಿನಹೊಳೆ ಯೋಜನೆ ಯಶಸ್ಸಿನ ಕುರಿತು ಅನುಮಾನ ವ್ಯಕ್ತಪಡಿಸಿತ್ತು. ಆದರೆ, ಎರಡೂ ವರದಿಗಳ ಶಿಫಾರಸುಗಳನ್ನು ರಾಜ್ಯ ಸರ್ಕಾರ ತಿರಸ್ಕರಿಸಿ ಯೋಜನೆಗೆ ಚಾಲನೆ ನೀಡಿತ್ತು.
"ಎತ್ತಿನಹೊಳೆ ಯೋಜನೆ ಕುರಿತಂತೆ ಈಗಾಗಲೇ ಏಳು ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮನವಿ ಕೊಟ್ಟಿದ್ದೇನೆ. ಏಳು ಜಿಲ್ಲೆಯ ಶಾಸಕರು, ಸಂಸದರನ್ನು ಕರೆದುಕೊಂಡು ಸ್ಥಳ ಪರಿಶೀಲನೆ ಮಾಡಬೇಕು. ನಾನು ಈಗಾಗಲೇ ಅಧ್ಯಯನ ಮಾಡಿದ್ದೇನೆ. ಅದರ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದೇನೆ. ಈಗ ಯೋಜನಾ ವೆಚ್ಚ 25,150 ಕೋಟಿ ಮಾಡಲಾಗಿದೆ. ಸರ್ಕಾರ 16 ಜಲಾಶಯಗಳನ್ನು ಕಟ್ಟಬೇಕು. ಮೊದಲನೆಯದಾಗಿ ದೊಡ್ಡಬಳ್ಳಾಪುರದ ಲಕ್ಕೇನಹಳ್ಳಿ ಬಳಿ ನಿರ್ಮಾಣ ಮಾಡಲಾಗುತ್ತಿದೆ. ನೀರು ಬಾರದ ಹಿನ್ನಲೆ ಜಮೀನು ಯಾರು ಕೊಡುತ್ತಾರೆ. ಬದುಕು ಕಟ್ಟಿಕೊಂಡ ನೆಲೆಗಳನ್ನು ಯಾರು ಕಳೆದುಕೊಳ್ಳುತ್ತಾರೆ. ಇದೊಂದು ದೊಡ್ಡ ಅವೈಜ್ಞಾನಿಕ ಯೋಜನೆ ಎಂದು ನೀರಾವರಿ ಹೋರಾಟಗಾರ ಚೌಡಪ್ಪ ಅವರು 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.
ಮೂಲ ಯೋಜನೆ ಏನು?
ಪಶ್ಚಿಮಾಭಿಮುಖವಾಗಿ ಹರಿಯುವ ಎತ್ತಿನಹೊಳೆ, ಎತ್ತಿನಹೊಳೆ-1 ಮತ್ತು 2, ಕಾಡುಮನೆಹೊಳೆ-1 ಹಾಗೂ 2, ಕೇರಿಹೊಳೆ, ಎತ್ತಿನಹೊಳೆ ಕೆಳಭಾಗ, ಹೊಂಗಡಹಳ್ಳಗಳಲ್ಲಿ ವಾರ್ಷಿಕ ಲಭ್ಯವಾಗುವ 34.26 ಟಿಎಂಸಿ ನೀರಿನ ಪೈಕಿ 24.01 ಟಿಎಂಸಿ ನೀರನ್ನು ಪೂರ್ವಕ್ಕೆ ತಿರುಗಿಸುವ ಸಮಗ್ರ ಯೋಜನೆಯೇ ಎತ್ತಿನಹೊಳೆ ಯೋಜನೆ. ಇದರಿಂದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ 29 ತಾಲೂಕಿನ 38 ಪಟ್ಟಣ ಪ್ರದೇಶಗಳ 6657 ಗ್ರಾಮಗಳ ಸುಮಾರು 75.59 (2023-24ರ ವೇಳೆಗೆ) ಲಕ್ಷ ಜನರಿಗೆ ನೀರು ಒದಗಿಸುವ ಉದ್ದೇಶ ಹೊಂದಿತ್ತು.
ಹಾಸನ ಜಿಲ್ಲೆಯ ಹೆಬ್ಬನಹಳ್ಳಿಯಿಂದ ದೊಡ್ಡಬಳ್ಳಾಪುರದ ಲಕ್ಕೇನಹಳ್ಳಿ ಬಳಿ ನಿರ್ಮಿಸುವ ಸಂಗ್ರಹಣಾ ಜಲಾಶಯ ಬ್ಯಾರೇಜ್ ಗೆ ನೀರು ಹರಿಸಲು 260 ಕಿ.ಮೀ. ಗುರುತ್ವಾಕರ್ಷಣಾ ನಾಲೆ ಕಾಮಗಾರಿ ಅಂತಿಮ ಹಂತ ತಲುಪಿದೆ. ಆದರೆ, ಬ್ಯಾರೇಜ್ ಗೆ ಭೂಸ್ವಾಧೀನ ಪ್ರಕ್ರಿಯೆ ಕಗ್ಗಂಟಾಗಿದೆ.
ಬಯಲು ಸೀಮೆ ಜಿಲ್ಲೆಗಳಿಗೆ ಲಾಭವೇನು?
ರಾಜ್ಯದ ಪೂರ್ವ ಭಾಗದ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿದಿದೆ. ಅಂತರ್ಜಲ ಹೆಚ್ಚಿಸುವ ಜತೆಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಸಣ್ಣ ನೀರಾವರಿ ಕೆರೆಗಳ ಸಾಮರ್ಥ್ಯದ ಶೇ.50 ನೀರು ತುಂಬಿಸಿ ಅಂತರ್ಜಲ ಪುನಶ್ವೇತಗೊಳಿಸಲು ಯೋಜನೆ ಸಹಕಾರಿಯಾಗಿದೆ. ಹಾಗಾಗಿಯೇ ಎತ್ತಿನಹೊಳೆ ಯೋಜನೆಯನ್ನು ಸರ್ಕಾರ ಜಿಲ್ಲಾವಾರು ಹಂಚಿಕೆ ಮಾಡಿದೆ.
ಚಿಕ್ಕಮಗಳೂರು ಜಿಲ್ಲೆಗೆ ಕುಡಿಯುವ ನೀರಿಗಾಗಿ 0.267 ಟಿಎಂಸಿ, ಹಾಸನಕ್ಕೆ ಕುಡಿಯುವ ನೀರಿಗಾಗಿ 0.512 ಟಿಎಂಸಿ, ಕೆರೆ ನೀರು 0.800 ಒಟ್ಟು 1.312 ಟಿಎಂಸಿ, ತುಮಕೂರು ಜಿಲ್ಲೆಗೆ ಕುಡಿಯುವ ನೀರಿಗಾಗಿ 2.620 ಟಿಎಂಸಿ, ಕೆರೆಗಳಿಗೆ 2.160 ಟಿಎಂಸಿ ಒಟ್ಟು 4.780 ಟಿಎಂಸಿ, ರಾಮನಗರ ಜಿಲ್ಲೆಗೆ ಕುಡಿಯುವ ನೀರಿಗಾಗಿ 2.028 ಟಿಎಂಸಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಕುಡಿಯುವ ನೀರಿಗಾಗಿ 4.543 ಟಿಎಂಸಿ, ಕೆರೆಗಳಿಗೆ 1.081 ಟಿಎಂಸಿ ಸೇರಿ ಒಟ್ಟು 5.624 ಟಿಎಂಸಿ, ಚಿಕ್ಕಬಳ್ಳಾಪುರ ಜಿಲ್ಲೆಗೆ ಕುಡಿಯುವ ನೀರಿಗಾಗಿ 2.217 ಟಿಎಂಸಿ, ಕೆರೆಗಳಿಗೆ 2.876 ಟಿಎಂಸಿ ಸೇರಿ ಒಟ್ಟು 5.093 ಟಿಎಂಸಿ ಹಾಗೂ ಕೋಲಾರ ಜಿಲ್ಲೆಗೆ ಕುಡಿಯುವ ನೀರಿಗಾಗಿ 2.842 ಟಿಎಂಸಿ, ಕೆರೆಗಳಿಗೆ 2.064 ಟಿಎಂಸಿ ಸೇರಿ ಒಟ್ಟು 4.900 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಆ ಪ್ರಕಾರ ಎತ್ತಿನಹೊಳೆ ಯೋಜನೆಯಲ್ಲಿ ಕುಡಿಯುವ ನೀರಿಗಾಗಿ 15.029 ಟಿಎಂಸಿ, ಕೆರೆಗಳಿಗೆ 8.981 ಟಿಎಂಸಿ ಸೇರಿ ಒಟ್ಟು 24.01 ಟಿಎಂಸಿ ನೀರು ಹರಿಸುವುದು ಯೋಜನೆಯ ಉದ್ದೇಶವಾಗಿದೆ.
ಎತ್ತಿನಹೊಳೆ ಯೋಜನೆ ವಿಳಂಬಕ್ಕೆ ಬೈರಗೊಂಡ್ಲು ಜಲಾಶಯವೇ ಮೇಲ್ನೋಟಕ್ಕೆ ಸಮಸ್ಯೆಯಾಗಿದೆ ಎಂದು ದೂರಲಾಗುತ್ತಿದೆ. ಆದರೆ, ಮೂಲ ಸಮಸ್ಯೆ ಎತ್ತಿನಹೊಳೆಯಲ್ಲೇ ಇದೆ. ನಿಗದಿತ ಪ್ರಮಾಣದಲ್ಲಿ ನೀರು ದೊರೆಯುವುದಿಲ್ಲ ಎಂದು ನಾನಾ ವರದಿಗಳು ಹೇಳಿದ್ದರೂ, ಸರ್ಕಾರವಾಗಲಿ, ಜನಪ್ರತಿನಿಧಿಗಳಾಗಲಿ ಆ ಬಗ್ಗೆ ಗಮನ ಹರಿಸದೆ ಯೋಜನೆ ಅನುಷ್ಠಾನಗೊಳಿಸುತ್ತಿದ್ದಾರೆ. ಜಲ ವಿಜ್ಞಾನದ ಮರು ಅಧ್ಯಯನ ನಡೆಸದೆ ಮುಂದುವರಿದರೆ ಕಟ್ಟಕಡೆಯ ಜಿಲ್ಲೆಗಳಿಗೆ ಒಂದು ಹನಿ ನೀರೂ ತಲುಪುವುದಿಲ್ಲ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ಅವರು 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.