ಹೃದಯದ ಆರೋಗ್ಯದಲ್ಲಿ ಮನೋಸಾಮಾಜಿಕ ಅಂಶಗಳ ಪಾತ್ರವೇನು?
ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳ ಪ್ರಕಾರ, ಜಾಗತಿಕವಾಗಿ ಪ್ರತಿ ವರ್ಷ ಸುಮಾರು 18 ಮಿಲಿಯನ್ ಜನರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ.;
ಡಾ. ಮಂಜುನಾಥ್. ಪಿ, ಮುಖ್ಯಸ್ಥರು, ಮನೋವಿಜ್ಞಾನ ಅಧ್ಯಯನ ವಿಭಾಗ, ಕರ್ನಾಟಕ ರಾಜ್ಯ ಮುಕ್ತ ವಿವಿ, ಮೈಸೂರು
ಮಾನವ ಶರೀರದ ಅತಿ ಕ್ರಿಯಾಶೀಲ ಅಂಗವಾದ ಹೃದಯವು ಜನನದಿಂದ ಮರಣದವರೆಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ. ಇದು ರಕ್ತಪರಿಚಲನಾ ವ್ಯವಸ್ಥೆಯ ಮೂಲಕ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ದೇಹದಾದ್ಯಂತ ಪೂರೈಸುವುದರಿಂದ ಜೀವಿಯು ಬದುಕಲು ಸಾಧ್ಯವಾಗುತ್ತದೆ. ಸುದೀರ್ಘ ಮತ್ತು ಗುಣಮಟ್ಟದ ಜೀವನಕ್ಕೆ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅನಿವಾರ್ಯ.
ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳ ಪ್ರಕಾರ, ಜಾಗತಿಕವಾಗಿ ಪ್ರತಿ ವರ್ಷ ಸುಮಾರು 18 ಮಿಲಿಯನ್ ಜನರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಹೃದಯಾಘಾತವು ಶೇ.30ರಷ್ಟು ಸಾವುಗಳಿಗೆ ಕಾರಣವಾಗಿದ್ದು, ಎಲ್ಲ ವಯೋಮಾನದವರನ್ನೂ ಬಾಧಿಸುತ್ತಿರುವ ಗಂಭೀರ ಸಮಸ್ಯೆಯಾಗಿ ಹೊರಹೊಮ್ಮಿದೆ.
ಸಂಶೋಧನೆಗಳು, ಮನೋಸಾಮಾಜಿಕ ಅಂಶಗಳಾದ ಅತಿಯಾದ ಆತಂಕ, ಮಾನಸಿಕ ಒತ್ತಡ, ಖಿನ್ನತೆ, ಜಡ ಜೀವನಶೈಲಿ, ಕಾರ್ಯದ ಒತ್ತಡ, ಆಕ್ರಮಣಕಾರಿ ಮನೋಭಾವ, ಒಂಟಿತನ, ನಿರಾಶಾವಾದ, ಭಾವನಾತ್ಮಕ ಘರ್ಷಣೆಗಳು, ಆರೋಗ್ಯ ಮತ್ತು ವೈಯಕ್ತಿಕ ಸಮಸ್ಯೆಗಳ ಕುರಿತ ಅತಿಯಾದ ಚಿಂತೆ, ಮಾನಸಿಕ ಹಾಗೂ ದೈಹಿಕ ಆಯಾಸ ಮತ್ತು ಅವಿಶ್ರಾಂತ ದುಡಿಮೆಯು ಅಧಿಕ ರಕ್ತದೊತ್ತಡ ಮತ್ತು ಹೃದಯಾಘಾತಕ್ಕೆ ಪ್ರಮುಖ ಕಾರಣಗಳಾಗಿವೆ.
ಆರೋಗ್ಯ ಮನೋವಿಜ್ಞಾನ ಮತ್ತು ಹೃದಯದ ಸ್ವಾಸ್ಥ್ಯ
ಆರೋಗ್ಯ ಮನೋವಿಜ್ಞಾನವು ಹೃದಯದ ಆರೋಗ್ಯದ ಸಮಗ್ರ ದೃಷ್ಟಿಕೋನಕ್ಕೆ ಮಹತ್ವ ನೀಡುತ್ತದೆ. ಒತ್ತಡ ನಿರ್ವಹಣೆ ತಂತ್ರಗಳು, ಭಾವನಾತ್ಮಕ ಸಮತೋಲನ, ವಿಶ್ರಾಂತಿ ಚಿಕಿತ್ಸೆಗಳು, ಮನೋಚಿಕಿತ್ಸೆ ಮತ್ತು ಉತ್ತಮ ಜೀವನಶೈಲಿಯ ಅಳವಡಿಕೆಯ ಮೂಲಕ ಹೃದಯ ಸಂಬಂಧಿ ರೋಗಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ದೈನಂದಿನ ಜೀವನದಲ್ಲಿ ಅನುಸರಿಸಬೇಕಾದ ಪ್ರಮುಖ ಅಂಶಗಳನ್ನು ನಾನು ಇಲ್ಲಿ ಪಟ್ಟಿ ಮಾಡಿದ್ದೇನೆ:
ಸಕಾರಾತ್ಮಕ ಭಾವನೆಗಳ ಪೋಷಣೆ: ಸಂತೋಷ, ನಗು, ಹಾಸ್ಯ, ಸ್ನೇಹ, ಪ್ರೀತಿ, ವಾತ್ಸಲ್ಯ, ಮಮತೆ ಮುಂತಾದ ಸಕಾರಾತ್ಮಕ ಭಾವನೆಗಳಿಗೆ ಮಹತ್ವ ನೀಡಿ ಅವುಗಳನ್ನು ಆನಂದಿಸಿ.
ಆರೋಗ್ಯಕರ ಹವ್ಯಾಸಗಳ ಅಳವಡಿಕೆ: ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುವಂತಹ ಧ್ಯಾನ, ಯೋಗ, ವ್ಯಾಯಾಮ, ಬೆಳಗಿನ ನಡಿಗೆ ಮುಂತಾದ ಸಕಾರಾತ್ಮಕ ಹವ್ಯಾಸಗಳನ್ನು ರೂಢಿಸಿಕೊಳ್ಳಿ.
ಮಾನಸಿಕ ಆರೋಗ್ಯ ನಿರ್ವಹಣೆ: ಒತ್ತಡ ಮತ್ತು ಖಿನ್ನತೆ ಉಂಟುಮಾಡುವಂತಹ ವಿಚಾರಗಳು ಹಾಗೂ ಸನ್ನಿವೇಶಗಳಿಂದ ದೂರವಿರಿ. ಕೋಪ, ನಿರಾಶೆ, ದುಃಖ, ಅಸೂಯೆ, ದ್ವೇಷ ಮುಂತಾದ ನಕಾರಾತ್ಮಕ ಭಾವನೆಗಳನ್ನು ನಿಯಂತ್ರಿಸಿಕೊಳ್ಳಿ.
ಆಲೋಚನಾ ವಿಧಾನದಲ್ಲಿ ಬದಲಾವಣೆ: ವಿನಾಕಾರಣ ಆರೋಗ್ಯ ಆತಂಕ ಮತ್ತು ರೋಗಭ್ರಾಂತಿ ಸೃಷ್ಟಿಸುವ ವದಂತಿಗಳಿಂದ ದೂರವಿರಿ. ಏಕಾಂಗಿತನ ಮತ್ತು ನಕಾರಾತ್ಮಕ ಆಲೋಚನೆಗಳನ್ನು ತ್ಯಜಿಸಿ ಸಕಾರಾತ್ಮಕ ಮನೋಭಾವ ಹಾಗೂ ಆಲೋಚನೆಗಳಿಗೆ ಮಹತ್ವ ನೀಡಿ.
ಸಾಮಾಜಿಕ ಮತ್ತು ಭಾವನಾತ್ಮಕ ಸಂಪರ್ಕ: ಕುಟುಂಬ ಹಾಗೂ ಇತರ ಜನರೊಂದಿಗೆ ಸೌಹಾರ್ದಯುತವಾದ ಬಾಂಧವ್ಯವನ್ನು ಹೊಂದಿರಿ. ದೈನಂದಿನ ಜೀವನದಲ್ಲಿ ಭಾವನಾತ್ಮಕ ಸಮತೋಲನವನ್ನು ಕಾಪಾಡಿಕೊಳ್ಳಿ.
ವಿಶ್ರಾಂತಿ ಮತ್ತು ನಿದ್ರೆ: ಪ್ರತಿನಿತ್ಯ ವಿಶ್ರಾಂತಿ ಮತ್ತು ನೆಮ್ಮದಿಯ ನಿದ್ರೆಗೆ ಆದ್ಯತೆ ನೀಡಿ.
ಹವ್ಯಾಸಗಳ ವೃದ್ಧಿ: ಓದು, ಸಂಗೀತ, ನೃತ್ಯ, ಕ್ರೀಡೆ ಮುಂತಾದ ಉತ್ತಮ ಹವ್ಯಾಸಗಳು ಮತ್ತು ಮನರಂಜನಾ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಿ.
ವಾಸ್ತವಿಕ ಜೀವನ ಶೈಲಿ: ವರ್ತಮಾನದ ವಾಸ್ತವದೊಂದಿಗೆ ಬದುಕುವುದನ್ನು ಕಲಿಯಿರಿ ಮತ್ತು ಭ್ರಮಾಲೋಕದಿಂದ ದೂರವಿರಿ. ವಯೋಮಾನಕ್ಕೆ ಅನುಗುಣವಾಗಿ ಜೀವನಶೈಲಿಯನ್ನು ಮಾರ್ಪಡಿಸಿಕೊಳ್ಳಿ.
ವ್ಯಸನಮುಕ್ತ ಜೀವನ: ಧೂಮಪಾನ, ಮದ್ಯಪಾನ ಮತ್ತು ಮಾದಕ ವ್ಯಸನಮುಕ್ತ ಜೀವನಶೈಲಿ ರೂಢಿಸಿಕೊಳ್ಳಿ.
ದೇಹದ ತೂಕ ನಿರ್ವಹಣೆ: ದೇಹದ ಎತ್ತರಕ್ಕೆ ಅನುಗುಣವಾಗಿ ಆರೋಗ್ಯಕರ ದೇಹತೂಕವನ್ನು ಕಾಪಾಡಿಕೊಳ್ಳಿ.
ಆಹಾರ ಪದ್ಧತಿ: ಎಣ್ಣೆ, ಜಿಡ್ಡು ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಿ. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಮತ್ತು ದೇಹದಲ್ಲಿನ ಕೊಬ್ಬಿನ ಅಂಶದ ಪ್ರಮಾಣವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ. ನಾವು ಸೇವಿಸುವ ಆಹಾರದಲ್ಲಿ ಸಕ್ಕರೆ, ಉಪ್ಪು, ಕೊಬ್ಬಿನ ಅಂಶ ಮಿತವಾಗಿರಲಿ. ಪೌಷ್ಠಿಕವಾದ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿ.
ವೈದ್ಯಕೀಯ ಆರೈಕೆ: ಹೃದಯ ಸಂಬಂಧಿತ ಆರೋಗ್ಯ ಸಮಸ್ಯೆಗಳಿದ್ದಲ್ಲಿ ವಿನಾಕಾರಣ ವಿಳಂಬ ಮಾಡದೆ ತತ್‌ಕ್ಷಣ ವೈದ್ಯರನ್ನು ಭೇಟಿಮಾಡಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಿ.