Bangalore Water Crisis | ಬೆಂಗಳೂರಿನ IT ಕಂಪನಿಗಳಿಗೆ ಕೇರಳ ಆಹ್ವಾನ: ಎಂ.ಬಿ. ಪಾಟೀಲ್ ಹೇಳಿದ್ದೇನು?
ಒಂದು ರಾಜ್ಯವಾಗಿ ಕೇರಳ ಎಷ್ಟು ಬೇಕಾದರೂ ಬಂಡವಾಳವನ್ನು ಆಕರ್ಷಿಸಬಹುದು. ಆದರೆ, ಈ ರೀತಿ ಕ್ಷುಲ್ಲಕ ರಾಜಕಾರಣ ಸರಿಯಲ್ಲ, ಐ.ಟಿ. ವರಮಾನ ಮತ್ತು ರಫ್ತು ವಹಿವಾಟಿನಲ್ಲಿ ಕರ್ನಾಟಕವು ದೇಶಕ್ಕೇ ಮೊದಲ ಸ್ಥಾನದಲ್ಲಿದೆ.
ನೀರಿಗೆ ಕೊರತೆ ಇದೆ ಎನ್ನುವ ಕಾರಣಕ್ಕೆ ಬೆಂಗಳೂರಿನ ಐಟಿ ಕಂಪನಿಗಳಿಗೆ ಕೇರಳ ರಾಜ್ಯ ಆಹ್ವಾನ ನೀಡುವುದು ಒಕ್ಕೂಟ ವ್ಯವಸ್ಥೆಯ ತತ್ತ್ವಕ್ಕೆ ವಿರುದ್ಧವಾದುದು ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಖಂಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಚಿವರು, ನೀರಿನ ಕೊರತೆ ಎಂಬುದು ನೈಸರ್ಗಿಕ ಸಹಜ ವಿದ್ಯಮಾನವಾಗಿದೆ. ಇದು ಕೇವಲ ಬೆಂಗಳೂರು, ಕರ್ನಾಟಕ ಮಾತ್ರವಲ್ಲದೇ, ಕೇರಳವು ಹೊರತಲ್ಲ. ಬರಗಾಲ ಮತ್ತು ಬೇಸಿಗೆ ಎರಡೂ ಸೇರಿಕೊಂಡು ನಮ್ಮ ದೇಶವೂ ಸೇರಿದಂತೆ ಜಗತ್ತಿನ ಎಲ್ಲೆಡೆಯೂ ನೀರಿನ ಕೊರತೆ ಉಂಟಾಗಿರುವುದು ನಿಸರ್ಗ ಸಹಜ ವಿದ್ಯಮಾನದ ಪರಿಣಾಮವಾಗಿದೆ. ಬೆಂಗಳೂರಿನಲ್ಲಿ ನೀರಿಲ್ಲವೆಂದು ಕೇರಳ ರಾಜ್ಯಕ್ಕೆ ಬರುವಂತೆ ಇಲ್ಲಿನ ಐ.ಟಿ. ಕಂಪನಿಗಳಿಗೆ ಆಹ್ವಾನ ನೀಡುತ್ತಿರುವುದು ಸರಿಯಲ್ಲ ಎಂದು ಅವರು ಕಿಡಿ ಕಾರಿದರು.
ʼʼನಾವೆಲ್ಲರೂ ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಅಂದಮೇಲೆ, ಪರಸ್ಪರ ಕೊಡು-ಕೊಳ್ಳುವಿಕೆ ಇರಬೇಕೇ ವಿನಾ ಪರಿಸ್ಥಿತಿಯ ದುರ್ಲಾಭ ಪಡೆಯಲು ನೋಡಬಾರದು. ಇದರಿಂದ ಕೊನೆಗೆ ಯಾರಿಗೂ ಒಳ್ಳೆಯದಾಗುವುದಿಲ್ಲ. ಈ ಪ್ರಾಥಮಿಕ ಸತ್ಯವನ್ನು ಕೇರಳದ ಸಚಿವರು ಅರ್ಥ ಮಾಡಿಕೊಳ್ಳಬೇಕುʼʼ ಎಂದರು.
ʼʼಕರ್ನಾಟಕ, ಕೇರಳ ಮಾತ್ರವಲ್ಲದೇ ಈ ವರ್ಷ ಜಗತ್ತಿನ ಎಲ್ಲೆಡೆಗಳಲ್ಲೂ ನೀರಿನ ಕೊರತೆ ಕಾಣಿಸಿಕೊಂಡಿದೆ. ರಾಜಧಾನಿಯ ಐ.ಟಿ. ಕಂಪನಿಗಳು ನೆಲೆಯೂರಿರುವ ಪ್ರದೇಶಗಳಲ್ಲಿ ಕೂಡ ಗಂಭೀರ ಸ್ವರೂಪದಲ್ಲೇನೂ ನೀರಿನ ಕೊರತೆ ಕಾಣಿಸಿಕೊಂಡಿಲ್ಲ. ಜತೆಗೆ ನಮ್ಮಲ್ಲಿ ಕೇರಳ ಮೂಲದ ಲಕ್ಷಾಂತರ ಯುವಕ- ಯುವತಿಯರು ನೆಮ್ಮದಿಯಿಂದ ಕೆಲಸ ಮಾಡುತ್ತಿದ್ದಾರೆ ಎನ್ನುವುದನ್ನು ಅವರು ಮರೆಯಬಾರದುʼʼ ಎಂದು ಸಲಹೆ ನೀಡಿದರು.
ಕ್ಷುಲ್ಲಕ ರಾಜಕಾರಣ ಸರಿಯಲ್ಲ
"ಒಂದು ರಾಜ್ಯವಾಗಿ ಕೇರಳ ಎಷ್ಟು ಬೇಕಾದರೂ ಬಂಡವಾಳವನ್ನು ಆಕರ್ಷಿಸಬಹುದು. ಆದರೆ, ಈ ರೀತಿ ಕ್ಷುಲ್ಲಕ ರಾಜಕಾರಣ ಸರಿಯಲ್ಲ, ಐ.ಟಿ. ವರಮಾನ ಮತ್ತು ರಫ್ತು ವಹಿವಾಟಿನಲ್ಲಿ ಕರ್ನಾಟಕವು ದೇಶಕ್ಕೇ ಮೊದಲ ಸ್ಥಾನದಲ್ಲಿದೆ. ನಮ್ಮಲ್ಲಿ ಕೈಗಾರಿಕಾ ಸ್ನೇಹಿ ನೀತಿಗಳಿವೆ. ಇಲ್ಲಿರುವಷ್ಟು ಜಾಗತಿಕ ಮಟ್ಟದ ಕಂಪನಿಗಳು ಬೇರೆಲ್ಲೂಇಲ್ಲ. ಹೀಗಾಗಿ ಬೆಂಗಳೂರು ಕಳೆದ ಎರಡೂವರೆ ದಶಕಗಳಲ್ಲಿ ದೇಶದ ಹೊಸ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಿದೆ. ಆದರೆ ಕೇರಳಕ್ಕೆ ಇಂತಹ ಸಾಧನೆ ಸಾಧ್ಯವಾಗಿಲ್ಲ. ನೀರಿನ ಕೊರತೆಯನ್ನೇ ಮುಂದಿಟ್ಟುಕೊಂಡು ಇನ್ನೊಬ್ಬರ ಅವಕಾಶಗಳನ್ನು ಕಸಿದುಕೊಳ್ಳುತ್ತೇವೆ ಎನ್ನುವ ಚಿಂತನೆ ಅತ್ಯಂತ ಅಪಾಯಕಾರಿʼʼ ಎಂದು ತಿಳಿಸಿದರು.
ʼʼಇಲ್ಲಿ 40 ನದಿಗಳಿವೆ ಎಂದು ಕೇರಳ ಸಚಿವರು ತಿಳಿಸಿದ್ದಾರೆ. ಆದರೆ ಅಲ್ಲಿ ಎಷ್ಟು ಅಣೆಕಟ್ಟುಗಳಿವೆ? ಎಷ್ಟರಲ್ಲಿ ಈಗ ನೀರಿದೆ? ಮುಂತಾದ ಪ್ರಶ್ನೆಗಳು ಉದ್ಭವವಾಗುತ್ತವೆ. ಕೇವಲ ನದಿಗಳಿದ್ದ ಮಾತ್ರಕ್ಕೆ ಕಂಪನಿಗಳನ್ನು ಕಟ್ಟುವುದು ಸಾಧ್ಯವಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಮುಂಗಾರು ಪೂರ್ವ ಮಳೆ ಬರಲಿದೆ. ಬೆಂಗಳೂರು ಸೇರಿದಂತೆ ಎಲ್ಲೆಡೆಯೂ ಪರಿಸ್ಥಿತಿ ಸುಧಾರಿಸಲಿದೆʼʼ ಎಂದು ಅವರು ವಿವರಿಸಿದರು.
ನೀರು ಪೂರೈಕೆಗೆ ಪ್ರತ್ಯೇಕ ವ್ಯವಸ್ಥೆ
ಕರ್ನಾಟಕದ ಎಲ್ಲ ಕೈಗಾರಿಕಾ ಪ್ರದೇಶಗಳಿಗೆ ಸಮೀಪದ ನದಿ ಮೂಲಗಳಿಂದ ನೀರು ಸರಬರಾಜಿಗೆ ಪ್ರತ್ಯೇಕ ವ್ಯವಸ್ಥೆ ಮಾಡುತ್ತಿದ್ದು ಈ ಕುರಿತು ರಾಜ್ಯ ಸರ್ಕಾರ ಕಾರ್ಯಪ್ರವೃತ್ತವಾಗಿದೆ.
ಉತ್ತರ ಕರ್ನಾಟಕದ ವಿಜಯಪುರದ ಮುಳವಾಡ ಕೈಗಾರಿಕಾ ಪ್ರದೇಶಕ್ಕೆ ಆಲಮಟ್ಟಿ, ಧಾರವಾಡ, ಕಿತ್ತೂರು, ದುರ್ಗದಕೇರಿ ಕೈಗಾರಿಕಾ ಪ್ರದೇಶಗಳಿಗೆ ಮಲಪ್ರಭಾ ನದಿಯಿಂದ ನೀರು ಸರಬರಾಜು ಮಾಡುವ ಯೋಜನೆಗೆ ಟೆಂಡರ್ ಕರೆಯಲಾಗಿದೆ. ಯೋಜನೆ ಅನುಷ್ಠಾನದ ಹಂತದಲ್ಲಿದೆ. ಹೀಗೆ ರಾಜ್ಯದ ಎಲ್ಲ ಕಡೆಗೂ ಈ ರೀತಿಯ ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಕೈಗಾರಿಕೆಗಳಿಗೆ ನೀರು ಪೂರೈಕೆಗೆ ಕ್ರಮವಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.