BJP President Election | ಬಿ.ವೈ.ವಿಜಯೇಂದ್ರಗೆ ಬಿಜೆಪಿ ಅಧ್ಯಕ್ಷ ಗಾದಿ; ಕೋರ್ ಕಮಿಟಿಯಲ್ಲಿ ಯತ್ನಾಳ್ ಬಣಕ್ಕೆ ಮಣೆ ?
ಯತ್ನಾಳ್ ಬಣದ ತೀವ್ರ ವಿರೋಧದ ನಡುವೆಯೂ ವಿಜಯೇಂದ್ರ ಅವರನ್ನೇ ಅಧ್ಯಕ್ಷ ಸ್ಥಾನದಲ್ಲಿ ಕೆಲ ಷರತ್ತುಗಳೊಂದಿಗೆ ಮುಂದುವರಿಸಲು ವರಿಷ್ಠರು ತೀರ್ಮಾನಿಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.;
ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುವುದು ಬಹುತೇಕ ನಿಚ್ಚಳವಾಗಿದೆ. ಎರಡನೇ ಅವಧಿಗೆ ಪುನರಾಯ್ಕೆ ಬಯಸಿದ್ದ ಬಿ.ವೈ.ವಿಜಯೇಂದ್ರ ಅವರಿಗೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಈ ಸಂಬಂಧ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ ಎಂದು ಮೂಲಗಳು ಖಚಿತಪಡಿಸಿವೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದ ತೀವ್ರ ವಿರೋಧದ ನಡುವೆಯೂ ವಿಜಯೇಂದ್ರ ಅವರನ್ನೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ವರಿಷ್ಠರು ತೀರ್ಮಾನಿಸಿದ್ದು, ಕೆಲ ಷರತ್ತುಗಳನ್ನೂ ವಿಜಯೇಂದ್ರ ಮುಂದಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಫೆ.10 ರಂದು ಸೋಮಣ್ಣ ನಿವಾಸದ ಗೃಹ ಪ್ರವೇಶ ನೆಪದಲ್ಲಿ ದೆಹಲಿಗೆ ಭೇಟಿ ನೀಡಿದ್ದ ವಿಜಯೇಂದ್ರ ಅವರು ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿಜಯೇಂದ್ರ ಪರ ಒಲವು ತೋರಿದ್ದು, ಯುವ ನಾಯಕತ್ವದಲ್ಲೇ ಪಕ್ಷ ಸಂಘಟನೆ ಆಗಲಿ ಎಂದು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ. ಇನ್ನು ವಿಜಯೇಂದ್ರ ಅವರನ್ನು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿರುವ ಯತ್ನಾಳ್ ಬಣದ ನಾಯಕರಿಗೆ ಕೋರ್ ಕಮಿಟಿಯಲ್ಲಿ ಸೂಕ್ತ ಸ್ಥಾನಮಾನ ನೀಡಿ ಭಿನ್ನಮತ ಶಮನಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ದೆಹಲಿ ಭೇಟಿಯ ವೇಳೆ ವರಿಷ್ಠರು ಗ್ನೀನ್ ಸಿಗ್ನಲ್ ನೀಡಿದ ಬಳಿಕವೇ ವಿಜಯೇಂದ್ರ ಅವರು ಫೆ. 20ರೊಳಗೆ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ಮುಗಿಯಲಿದೆ. ನಾನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಯುತ್ತೇನೆ ಎಂದು ಪ್ರತಿಪಾದಿಸಿದ್ದರು.
ಕೋರ್ ಕಮಿಟಿಯಲ್ಲಿ ಯತ್ನಾಳ್ ಬಣಕ್ಕೆ ಮಣೆ
ರಾಜ್ಯಾಧ್ಯಕ್ಷ ಸ್ಥಾನವನ್ನು ಬಿ.ವೈ.ವಿಜಯೇಂದ್ರ ಅವರಿಗೆ ನೀಡಿ, ಬಿಜೆಪಿ ಕೋರ್ ಕಮಿಟಿಯಲ್ಲಿ ಯತ್ನಾಳ್ ಬಣದ ಸದಸ್ಯರಿಗೆ ಸ್ಥಾನ ನೀಡಲು ಹೈಕಮಾಂಡ್ ಚಿಂತನೆ ನಡೆಸಿದೆ.
ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸಿದರೆ ಬಣ ರಾಜಕೀಯ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೇ ಮುಂಬರುವ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಹಾಗಾಗಿ ಮತ್ತೊಂದು ಅವಧಿಗೆ ವಿಜಯೇಂದ್ರ ಅವರನ್ನು ಮುಂದುವರಿಸಲು ಯೋಜಿಸಿದೆ. ಹಾಗಾಗಿ ವಿಜಯೇಂದ್ರ ಮುಂದುವರಿಕೆಗೆ ವಿರೋಧ ವ್ಯಕ್ತಪಡಿಸಿರುವ ಯತ್ನಾಳ್ ಬಣವನ್ನು ಸಮಾಧಾನಪಡಿಸಲು ಕೋರ್ ಕಮಿಟಿಯಲ್ಲಿ ನೇಮಿಸಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.
ಯತ್ನಾಳ್ ಬಣದ ನಾಯಕರನ್ನು ಕೋರ್ ಕಮಿಟಿಗೆ ನೇಮಕ ಮಾಡುವುದರಿಂದ ಯಾವುದೇ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಚರ್ಚೆ ಆಗಬೇಕು. ವಿಜಯೇಂದ್ರ ಒಬ್ಬರೇ ಯಾವುದೇ ನಿರ್ಧಾರ ಕೈಗೊಳ್ಳಲು ಆಗುವುದಿಲ್ಲ. ಇದರಿಂದ ಯತ್ನಾಳ್ ಬಣಕ್ಕೂ ಹಿನ್ನೆಡೆಯಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಆದರೆ, ಎಷ್ಟು ಜನರನ್ನು ಕೋರ್ ಕಮಿಟಿಗೆ ಸೇರ್ಪಡೆ ಮಾಡಲಾಗುತ್ತಿದೆ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ಜೊತೆಗೆ ತಟಸ್ಥ ಬಣದವರನ್ನು ಯಾವ ರೀತಿ ಮನವೊಲಿಸುತ್ತದೆ ಎಂಬುದು ಕುತೂಹಲ ಕೆರಳಿಸಿದೆ.
ವಿಜಯೇಂದ್ರ ಬದಲಾವಣೆ ಖಚಿತ ಎಂದ ಭಿನ್ನರ ಬಣ
ಬಿ.ವೈ.ವಿಜಯೇಂದ್ರ ಅವರು ಎರಡನೇ ಬಾರಿಗೆ ಅಧ್ಯಕ್ಷರಾಗಿ ಮುಂದುವರಿಯುವ ವಿಶ್ವಾಸ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಯತ್ನಾಳ್ ನೇತೃತ್ವದ ಭಿನ್ನರ ಬಣದ ನಾಯಕರು ಯಾವುದೇ ಕಾರಣಕ್ಕೂ ವಿಜಯೇಂದ್ರ ಅವರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತಿದ್ದಾರೆ.
ಬಿ.ವೈ.ವಿಜಯೇಂದ್ರ ಅವರನ್ನು ಬದಲಾವಣೆ ಮಾಡುವ ವಿಶ್ವಾಸ ಹೆಚ್ಚಿದೆ. ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳು, ವಿಜಯೇಂದ್ರ ವಿರುದ್ಧ ಹೆಚ್ಚುತ್ತಿರುವ ಅಸಮಾಧಾನಿತರ ದಂಡು, ಏಕಪಕ್ಷೀಯ ನಿರ್ಧಾರಗಳನ್ನು ಹೈಕಮಾಂಡ್ ಗಮನಿಸಿದೆ. ಹಾಗಾಗಿ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುವುದಿಲ್ಲ ಎಂದು ಭಾವಿಸಿದ್ದೇವೆ ಎಂಬುದು ಯತ್ನಾಳ ಬಣದ ನಾಯಕರ ವಾದ.
ಈ ಕುರಿತು 'ದ ಫೆರಡಲ್ ಕರ್ನಾಟಕ'ದೊಂದಿಗೆ ಮಾತನಾಡಿದ ಯತ್ನಾಳ್ ಬಣದ ನಾಯಕ ಕುಮಾರ್ ಬಂಗಾರಪ್ಪ ಅವರು, "ಫೆ.20 ರಂದು ಕರೆದಿರುವ ಸಭೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆ, ಅಭ್ಯರ್ಥಿ ಘೋಷಣೆ ಕುರಿತಂತೆ ಚರ್ಚೆ ನಡೆಸಲಿದ್ದೇವೆ. ಅಂದು ವರಿಷ್ಠರು ರಾಜ್ಯಕ್ಕೆ ಆಗಮಿಸುವ ಬಗ್ಗೆ ಮಾಹಿತಿ ಇಲ್ಲ. ಬಿಜೆಪಿ ವರಿಷ್ಠರು ನಮ್ಮ ಮನವಿ ಹಾಗೂ ದೂರುಗಳಿಗೆ ಸ್ಪಂದಿಸುವ ವಿಶ್ವಾಸವಿದೆ" ಎಂದು ಹೇಳಿದರು.