ವಯನಾಡು ಭೂ ಕುಸಿತ | ನೆರವಿಗೆ ಧಾವಿಸಿದ ರಾಜ್ಯದ 31 ಸದಸ್ಯರ ಎನ್‌ಡಿಆರ್‌ಎಫ್ ತಂಡ

ಇನ್‌ಸ್ಪೆಕ್ಟರ್‌ ಹರಿಶ್ಚಂದ್ರ ಪಾಂಡೆ ನೇತೃತ್ವದ ತಂಡವು ಮಂಗಳವಾರ ಬೆಳಿಗ್ಗೆ 7.30 ರ ಸುಮಾರಿಗೆ ವಯನಾಡಿಗೆ ತೆರಳಿದೆ ಎಂದು ಬೆಂಗಳೂರಿನ ಎನ್‌ಡಿಆರ್‌ಎಫ್ ಮೂಲಗಳು ತಿಳಿಸಿವೆ.;

Update: 2024-07-30 08:45 GMT
ಕೇರಳ ಭೂಕುಸಿತದ ದೃಶ್ಯ
Click the Play button to listen to article

ದೇವರನಾಡು ಕೇರಳದ ವಯನಾಡು, ಕೋಳಿಕ್ಕೋಡು ಜಿಲ್ಲೆಗಳು ಭಾರೀ ಮಳೆಯಿಂದ ಸಂಭವಿಸಿದ ಭೂಕುಸಿತಕ್ಕೆ ತತ್ತರಿಸಿ ಹೋಗಿವೆ.

ಭೀಕರ ಭೂಕುಸಿತಕ್ಕೆ ಇದುವರೆಗೆ ಮೃತರ ಸಂಖ್ಯೆ 70ಕ್ಕೆ ಏರಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಭೀತಿ ಇದೆ. ಭೂಕುಸಿತದ ಅವಶೇಷಗಳಲ್ಲಿ ಸಿಲುಕಿದವರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ ಡಿ ಆರ್‌ ಎಫ್‌) 31 ಸದಸ್ಯರ ತಂಡ ಬೆಂಗಳೂರಿನಿಂದ ವಯನಾಡ್‌ಗೆ ತೆರಳಿದೆ. 

ಇನ್ಸಪೆಕ್ಟರ್‌ ಹರಿಶ್ಚಂದ್ರ ಪಾಂಡೆ ನೇತೃತ್ವದ ತಂಡವು ಮಂಗಳವಾರ ಬೆಳಿಗ್ಗೆ 7.30 ರ ಸುಮಾರಿಗೆ ವಯನಾಡಿಗೆ ತೆರಳಿದೆ ಎಂದು ಬೆಂಗಳೂರಿನ ಎನ್‌ ಡಿ ಆರ್‌ ಎಫ್‌ ಮೂಲಗಳು ತಿಳಿಸಿವೆ. ಈ ತಂಡದಲ್ಲಿ ಹೆಡ್ ಕಾನ್ಸ್ಟೆಬಲ್, ಚಾಲಕರು, ಸಹಾಯಕ ಸಬ್-ಇನ್ಸಪೆಕ್ಟರುಗಳು ಮತ್ತು ಸಹಾಯಕ ಸಿಬ್ಬಂದಿ ಇದ್ದಾರೆ.

ಸದ್ಯಕ್ಕೆ ಬೆಂಗಳೂರಿನಿಂದ ಒಂದು ತಂಡ ಸಾಗುತ್ತಿದೆ. ಅಗತ್ಯಕಂಡುಬಂದರೆ ಹೆಚ್ಚಿನ ನಿಯೋಜನೆಗಳನ್ನು ಮಾಡಬಹುದು. ಆದರೆ ಪ್ರವಾಹ ಮತ್ತು ಭೂಕುಸಿತದ ಸಂದರ್ಭಗಳಲ್ಲಿ ನಮ್ಮ ತಂಡಗಳು ಈಗಾಗಲೇ ದಕ್ಷಿಣಕನ್ನಡ, ಉತ್ತರಕನ್ನಡ ಮತ್ತು ಇತರ ಜಿಲ್ಲೆಗಳಲ್ಲಿಇರುವುದರಿಂದ ಕರ್ನಾಟಕದಿಂದ ಹೆಚ್ಚಿನ ತಂಡ ಪೂರೈಸಲು ನಮಗೆ ಸಾಧ್ಯವಾಗದಿರಬಹುದು ಎಂದು ಎನ್‌ ಡಿ ಆರ್‌ ಎಫ್‌ ಬೆಂಗಳೂರು ತಂಡದ ಮೂಲಗಳು ತಿಳಿಸಿವೆ.

ಮಂಗಳವಾರ ಬೆಳಗಿನ ಜಾವ ಕೇರಳದ ವಯನಾಡಿನಲ್ಲಿ ಎರಡು ಬಾರಿ ಗುಡ್ಡ ಕುಸಿದಿದ್ದು, ಅನೇಕ ಸಾವು-ನೋವುಗಳು ಸಂಭವಿಸಿದೆ. 100ಕ್ಕೂ ಹೆಚ್ಚು ಮಂದಿ ಮಣ್ಣಿನಡಿಯಲ್ಲಿ ಸಿಲುಕಿರಬಹುದು ಎಂದು ಅಂದಾಜಿಸಲಾಗಿದೆ. ನಸುಕಿನ ಜಾವ 2 ಗಂಟೆಗೆ ಮೊದಲ ಭೂಕುಸಿತ ಸಂಭವಿಸಿದರೆ ಮುಂಜಾನೆ 4.10ರ ವೇಳೆ ಎರಡನೇ ಬಾರಿ ಸಂಭವಿಸಿದೆ. ರಾತ್ರಿ ವೇಳೆ ಜನರು ಮಲಗಿರುವಾಗ ಮೇಘಸ್ಫೋಟದಿಂದಾಗಿ ಗುಡ್ಡದಿಂದ ನೀರು ರಭಸವಾಗಿ ಮನೆಗಳ ಮೇಲೆ ಹರಿದು ಹೋಗಿದ್ದರಿಂದ ಸಾವು ನೋವಿನ ಪ್ರಮಾಣ ಏರಿಕೆಯಾಗುವ ಸಾಧ್ಯತೆಯಿದೆ.

ರಾಷ್ಟ್ರೀಯ ವಿಪತ್ತು ಕ್ಷಿಪ್ರ ಕಾರ್ಯ ಪಡೆ (NDRF) ಸಿಬ್ಬಂದಿ, ಸರ್ಕಾರಿ ಸಂಸ್ಥೆ ಸಿಬ್ಬಂದಿ ಸೇರಿದಂತೆ ಮತ್ತು ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ರಕ್ಷಣಾ ಕಾರ್ಯದಲ್ಲಿ ಸಹಾಯ ಮಾಡಲು 43 ಭಾರತೀಯ ಸೇನಾ ಸಿಬ್ಬಂದಿಯ ತಂಡವನ್ನು ಸಹ ಸಜ್ಜುಗೊಳಿಸಲಾಗಿದೆ.

Tags:    

Similar News