ಕೆಪಿಎಸ್‌ಸಿ ಜಟಾಪಟಿ: ಏನಿದು ವಿವಾದ? ಯಾಕೆ ಸಂಘರ್ಷ?

ಸಕಾಲಿಕ ನೇಮಕಾತಿಗಳ ಮೂಲಕ ಸರ್ಕಾರದ ಆಡಳಿತ ಯಂತ್ರವನ್ನು ಚಾಲನೆಯಲ್ಲಿಡಬೇಕಾದ ಕೆಪಿಎಸ್‌ಸಿ ಇದೀಗ ಅಧ್ಯಕ್ಷರು ಮತ್ತು ಕಾರ್ಯದರ್ಶಿ ನಡುವಿನ ಹಗ್ಗಜಗ್ಗಾಟದ ವೇದಿಕೆಯಾಗಿದೆ. ಈ ಇಡೀ ವಿವಾದದ ಕುರಿತು ತಿಳಿಯಬೇಕಾದ ವಿವರ ಇಲ್ಲಿದೆ.

Update: 2024-02-05 06:30 GMT
ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟವು ಬೀದಿಗೆ ಬಿದ್ದಿದ್ದು, ಸಾಂವಿಧಾನಿಕ ಸಂಸ್ಥೆಯೊಂದರ ಆಡಳಿತದಲ್ಲಿನ ಅಂತಃಕಲಹವು ಸರ್ಕಾರಕ್ಕೂ ಇರಿಸು ಮುರಿಸು ತಂದಿದೆ.

ಕಳೆದ ಕೆಲವು ವರ್ಷಗಳಿಂದ ಆಯೋಗವು ಸದಾ ವಿವಾದದಲ್ಲೇ ಇದ್ದು, ಸರಿಯಾದ ಕಾಲಮಿತಿಯಲ್ಲಿ ಯಾವುದೇ ನೇಮಕಾತಿ ಪ್ರಕ್ರಿಯೆಗಳು ಪೂರ್ಣಗೊಳ್ಳುತ್ತಿಲ್ಲ ಎಂಬ ಆರೋಪಗಳ ನಡುವೆಯೇ ಆಯೋಗದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ನಡುವಿನ ಅಧಿಕಾರದ ಹಗ್ಗಜಗ್ಗಾಟ ಇಡೀ ಸಂಸ್ಥೆಯನ್ನೇ ನಗೆಪಾಟಲಿಗೆ ದೂಡಿದೆ. ಸಕಾಲಿಕ ನೇಮಕಾತಿಗಳ ಮೂಲಕ ಸರ್ಕಾರದ ಆಡಳಿತ ಯಂತ್ರವನ್ನು ಚಾಲನೆಯಲ್ಲಿಡಬೇಕಾದ ಕೆಪಿಎಸ್‌ಸಿ ಇದೀಗ ಅಧ್ಯಕ್ಷರು ಮತ್ತು ಕಾರ್ಯದರ್ಶಿ ನಡುವಿನ ಹಗ್ಗಜಗ್ಗಾಟದ ವೇದಿಕೆಯಾಗಿದೆ. ಈ ಇಡೀ ವಿವಾದದ ಕುರಿತು ನಿಮಗೆ ಗೊತ್ತಿರಬೇಕಾದ ವಿವರ ಇಲ್ಲಿದೆ.

ವಿವಾದ ಏನು?

ಒಂದೆಡೆ ಆಯೋಗದ ಅಧ್ಯಕ್ಷರಾದ ಶಿವಶಂಕರಪ್ಪ ಸಾಹುಕಾರ್‌ ಅವರು ಆಯೋಗದ ಕಾರ್ಯದರ್ಶಿ ಲತಾಕುಮಾರಿ ಅವರು ಸರ್ಕಾರದ ನಿಯಮ ಮತ್ತು ಆಯೋಗದ ನಿರ್ಣಯಗಳನ್ನು ಉಲ್ಲಂಘಿಸಿ ಕರ್ತವ್ಯಲೋಪ ಎಸಗುತ್ತಿದ್ದಾರೆ, ಅವರನ್ನು ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇನ್ನೊಂದೆಡೆ ಕಾರ್ಯದರ್ಶಿ ಲತಾ ಕುಮಾರಿ ಅವರು ಅಧ್ಯಕ್ಷರು ಹಾಗೂ ಕೆಲವು ಸದಸ್ಯರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅಲ್ಲದೆ, ಅಧ್ಯಕ್ಷರು ಹಾಗೂ ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

ಕಾರ್ಯದರ್ಶಿಗಳ ಆರೋಪಗಳೇನು?

ಅಧ್ಯಕ್ಷರು ಹಾಗೂ ಕೆಲವು ಸದಸ್ಯರು ಕರ್ತವ್ಯ ಲೋಪ ಎಸಗಿದ್ದಾರೆ, ಅಧ್ಯಕ್ಷರು ಅಧಿಕಾರ ದುರುಪಯೋಗ ಮಾಡಿ ನ್ಯಾಯಾಲಯದಲ್ಲಿರುವ ಅವರ ವೈಯಕ್ತಿಕ ಪ್ರಕರಣಕ್ಕೆ ಆಯೋಗದ ಹಣವನ್ನು ಬಳಸಲು ಯತ್ನಿಸಿದ್ದಾರೆ, ಇದಕ್ಕೆ ತಡೆಯಾಗಿದ್ದ ಆಯೋಗದ ಕಾನೂನು ಕೋಶದ (HLC) ಮುಖ್ಯಸ್ಥರಾಗಿದ್ದ ಎಸ್‌.ಎಚ್‌ ಹೊಸಗೌಡರ್‌ ಅವರಿಂದ ಬಲವಂತವಾಗಿ ರಾಜೀನಾಮೆ ಪಡೆಯಲಾಗಿದೆ ಎಂದು ಆರೋಪಿಸಿ ಆಯೋಗದ ಕಾರ್ಯದರ್ಶಿ ಕೆ ಎಸ್‌ ಲತಾ ಕುಮಾರಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯೆಲ್‌ ಅವರ ಮೂಲಕ ರಾಜ್ಯಪಾಲರಿಗೆ ಕಳೆದ ತಿಂಗಳು ಪತ್ರ ಬರೆದಿದ್ದರು.

ವೈಯಕ್ತಿಕ ಪ್ರಕರಣಕ್ಕೆ ಆಯೋಗದ ಹಣ ಬಳಕೆ ಯತ್ನ?

ನ್ಯಾಯಾಲಯದಲ್ಲಿರುವ ಆಯೋಗದ ಅಧ್ಯಕ್ಷರ ವೈಯಕ್ತಿಕ ಪ್ರಕರಣದಲ್ಲಿ ವಕೀಲರಿಗೆ ಪಾವತಿಸಬೇಕಿದ್ದ ಮೊತ್ತವನ್ನು ಆಯೋಗದಿಂದ ಪಾವತಿಸಲು ಕಾನೂನು ಕೋಶದ ಮುಖ್ಯಸ್ಥ ಹೊಸಗೌಡರ್‌ ನಿರಾಕರಿಸಿದ್ದರು. ಪ್ರಕರಣ ವೈಯಕ್ತಿಕವಾಗಿದ್ದರಿಂದ, ಸ್ವಂತ ವೆಚ್ಚದಿಂದ ಭರಿಸಬೇಕು ಎಂದು ಅವರು ಅಭಿಪ್ರಾಯ ನೀಡಿದ್ದರು. ಈ ಕಾರಣಕ್ಕೆ ಹೊಸಗೌಡರ್ ಮೇಲೆ ಒತ್ತಡ ಹೇರಿ ಸೇವಾವಧಿ ಇನ್ನೂ ಬಾಕಿಯಿದ್ದರೂ ಬಲವಂತವಾಗಿ ರಾಜೀನಾಮೆ ಪತ್ರ ಪಡೆಯಲಾಗಿದೆ ಎಂದು ಲತಾ ಕುಮಾರಿ ಪತ್ರದಲ್ಲಿ ಆರೋಪಿಸಿದ್ದಾರೆ ಎನ್ನಲಾಗಿದೆ.

ಆಯೋಗವು ಸೂಚಿಸಿದ ಅಭ್ಯರ್ಥಿಯನ್ನು ಕಾನೂನು ಕೋಶದ ಮುಖ್ಯಸ್ಥರಾಗಿ ನೇಮಕ ಮಾಡಿಲ್ಲವೆಂದು ಆಯೋಗದ ಸಭೆಗಳನ್ನು ಬಹಿಷ್ಕರಿಸಿ, ಆಯ್ಕೆ ಪಟ್ಟಿಗಳಿಗೂ ಅನುಮೋದನೆ ನೀಡುವುದಿಲ್ಲ ಎಂದು ಕೆಲವು ಸದಸ್ಯರು ನಿರ್ಣಯಿಸಿದ್ದು, ಇದು ಕಾನೂನು ಬಾಹಿರ ಮತ್ತು ಕರ್ತವ್ಯಲೋಪವೆಂದು ಲತಾಕುಮಾರಿ ಅವರು ಆರೋಪಿಸಿದ್ದಾರೆ.

ಗಣಕ ಕೇಂದ್ರದ ಸಿಬ್ಬಂದಿಗೆ ಬೆದರಿಕೆ?

ಆಯೋಗದ ಸಭೆಯ ನಡಾವಳಿಯನ್ನು ಕಾರ್ಯದರ್ಶಿಯ ಒಪ್ಪಿಗೆ ಪಡೆಯದೇ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಅಧ್ಯಕ್ಷರು ನೀಡಿದ್ದ ಆದೇಶ ಪ್ರತಿಯನ್ನು ತಕ್ಷಣವೇ ಪ್ರಕಟಿಸುವಂತೆ ಆಯೋಗದ ಸದಸ್ಯರಾದ ವಿಜಯಕುಮಾ‌ರ್ ಡಿ. ಕುಚನೂರೆ, ಎಂ.ಬಿ. ಹೆಗ್ಗಣ್ಣವರ್, ಬಿ.ವಿ. ಗೀತಾ ಮತ್ತು ಮುಸ್ತಫಾ ಹುಸೇನ್‌ ಸಯ್ಯದ್‌ ಅಜೀಜ್‌ ಅವರು ಒತ್ತಡ ಹೇರಿದ್ದಾರೆ. ಕಾರ್ಯದರ್ಶಿಯ ಒಪ್ಪಿಗೆ ಪಡೆಯಲು ಮುಂದಾದ ಕೇಂದ್ರದ ಮುಖ್ಯಸ್ಥೆ ಶೋಭಾ ಬಸವರಾಜು ಅವರಿಗೆ ಮಾನಸಿಕ ಹಿಂಸೆ ನೀಡಲಾಗಿದೆ. ಇದರಿಂದ ಸ್ವಯಂ ನಿವೃತ್ತಿ ಕೇಳಿ ಕಾರ್ಯದರ್ಶಿಗೆ ಶೋಭಾ ಪತ್ರ ನೀಡಿದ್ದಾರೆ ಎಂದು ಲತಾಕುಮಾರಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ತಮ್ಮ ಅಧಿಕಾರ ವ್ಯಾಪ್ತಿಗೆ ಬಾರದಿದ್ದರೂ, ಗಣಕ ಕೇಂದ್ರದ ಸಿಬ್ಬಂದಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಮಾನಸಿಕ ಕಿರುಕುಳ ನೀಡಿರುವ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಲತಾಕುಮಾರಿ ಮನವಿ ಮಾಡಿದ್ದರು.

ಅಧ್ಯಕ್ಷರ ಆರೋಪವೇನು?

ಆದರೆ, ಅಧ್ಯಕ್ಷರು ಕಾರ್ಯದರ್ಶಿ ವಿರುದ್ಧವೇ ರಾಜ್ಯಪಾಲರಿಗೆ ದೂರು ನೀಡಿದ್ದು, ಸಾಂವಿಧಾನಿಕ ಹುದ್ದೆಯಲ್ಲಿರುವ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ವಿರುದ್ಧ ಲತಾಕುಮಾರಿ ಅವರು ಅಧಿಕಾರ ಇಲ್ಲದಿದ್ದರೂ, ರಾಜ್ಯಪಾಲರಿಗೆ ಪತ್ರ ಬರೆದು ದುರ್ನಡತೆ ತೋರಿ, ಸರ್ಕಾರಕ್ಕೂ ಮುಜುಗರ ಉಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕೋರಂ ಇಲ್ಲದೆ ನೇಮಕಾತಿಗೆ ಅನುಮೋದನೆ?

ಈ ನಡುವೆ, ಕಳೆದ ವಾರ ಕೆ.ಎಸ್‌. ಲತಾ ಕುಮಾರಿ ಅವರು ಆಯೋಗದ ಸಭೆ ನಡೆಸಿ, ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದ ವಿವಿಧ ಇಲಾಖೆಗಳ ಒಟ್ಟು 666 ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿಗೆ ಅನುಮೋದನೆ ಪಡೆದುಕೊಂಡಿದ್ದಾರೆ. ಆಯೋಗದ ಹಿರಿಯ ಸದಸ್ಯ ರೊನಾಲ್ಡ್‌ ಅನಿಲ್‌ ಫರ್ನಾಂಡೀಸ್‌ ನೇತೃತ್ವದಲ್ಲಿ 4 ಸದಸ್ಯರ ಗುಂಪು ಈ ಸಭೆ ನಡೆಸಿತ್ತು. ಇದು ಅಧ್ಯಕ್ಷರ ಬಣದ ಕೆಂಗಣ್ಣಿಗೆ ಗುರಿಯಾಗಿದೆ.

ಈ ಬೆಳವಣಿಗೆ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಪತ್ರ ಬರೆದಿರುವ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್‌. ಸಾಹುಕಾರ ಅವರು, ʼನಾಲ್ವರು ಸದಸ್ಯರ ಗುಂಪು ಸಭೆ ನಡೆಸಿರುವುದು, ಮತ್ತು ನೇಮಕಾತಿಗೆ ಅನುಮೋದನೆ ನೀಡಿರುವುದು ಎರಡೂ ಕಾನೂನು ಬಾಹಿರ, ಕೋರಂ ಇಲ್ಲದ ಸಭೆಯ ನಡಾವಳಿ ಊರ್ಜಿತವಲ್ಲ. ಆಯೋಗದ ಅನುಮೋದನೆ ಇಲ್ಲದೆ ಕಾರ್ಯದರ್ಶಿವರು ಪರೀಕ್ಷಾ ದಿನಾಂಕ ನಿಗದಿಪಡಿಸಿ ಪರೀಕ್ಷೆಯನ್ನೂ ನಡೆಸಿ, ಕೀ ಉತ್ತರಗಳನ್ನು ಪ್ರಕಟಿಸಿದ್ದಾರೆ. ಅಧ್ಯಕ್ಷರ ಗಮನಕ್ಕೆ ತಾರದೆ ಪರ್ಯಾಯ ಸಭೆ ನಡೆಸಿದ್ದಾರೆ. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಅಧ್ಯಕ್ಷರು ಹಾಗೂ ಸದಸ್ಯರ ಬಗ್ಗೆ ತಪ್ಪಾಗಿ ಬಿಂಬಿಸುವ ಪತ್ರಿಕಾ ಪ್ರಕಟಣೆ ನೀಡುತ್ತಿದ್ದಾರೆ ಎಂದಿದ್ದಾರೆ.

ಕಾರ್ಯದರ್ಶಿ ಲತಾ ಕುಮಾರಿ ಅವರು ಸರ್ಕಾರದ ನಿಯಮ ಮತ್ತು ಆಯೋಗದ ನಿರ್ಣಯಗಳನ್ನು ಉಲ್ಲಂಘಿಸಿ ಕರ್ತವ್ಯಲೋಪ ಎಸಗುತ್ತಿದ್ದಾರೆ. ಹಾಗಾಗಿ, ಆಯೋಗದ ಕಾರ್ಯನಿರ್ವಹಣೆ ಕುರಿತು ವಿಚಾರಣೆಗೆ ಆದೇಶಿಸಬೇಕು ಹಾಗೂ ವಿಚಾರಣೆ ಪೂರ್ಣಗೊಳ್ಳುವವರೆಗೆ ಕಾರ್ಯದರ್ಶಿಯನ್ನು ಅಮಾನತಿನಲ್ಲಿರಿಸುವಂತೆ ಅವರು ಸಿಎಂ ಹಾಗೂ ರಾಜ್ಯಪಾಲರನ್ನು ಕೋರಿದ್ದಾರೆ.

ವಿವಾದದ ಪರಿಣಾಮವೇನು?

ಕಾನೂನು ಆಯೋಗದ ಮುಖ್ಯಸ್ಥರ ನೇಮಕಕ್ಕೆ ಅನುಮೋದನೆ ನೀಡದ ಹೊರತು ಸಭೆ ನಡೆಸುವುದಿಲ್ಲ, ಯಾವುದೇ ನೇಮಕಕ್ಕೆ ಅನುಮೋದನೆ ನೀಡುವುದಿಲ್ಲ ಎಂದು ಅಧ್ಯಕ್ಷರು ಪಟ್ಟು ಹಿಡಿದಿರುವುದರಿಂದ ಹಲವಾರು ನೇಮಕಾತಿಗಳು ಬಾಕಿ ಉಳಿದಿದ್ದು, ಇದರಿಂದ ಅಭ್ಯರ್ಥಿಗಳಿಗೂ ತೊಂದರೆ ಉಂಟಾಗಿದೆ.

ಕೆಪಿಎಸ್‌ಸಿ ಆಯೋಗದ ಅಧ್ಯಕ್ಷರ ಹಾಗೂ ಕಾರ್ಯದರ್ಶಿಗಳ ನಡುವಿನ ಈ ಹಗ್ಗಜಗ್ಗಾಟದಲ್ಲಿ ಇಬ್ಬರ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಉದ್ಯೋಗಾಕಾಂಕ್ಷಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಗೊಂದಲದಿಂದಾಗಿ ನೇಮಕಾತಿ ಪ್ರಕ್ರಿಯೆ ವಿಳಂಬವಾಗುತ್ತಿರುವುದನ್ನು ಖಂಡಿಸಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸಿದ್ದರಾದರೂ ಸಮಸ್ಯೆಗೆ ತಾರ್ಕಿಕ ಅಂತ್ಯ ದೊರೆತಿಲ್ಲ. ಮಾಜಿ ಸಚಿವ ಸುರೇಶ್‌ ಕುಮಾರ್‌ ಕೂಡಾ ಪ್ರತಿಭಟನಾಕಾರರ ಪರವಾಗಿ ದನಿಯೆತ್ತಿದ್ದು, ಸಮಸ್ಯೆ ಇತ್ಯರ್ಥಗೊಳಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಈ ನಡುವೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು, ಸರ್ಕಾರದ ವಿವಿಧ ಇಲಾಖೆಗಳ ಗ್ರೂಪ್ ಎ ಮತ್ತು ಗ್ರೂಪ್ ಬಿಗ ಸಂಬಂಧಿಸಿದ ಒಟ್ಟು 384 ಹುದ್ದೆಗಳಿಗೆ ಭರ್ತಿ ಮಾಡಲು ಫೆ.2ರಂದು ಲೋಕಸೇವಾ ಆಯೋಗಕ್ಕೆ ಅಧಿಕೃತ ಪತ್ರ ಬರೆದು ನಿರ್ದೇಶಿಸಿದೆ. ಈ ಒಟ್ಟು ಹುದ್ದೆಗಳಲ್ಲಿ 77 ಹುದ್ದೆಗಳು ಕಲ್ಯಾಣ ಕರ್ನಾಟಕಕ್ಕೆ ಮೀಸಲಿದ್ದು, ಬಾಕಿ ಹುದ್ದೆಗಳು ರಾಜ್ಯ ಮಟ್ಟದ ಮೆರಿಟ್ ಆಧಾರದದಂತೆ ನೇಮಕಾತಿಗೆ ಸೂಚಿಸಲಾಗಿದೆ.

Tags:    

Similar News