ಅಧಿಕಾರ ಇದ್ದಾಗ ಯಾಕೆ ಸರಿ ಮಾಡಲಿಲ್ಲ?: ಬಿಡದಿ ಯೋಜನೆ ವಿರೋಧಿಗಳಿಗೆ ಡಿಸಿಎಂ ಡಿಕೆಶಿ ಖಾರವಾದ ಪ್ರಶ್ನೆ

ಬಿಜೆಪಿ ಸರ್ಕಾರವಿದ್ದಾಗ, ಇದೇ ಭೂಮಿಯಲ್ಲಿ 900 ಎಕರೆ ಜಾಗವನ್ನು ಕೆಐಎಡಿಬಿಗೆ ನೀಡಲಾಯಿತು. ಆಗ ಇಲ್ಲಿದ್ದ ಶಾಸಕ ಮಂಜುನಾಥ್ ಸೇರಿದಂತೆ ಯಾರೊಬ್ಬರೂ ವಿರೋಧ ಮಾಡದೆ ಸಹಕಾರ ಕೊಟ್ಟಿದ್ದರು ಎಂದು ಹೇಳಿದ್ದರು.

Update: 2025-09-27 12:41 GMT

ಬಿಡದಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ "ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್" ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, "ನಿಮ್ಮ ಅಧಿಕಾರದ ಅವಧಿಯಲ್ಲಿ ಈ ಭೂಮಿಯನ್ನು ಉಳಿಸಲು ಯಾಕೆ ಸಾಧ್ಯವಾಗಲಿಲ್ಲ?" ಎಂದು ನೇರವಾಗಿ ಪ್ರಶ್ನಿಸಿದ್ದಾರೆ.

ಶನಿವಾರ ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಇಂದು ಹೋರಾಟಕ್ಕಿಳಿದಿರುವ ದೇವೇಗೌಡರು, ಅಶೋಕ್ ಅವರು ತಮಗೆ ಅಧಿಕಾರವಿದ್ದಾಗ ಏನು ಮಾಡುತ್ತಿದ್ದರು? ಅವತ್ತು ಸರಿ ಮಾಡಲಾಗದ್ದನ್ನು, ಇವತ್ತು ರಾಜಕೀಯಕ್ಕಾಗಿ ನಮ್ಮ ಕಡೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ," ಎಂದು ಕಿಡಿಕಾರಿದರು.

'ಅಧಿಕಾರವಿದ್ದಾಗ ಸುಮ್ಮನಿದ್ದು, ಈಗ ರಾಜಕೀಯವೇಕೆ?'

"ಈ ಯೋಜನೆಗೆ ಅಧಿಸೂಚನೆ ಹೊರಡಿಸಿದ್ದೇ ಅವರ (ದೇವೇಗೌಡರ) ಸುಪುತ್ರ ಕುಮಾರಸ್ವಾಮಿ. ಆಗ ಇದು ಅವರದೇ ಕ್ಷೇತ್ರವಾಗಿತ್ತು. ಇದು ಸರಿ ಇಲ್ಲ ಎನಿಸಿದ್ದರೆ, ತಮ್ಮ ಮಗನಿಗೆ ಬೇಡ ಎಂದು ಹೇಳಬಹುದಿತ್ತಲ್ಲವೇ? ಅಶೋಕ್ ಅವರ ಬಳಿಯೂ ಪೆನ್ ಹಿಡಿಯುವ ಅಧಿಕಾರವಿತ್ತು, ಯಡಿಯೂರಪ್ಪ ಅವರ ಸರ್ಕಾರವೂ ಇತ್ತು. ಆಗ ಈ ಭೂಮಿಯನ್ನು ಏಕೆ ಡಿನೋಟಿಫೈ ಮಾಡಲಿಲ್ಲ?" ಎಂದು ಶಿವಕುಮಾರ್ ಸರಣಿ ಪ್ರಶ್ನೆಗಳನ್ನು ಮುಂದಿಟ್ಟರು.

"ಬಿಜೆಪಿ ಸರ್ಕಾರವಿದ್ದಾಗ, ಇದೇ ಭೂಮಿಯಲ್ಲಿ 900 ಎಕರೆ ಜಾಗವನ್ನು ಕೆಐಎಡಿಬಿಗೆ ನೀಡಲಾಯಿತು. ಆಗ ಇಲ್ಲಿದ್ದ ಶಾಸಕ ಮಂಜುನಾಥ್ ಸೇರಿದಂತೆ ಯಾರೊಬ್ಬರೂ ವಿರೋಧ ಮಾಡದೆ ಸಹಕಾರ ಕೊಟ್ಟಿದ್ದರು. ಈಗ ನನ್ನನ್ನು ಪ್ರಶ್ನೆ ಮಾಡುವುದರಲ್ಲಿ ಯಾವ ಅರ್ಥವಿದೆ?" ಎಂದು ಅವರು ಹರಿಹಾಯ್ದರು.

'ನಾನು ಬ್ರೋಕರ್‌ಗಳ ಮಾತು ಕೇಳುವುದಿಲ್ಲ'

ಭೂಸ್ವಾಧೀನಕ್ಕೆ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಮಾತನಾಡಿದ ಅವರು, "ಈ ಯೋಜನೆಗೆ ರೈತರ ವಿರೋಧವಿಲ್ಲ, ಅವರ ಸಂಪೂರ್ಣ ಸಹಕಾರವಿದೆ. ಪ್ರತಿಭಟನೆ ಮಾಡುತ್ತಿರುವುದು ಶಾಸಕ ಬಾಲಕೃಷ್ಣ ಅವರ ರಾಜಕೀಯ ವಿರೋಧಿಗಳು ಮಾತ್ರ. ನಾನು ಬ್ರೋಕರ್‌ಗಳ ಮಾತುಗಳನ್ನು ಕೇಳುವುದಿಲ್ಲ. ನೈಜ ರೈತರು ಯಾರು, ನಕಲಿ ರೈತರು ಯಾರು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ," ಎಂದು ಸ್ಪಷ್ಟಪಡಿಸಿದರು.

"ಯಾರು ಪರಿಹಾರ ಬೇಡ ಎನ್ನುತ್ತಾರೋ, ಅವರಿಗೆ ಕಾನೂನು ಪ್ರಕಾರ ನ್ಯಾಯಾಲಯದಲ್ಲಿ ಹಣ ಠೇವಣಿ ಇಡುತ್ತೇವೆ. ಕೆಐಎಡಿಬಿಯಿಂದ ಯಾರು ಹಣ ಪಡೆದಿದ್ದಾರೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಬೇಕೇ?" ಎಂದು ಸವಾಲು ಹಾಕಿದರು.

ಟೊಯೋಟಾಗೆ 300 ಎಕರೆ ಜಾಗ

ಇದೇ ವೇಳೆ, ಟೊಯೋಟಾ ಕಂಪನಿಯು ತನ್ನ ಉದ್ಯೋಗಿಗಳಿಗೆ ವಸತಿ ಸಮುಚ್ಚಯ ನಿರ್ಮಿಸಲು ಜಿಬಿಐಟಿ ಯೋಜನೆಯಲ್ಲೇ 300 ಎಕರೆ ಭೂಮಿ ಕೇಳಿದೆ ಎಂದು ಮಾಹಿತಿ ನೀಡಿದ ಶಿವಕುಮಾರ್, "ಜಪಾನ್ ಟೌನ್‌ಶಿಪ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವಂತೆ ಅವರಿಗೆ ನಿರ್ದೇಶನ ನೀಡಿದ್ದೇನೆ," ಎಂದು ತಿಳಿಸಿದರು.

ಒಟ್ಟಿನಲ್ಲಿ, ತಮ್ಮ ಮಹತ್ವಾಕಾಂಕ್ಷೆಯ ಯೋಜನೆಗೆ ಎದುರಾಗುತ್ತಿರುವ ರಾಜಕೀಯ ವಿರೋಧವನ್ನು ತೀಕ್ಷ್ಣ ಮಾತುಗಳಿಂದಲೇ ಎದುರಿಸಿರುವ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷಗಳ ಹಿಂದಿನ ನಿಲುವುಗಳನ್ನು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದ್ದಾರೆ. 

Tags:    

Similar News