ಎಚ್‌ಡಿಕೆ ಕುಟುಂಬ ಒತ್ತುವರಿ ಮಾಡಿದ ಜಮೀನು ವಾಪಸ್ ಪಡೆಯಿರಿ, ಇಲ್ಲವೇ ಬಿಟ್ಟುಬಿಡಿ: ಸರ್ಕಾರಕ್ಕೆ ಹೈಕೋರ್ಟ್ ತಾಕೀತು
ಬಡವರು ಕೆಲವೇ ಅಡಿ ಒತ್ತುವರಿ ಮಾಡಿದರೆ ಓಡಿ ಹೋಗಿ ತೆರವು ಮಾಡ್ತೀರಿ. ಬುಲ್ಡೋಜರ್ ತೆಗೆದುಕೊಂಡು ಮನೆ ಒಡೆದು ಹಾಕುತ್ತೀರಿ. ಪ್ರಭಾವಿಗಳು ಒತ್ತುವರಿ ಮಾಡಿದರೆ ಏಕೆ ಏನೂ ಮಾಡುವುದಿಲ್ಲ” ಎಂದು ಹೈಕೋರ್ಟ್ ಪ್ರಶ್ನಿಸಿದೆ.;
“ಬಡವರು ಕೆಲವೇ ಕೆಲವು ಅಡಿ ಒತ್ತುವರಿ ಮಾಡಿದರೆ ಓಡಿ ಹೋಗಿ ತೆರವು ಮಾಡ್ತೀರಿ. ಬುಲ್ಡೋಜರ್ ತೆಗೆದುಕೊಂಡು ಹೋಗಿ ಮನೆ ಒಡೆದು ಹಾಕುತ್ತೀರಿ. ಭಿಕ್ಷುಕರನ್ನೂ ಬಿಡುವುದಿಲ್ಲ. ಆದರೆ, ಪ್ರಭಾವಿಗಳು ಒತ್ತುವರಿ ಮಾಡಿದರೆ ಏಕೆ ಏನೂ ಮಾಡುವುದಿಲ್ಲ” ಎಂದು ರಾಜ್ಯ ಸರ್ಕಾರವನ್ನು ಕಟುವಾಗಿ ಪ್ರಶ್ನಿಸಿರುವ ಕರ್ನಾಟಕ ಹೈಕೋರ್ಟ್, ‘ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮತ್ತವರ ಕುಟುಂಬದ ಸದಸ್ಯರು ಮಾಡಿರುವ ಒತ್ತುವರಿ ಜಮೀನನ್ನು ವಾಪಸ್ ಪಡೆಯಿರಿ. ಇಲ್ಲವೇ ಬಿಟ್ಟುಬಿಡಿ” ಎಂದು ಮೊನಚಾದ ಮಾತುಗಳಲ್ಲಿ ಕುಟುಕಿದೆ.
ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತರು ಆದೇಶ ಮಾಡಿರುವುದನ್ನು ಜಾರಿ ಮಾಡುವಂತೆ ಹೈಕೋರ್ಟ್ ಆದೇಶಿಸಿತ್ತು. ಇದನ್ನು ಜಾರಿ ಮಾಡಲು ವಿಫಲವಾಗಿರುವ ರಾಜ್ಯ ಸರ್ಕಾರದ ನಡೆ ಪ್ರಶ್ನಿಸಿ ಎಸ್ ಆರ್ ಹಿರೇಮಠ ನೇತೃತ್ವದ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೆ ಸೋಮಶೇಖರ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ “ಯಾರೇ ಆಗಲಿ, ಒಂದೇ ಒಂದು ಇಂಚು ಜಮೀನು ಅತಿಕ್ರಮಣ ಮಾಡಿದ್ದರೂ ಬಿಡುವುದಿಲ್ಲ. ಈ ಪ್ರಕರಣದಲ್ಲಿ ಸದ್ಯ 14 ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ. ಇನ್ನೂ 18 ಎಕರೆ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ನೋಟಿಸ್ ನೀಡಲಾಗುತ್ತಿದೆ. ಕಾನೂನು ಪ್ರಕ್ರಿಯೆ ಅನುಸರಿಸಿ ಒತ್ತುವರಿ ತೆರವುಗೊಳಿಸಲಾಗುವುದು” ಎಂದರು.
ಅರ್ಜಿದಾರ ಪರ ಹಿರಿಯ ವಕೀಲರು “ಒಟ್ಟು 110 ಎಕರೆ ಗೋಮಾಳ ಜಮೀನು ಒತ್ತುವರಿಯಾಗಿದೆ. ಪ್ರಭಾವಿಗಳು ಈ ಗೋಮಾಳ ಜಮೀನನ್ನು ಖರೀದಿ ಮಾಡಿದ್ದಾರೆ. ಈ ಜಮೀನನ್ನು ನಕಲಿ ಭೂ ಮಂಜೂರಾತಿ ಆಧರಿಸಿ ಖರೀದಿ ಮಾಡಲಾಗಿದೆ. ಇದ್ಯಾವುದಕ್ಕೂ ಗ್ರ್ಯಾಂಟ್ ಸರ್ಟಿಫಿಕೇಟ್ ಇಲ್ಲ. ಈ ಬಗ್ಗೆ ತಹಶೀಲ್ದಾರ್ 2014ರಲ್ಲೇ ವರದಿ ನೀಡಿದ್ದಾರೆ. ಆದರೆ, ಈವರೆಗೂ ಸಂಪೂರ್ಣ ಒತ್ತುವರಿ ತೆರವುಗೊಳಿಸಿಲ್ಲ. ಹೀಗಾಗಿ, ಸಂಪೂರ್ಣ ಜಮೀನನ್ನು ಒತ್ತುವರಿ ಎಂದು ಪರಿಗಣಿಸಿ ವಶಪಡಿಸಿಕೊಳ್ಳಬೇಕು” ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ಅವರು ಕೇತಗಾನಹಳ್ಳಿಯಲ್ಲಿ ಜಮೀನು ಮಂಜೂರು ಮಾಡಿದ ದಾಖಲೆ ಇಲ್ಲ. ಹೀಗಾಗಿ, ಸಮಿತಿ ರಚನೆ ಮಾಡಲಾಗಿದ್ದು, ಗ್ರ್ಯಾಂಟ್ ಸರ್ಟಿಫಿಕೇಟ್‌ಗಳು ಅಸಲಿ ಹೌದೊ ಅಲ್ಲವೊ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ಎಫ್‌ಎಸ್ಎಲ್ ವರದಿ ನಿರೀಕ್ಷಿಸಲಾಗುತ್ತಿದೆ” ಎಂದು ವಿವರಿಸಿದರು.
ಆಗ ಪ್ರತಿಕ್ರಿಯಿಸಿದ ನ್ಯಾಯಪೀಠವು “ಈಗ ದಾಖಲೆ ನಾಪತ್ತೆಯಾಗಿವೆ. ಮುಂದೆ ಜಮೀನೂ ನಾಪತ್ತೆಯಾಗಬಹುದು” ಎಂದು ಕಿಡಿಕಾರಿತು.