ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಪ್ರತಿವರ್ಷ ಎರಡು ಸೀರೆ

69,919 ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1,37,509 ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ವಿತರಿಸಲು ಒಟ್ಟು 2,75,018 ಸೀರೆ ಖರೀದಿಸಲು ಸಂಪುಟ ಸಭೆ ಅನುಮೋದಿಸಿದೆ

Update: 2024-10-11 12:38 GMT
ಹೆಚ್‌ ಕೆ ಪಾಟೀಲ

ರಾಜ್ಯದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ 'ಸಮಗ್ರ ಶಿಶು ಅಭಿವೃದ್ಧಿ ಯೋಜನೆ'ಯಡಿ (ಐಸಿಡಿಎಸ್) 2024-25ನೇ ಸಾಲಿನಲ್ಲಿ ಸಮವಸ್ತ್ರವಾಗಿ ಎರಡು ಸೀರೆ ವಿತರಿಸುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ. ಈ ಯೋಜನೆಗೆ 13.75 ಕೋಟಿ ರೂ ವೆಚ್ಚವಾಗಲಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ, 'ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕರ್ನಾಟಕ ಕೈಮಗ್ಗ ನಿಗಮದಿಂದ ಪ್ರತಿವರ್ಷ ಎರಡು ಸೀರೆಗಳನ್ನು ಖರೀದಿಸಿ ವಿತರಿಸಲಾಗುವುದು. 69,919 ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1,37,509 ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ವಿತರಿಸಲು ಒಟ್ಟು 2,75,018 ಸೀರೆ ಖರೀದಿಸಲಾಗುವುದು' ಎಂದರು.

ಗಣಿ ಅಕ್ರಮ ತನಿಖೆ ಎಸ್‌ಐಟಿ ಅವಧಿ ವಿಸ್ತರಣೆ

ಅಕ್ರಮ ಗಣಿಗಾರಿಕೆಯ ತನಿಖೆಗೆ ಲೋಕಾಯುಕ್ತದಲ್ಲಿ ಸೃಜಿಸಲಾಗಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅವಧಿಯನ್ನು ಇನ್ನೂ ಒಂದು ವರ್ಷ ವಿಸ್ತರಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ.

ಕಬ್ಬಿಣದ ಗಣಿ ರಫ್ತು ಪ್ರಕರಣಗಳಿಗೆ ಸಂಬಂಧಿಸಿದ ಇನ್ನೂ 113 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಎರಡು ಪ್ರಕರಣಗಳಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಎಂಟು ಪ್ರಕರಣಗಳಲ್ಲಿ ಸಿಆರ್‌ಪಿಸಿ 173(8) ಅಡಿ ತನಿಖೆ ಬಾಕಿಯಿದ್ದು, ಅದಿರು ಮೌಲ್ಯಮಾಪನ ಸಮಿತಿಯ ವರದಿ ಬರಬೇಕಿದೆ. ಆರು ಪ್ರಕರಣಗಳು ತನಿಖಾ ಹಂತದಲ್ಲಿವೆ. ಈ ಕಾರಣಕ್ಕೆ ಎಸ್‌ಐಟಿ ಅವಧಿಯನ್ನು ವಿಸ್ತರಿಸುವುದು ಸೂಕ್ತವೆಂದು ತೀರ್ಮಾನಿಸಲಾಯಿತು ಎಂದು ಎಚ್‌ ಕೆ ಪಾಟೀಲ್‌ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

Tags:    

Similar News