Reviving VISL | ವಿಐಎಸ್‌ಎಲ್‌ ಪುನಶ್ಚೇತನಕ್ಕೆ ಕೇಂದ್ರ ಅಸ್ತು; ಮರಳಲಿದೆಯೇ ಭದ್ರಾವತಿ ಉಕ್ಕು ಕಾರ್ಖಾನೆ ಗತವೈಭವ?

ಅತ್ಯುತ್ತಮ ಗುಣಮಟ್ಟದ ಮಿಶ್ರಲೋಹ, ವಿಶೇಷ ಉಕ್ಕುಗಳು ಹಾಗೂ ನಾಡು ಕಬ್ಬಿಣ (ಪಿಗ್ ಐರನ್) ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದ ವಿಐಎಸ್ಎಲ್ ಕಾರ್ಖಾನೆಯಲ್ಲಿ 1989 ರಿಂದ ಉತ್ಪಾದನೆ ಕ್ಷೀಣಿಸಿತು. ಆಗ 1998 ರಲ್ಲಿ ವಿಐಎಸ್ಎಲ್ ಕಾರ್ಖಾನೆಯನ್ನು ಭಾರತೀಯ ಉಕ್ಕು ಪ್ರಾಧಿಕಾರದೊಂದಿಗೆ ವಿಲೀನಗೊಂಡಿತು. 2005 ರಿಂದ ಕಾರ್ಖಾನೆಗೆ ಕುದುರೆಮುಖದಿಂದ ಅದಿರು ಪೂರೈಕೆ ಕೂಡ ಸ್ಥಗಿತವಾಯಿತು.;

Update: 2025-05-25 02:00 GMT

ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯು (ವಿಐಎಸ್‌ಎಲ್‌) ತನ್ನ ಗತವೈಭವವನ್ನು ಮರಳಿ ಪಡೆಯುವ ಕಾಲ ಸನ್ನಿಹಿತವಾಗುತ್ತಿದೆ. ಕೇಂದ್ರ ಸರ್ಕಾರದ ಪುನಶ್ಚೇತನಾ ಯೋಜನೆಯಡಿ ಶೀಘ್ರವೇ ಕಾರ್ಖಾನೆ ಜೀವ ಕಳೆ ಪಡೆಯಲಿದೆ.

ಭದ್ರಾವತಿಯಲ್ಲಿ 1918ರಲ್ಲಿ ಅಂದಿನ ಮೈಸೂರು ಅರಸರ ಕಾಲದಲ್ಲಿ ಆರಂಭವಾದ ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯು 1975ರಲ್ಲಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಾಗಿ ಮರು ನಾಮಕರಣವಾಯಿತು.

ಅತ್ಯುತ್ತಮ ಗುಣಮಟ್ಟದ ಮಿಶ್ರಲೋಹ, ವಿಶೇಷ ಉಕ್ಕುಗಳು ಹಾಗೂ ನಾಡು ಕಬ್ಬಿಣ (ಪಿಗ್ ಐರನ್) ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದ ವಿಐಎಸ್ಎಲ್ ಕಾರ್ಖಾನೆಯಲ್ಲಿ 1989 ರಿಂದ ಉತ್ಪಾದನೆ ಕ್ಷೀಣಿಸಿತು. ಆಗ 1998 ರಲ್ಲಿ ವಿಐಎಸ್ಎಲ್ ಕಾರ್ಖಾನೆಯನ್ನು ಭಾರತೀಯ ಉಕ್ಕು ಪ್ರಾಧಿಕಾರದೊಂದಿಗೆ ವಿಲೀನಗೊಂಡಿತು. 2005 ರಿಂದ ಕಾರ್ಖಾನೆಗೆ ಕುದುರೆಮುಖದಿಂದ ಅದಿರು ಪೂರೈಕೆ ಕೂಡ ಸ್ಥಗಿತವಾಯಿತು.

ಸಂಪೂರ್ಣ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ವಿಐಎಸ್ಎಲ್ ಕಾರ್ಖಾನೆಯನ್ನು 2016 ರಲ್ಲಿ ಖಾಸಗೀಕರಣ ಮಾಡಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ಆದರೆ, ಯಾರೊಬ್ಬರು ಕಾರ್ಖಾನೆ ಖರೀದಿಗೆ ಮುಂದಾಗದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 2022 ರಲ್ಲಿ ಖಾಸಗೀಕರಣ ಪ್ರಕ್ರಿಯೆ ಕೈಬಿಟ್ಟು ಮುಚ್ಚುವ ಪ್ರಕ್ರಿಯೆಯನ್ನು ಆರಂಭಿಸಿತು.

ಪುನಶ್ಚೇತನ ಪ್ರಯತ್ನಕ್ಕೆ ಎಚ್‌ಡಿಕೆ ನಾಂದಿ

ಕೇಂದ್ರದಲ್ಲಿ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಎನ್‌ಡಿಎ ಸರ್ಕಾರದಲ್ಲಿ ಕರ್ನಾಟಕದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಬೃಹತ್ ಕೈಗಾರಿಕಾ ಸಚಿವರಾಗಿ ನೇಮಕಗೊಂಡ ಬಳಿಕ ರೋಗಗ್ರಸ್ಥ ಕಾರ್ಖಾನೆಗಳಿಗೆ ಮರುಜೀವ ನೀಡುವ ಪ್ರಯತ್ನವನ್ನು ಆರಂಭಿಸಿದರು.

ವಿಶಾಖಪಟ್ಟಣದ ವೈಜಾಕ್ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆ ಪುನಶ್ಚೇತನಗೊಳಿಸಿದ ನಂತರ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯತ್ತ ತಮ್ಮ ಚಿತ್ತ ಹರಿಸಿದರು.

ವಿಎಸ್ಐಎಲ್ ಸಂಸ್ಥೆಯ ಪುನರುಜ್ಜೀವನದ ಸಾಧ್ಯಾಸಾಧ್ಯತೆಗಳ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಕಾರ್ಖಾನೆ ಪುನಶ್ಚೇತನಕ್ಕೆ ಆರ್ಥಿಕ ನೆರವು ಒದಗಿಸುವಂತೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಪದೇ ಪದೇ ಭೇಟಿಯಾಗಿ ಮನವಿ ಮಾಡಿದ್ದರು. ಈ ಎಲ್ಲಾ ಪ್ರಯತ್ನಗಳ ಫಲವಾಗಿ ಕೇಂದ್ರ ಸರ್ಕಾರ ಪುನಶ್ಚೇತನಾ ಪ್ಯಾಕೇಜ್ ಪ್ರಕಟಿಸಿದೆ. ವಿಐಎಸ್ಎಲ್ ಕಾರ್ಖಾನೆ ಪುನಶ್ಚೇತನಕ್ಕೆ 8 ರಿಂದ 10 ಸಾವಿರ ಕೋಟಿ ರೂ. ಭರಿಸಲು ಕೇಂದ್ರ ಒಪ್ಪಿಗೆ ನೀಡಿದ್ದು, ಯೋಜನೆಗೆ ಎರಡು ತಿಂಗಳಲ್ಲಿ ಡಿಪಿಆರ್ ಸಿದ್ಧವಾಗಲಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಪ್ರಧಾನಿ ಅವರಿಂದಲೇ ಶಂಕುಸ್ಥಾಪನೆ ನೆರವೇರಿಸಲು ನಿರ್ಧರಿಸಲಾಗಿದೆ.

ಗುಣಮಟ್ಟದ ಉಕ್ಕು ಉತ್ಪಾದನೆಗೆ ಹೆಸರುವಾಸಿ

ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆ ಗುಣಮಟ್ಟದ ಉಕ್ಕು ಉತ್ಪಾದನೆಗೆ ಅತ್ಯಂತ ಹೆಚ್ಚು ಪ್ರಸಿದ್ಧಿ ಪಡೆದಿತ್ತು.

BF-BOF-LRF-VD(ಬ್ಲಾಸ್ಟ್ ಫರ್ನೇಸ್-ಬೇಸಿಕ್ ಆಕ್ಸಿಜನ್ ಫರ್ನೇಸ್-ಲ್ಯಾಡಲ್ ರೀಫೈನಿಂಗ್ ಫರ್ನೇಸ್-ವಾಕ್ಯೂಮ್ ಡೆಗಾಸ್ಸಿಂಗ್ ಅಂದರೆ ಉತ್ತಮ ಗುಣಮಟ್ಟದ ಉಕ್ಕು ಉತ್ಪಾದಿಸಲು ಬಳಸುವ ಉಪಕರಣಗಳು ಮತ್ತು ಪ್ರಕ್ರಿಯೆ) ಮೂಲಕ ಗುಣಮಟ್ಟದ ಉಕ್ಕು ಉತ್ಪಾದನೆಗೆ ವಿಐಎಸ್ಎಲ್ ಹೆಸರುವಾಸಿಯಾಗಿತ್ತು.

ನಿರಂತರ ಎರಕಹೊಯ್ಯುವ ಸ್ವಯಂಚಾಲಿತ ಕಾರ್ಯಾಚರಣೆಗಾಗಿ ಹೈ ಪ್ರೊಗ್ರಾಮೆಬಲ್ ಲಾಜಿಕ್ ಕಂಟ್ರೋಲರ್ ಸಿಸ್ಟಮ್ ಕೂಡ ಹೊಂದಿತ್ತು. ಕಾರ್ಖಾನೆಯು ಒಟ್ಟು 2,16,000 ಟನ್ ಬಿಸಿ ಲೋಹ ಮತ್ತು 98,280 ಟನ್ ಮಿಶ್ರಲೋಹ, ವಿಶೇಷ ಉಕ್ಕು ಉತ್ಪಾದನಾ ಸಾಮರ್ಥ್ಯ ಹೊಂದಿದೆ.

ವಿಎಸ್ಐಎಲ್ ಉತ್ಪನ್ನಗಳು ಯಾವುವು?

ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ 201 ರಿಂದ 600 ಎಂಎಂ ಸುತ್ತಳತೆಯ ಟೂಲ್ ಸ್ಟೀಲ್, 200 ಎಂಎಂ ಮತ್ತು 2.5 ಲಕ್ಷ ಚದರ ಸುತ್ತಳತೆ ಮತ್ತು ಆಯತಾಕಾರದ ಡೈ ಬ್ಲಾಕ್ಗಳು,

201 ರಿಂದ 600 ಎಂಎಂ ಸುತ್ತಳತೆಯ ಕಾರ್ಬನ್ ಮತ್ತು ಮಿಶ್ರಲೋಹದ ಉಕ್ಕು, 201 ರಿಂದ 500 ಎಂಎಂ ಗಾತ್ರವಿರುವ ಮೂಲೆ ಚೌಕದ ರೋಲರ್, 650 ರಿಂದ 1050 ಎಂಎಂ ಗಾತ್ರದ OD ಕ್ರೇನ್ ಚಕ್ರಗಳು, ಕನಿಷ್ಠ 150 ಎಂಎಂ ದಪ್ಪ, 200 ಎಂಎಂ ಅಗಲದ ಫ್ಲಾಟ್ಗಳನ್ನು ಉತ್ಪಾದಿಸಲಾಗುತ್ತಿತ್ತು.

1 ಟನ್ ತೂಕದವರೆಗಿನ ಕಬ್ಬಿಣದ ತುಂಡುಗಳು, ಬಿ.ಜಿ. ಕೋಚಿಂಗ್ ಆಕ್ಸಲ್, 130, 180, 200, 300 ಹಾಗೂ 350 ಎಂಎಂ ಕಬ್ಬಿಣ, 20 ರಿಂದ 58 ಎಂಎಂನ ಬಿಲ್ಲೆಟ್, 40 ರಿಂದ 120 ಎಂಎಂ ಫ್ಲಾಟ್ಗಳು ಸೇರಿದಂತೆ ಹಲವು ರೀತಿಯ ಉತ್ಪನ್ನಗಳನ್ನು ಉತ್ಪಾದನೆ ಮಾಡಲಾಗುತ್ತಿತ್ತು.

ಕುದುರೆಮುಖದಿಂದ ಅದಿರು ಪೂರೈಕೆ

ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಆರಂಭದಿಂದಲೂ ಕುದುರೆಮುಖದಿಂದ ಅದಿರು ಪೂರೈಸಲಾಗುತ್ತಿತ್ತು. ಬಾಬಾ ಬುಡನ್ ಗಿರಿ ಹಾಗೂ ಕೆಮ್ಮಣ್ಣುಗುಂಡಿಯಲ್ಲಿದ್ದ ಶ್ರೀಮಂತ ಕಬ್ಬಿಣದ ಅದಿರು ನಿಕ್ಷೇಪಗಳಿಂದ ಕಬ್ಬಿಣ ಮತ್ತು ಇತರ ಉತ್ಪನ್ನಗಳ ತಯಾರಿಕೆ ಅದಿರು ಪೂರೈಸಲಾಗುತ್ತಿತ್ತು.

1962ರ ನಂತರ ಕಾರ್ಖಾನೆಯನ್ನು 40*60 ಅನುಪಾತದ ಷೇರುಗಳೊಂದಿಗೆ ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಜಂಟಿಯಾಗಿ ತೆಕ್ಕೆಗೆ ತೆಗೆದುಕೊಂಡು ಸರ್ಕಾರಿ ಕಂಪನಿಯನ್ನಾಗಿ ಪರಿವರ್ತಿಸಿದವು. ಹೊಸ ಎಲ್.ಡಿ. ಪ್ರಕ್ರಿಯೆ (ಕರಗಿದ ಕಬ್ಬಿಣವನ್ನು ಉಕ್ಕಾಗಿ ಸಂಸ್ಕರಿಸಲು ಆಮ್ಲಜನಕ ಬಳಸುವ ವಿಧಾನ) ಬಳಸಿಕೊಂಡು ಉಕ್ಕು ಉತ್ಪಾದಿಸುವ ಹೊಸ ಘಟಕ ಸ್ಥಾಪಿಸಲಾಯಿತು. ಅದರ ಸಂಸ್ಥಾಪಕರನ್ನು ಗೌರವಿಸುವ ಸಲುವಾಗಿ 1975ರಲ್ಲಿ ಕಾರ್ಖಾನೆಗೆ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ನಿಯಮಿತ ಎಂದು ಮರುನಾಮಕರಣ ಮಾಡಲಾಯಿತು.

2005 ರಲ್ಲಿ ಅದಿರು ಪೂರೈಕೆ ಸ್ಥಗಿತ

1976 ರಲ್ಲಿ ಅದಿರು ಉತ್ಪಾದನೆಗಾಗಿ ಕುದುರೆಮುಖ ಕಬ್ಬಿಣದ ಅದಿರು ಕಾರ್ಖಾನೆಯನ್ನು (ಕೆಐಒಸಿಎಲ್) ಆರಂಭಿಸಲಾಯಿತು. 4,605 ಹೆಕ್ಟೇರ್ ಪ್ರದೇಶದಲ್ಲಿ ಅದಿರು ತೆಗೆಯಲು ಕೆಐಒಸಿಎಲ್ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. 1980ರಲ್ಲಿ ಗಣಿಗಾರಿಕೆ ಆರಂಭಿಸಿದ ಕಂಪೆನಿ, ಸಾವಿರಾರು ಮಂದಿ ಸ್ಥಳೀಯರಿಗೆ ಉದ್ಯೋಗ ಒದಗಿಸಿತ್ತು. ಈ ಅವಧಿಯಲ್ಲಿ ಕಳಸಾ-ಮಂಗಳೂರು ಹೆದ್ದಾರಿ ನಿರ್ಮಾಣಕ್ಕೂ ಕಾರಣೀಭೂತವಾಯಿತು.

1979ರಲ್ಲಿ ಭದ್ರಾ ನದಿಯ ಉಪನದಿಗೆ ಅಡ್ಡವಾಗಿ 20 ಕಿ.ಮೀ ಜಲಸಂಗ್ರಹ ವಿಸ್ತೀರ್ಣದ ಅಣೆಕಟ್ಟೆ ನಿರ್ಮಿಸಲಾಯಿತು. 1.7 ಕಿ.ಮೀ ಸುರಂಗ ಮಾರ್ಗ ಸೇರಿ ಮಂಗಳೂರಿಗೆ 67 ಕಿ.ಮೀ. ವರೆಗೆ 17 ಅಂಗುಲ ವ್ಯಾಸದ ಪೈಪ್ಲೈನ್ ಜೋಡಿಸಿ ಗುರುತ್ವಾಕರ್ಷಣೆ ಮೂಲಕ ಕಬ್ಬಿಣದ ಅದಿರಿನ ಉಂಡೆಗಳನ್ನು ಸಾಗಿಸುವ ವಿನೂತನ ತಂತ್ರಜ್ಞಾನ ಅಳವಡಿಸಲಾಯಿತು. ಆದರೆ, ಅದಿರು ಸಾಗಾಣೆಯಿಂದ ಪರಿಸರಕ್ಕೆ ಮಾರಕವಾದ ಪರಿಣಾಮ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು. ಅದು ಚಳವಳಿ ಸ್ವರೂಪ ಪಡೆದು, 2002ರಲ್ಲಿ ಸುಪ್ರೀಂ ಕೋರ್ಟ್ ಕುದುರೆಮುಖ ಗಣಿಗಾರಿಕೆ ಸ್ಥಗಿತಕ್ಕೆ ಆದೇಶಿಸಿತು.

ಕುದುರೆಮುಖದಲ್ಲಿ ಕೆಐಒಸಿಎಲ್ ಗಣಿಗಾರಿಕೆ ನಿಲ್ಲಿಸಿದ್ದರೂ ಜಾಗ ತೆರವು ಮಾಡಿರಲಿಲ್ಲ. 2005 ರಲ್ಲಿ ಕುದುರೆಮುಖದಿಂದ ಯಂತ್ರೋಪಕರಣ ಸಮೇತ ಜಾಗ ತೆರವು ಮಾಡುವಂತೆ ನ್ಯಾಯಾಲಯ ಸೂಚಿಸಿತು. ಆ ಬಳಿಕ ಅಲ್ಲಿಂದ ಕುದುರೆಮುಖ ಗಣಿಗಾರಿಕೆ ಸಂಪೂರ್ಣವಾಗಿ ಸ್ತಬ್ಧವಾಯಿತು.

Tags:    

Similar News