BJP Infighting | ಶೋಕಾಸ್‌ ನೋಟಿಸ್‌ ಪಡೆದರೂ ವಿಜಯೇಂದ್ರ ವಿರುದ್ಧ ನಿಲ್ಲದ ಯತ್ನಾಳ್‌ ವಾಗ್ದಾಳಿ

ಪಕ್ಷದಲ್ಲಿ ಹೊಂದಾಣಿಕೆ ರಾಜಕಾರಣ ಮಾಡದಂತೆ ವರಿಷ್ಠರೇ ಸೂಚಿಸಿದ್ದಾರೆ. ಆದರೆ, ಯಡಿಯೂರಪ್ಪ ವಂಶ ರಾಜಕಾರಣ ಮಾಡುತ್ತಿದ್ದಾರೆ. ಅವರು ಯಾವುದೇ ಹೋರಾಟ ಮಾಡುತ್ತಿಲ್ಲ ಎಂದು ಯತ್ನಾಳ್‌ ವಾಗ್ದಾಳಿ ನಡೆಸಿದ್ದಾರೆ.

Update: 2024-12-02 14:47 GMT
ಬಸನಗೌಡ ಪಾಟೀಲ್​ ಯತ್ನಾಳ್​.

ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿಯ ಶೋಕಾಸ್​ ನೋಟಿಸ್ ಬಳಿಕವೂ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಾಗ್ದಾಳಿ ಮುಂದುವರಿಸಿದ್ದಾರೆ.

ವರಿಷ್ಠರು ಏನೇ ಕ್ರಮ ಕೈಗೊಂಡರೂ ವಿಜಯೇಂದ್ರ ವಿರುದ್ಧದ ನನ್ನ ಹೋರಾಟ ನಿರಂತರ ಎಂದು ಹೇಳುವ ಮೂಲಕ ವರಿಷ್ಠರಿಗೆ ತಲೆಬಿಸಿ ತಂದಿಟ್ಟಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಬೆದರಿಕೆಯಿಂದ ವಿಜಯೇಂದ್ರಗೆ ಅಧ್ಯಕ್ಷ ಪಟ್ಟ ಕಟ್ಟಲಾಗಿದೆ. ಮಾಜಿ ಸಿಎಂ ವಿರುದ್ಧ ಸಾಕಷ್ಟು ಗಂಭೀರ ಪ್ರಕರಣಗಳಿವೆ. ಇಂತವರಿಗೆ ನಾನೇಕೆ ಹೆದರಬೇಕು ಎಂದು ನವದೆಹಲಿಯಲ್ಲಿ ಬಸನಗೌಡ ಪಾಟೀಲ ಯತ್ನಾಳ ಗುಡುಗಿದ್ದಾರೆ.

ಶಿಸ್ತು ಸಮಿತಿ ನೀಡಿರುವ ಶೋಕಾಸ್ ನೊಟೀಸ್​ಗೆ ಒಂದೇ ನಿಮಿಷದಲ್ಲಿ ಉತ್ತರ ಕೊಡುತ್ತೇನೆ. ಈಗಾಗಲೇ ಉತ್ತರ ಸಿದ್ಧಪಡಿಸಿಕೊಂಡಿದ್ದೇನೆ. ಆದರೆ, ಕೇಂದ್ರ ಸಮಿತಿ ನೋಟಿಸ್ ನೀಡಿರುವ ಬಗ್ಗೆ ಅನುಮಾನವಿದೆ. ಬಿ.ವೈ ವಿಜಯೇಂದ್ರ ಅವರೇ ನೋಟಿಸ್ ಕಳುಹಿಸಿರುವ ಸಾಧ್ಯತೆ ಇದೆ. ಹೀಗಾಗಿ ಉತ್ತರಿಸುವುದಿಲ್ಲ. ಇ-ಮೇಲ್ ಅಥವಾ ರಿಜಿಸ್ಟರ್ ಪೋಸ್ಟ್ ಮೂಲಕ ಶಿಸ್ತು ಸಮಿತಿಯಿಂದ ನೋಟಿಸ್ ಬಂದರೆ ಉತ್ತರ ನೀಡುತ್ತೇನೆ ಎಂದಿದ್ದಾರೆ.

ಪಕ್ಷದಲ್ಲಿ ಹೊಂದಾಣಿಕೆ ರಾಜಕಾರಣ ಮಾಡದಂತೆ ವರಿಷ್ಠರೇ ಸೂಚಿಸಿದ್ದಾರೆ. ಆದರೆ, ಯಡಿಯೂರಪ್ಪ ವಂಶ ರಾಜಕಾರಣ ಮಾಡುತ್ತಿದ್ದಾರೆ. ಅವರು ಯಾವುದೇ ಹೋರಾಟ ಮಾಡುತ್ತಿಲ್ಲ. ಕೇವಲ ಪತ್ರಿಕಾಗೋಷ್ಠಿ ನಡೆಸಲಷ್ಟೇ ಸೀಮಿತವಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ರೇಣುಕಾಚಾರ್ಯ ತಿರುಗೇಟು

ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸಿಎಂ ಹಾಗೂ ಡಿಸಿಎಂ ಅವರೊಂದಿಗೆ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ ಎಂಬ ಯತ್ನಾಳ್‌, ಲಿಂಬಾವಳಿ ಆರೋಪಕ್ಕೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ. ಪ್ರಧಾನಿ ಮೋದಿ ಅವರನ್ನು ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಭೇಟಿಯಾಗುತ್ತಾರೆ. ಹಾಗಾದರೆ ಅವರದ್ದು ಅದು ಹೊಂದಾಣಿಕೆ ರಾಜಕಾರಣವಾ ಎಂದು ಪ್ರಶ್ನಿಸಿದ್ದಾರೆ.

ಡಿ.10ರಂದು ದಾವಣಗೆರೆಯಲ್ಲಿ ಮಾಜಿ ಸಚಿವರು, ಶಾಸಕರ ಸಭೆ ಮಾಡುತ್ತೇವೆ. ಡಿ.11ರಂದು ಸಮಾವೇಶ ಕುರಿತು ಪೂರ್ವಭಾವಿ ಸಭೆ ನಡೆಸಿ ದಿನಾಂಕ ನಿಗದಿ ಮಾಡುತ್ತೇವೆ. ಇದು ಯಾವುದೇ ವ್ಯಕ್ತಿಯ ಪರ ಸಮಾವೇಶ ಅಲ್ಲ. ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬುವ ಸಮಾವೇಶ ಮಾಡುತ್ತೇವೆ ಎಂದು ಹೇಳಿದ್ದಾರೆ.

ಯತ್ನಾಳ್​ ಅವರಿಗೆ ನೋಟಿಸ್‌ ನೀಡಿರುವ ಕುರಿತು ಪ್ರತಿಕ್ರಿಯಿಸಿ, ನೋಟಿಸ್ ಕೊಟ್ಟಿರುವುದಕ್ಕೆ ನನಗೆ ನೋವು ಇಲ್ಲ, ಖುಷಿಯೂ ಇಲ್ಲ. ವಿಜಯೇಂದ್ರ ಚಿಕ್ಕವನು ಅಂತೇಳಿ ಬಾಯಿಗೆ ಬಂದಂತೆ ಬೈದರೆ ಹೇಗೆ ಎಂದು ಕಿಡಿಕಾರಿದ್ದಾರೆ.

ನಾನೇ, ನನ್ನಿಂದಲೇ ಎನ್ನುವ ಮನೋಭಾವ ಯಾರೂ ಇಟ್ಟುಕೊಳ್ಳಬಾರದು. ಯತ್ನಾಳ್ ಹೊಂದಾಣಿಕೆ ರಾಜಕಾರಣದ ಆರೋಪ ಮಾಡುತ್ತಿದ್ದಾರೆ. ಇದನ್ನೆಲ್ಲಾ ಕೇಂದ್ರ ನಾಯಕರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಏನೇ ಭಿನ್ನಮತ ಇದ್ದರೂ ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸಿಕೊಳ್ಳಬೇಕು ಎಂದಿದ್ದಾರೆ.

ವಿಜಯೇಂದ್ರ ವಿರುದ್ಧ ಜಾರಕಿಹೊಳಿ ವಾಗ್ದಾಳಿ

ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಒಬ್ಬ ಬೇಜವಾಬ್ದಾರಿ ವ್ಯಕ್ತಿ. ಬಿಜೆಪಿ ರಾಜ್ಯಾಧ್ಯಕ್ಷನಾಗಲು ನಾಲಾಯಕ್. ವಕ್ಫ್ ಬೋರ್ಡ್ ಮಾಡುತ್ತಿರುವ ಭೂಕಬಳಿಕೆ ರಾಜ್ಯವಲ್ಲ, ಇಡೀ ದೇಶಕ್ಕೆ ಮಾರಕವಾಗಿದೆ. ವಿಜಯೆಂದ್ರ ಎರಡು ಸಲ ವಕ್ಫ್ ವಿರುದ್ಧ ಹೋರಾಟಕ್ಕೆ ಕರೆ ನೀಡಿ ಬೇರೆಲ್ಲೋ ಹೋಗಿ ಕುಳಿತಿದ್ದಾರೆ. ಯಡಿಯೂರಪ್ಪ ಹುಟ್ಟು ಹೋರಾಟಗಾರ, ಆದರೆ ವಿಜಯೇಂದ್ರ ನೀಟಾಗಿ ಬಟ್ಟೆ ಧರಿಸಿ ಶೋಕಿ ಮಾಡಲು ಲಾಯಕ್ಕಾದ ಮನುಷ್ಯ. ಪಕ್ಷದ ಅಧ್ಯಕ್ಷನಾಗಲು ಅವರಿಗೆ ಪರಿಪಕ್ವವಾದ ಸಮಯ ಇದಲ್ಲ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾಜಿ ಶಾಸಕ ಕುಮಾರ ಬಂಗಾರಪ್ಪ ಕೂಡ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೋಟಿಸ್ ನೀಡಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಕ್ಫ್ ವಿರುದ್ಧ ಹೋರಾಟ ರೂಪಿಸಬೇಕಾದವರು ಬಣ ರಾಜಕೀಯ ಮಾಡುತ್ತಿದ್ದಾರೆ ಎಂದು ವಿಜಯೇಂದ್ರ ವಿರುದ್ಧ ಹರಿಹಾಯ್ದಿದ್ದಾರೆ.

Tags:    

Similar News