Mysore MUDA Scam | ‌ನನ್ನ ಹೆಂಡತಿಗೊಂದು ನ್ಯಾಯ, ಸಿದ್ದರಾಮಯ್ಯ ಹೆಂಡತಿಗೊಂದು ನ್ಯಾಯವೇ?: ಹೆಚ್‌ ವಿಶ್ವನಾಥ್ ಪ್ರಶ್ನೆ

Update: 2024-07-09 13:44 GMT

ʻʻನಮ್ಮ ಕುಟುಂಬಕ್ಕೆ ವಿಜಯನಗರ ಬಡಾವಣೆಯಲ್ಲಿ ಸೈಟ್ ಕೊಟ್ಟಿಲ್ಲ. ನನಗೂ ಸಿದ್ದರಾಮಯ್ಯಗೂ ಒಂದೇ ಅವಧಿಯಲ್ಲಿ ನಿವೇಶನ ಮಂಜೂರು ಆಗಿದೆ. ಕೆಳಗಿನ ಸೈಟ್ ಬದಲು ಮೇಲುಗಡೆ ಕೊಟ್ಟಿದ್ದಾರೆ. ನನಗೆ ಸೈಟ್ ಇದೆ ಅನ್ನೋದಾದರೆ ನಿಮಗೆ ಯಾಕೆ ಸೈಟ್ ಇಲ್ಲ? ಈ ವಿಚಾರದಲ್ಲಿ ನನ್ನ ಹೆಂಡತಿಗೊಂದು ನ್ಯಾಯ, ಸಿದ್ದರಾಮಯ್ಯ ಹೆಂಡತಿಗೊಂದು ನ್ಯಾಯವೇ? ಇದೊಂದು ಕರ್ಮಕಾಂಡʼʼ ಎಂದು ಮುಡಾ ಹಗರಣದಲ್ಲಿ ತಮ್ಮ ಬಗ್ಗೆ ಕೇಳಿಬಂದಿರುವ ಆರೋಪಕ್ಕೆ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ತಿರುಗೇಟು ನೀಡಿದ್ದಾರೆ.

ಮುಡಾದಲ್ಲಿ ಸಾವಿರಾರು ಕೋಟಿ ಹಗರಣ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಎಚ್ ವಿಶ್ವನಾಥ್ ಅವರು ಸಿಎಂ ಸಿದ್ದರಾಮಯ್ಯ ಮತ್ತಿತರರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಈ ವಿಚಾರವಾಗಿ ಮುಡಾ ಅಧ್ಯಕ್ಷ ಕೆ ಮರೀಗೌಡ ಅವರು, ವಿಶ್ವನಾಥ್ ಕೂಡ ಬದಲಿ ನಿವೇಶನ ಪಡೆದಿದ್ದಾರೆ ಎಂದು ಆರೋಪ ಮಾಡಿದ್ದರು.

ಈ ಬಗ್ಗೆ ಮೈಸೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಚ್ ವಿಶ್ವನಾಥ್, ʻʻಬದಲಿ ನಿವೇಶನ ಪಡೆದಿದ್ದೇನೆ ಎಂದು ನನ್ನ ವಿರುದ್ಧ ಆರೋಪಿಸಿದ್ದಾರೆ. ಮುಡಾದ ಅಕ್ರಮದಲ್ಲಿ ನನ್ನ ಪಾಲು ಇದೆ ಎಂದಿದ್ದಾರೆ. ನನ್ನ ಪತ್ನಿಗೆ ದೇವನೂರು 3ನೇ ಹಂತದಲ್ಲಿ ನೀಡಿದ್ದ ನಿವೇಶನದ ಬಳಿ ವರುಣಾ ನಾಲೆ ಹಾದು ಹೋಗಿದೆ. ಆ ಸ್ಥಳ ಮನೆ ನಿರ್ಮಿಸಲು ಯೋಗ್ಯವಾಗಿರಲಿಲ್ಲ. ಹಾಗಾಗಿ ಬೇರೆಡೆ ನಿವೇಶನ ನೀಡಿದ್ದಾರಷ್ಟೇ. ನನ್ನ ವಿರುದ್ಧ ಆರೋಪ ಮಾಡಿರುವ ಮುಡಾದ ಅಧ್ಯಕ್ಷ ಒಬ್ಬ ಮೂಢʼʼ ಎಂದು ಕಿಡಿಕಾರಿದರು.

ʻʻಶಾಸಕ ಕೆ ಹರೀಶ್ ಗೌಡ ನೀಡಿರುವ ಹೇಳಿಕೆ ಸರಿಯಲ್ಲ. ಎಲ್ಲರೂ ಸೇರಿಕೊಂಡು ಹಗರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ. ಹಾಗಾಗಿ ಮುಡಾದಲ್ಲಿ ನಡೆದಿರುವ ಬಹುಕೋಟಿ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಇದು ದೊಡ್ಡ ಕರ್ಮಕಾಂಡವಾಗಿದೆʼʼ ಎಂದರು.

ʻʻಸಿಎ ಸೈಟ್ ಮತ್ತು ಪಾರ್ಕ್ ಗಳು ಮುಡಾದ ಆಸ್ತಿಗಳು. ಇವನ್ನು ಕೂಡ ಕೆಲವರು ಮಾರಾಟ ಮಾಡಿದ್ದಾರೆ. ಎಂಎಲ್‌ಸಿ ಮಂಜೇಗೌಡ ತಾವು ನಿರ್ಮಿಸಿದ ಬಡಾವಣೆಯೊಂದರ ಪಾರ್ಕ್ ಜಾಗವನ್ನೇ ನಿವೇಶನವನ್ನಾಗಿ ಪರಿವರ್ತಿಸಿ ಮಾರಾಟ ಮಾಡಿದ್ದಾರೆ. ಇವರ ವಿರುದ್ಧ ಮುಡಾ ಅಧ್ಯಕ್ಷ ಕೆ ಮರೀಗೌಡ ಕ್ರಮ ಕೈಗೊಳ್ಳುತ್ತಾರಾ? ಇವರೆಲ್ಲ ಸೇರಿಕೊಂಡು ಸಿದ್ದರಾಮಯ್ಯರನ್ನು ದಿವಾಳಿ ಮಾಡುತ್ತಿದ್ದಾರೆ. ನಾನು ಪ್ರಾಮಾಣಿಕವಾಗಿ ಬದುಕುತ್ತಿದ್ದೇನೆ. ಇದೇ ಮಾತನ್ನು ನೀವು ಹೇಳುತ್ತೀರಾ?ʼʼ ಎಂದು ವಿಶ್ವನಾಥ್ ಪ್ರಶ್ನಿಸಿದರು.

ʻʻಎಲ್ಲಾ ಕಾನೂನು ಬದ್ದವಾಗಿ ನಡೆದಿದ್ದರೇ ಸರ್ಕಾರ ತನಿಖೆಗೆ ಏಕೆ ವಹಿಸಿದೆ? ಈ ವಿಚಾರದಲ್ಲಿ ಮುಡಾದವರು, ಸಚಿವರು ಬಾಯಿಗೆ ಬಂದಂತೆ ಮಾತನಾಡದಂತೆ ಸಿಎಂ ಸಿದ್ದರಾಮಯ್ಯ ಸೂಚಿಸಬೇಕುʼʼ ಎಂದು ಹೆಚ್‌ ವಿಶ್ವನಾಥ್ ಸಲಹೆ ನೀಡಿದರು.

ದಲಿತ ಮಕ್ಕಳಿಗೆ ಜಾಗ ಕೊಡಿ

"ದಲಿತರ ಜಮೀನನ್ನು ಪಡೆದು ಅದನ್ನು ಭೂಸ್ವಾಧೀನ ಮಾಡಿದರೆ ಲಾಭವಾಗದು ಎಂದು ಭೂ ಪರಿವರ್ತನೆ ನಡೆಸಿ ದಂಧೆ ನಡೆಸಿದ್ದಾರೆ. ಸಿದ್ದರಾಮಯ್ಯ ಅವರೇ ನಿಮಗೆ ಇದೆಲ್ಲಾ ಬೇಕಿತ್ತೇನ್ರಿ.. ನಿಜವಾಗಿಯೂ ನಿಮಗೆ ದಲಿತರ ಬಗ್ಗೆ ಕಾಳಜಿ ಇದ್ದರೆ, ಆ ಜಮೀನನ್ನು ವಾಪಸ್‌ ಅವರಿಗೇ ಕೊಡಿಸಿ, ಇಲ್ಲವೇ ಆ ಜಾಗವನ್ನು ಸರ್ಕಾರಕ್ಕೆ ಮರಳಿಸಿ ಅಲ್ಲಿ ವಿಶೇಷ ಮಕ್ಕಳಿಗೋ, ದಲಿತರು, ಬಡವರ ಮಕ್ಕಳಿಗೋ ಒಂದು ಶಾಲೆ, ಒಂದು ಹಾಸ್ಟೆಲ್‌ ಕಟ್ಟಿಸಿ, ಇಲ್ಲವೇ ಅನಾಥಾಶ್ರಮಕ್ಕೆ ಕೊಡಿ. ಅದು ಬಿಟ್ಟು ಇದೇನ್ರೀ.. ಈ ಪಟ್ಟು?" ಎಂದು ಪ್ರಶ್ನಿಸಿದ ವಿಶ್ವನಾಥ್‌, "ಹತ್ತು ಸಾವಿರ ಕೋಟಿ ರೂಪಾಯಿಯಷ್ಟು ಭಾರೀ ಅಕ್ರಮ ಇದಾಗಿರುವುದರಿಂದ ಈ ಬಗ್ಗೆ ನಮ್ಮ ಪೊಲೀಸರು, ಅಧಿಕಾರಿಗಳು ತನಿಖೆ ನಡೆಸಲಾದೀತೆ? ಹಾಗಾಗಿ ಇದನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ನಾನು ಒತ್ತಾಯಿಸುತ್ತಿದ್ದೇನೆ" ಎಂದು ಹೇಳಿದರು.

Tags:    

Similar News