ವೇತನ ಹೆಚ್ಚಳ ಬೇಡಿಕೆ | ಆಶಾ ಕಾರ್ಯಕರ್ತೆಯರ ʼವಿಧಾನಸೌಧ ಚಲೋʼ

ವೇತನ ಹೆಚ್ಚಳವೂ ಸೇದಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫ್ರೀಡಂ ಪಾರ್ಕ್ನಲ್ಲಿ ಆಶಾ ಕಾರ್ಯಕರ್ತೆಯರು ನಿನ್ನೆಯಿಂದ ಆಹೋರಾತ್ರಿ ಪ್ರತಿಭಟನೆ ಆರಂಭಿಸಿದ್ದಾರೆ.;

Update: 2024-02-14 15:44 GMT
ವೇತನ ಹೆಚ್ಚಳಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.
Click the Play button to listen to article

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫ್ರೀಡಂ ಪಾರ್ಕಿನಲ್ಲಿ ಆಶಾ ಕಾರ್ಯಕರ್ತೆಯರು ನಿನ್ನೆಯಿಂದ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.

ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿರುವ ಸಾವಿರಾರು ಆಶಾ ಕಾರ್ಯಕರ್ತರು ಮಂಗಳವಾರ(ಫೆ.13) ದಿಂದ ಫ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಈ ʼವಿಧಾನಸೌಧ ಚಲೋʼ ಪ್ರತಿಭಟನೆ ನಡೆಯುತ್ತಿದೆ.

ಕಳೆದ ಎಂಟು ವರ್ಷಗಳಿಂದ ದುಡಿದಷ್ಟು ಪ್ರೋತ್ಸಾಹ ಧನ ಸಿಗದೆ ವಂಚನೆಯಾಗುತ್ತಿದೆ. ಇದನ್ನು ತಡೆಗಟ್ಟಲು ಪೇಟೆಂಟ್ ಪ್ರಕ್ರಿಯೆಯಿಂದ RCH ಪೋರ್ಟಲ್ ಅನ್ನು ಡೀಲಿಂಕ್ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಮಾಸಿಕ ಕನಿಷ್ಟ ರೂ 15 ಸಾವಿರ ನೀಡಬೇಕು ಹಾಗೂ ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು ಎಂಬುದು ಸೇರಿ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾನಿರತ ಅಶಾಕಾರ್ಯಕರ್ತೆಯರು ಆಗ್ರಹಿಸಿದರು.

ನಗರದ ಆಶಾ ಕಾರ್ಯಕರ್ತೆಯರಿಗೆ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ಖರ್ಚು ವೆಚ್ಚಗಳಿಗನುಗುಣವಾಗಿ ಕನಿಷ್ಟ 20000 ಗೌರವಧನ, 60 ವರ್ಷಕ್ಕೆ ಸೇವಾ ನಿವೃತ್ತಿ, ತೀವ್ರವಾದ ಅನಾರೋಗ್ಯ, ಚಿಕಿತ್ಸೆ ಪಡೆಯುವ ಅವಧಿಯಲ್ಲಿ ಕನಿಷ್ಟ ಮೂರು ತಿಂಗಳ ಕಾಲ ನಿಶ್ಚಿತ ಗೌರವಧನ, ವಿಮಾ ಯೋಜನೆ, ಆಶಾ ಕಾರ್ಯಕರ್ತೆಯರು ಮತ್ತು ಕುಟುಂಬದವರಿಗೆ ವಿವಿಧ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ, 2 ವರ್ಷದಿಂದ ನೀಡದಿರುವ ಸಮವಸ್ತ್ರಗಳನ್ನು ಒದಗಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮೊಬೈಲ್ ಕೆಲಸಗಳನ್ನು ಒತ್ತಾಯಪೂರ್ವಕವಾಗಿ ಮಾಡಿಸಿಕೊಳ್ಳುತ್ತಿರುವುದನ್ನು ಕೈಬಿಡಿ. ಅಥವಾ ಮೊಬೈಲ್, ಡಾಟಾ ಒದಗಿಸಿ. ಮೊಬೈಲ್ ಕೆಲಸಗಳಿಗೆ ಪ್ರೋತ್ಸಾಹ ಧನ ನಿಗದಿ ಮಾಡಿ. ಯಾರಿಗೆ ಮೊಬೈಲ್ ಕೆಲಸ ಮಾಡಲು ಆಗುವುದಿಲ್ಲವೋ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿ ಎಂಬುವುದು ಆಶಾ ಕಾರ್ಯಕರ್ತೆಯರ ಬೇಡಿಕೆಯಾಗಿದೆ.

ʼದ ಫೆಡರಲ್- ಕರ್ನಾಟಕʼದೊಂದಿಗೆ ಮಾತನಾಡಿದ ಗದಗ ಜಿಲ್ಲೆಯಿಂದ ಬಂದಿರುವ ಆಶಾ ಕಾರ್ಯಕರ್ತೆ ಶಾಂತಾ, "ರಾಜ್ಯದಲ್ಲಿ ಮಹಿಳೆರಿಗಾಗಿ ತಂದಿರುವ ಶಕ್ತಿ ಯೋಜನೆ, ಭಾಗ್ಯಲಕ್ಷ್ಮೀ ಯೋಜನೆಗಳು ಇಡೀ ರಾಜ್ಯದ ಮಹಿಳೆಯರಿಗೆ ಅನ್ವಯವಾಗುತ್ತದೆ. ಆದರೆ ಆಶಾ ಕಾರ್ಯಕರ್ತೆಯರಿಗೆ ಯಾವುದೇ ಪ್ರತ್ಯೇಕ ಯೋಜನೆಗಳಿಲ್ಲ. ನಮ್ಮ ಕಷ್ಟಗಳನ್ನು ಕೇಳುವವರು ಯಾರೂ ಇಲ್ಲ. ನಾವು ರಾತ್ರಿ ಹಗಲು ಎನ್ನದೆ 24 ಗಂಟೆಗಳ ಕಾಲ ಕಷ್ಟಪಟ್ಟು ಕೆಲಸ ಮಾಡಿದರೂ ಅದಕ್ಕೆ ಸರಿಯಾದ ಪ್ರೋತ್ಸಾಹ ಧನ ಸಿಗುತ್ತಿಲ್ಲ" ಎಂದು ನೋವು ತೋಡಿಕೊಂಡರು.

"ಲಾರ್ವಾ ಸರ್ವೇ, ಮನೆ ಮನೆ ಸರ್ವೇ ಮುಂತಾದ ಕೆಲಸವನ್ನು ನಾವೇ ಮಾಡಬೇಕು. ಮನೆ ಮನೆ ಸರ್ವೇಗಳನ್ನು ನಾವು ನಮ್ಮ ಸ್ವಂತ ಪೋನಿನ ಮೂಲಕ ಮಾಡಬೇಕು. ಆದರೆ ಸರ್ಕಾರ ನಮಗೆ ಯಾವುದೇ ರೀತಿಯ ಸವಲತ್ತುಗಳನ್ನು ನೀಡುತ್ತಿಲ್ಲ" ಎಂದು ಚಿಕ್ಕಬಳ್ಳಾಪುರದಿಂದ ಬಂದಿರುವ ಆಶಾ ಕಾರ್ಯಕರ್ತೆ ಶೋಭಾವತಿ ತಮ್ಮ ಸ್ಥಿತಿ ವಿವರಿಸಿದರು.

ನಾವು ಎಷ್ಟು ಬಾರಿ ಸರ್ಕಾರಕ್ಕೆ ಮನವಿ ಮಾಡಿದರೂ ನಮ್ಮ ಮನವಿಯನ್ನು ಗಣನೆಗೆ ತೆಗೆದುಕೊಂಡಿಲ್ಲ. ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸುವವರೆಗೆ ನಾವು ಪ್ರತಿಭಟನೆಯನ್ನು ನಡೆಸುತ್ತಲೇ ಇರುತ್ತೇವೆ ಎಂದು ರಾಜ್ಯ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ʼದ ಫೆಡರಲ್- ಕರ್ನಾಟಕʼಕ್ಕೆ ತಿಳಿಸಿದರು.

ಸಿದ್ದರಾಮಯ್ಯ ಸರ್ಕಾರ ಫೆಬ್ರವರಿ 16 ರಂದು ಬಜೆಟ್ ಮಂಡನೆ ಮಾಡುತ್ತಿದ್ದು, ಈ ನಡುವೆ ಆಶಾ ಕಾರ್ಯಕರ್ತೆಯರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫ್ರೀಡಂ ಪಾರ್ಕಿನಲ್ಲಿ ನಡೆಸುತ್ತಿರುವ ಆಹೋರಾತ್ರಿ ಪ್ರತಿಭಟನೆ ಸರ್ಕಾರಕ್ಕೆ ಇರಿಸುಮುರಿಸು ತಂದಿದೆ.

Tags:    

Similar News