Karnataka By-Election | 3 ಕ್ಷೇತ್ರಗಳ ಉಪ ಚುನಾವಣೆ: ಬಿರುಸಿನ ಮತದಾನ
ರಾಜ್ಯದ ಚನ್ನಪಟ್ಟಣ, ಶಿಗ್ಗಾವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತದಾನ ಆರಂಭವಾಗಿದೆ. ಬುಧವಾರ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ.;
ರಾಜ್ಯದಲ್ಲಿ ಚನ್ನಪಟ್ಟಣ, ಶಿಗ್ಗಾವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತದಾನ ಆರಂಭವಾಗಿದೆ.
ಬುಧವಾರ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಮೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಸುಮಾರು 770 ಮತಗಟ್ಟೆಗಳಲ್ಲಿ ಏಳು ಲಕ್ಷಕ್ಕೂ ಹೆಚ್ಚು ಮತದಾರರು ಮತ ಚಲಾಯಿಸಲಿದ್ದಾರೆ. ಈ ಉಪಚುನಾವಣೆಯಲ್ಲಿ ಒಟ್ಟು 45 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಕಾಂಗ್ರೆಸ್‌ನ ಇ ತುಕಾರಾಂ ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ತೆರವಾದ ಈ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮುಖಂಡ ಮತ್ತು ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಎನ್‌ಡಿಎ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿದ್ದು, ಕಾಂಗ್ರೆಸ್ ಪಕ್ಷದಿಂದ ಈ ಹಿಂದೆ ಐದು ಬಾರಿ ಶಾಸಕರಾಗಿದ್ದ ಸಿ ಪಿ ಯೋಗೇಶ್ವರ್ ಕಣಕ್ಕಿಳಿದಿದ್ದಾರೆ. ಕರ್ನಾಟಕದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪುತ್ರ ಬಿಜೆಪಿಯ ಭರತ್ ಬೊಮ್ಮಾಯಿ ಅವರು ಶಿಗ್ಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ಯಾಸಿರ್ ಅಹಮದ್ ಖಾನ್ ಅವರಿಗೆ ಎದುರಾಳಿಯಾಗಿದ್ದಾರೆ. ಸಂಡೂರಿನಲ್ಲಿ ಬಿಜೆಪಿಯ ಬಂಗಾರು ಹನುಮಂತು ವಿರುದ್ಧ ಕಾಂಗ್ರೆಸ್ ಮುಖಂಡ ಇ ತುಕಾರಾಂ ಅವರ ಪತ್ನಿ ಇ ಅನ್ನಪೂರ್ಣ ಕಣಕ್ಕಿಳಿದಿದ್ದಾರೆ.
ಅಭ್ಯರ್ಥಿಗಳು ಮತದಾನದ ಮುನ್ನಾ ದಿನವಾದ ಮಂಗಳವಾರ ಕೂಡಾ ಮತದಾರರ ಓಲೈಕೆಗೆ ಇನ್ನಿಲ್ಲದ ಕಸರತ್ತು ನಡೆಸಿದರು. ತಮ್ಮ ಪುತ್ರರ ರಾಜಕೀಯ ಭವಿಷ್ಯಕ್ಕೆ ಮುನ್ನಡಿ ಬರೆಯಲಿರುವ ಈ ಚುನಾವಣೆಯನ್ನು ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಎಚ್.ಡಿ. ಕುಮಾರಸ್ವಾಮಿ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಜೊತೆಗೆ ಕ್ಷೇತ್ರವನ್ನು ಉಳಿಸಿಕೊಳ್ಳುವ ಸವಾಲೂ ಅವರ ಮುಂದಿದೆ. ಮೊಮ್ಮಗನನ್ನು ವಿಧಾನಸಭೆಯ ಮೆಟ್ಟಿಲೇರಿಸಲು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಕ್ಷೇತ್ರಕ್ಕಿಳಿದು ಮತ ಯಾಚಿಸಿದ್ದಾರೆ.
ಬಿಜೆಪಿ ತ್ಯಜಿಸಿ ಬಂದ ಸಿ.ಪಿ. ಯೋಗೇಶ್ವರ್‌ಗೆ ಚನ್ನಪಟ್ಟಣದಲ್ಲಿ ಮಣೆ ಹಾಕಿರುವ ರಾಜ್ಯ ಕಾಂಗ್ರೆಸ್ ನಾಯಕರು, ಈ ಕ್ಷೇತ್ರವನ್ನು ಜೆಡಿಎಸ್‌ನಿಂದ ಕಸಿದುಕೊಳ್ಳಲೇಬೇಕೆಂಬ ಪಣ ತೊಟ್ಟಿದ್ದಾರೆ. ರಾಜಕೀಯ ಜಿದ್ದಾಜಿದ್ದಿಗೆ ಹೆಸರುವಾಸಿಯಾಗಿರುವ ಈ ಕ್ಷೇತ್ರ ಎಚ್.ಡಿ. ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಪ್ರತಿಷ್ಠೆಯ ಕಣವಾಗಿಯೂ ಬದಲಾಗಿದೆ.
ಮತದಾನದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದ್ದು, ಬಿಗಿ ಭದ್ರತೆ ಕಲ್ಪಿಸಲಾಗಿದೆ. ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಬಂದೋಬಸ್‌ಗೆ ನಿಯೋಜಿಸಲಾಗಿದೆ.
ಮತದಾನ ಆರಂಭಕ್ಕೂ ಮುನ್ನ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಎಲ್ಲೆಲ್ಲಿ ಎಷ್ಟೆಷ್ಟು ಮತದಾನ
ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 9 ಗಂಟೆಯವರೆಗೆ 10.14% ಮತದಾನ ಆಗಿದ್ದು, ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಆರಂಭವಾದಾಗಿನಿಂದ ಮೊದಲ ಎರಡು ಗಂಟೆಗಳಲ್ಲಿ ಅಂದಾಜು ಒಟ್ಟಾರೆ 10.14 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಚುನಾವಣೆಯ ಮತದಾನ ಚುರುಕಿನಿಂದ ನಡೆಯುತ್ತಿದ್ದು, ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಶೇ. 10.08ರಷ್ಟು ಮತದಾನವಾಗಿದೆ. ಚನ್ನಪಟ್ಟಣ ಉಪಚುನಾಚಣೆಯ 276 ಮತಗಟ್ಟೆಗಳಲ್ಲಿಯು ಶಾಂತಿಯುತ ಮತದಾನ ನಡೆಯುತ್ತಿದೆ. 7 ಗಂಟೆಯಿಂದ 9 ಗಂಟೆಯವರೆಗೆ ಶೇ 8.20 ಮತದಾನವಾಗಿದೆ. ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಶೇ.10.11 ರಷ್ಟು ಮತದಾನವಾಗಿದೆ.