ಬಿಜೆಪಿಯಲ್ಲಿ ಬಣ ತಿಕ್ಕಾಟ ಜೋರು; ಬಿಎಸ್‌ವೈ ನಿವಾಸದಲ್ಲಿ ವಿಜಯೇಂದ್ರ ನಿಷ್ಠರ ಸಭೆ; ಯತ್ನಾಳ್‌ ಉಚ್ಛಾಟನೆಗೆ ಒತ್ತಾಯ

ಚಾಡಿ ಹೇಳುವ ಅವಶ್ಯಕತೆ ನನಗಿಲ್ಲ. ಚಾಡಿ ಹೇಳುವುದಾಗಲೀ, ಯತ್ನಾಳರನ್ನು ಪಕ್ಷದಿಂದ ಹೊರಕ್ಕೆ ಕಳಿಸಬೇಕೆಂಬ ಒತ್ತಾಯ ಮಾಡಿಲ್ಲ. ಅದರ ಅವಶ್ಯಕತೆ ನನಗಿಲ್ಲ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.;

Update: 2024-12-01 13:15 GMT

ಬಿಜೆಪಿಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಬಣದ ನಡುವಿನ ಸಮರ ಜೋರಾಗಿದೆ. 

ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ನಿವಾಸದಲ್ಲಿ ಭಾನುವಾರ ಸಭೆ ನಡೆಸಿದ ಬಿ.ವೈ. ವಿಜಯೇಂದ್ರ ಬಣದ ನಾಯಕರು, ಶಾಸಕ ಯತ್ನಾಳ ವಿರುದ್ಧ ಶಿಸ್ತುಕ್ರಮಕ್ಕೆ  ಒತ್ತಾಯಿಸಿದ್ದಾರೆ.

ಬಸನಗೌಡ ಪಾಟೀಲ ಯತ್ನಾಳ್‌ ದಿನೇ ದಿನೇ ಪಕ್ಷದ ಅಧ್ಯಕ್ಷ ಹಾಗೂ ಹಿರಿಯ ನಾಯಕರ ವಿರುದ್ಧ ಬಹಿರಂಗ ಟೀಕೆ ಮಾಡುತ್ತಿದ್ದು, ಪಕ್ಷದ ವರ್ಚಸ್ಸಿಗೆ ಹಾನಿಯಾಗುತ್ತಿದೆ. ಪಕ್ಷದ ಅಧ್ಯಕ್ಷರ ಅನುಮತಿ ಇಲ್ಲದೇ ವಕ್ಫ್‌ ವಿರುದ್ಧ ಅಭಿಯಾನ ನಡೆಸುತ್ತಿದ್ದಾರೆ. ಇದರಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ. ಯತ್ನಾಳ್‌ ಬಣದವರನ್ನು ಪಕ್ಷದಿಂದಲೇ ಉಚ್ಛಾಟಿಸಬೇಕು ಎಂದು ಬಿಎಸ್‌ವೈ ಹಾಗೂ ವಿಜಯೇಂದ್ರ ಅವರನ್ನು ಒತ್ತಾಯಿಸಿದ್ದಾರೆ.

ಸಭೆಯಲ್ಲಿ ಬಿಜೆಪಿ ಹಿರಿಯ ನಾಯಕ ಬಿ.ಎಸ್.‌ ಯಡಿಯೂರಪ್ಪ, ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಶಾಸಕರಾದ ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಪಿಳ್ಳಮುನಿಶಾಮಪ್ಪ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಿದ್ದರು.

ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಬಿಜೆಪಿ ಕಾರ್ಯಕರ್ತರಿಗೆ ಅವಮಾನವಾಗುವಂತೆ ಯಾರೂ ನಡೆದುಕೊಳ್ಳಬಾರದು. ನನ್ನ ವಿರುದ್ಧ ದಾಖಲೆಗಳಿದ್ದರೆ ಒಂದು ಕ್ಷಣವೂ ತಡ ಮಾಡದೆ ಬಿಡುಗಡೆ ಮಾಡುವಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ವಿನಂತಿಸುತ್ತೇನೆ ಎಂದಿದ್ದಾರೆ.

ಪಕ್ಷಕ್ಕೆ ಅಗೌರವ ತರುವ ರೀತಿಯಲ್ಲಿ ಯಾರೂ ಕೂಡ ಮಾಧ್ಯಮಗಳ ಮುಂದೆ ಮಾತನಾಡಬಾರದು. ನಮ್ಮ ನಡವಳಿಕೆ, ಹೇಳಿಕೆ ಸಂಘಟನೆಗೆ ಪೂರಕವಾಗಿ ಇರಬೇಕೇ ಹೊರತು ಸಂಘಟನೆಗೆ ತೊಂದರೆ ಕೊಡುವಂತೆ ಇರಬಾರದು. ಆ ಕೆಲಸವನ್ನು ನಾನೂ ಕೂಡ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಅಧ್ಯಕ್ಷ ಸ್ಥಾನದಿಂದ ತೆಗೆದರೂ ಅಭ್ಯಂತರವಿಲ್ಲ

ಬಿಜೆಪಿ ಅಧ್ಯಕ್ಷ ಸ್ಥಾನದಿಂದ ವಿಜಯೇಂದ್ರನನ್ನು ಬದಲಾವಣೆ ಮಾಡಲಿ, ಇನ್ನಷ್ಟು ಜನರನ್ನು ಸೇರಿಸಿಕೊಳ್ಳಲಿ. ಅದರ ಬಗ್ಗೆ ಯಾವುದೇ ಅಭ್ಯಂತರವಿಲ್ಲ. ಪಕ್ಷ ಸಂಘಟನೆ ಯಾವ ದಿಕ್ಕಿನಲ್ಲಿ ಹೋಗಬೇಕೆಂಬ ಬಗ್ಗೆ ಪಕ್ಷದ ವರಿಷ್ಠರಿಗೆ ಸ್ಪಷ್ಟತೆ ಇದೆ. ಇಲ್ಲಿ ಪಕ್ಷ ಸಂಘಟನೆಯೇ ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ

ಯತ್ನಾಳರನ್ನು ಹೊರಹಾಕುವಂತೆ ಒತ್ತಾಯಿಸಿಲ್ಲ

ಚಾಡಿ ಹೇಳುವ ಅವಶ್ಯಕತೆ ನನಗಿಲ್ಲ. ಚಾಡಿ ಹೇಳುವುದಾಗಲೀ, ಯತ್ನಾಳರನ್ನು ಪಕ್ಷದಿಂದ ಹೊರಕ್ಕೆ ಕಳಿಸಬೇಕೆಂಬ ಒತ್ತಾಯ ಮಾಡಿಲ್ಲ. ಅದರ ಅವಶ್ಯಕತೆ ನನಗಿಲ್ಲ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಕಳೆದ 3-4 ತಿಂಗಳುಗಳಲ್ಲಿ ನಾವು ಆಡಳಿತ ಪಕ್ಷವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದೇವೆ. ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣದ ವಿರುದ್ಧ ಹೋರಾಟಗಳಲ್ಲಿ ಮುಖ್ಯಮಂತ್ರಿಯನ್ನು ಕಟ್ಟಿ ಹಾಕುವ ಕೆಲಸ ಮಾಡಿದ್ದೇವೆ. ರಾಜ್ಯದ ಜನರು ಭ್ರಷ್ಟ ಕಾಂಗ್ರೆಸ್ ಸರ್ಕಾರ ಎಂದು ಟೀಕಿಸುತ್ತಿದ್ದಾರೆ. ಇದರ ನಡುವೆ, ನಮ್ಮ ಕೆಲ ಮುಖಂಡರು ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು ಹಿರಿಯ ನಾಯಕ ಬಿ.ಎಸ್‌.ಯಡಿಯೂರಪ್ಪರ ಕುರಿತು ಮನಬಂದಂತೆ ಮಾತನಾಡುತ್ತಿರುವುದನ್ನು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲವರು ಯತ್ನಾಳ ಹೆಗಲ ಮೇಲೆ ಗನ್ ಇಟ್ಟು ಗುಂಡು ಹಾರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಪಕ್ಷಕ್ಕೆ ಒಳ್ಳೆಯದಾಗುವುದಿಲ್ಲ, 2 ಚುನಾವಣೆ ಫಲಿತಾಂಶದ ಬಳಿಕ ಕಾರ್ಯಕರ್ತರು ನೊಂದಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ಆಡಳಿತ ಪಕ್ಷವನ್ನು ಒಗ್ಗಟ್ಟಾಗಿ ಎದುರಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಬೀದಿಯಲ್ಲಿ ಮಾತನಾಡಿ ಪಕ್ಷ ಸಂಘಟನೆಗೆ ಅಡ್ಡಿ ಮಾಡುತ್ತಿರುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂಬ ಅಪೇಕ್ಷೆ ಕಾರ್ಯಕರ್ತರಲ್ಲಿದೆ. ನನ್ನ ನಾಯಕತ್ವ ಬದಲಾವಣೆಗೆ ಮನವಿ ಮಾಡಬೇಡಿ ಎಂದು ನಾನು ಹೇಳುವುದಿಲ್ಲ, ಆ ಮನವಿಯನ್ನು ಎಲ್ಲಿ, ಯಾರ ಮುಂದೆ ಮಾಡಬೇಕು ಎಂಬ ಸ್ಪಷ್ಟತೆ ಇರಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಪ್ರತಾಪ ಸಿಂಹ ಅಲ್ಲ, ಪೇಪರ್‌ ತಿಮ್ಮ

ರೇಣುಕಾಚಾರ್ಯ ಸೋತವರು, ತಿರಸ್ಕಾರವಾಗಿರುವ ಅಪ್ರಸ್ತುತ ನಾಯಕ ಎಂಬ ಪ್ರತಾಪ್‌ ಸಿಂಹ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ, ನೋಡಪ್ಪಾ ನೀನು ಪ್ರತಾಪ್ ಸಿಂಹ ಅಲ್ಲ. ಪೇಪರ್ ತಿಮ್ಮ ಎಂದು ಲೇವಡಿ ಮಾಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ನಿನಗೆ ಟಿಕೆಟ್ ಕೊಡಬಾರದೆಂದು ಪತ್ರ ಬರೆದಿದ್ದು ಯಾರೆಂಬುದು ನನಗೆ ಗೊತ್ತಿದೆ. ನಾನು ಸೋತಿರಬಹುದು. ಆದರೆ ಜನ ಇನ್ನೂ ನನ್ನೊಂದಿಗೆ ಪ್ರೀತಿ ವಿಶ್ವಾಸದಿಂದ ಇದ್ದಾರೆ. ನಾನು ಒಳ ಮೀಸಲಾತಿ, ಇನ್ನಿತರೆ ತಪ್ಪುಗಳಿಂದ ಸೋತಿದ್ದೇನೆ. ನೀನು ಪೇಪ‌ರ್ ತಿಮ್ಮ ಅಷ್ಟೇ ಎಂದು ವ್ಯಂಗ್ಯವಾಡಿದ್ದಾರೆ.

Tags:    

Similar News