ಕರ್ನಾಟಕದ 53 ಪುರಾತತ್ವ ಇಲಾಖೆ ಸ್ಮಾರಕಗಳ ಮೇಲೆ ವಕ್ಫ್ ಬೋರ್ಡ್ ಹಿಡಿತ
ಪಾರಂಪರಿತ ತಾಣಗಳಲ್ಲಿ ಅತಿಕ್ರಮಣ ತೆರವಿಗೆ ಒತ್ತಾಯಿಸಿ 2007 ರಿಂದಲೂ ಕೇಂದ್ರ ಸಂಸ್ಕೃತಿ ಸಚಿವಾಲಯವು ವಿಜಯಪುರ ಜಿಲ್ಲಾಧಿಕಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪದೇ ಪದೇ ಮನವಿ ಮಾಡುತ್ತಿದೆ.;
ಕರ್ನಾಟಕ ಹಾಗೂ ಕೇರಳದಲ್ಲಿ ರೈತರ ಜಮೀನುಗಳಿಗೆ ವಕ್ಫ್ ನೋಟಿಸ್ ನೀಡಿರುವ ಪ್ರಕರಣವು ವಿವಾದದ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಕರ್ನಾಟಕದಲ್ಲಿರುವ 53 ಪುರಾತತ್ವ ಇಲಾಖೆ ಸ್ಮಾರಕಗಳ ಮೇಲೆ ವಕ್ಫ್ ಬೋರ್ಡ್ ಹಕ್ಕು ಸಾಧಿಸಿದೆ. 2005ರಲ್ಲೇ 43 ಸ್ಥಳಗಳ ಮೇಲೆ ಹಿಡಿತ ಸಾಧಿಸಿದೆ ಎಂಬ ಸ್ಫೋಟಕ ಸಂಗತಿ ಬೆಳಕಿಗೆ ಬಂದಿದೆ.
ಬೀದರ್ ಹಾಗೂ ಕಲಬುರಗಿಯ ಕೋಟೆ, ವಿಜಯಪುರದ ಗೋಲ್ ಗುಂಬಜ್, ಇಬ್ರಾಹಿಂ ರೌಜಾ ಹಾಗೂ ಬಾರಾ ಕಮಾನ್ ಸೇರಿದಂತೆ ಭಾರತೀಯ ಪುರಾತತ್ವ ಇಲಾಖೆ (ASI) ಅಧೀನದಲ್ಲಿರುವ ಹಲವು ಸ್ಥಳಗಳ ಮೇಲೆ ವಕ್ಫ್ ಬೋರ್ಡ್ ಮಾಲೀಕತ್ವ ಸಾಧಿಸಿದೆ. ಬಿಜಾಪುರದ ಸುಲ್ತಾನದ ಅವಧಿಯಲ್ಲಿ (1490–1686) ನಿರ್ಮಾಣವಾಗಿರುವ ಗೋಲ್ ಗುಂಬಜ್, ಇಬ್ರಾಹಿಂ ರೌಜಾ ಹಾಗೂ ಬಾರಾ ಕಮಾನ್ ಮೇಲೆ 19 ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದಿರುವ ವಕ್ಫ್ ಬೋರ್ಡ್ ಹಕ್ಕು ಸಾಧಿಸಿದ್ದು ಹೇಗೆ ಎಂಬ ಪ್ರಶ್ನೆ ಎದ್ದಿದೆ.
ಮದರಸಾಗಳಾಗಿ ಸಂಭಾವ್ಯ ಪಾರಂಪರಿಕ ತಾಣಗಳು
ವಕ್ಫ್ ಮಂಡಳಿಯು 2005ರಲ್ಲಿಯೇ ಪುರಾತತ್ವ ಇಲಾಖೆ ಅಧೀನದ 53 ಸ್ಥಳಗಳ ಪೈಕಿ 43 ಸ್ಥಳಗಳನ್ನು ತಮಗೆ ಸೇರಿದ ಜಾಗ ಎಂದು ಘೋಷಿಸಿಕೊಂಡಿದೆ. ಪಾರಂಪರಿಕ ಹಿನ್ನೆಲೆಯ ಹಲವಾರು ತಾಣಗಳು ಅತಿಕ್ರಮಿಸಲ್ಪಟ್ಟು, ವಿರೂಪಗೊಂಡಿವೆ. ಕೆಲವು ಅವೈಜ್ಞಾನಿಕ ನವೀಕರಣಗಳಿಂದಾಗಿ ಪಾರಂಪರಿಕ ಮೌಲ್ಯ ಕಳೆದುಕೊಳ್ಳುತ್ತಿರುವುದು ದುರಂತ.
ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪದ ಸ್ಮಾರಕಗಳಾದ ಮುಲ್ಲಾ ಮಸೀದಿ, ಯಾಕುಬ್ ದಾಬುಲಿಯ ಮಸೀದಿ ಮತ್ತು ಸಮಾಧಿಯನ್ನು ಯುನೆಸ್ಕೋದ ವಿಶ್ವ ಪಾರಂಪರಿಕ ಪಟ್ಟಿಗೆ ನಾಮನಿರ್ದೇಶನ ಮಾಡಲು ಪ್ರಸ್ತಾಪಿಸಲಾಗಿತ್ತು. ಆದರೆ, ಅವುಗಳನ್ನು ಈಗ ಮದರಸಾಗಳಾಗಿ ಪರಿವರ್ತಿಸಲಾಗಿದೆ ಎಂದು ಪುರಾತತ್ವ ಇಲಾಖೆಯ ಮೂಲಗಳು ತಿಳಿಸಿವೆ. ಇಸ್ಲಾಮಿಕ್ ಕಾನೂನಿನಡಿ ವಕ್ಫ್ ಆಸ್ತಿಗಳನ್ನು ಧಾರ್ಮಿಕ ಅಥವಾ ದತ್ತಿ ಉದ್ದೇಶಗಳಿಗೆ ಮಾತ್ರ ಬಳಸಬೇಕು ಎಂಬ ನಿಯಮದ ಪರಿಣಾಮ ಸ್ಮಾರಕಗಳಾಗಿ ಸಂರಕ್ಷಿಸುವುದು ಅಸಾಧ್ಯವಾಗಿದೆ ಎಂದು ಹೇಳಿವೆ.
ಐತಿಹಾಸಿಕ ರಚನೆಗೆ ಪ್ಲಾಸ್ಟರ್, ಸಿಮೆಂಟ್‌ನಿಂದ ದುರಸ್ತಿ
ವಕ್ಫ್ ಮಂಡಳಿ ಹಕ್ಕು ಹೊಂದಿರುವ 43 ಸ್ಮಾರಕಗಳಲ್ಲಿ ಹಲವು ವಿರೂಪಗೊಂಡಿವೆ. ಐತಿಹಾಸಿಕ ಸ್ಥಳಗಳನ್ನು ಪ್ಲಾಸ್ಟರ್ ಮತ್ತು ಸಿಮೆಂಟ್‌ನಿಂದ ದುರಸ್ತಿ ಮಾಡಲಾಗುತ್ತಿದೆ. ಫ್ಯಾನ್, ಏರ್ ಕಂಡಿಷನರ್, ಫ್ಲೋರೊಸೆಂಟ್ ಲೈಟ್‌ಗಳು ಮತ್ತು ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಕೆಲ ಐತಿಹಾಸಿಕ ಸ್ಥಳಗಳನ್ನು ಅಂಗಡಿಗಳು ಸ್ವಾಧೀನಪಡಿಸಿಕೊಂಡಿವೆ ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಪಾರಂಪರಿತ ತಾಣಗಳಲ್ಲಿ ಅತಿಕ್ರಮಣ ತೆರವಿಗೆ ಒತ್ತಾಯಿಸಿ 2007ರಿಂದಲೂ ಕೇಂದ್ರ ಸಂಸ್ಕೃತಿ ಸಚಿವಾಲಯವು ವಿಜಯಪುರ ಜಿಲ್ಲಾಧಿಕಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪದೇ ಪದೇ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಆರೋಪಿಸಿದ್ದಾರೆ.
ಮಾಲೀಕತ್ವದ ವಿವಾದ
ವಿಜಯಪುರದ ಜಿಲ್ಲಾಧಿಕಾರಿ ಹಾಗೂ ವಿಜಯಪುರ ವಕ್ಫ್ ಮಂಡಳಿ ಅಧ್ಯಕ್ಷರಾಗಿದ್ದ ಈಗಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(ವೈದ್ಯಕೀಯ) ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್ ಅವರು 2005ರ ದಾಖಲೆಗಳ ಪ್ರಕಾರ ವಕ್ಫ್ ಮಂಡಳಿಗೆ ಪಹಣಿ (ROR) ಹಾಗೂ ಪಿಆರ್ ಕಾರ್ಡ್ (ಆಸ್ತಿ ಪ್ರಮಾಣಪತ್ರ) ನೀಡಿದ್ದಾರೆ. ಇದರ ಆಧಾರದ ಮೇಲೆ ಸಂರಕ್ಷಿತ ಸ್ಮಾರಕಗಳ ಮೇಲೆ ವಕ್ಫ್ ಬೋರ್ಡ್ ಹಕ್ಕು ಸಾಧಿಸಿದೆ ಎಂಬುದು ಪುರಾತತ್ವ ಇಲಾಖೆ ಅಧಿಕಾರಿಗಳ ವಾದ. ಆದರೆ, ಈ ವಾದವನ್ನು ಒಪ್ಪದ ಮೊಹಮ್ಮದ್ ಮೊಹ್ಸಿನ್ ಅವರು, ಕಂದಾಯ ಇಲಾಖೆ ಹೊರಡಿಸಿದ ಸರ್ಕಾರಿ ಗೆಜೆಟ್ ಅಧಿಸೂಚನೆ ಮತ್ತು ಅಧಿಕೃತ ದಾಖಲೆಗಳ ಪ್ರಕಾರವೇ ವಕ್ಫ್ ಮಂಡಳಿಗೆ ಪಹಣಿ ಹಾಗೂ ಆಸ್ತಿ ಪ್ರಮಾಣ ಪತ್ರ ನೀಡಲಾಗಿದೆ ಎಂದಿದ್ದಾರೆ.
ಆದರೆ, 2012ರಲ್ಲಿ ಜಂಟಿ ಸಮೀಕ್ಷೆ ನಡೆಸಿದಾಗಲೂ ಈ ಸ್ಮಾರಕಗಳು ವಕ್ಫ್ಗೆ ಸೇರಿದ ಜಾಗಗಳು ಎಂಬುದನ್ನು ದೃಢೀಕರಿಸುವ ಯಾವುದೇ ಸಾಕ್ಷ್ಯಗಳು, ದಾಖಲೆಗಳು ಇರಲಿಲ್ಲ ಎಂದು ಎಎಸ್ಐ ಅಧಿಕಾರಿಗಳು ತಿಳಿಸುತ್ತಾರೆ.
ಇನ್ನಷ್ಟು ಸ್ಥಳಗಳ ಮೇಲೆ ವಕ್ಫ್ ದೃಷ್ಟಿ
ವಕ್ಫ್ ಮಂಡಳಿಯು ಶ್ರೀರಂಗಪಟ್ಟಣದ ಮಸೀದಿ-ಇ-ಆಲಾ ಜೊತೆಗೆ ಭಾರತೀಯ ಪುರಾತತ್ವ ಇಲಾಖೆಯ ಹಂಪಿ ವೃತ್ತದಲ್ಲಿರುವ ಆರು ಮತ್ತು ಬೆಂಗಳೂರು ವೃತ್ತದಲ್ಲಿ ನಾಲ್ಕು ಸ್ಮಾರಕಗಳ ಮೇಲೂ ಹಕ್ಕು ಸಾಧಿಸಿದೆ ಎಂದು ವರದಿಯಾಗಿದೆ.
ಈ ಎಲ್ಲಾ ರಚನೆಗಳು 1914ರಲ್ಲಿ ಬ್ರಿಟಿಷ್ ಸರ್ಕಾರ ಸೂಚಿಸಿದಂತೆ ರಾಷ್ಟ್ರೀಯ ಪಾರಂಪರಿಕ ಸ್ಮಾರಕಗಳಾಗಿವೆ. ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ತಾಣಗಳ ಅವಶೇಷಗಳ (AMASR) ಕಾಯ್ದೆ ಮತ್ತು 1958 ರ ನಿಯಮಗಳ ಆಧಾರದ ಮೇಲೆ ಪುರಾತತ್ವ ಇಲಾಖೆ ಈ ಆಸ್ತಿಗಳ ನಿರ್ವಹಣೆ, ನವೀಕರಣ ಹಾಗೂ ಸಂರಕ್ಷಣೆಯ ಅಧಿಕಾರ ಹೊಂದಿದೆ. ಒಮ್ಮೆ ಯಾವುದೇ ಪಾರಂಪರಿಕ ಸ್ಥಳ ಪುರಾತತ್ವ ಇಲಾಖೆಗೆ ಸೇರಿದರೆ ಅದನ್ನು ಡಿನೋಟಿಫೈ ಮಾಡಲು ಬರುವುದಿಲ್ಲ.