ಬಸವಣ್ಣ ಕುರಿತು ಅವಹೇಳನ | ಕಾಂಗ್ರೆಸ್‌ಗೆ ಹೊಸ ಅಸ್ತ್ರ ಕೊಟ್ಟ ಯತ್ನಾಳ ವಿವಾದಿತ ಹೇಳಿಕೆ

ಚಂದ್ರಶೇಖರನಾಥ ಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿದ ಕಾರಣಕ್ಕೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಬಿಜೆಪಿ ನಾಯಕರಿಗೆ ಬಸವಣ್ಣ ಅವರ ಕುರಿತ ಅವಹೇಳನಕಾರಿ ಹೇಳಿಕೆ ವಿವಾದ ತಿರುಗುಬಾಣವಾಗಿದೆ.;

Update: 2024-11-30 12:52 GMT

ವಕ್ಫ್ ವಿರುದ್ಧ ಜನಜಾಗೃತಿ ಅಭಿಯಾನ ನಡೆಸುತ್ತಿರುವ ಶಾಸಕ ಬಸವಗೌಡ ಪಾಟೀಲ ಯತ್ನಾಳ್ ಹೊಸ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಮಾತಿನ ಭರದಲ್ಲಿ ಬಸವಣ್ಣ ಕುರಿತು ನೀಡಿರುವ ಅಪಮಾನಕರ ಹೇಳಿಕೆ ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಮುಸ್ಲಿಮರ ಮತದಾನ ಹಕ್ಕನ್ನು ಕಿತ್ತುಕೊಳ್ಳಬೇಕು ಎಂದು ಹೇಳಿದ್ದ ಚಂದ್ರಶೇಖರನಾಥ ಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿದ ಕಾರಣಕ್ಕೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಬಿಜೆಪಿ ನಾಯಕರಿಗೆ, ಇದೀಗ ಯತ್ನಾಳ್‌ ಬಸವಣ್ಣ ಅವರ ಕುರಿತು ನೀಡಿರುವ ಅವಹೇಳನಕಾರಿ ಹೇಳಿಕೆ ತಿರುಗುಬಾಣವಾಗುವ ಸಾಧ್ಯತೆ ಇದೆ.

ಬಸವಣ್ಣ ಕುರಿತು ಯತ್ನಾಳ್ ಹೇಳಿದ್ದೇನು?

ಬೀದರ್‌ನಲ್ಲಿ ನ. 25ರಂದು ವಕ್ಫ್ ವಿರುದ್ಧದ ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡುವ ವೇಳೆ ಮಾತನಾಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಸವಣ್ಣನವರ ಕುರಿತು ನಿಂದನಾತ್ಮಕ ಹೇಳಿಕೆ ನೀಡಿದ್ದರು. "ವಕ್ಫ್ ವಿರುದ್ಧ ಎಲ್ಲರೂ ಒಗ್ಗಟ್ಟಿನ ಹೋರಾಟ ಮಾಡಬೇಕಿದೆ. ನಾವು ಹೋರಾಟಕ್ಕೆ ಇಳಿದರೆ, ವಿಜಯೇಂದ್ರ ಬಣ ಕೂಡ ಹೋರಾಟಕ್ಕೆ ಇಳಿಯಲಿದೆ. ವಿಜಯೇಂದ್ರ ಬಣದವರು ನಮ್ಮೊಂದಿಗೆ ಹೋರಾಟಕ್ಕೆ ಬಂದರೆ ನಮ್ಮ ನಡುವೆಯೇ ಜಗಳ ಹಚ್ಚುತ್ತಾರೆ. ನಾವು ಹೆದರಕೂಡದು. ನಾವು ಹೆದರಿದರೆ ಬಸವಣ್ಣನ ಹಾಗೆ ನದಿಗೆ ಹಾರಿ ಸಾಯಬೇಕಾಗುತ್ತದೆ" ಎಂದು ಹೇಳಿದ್ದರು.

ಬಸನಗೌಡ ಪಾಟೀಲ್ ಯತ್ನಾಳರ ಈ ಹೇಳಿಕೆ ಬಸವ ಅನುಯಾಯಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಜೊತೆಗೆ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

ಪ್ರಿಯಾಂಕ್ ಖರ್ಗೆ ಆಕ್ರೋಶ

ಜಗಜ್ಯೋತಿ ಬಸವಣ್ಣನವರ ಬಗ್ಗೆ ಅತ್ಯಂತ ಅವಮಾನಕರವಾಗಿ, ಹಗುರವಾಗಿ ಮಾತನಾಡಿರುವ ಬಿಜೆಪಿ ಶಾಸಕ ಯತ್ನಾಳ್ ಕ್ಷಮಿಸಲಾರದ ತಪ್ಪೆಸಗಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

"ಕಾಂಗ್ರೆಸ್ ನಾಯಕರು, ಅಲ್ಪಸಂಖ್ಯಾತರ ಬಗ್ಗೆ ಮನಸೋ ಇಚ್ಛೆ ಮಾತನಾಡುತ್ತಿದ್ದ ಬಿಜೆಪಿಯವರ ನಾಲಿಗೆ ಈಗ ಸಮಾಜ ಸುಧಾರಣೆಗೆ ಜೀವ ಸವೆಸಿದ ಮಹನೀಯರ ಬುಡಕ್ಕೂ ಚಾಚುವಷ್ಟು ಉದ್ದವಾಗಿವೆ. ಬಸವಣ್ಣನವರ ಹಾಗೆ ಹೊಳೆ ಹಾರಬೇಕು ಎನ್ನುವ ಮೂಲಕ ಬಸವಣ್ಣನವರನ್ನು ಪಲಾಯನವಾದಿ ಎಂಬರ್ಥದಲ್ಲಿ ಯತ್ನಾಳ್ ಅಪಮಾನಿಸಿದ್ದಾರೆ. ಪ್ರಜ್ಞಾವಂತ ಬಸವಾನುಯಾಯಿಗಳು ಗಟ್ಟಿ ಧ್ವನಿಯಲ್ಲಿ ಯತ್ನಾಳ್ ಹೇಳಿಕೆ ಖಂಡಿಸಬೇಕಿದೆ" ಎಂದು ಪ್ರಿಯಾಂಕ್‌ ತಮ್ಮ ಸಾಮಾಜಿಕ ಮಾಧ್ಯಮ ʼಎಕ್ಸ್‌ʼನಲ್ಲಿ ಆಗ್ರಹಿಸಿದ್ದಾರೆ.

"ತನ್ನ ಬಣ್ಣಿಸಬೇಡ, ಇದಿರು ಹಳಿಯಬೇಡ ಎಂದಿದ್ದ ಬಸವಣ್ಣನವರ ಹೆಸರನ್ನು ತಮ್ಮ ದ್ವೇಷ ಭಾಷಣಕ್ಕೆ ಬಳಸಿದ್ದು ಯತ್ನಾಳ್ ಎಸಗಿದ ಘೋರ ಅಪರಾಧ. ಬಸವಣ್ಣನವರು ಹೊಳೆ ಹಾರಿಲ್ಲ, ಆದರೆ, ಸಮಾಜಕ್ಕೆ ಜ್ಞಾನದ ಹೊಳೆ ಹರಿಸಿದ್ದಾರೆ. ಯತ್ನಾಳ್ ಅವರೇ, ನಿಮ್ಮ ಪ್ರಕಾರ ಬಸವಣ್ಣನವರು ಹೊಳೆ ಹಾರಿದ್ದಾರೆ ಎನ್ನುವುದಾದರೆ ಅವರನ್ನು ಹೊಳೆಗೆ ಹಾರುವಂತೆ ಮಾಡಿದವರು ಯಾರು?, ಇಂದು ಯತ್ನಾಳ್ ಪ್ರತಿಪಾದಿಸುತ್ತಿರುವ ಸಿದ್ಧಾಂತವೇ ಅಂದು ಬಸವಾದಿ ಶರಣರನ್ನು ಹಿಂಸಿಸಿದ್ದಲ್ಲವೇ?" ಎಂದು ಖರ್ಗೆ ಪ್ರಶ್ನಿಸಿದ್ದಾರೆ.

"ಕಲ್ಯಾಣದ ಶರಣರ ಹತ್ಯೆ ನಡೆಸಿದವರು ಯಾರು? ಶರಣರು ಮರಣವೇ ಮಹಾನವಮಿ ಎಂದಿದ್ದೇಕೆ? ವಚನ ಭಂಡಾರಕ್ಕೆ ಬೆಂಕಿ ಇಟ್ಟವರು ಯಾರು? ಅನುಭವ ಮಂಟಪಕ್ಕೆ ದಾಳಿ ಮಾಡಿದವರು ಯಾರು? ಮಡಿವಾಳ ಮಾಚಿದೇವರು ಕತ್ತಿ ಹಿಡಿದಿದ್ದೇಕೆ?" ಎಂದು ಪ್ರಶ್ನಿಸಿರುವ ಖರ್ಗೆ, "ಬಿಜೆಪಿಯವರಿಗೆ ಈ ವಿಚಾರಗಳ ಬಗ್ಗೆ ಚರ್ಚಿಸುವ ಶಕ್ತಿ ಇದೆಯೇ?" ಸವಾಲು ಹಾಕಿದ್ದಾರೆ.

"ಬಸವಣ್ಣನವರ ಅನುಭವ ಮಂಟಪದ ಪರಿಕಲ್ಪನೆಯಲ್ಲೇ ಇಂದಿನ ಪ್ರಜಾಪ್ರಭುತ್ವ. ಧಮನಿತರಿಗೆ ಆತ್ಮಶಕ್ತಿ ನೀಡಿದ, ಶೋಷಿತರಿಗೆ ಘನತೆಯ ಬದುಕು ತಂದುಕೊಟ್ಟ, ಕಲ್ಯಾಣ ಕ್ರಾಂತಿಯ ಮೂಲಕ ಮೌಢ್ಯದಲ್ಲಿ ಜಡಗಟ್ಟಿದ್ದ ಸಮಾಜಕ್ಕೆ ಹೊಸ ಮಾರ್ಗ ತೋರಿದ ಬಸವಣ್ಣನವರು ಕೇವಲ ಹೊಳೆ ಹಾರಿದವರಾಗಿ ಕಂಡಿದ್ದು ಬಿಜೆಪಿಗರ ಅಜ್ಞಾನದ ಧ್ಯೋತಕವಾಗಿದೆ. ಕೆಲ ದಿನಗಳ ಹಿಂದೆ ನಾಡಿನ ಜನ ವೇದಿಕೆಯಿಂದ ಕೆಳಗಿಳಿಸಿ ಓಡಿಸಿದ್ದರೂ ಬುದ್ದಿ ಕಲಿಯದ ಯತ್ನಾಳ್ ಅವರ ನಾಲಿಗೆಗೆ ಕಡಿವಾಣ ಹಾಕುವ ಶಕ್ತಿ ಕರ್ನಾಟಕದ ಜನರಿಗಿದೆ" ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಸಾಣೇಹಳ್ಳಿ ಶ್ರೀಗಳು ಹೇಳಿದ್ದೇನು?

ಬಸವಣ್ಣನವರ ಕುರಿತು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, "ಯತ್ನಾಳ ಅವರಿಗೆ ಬಸವ ಧರ್ಮದ ಪರಿಚಯವೇ ಇದ್ದಂತಿಲ್ಲ. ಬಸವಣ್ಣನವರು ಹೊಳೆಗೆ ಹಾರಿ ಸಾಯುವ ಹೇಡಿಯಾಗಿರಲಿಲ್ಲ. ಬಸವಣ್ಣನವರ ಇತಿಹಾಸ ಮತ್ತು ವಚನಗಳನ್ನು ಇನ್ನಾದರೂ ಓದುವ ಪ್ರಯತ್ನ ಮಾಡಲಿ" ಎಂದು ತಿರುಗೇಟು ನೀಡಿದ್ದರು.

"ಬಸವಣ್ಣ ಮತ್ತು ಲಿಂಗಾಯತ ಧರ್ಮದ ನೈಜ ಪರಿಚಯವಾದರೆ ಅವರು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬಹುದು. ಯತ್ನಾಳ ಅವರಿಗೆ ತಾವು ಏನು ಮಾತನಾಡುತ್ತಿದ್ದೇವೆ ಎನ್ನುವ ಪ್ರಜ್ಞೆ ಇದ್ದಂತಿಲ್ಲ. ದೊಡ್ಡವರನ್ನು ಹೀಯಾಳಿಸಿ, ಬೈದು ಸಾರ್ವಜನಿಕರಿಂದ ಚಪ್ಪಾಳೆ ತಟ್ಟಿಸಿಕೊಂಡರೆ ತಾವು ದೊಡ್ಡವರಾಗುತ್ತೇವೆ ಎನ್ನುವ ಭ್ರಮಾಲೋಕದಲ್ಲಿ ತೇಲಾಡುತ್ತಿದ್ದಾರೆ. ಈ ಹಿಂದೆ ಗಣಪತಿ ವಿಚಾರವಾಗಿ ಆಡಿದ ಮಾತುಗಳನ್ನು ಅರ್ಥ ಮಾಡಿಕೊಳ್ಳದೆ ನಮ್ಮನ್ನೂ ಕೂಡ ನಿಂದಿಸಿದ್ದರು. ಅಹಂಕಾರಕ್ಕೆ ಉದಾಸೀನವೇ ಮದ್ದು ಎಂದು ಆಗ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಸಕಲ ಜೀವಾತ್ಮರ ಲೇಸನ್ನೇ ಬಯಸಿದ್ದ ಬಸವಣ್ಣನವರ ಬಗ್ಗೆ ಮಾತನಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ" ಎಂದು ಪತ್ರಿಕಾ ಪ್ರಕಟಣೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.

Tags:    

Similar News