ವಾಲ್ಮೀಕಿ ನಿಗಮ ಹಗರಣ | ಲೋಕಸಭೆ ಚುನಾವಣೆ ಉದ್ದೇಶಕ್ಕೆ 20 ಕೋಟಿ ರೂ ಬಳಕೆ: ಇಡಿ
ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿ ನಾಗೇಂದ್ರ ಅವರ ವೈಯಕ್ತಿಕ ಖರ್ಚು ಮತ್ತು ಲೋಕಸಭೆ ಚುನಾವಣೆ ಉದ್ದೇಶಗಳಿಗಾಗಿ 20.10 ಕೋಟಿ ರೂ ಬಳಸಿಕೊಳ್ಳಲಾಗಿದೆ ಎಂದು ಇಡಿ ಹೇಳಿದೆ.;
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಬುಧವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಜಾರಿ ನಿರ್ದೇಶಾನಾಲಯ ಪ್ರಾಸಿಕ್ಯೂಶನ್ ದೂರು ಸಲ್ಲಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕರಣೆ ಹೊರಡಿಸಿರುವ ಇಡಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿ ನಾಗೇಂದ್ರ ಅವರ ವೈಯಕ್ತಿಕ ಖರ್ಚು ಮತ್ತು ಲೋಕಸಭೆ ಚುನಾವಣೆ ಉದ್ದೇಶಗಳಿಗಾಗಿ 20.10 ಕೋಟಿ ರೂ ಬಳಸಿಕೊಳ್ಳಲಾಗಿದೆ ಎಂದು ಹೇಳಿದೆ.
ಶಾಸಕ ನಾಗೇಂದ್ರ ಅವರನ್ನು ಹಗರಣದ ಪ್ರಮುಖ ಆರೋಪಿ ಮತ್ತು ಮಾಸ್ಟರ್‌ಮೈಂಡ್. ಪ್ರಮುಖ ಸಹಚರರಾದ ಸತ್ಯನಾರಾಯಣ ವರ್ಮ, ಏಟಕರಿ ಸತ್ಯನಾರಾಯಣ, ಜೆ ಜಿ ಪದ್ಮನಾಭ, ನಾಗೇಶ್ವರ್ ರಾವ್, ನೆಕ್ಕೆಂಟಿ ನಾಗರಾಜ್ ಮತ್ತು ವಿಜಯ್ ಕುಮಾರ್ ಗೌಡ ಸೇರಿದಂತೆ 24 ಮಂದಿಯ ಸಹಾಯದಿಂದ ಶಾಸಕ ನಾಗೇಂದ್ರ ಅವರು ವಂಚನೆ ನಡೆಸಿದ್ದಾರೆ.
ನಾಗೇಂದ್ರ ಅವರ ಪ್ರಭಾವದಿಂದ ನಿಗಮದ ಖಾತೆಯನ್ನು ಅನಧಿಕೃತವಾಗಿ ಎಂಜಿ ರಸ್ತೆ ಶಾಖೆಗೆ ವರ್ಗಾಯಿಸಲಾಗಿದೆ. ಗಂಗಾ ಕಲ್ಯಾಣ ಯೋಜನೆಯಡಿ ರಾಜ್ಯದ ಖಜಾನೆಯಿಂದ 43.33 ಕೋಟಿ ಸೇರಿದಂತೆ 187 ಕೋಟಿ ರೂ.ಗಳನ್ನು ಅನಧಿಕೃತವಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಠೇವಣಿ ಮಾಡಲಾಗಿದೆ. ಈ ಹಣವನ್ನು ತರುವಾಯ ಅನೇಕ ಶೆಲ್ ಖಾತೆಗಳ ಮೂಲಕ ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂದು ಇಡಿ ತಿಳಿಸಿದೆ.
ಅಕ್ರಮವಾಗಿ ವರ್ಗಾವಣೆ ಮಾಡಲಾದ 89.62 ರೂ ಕೋಟಿಯಲ್ಲಿ,20.19 ರೂ ಕೋಟಿಯನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಬಳಸಿಕೊಳ್ಳಲಾಗಿದೆ. ಚುನಾವಣೆಗೆ ಈ ಹಣ ಬಳಕೆಯಾಗಿದೆ ಎಂಬುದಕ್ಕೆ ನಾಗೇಂದ್ರ ಅವರ ಆಪ್ತ ವಿಜಯ್‌ಕುಮಾರ್ ಗೌಡ ಅವರ ಮೊಬೈಲ್‌ನಲ್ಲಿ ಸಾಕ್ಷ್ಯಗಳು ಲಭ್ಯವಾಗಿವೆ. ಇದಲ್ಲದೆ ನಾಗೇಂದ್ರ ವೈಯಕ್ತಿಕ ಉದ್ದೇಶಕ್ಕೂ ಈ ಹಣ ಬಳಸಿಕೊಂಡಿದ್ದಾರೆ. ಹಗರಣ ಪತ್ತೆಯಾಗುತ್ತಿದ್ದಂತೆಯೇ ಈ ದಾಖಲೆಗಳಿದ್ದ ಮೊಬೈಲ್‌ಗಳನ್ನು ಅವರು ನಾಶ ಮಾಡಿದ್ದಾರೆ. ಜತೆಗೆ ಸಂಚಿನಲ್ಲಿ ಭಾಗಿಯಾಗಿದ್ದ ಎಲ್ಲರಿಗೂ, ಈ ಬಗ್ಗೆ ಬಾಯಿಬಿಡದಂತೆ ಬೆದರಿಕೆ ಹಾಕಿದ್ದಾರೆ ಇಡಿ ತನಿಖೆಯಲ್ಲಿ ತಿಳಿದುಬಂದಿದೆ.
ಏನಿದು ವಾಲ್ಮೀಕಿ ಹಗರಣ
ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರನ್.ಪಿ ಶಿವಮೊಗ್ಗದ ಕುವೆಂಪು ನಗರದಲ್ಲಿರುವ ತಮ್ಮ ನಿವಾಸದಲ್ಲಿ ವಾಲ್ಮೀಕಿ ನಿಗಮದಲ್ಲಿ 85 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ನಿಗಮದ ಅಧಿಕಾರಿಗಳ ವಿರುದ್ಧ 5 ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. 2024-25 ನೇ ಸಾಲಿನ ಯೋಜನೆಗಳಿಗೆ ಮೀಸಲಿಟ್ಟ 187 ಕೋಟಿ ಮೊತ್ತದಲ್ಲಿ 88 ಕೋಟಿ ಹಣವನ್ನು ನಿಗಮದ ಅಧ್ಯಕ್ಷರ ಗಮನಕ್ಕೂ ಬಾರದೇ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಎಂ.ಜಿ ರಸ್ತೆಯ ಶಾಖೆಯ ಅನಧಿಕೃತ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಬ್ಯಾಂಕ್‌ನವರು ಫೆ 26 ರಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಲೆಕ್ಕಾಧಿಕಾರಿಗಳ ಸಹಿ ಪಡೆದು ನಿಗಮದ ಖಾತೆಯಿಂದ ಬೇರೆ ಬೇರೆ ಖಾತೆಗಳಿಗೆ ಹಂತ-ಹಂತವಾಗಿ 187.33 ಕೋಟಿ ರೂ. ವರ್ಗಾವಣೆ ಮಾಡಿದ್ದರು. ಮಾ.4ರಂದು 25 ಕೋಟಿ ರೂ., ಮಾ.6ರಂದು 25 ಕೋಟಿ ರೂ., ಮಾ.21ರಂದು 44 ಕೋಟಿ ರೂ., ಮಾ.22ರಂದು 43.33 ಕೋಟಿ ರೂ. ಹಾಗೂ ಮೇ 21ರಂದು 50 ಕೋಟಿ ರೂ. ವರ್ಗಾವಣೆಯಾಗಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಲೆಕ್ಕಾಧಿಕಾರಿ ಚಂದ್ರಶೇಖರನ್ ಅವರು ಆತ್ಮಹತ್ಯೆ ಮಾಡಿಕೊಂಡ ಬಳಿಕ ಹಗರಣ ನಡೆದಿರುವುದು ಪತ್ತೆಯಾಗಿತ್ತು. ಆಗ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾಗಿದ್ದ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ. ನಾಗೇಂದ್ರ ಅವರ ವಿರುದ್ಧ ಆರೋಪ ಕೇಳಿಬಂದಿತ್ತು. ಬಳಿಕ ಎಸ್‌ಐಟಿ ಬಿ. ನಾಗೇಂದ್ರ ಅವರನ್ನು ಬಂಧಿಸಿತ್ತು. ಇದಾದ ಬಳಿಕ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಎಸ್‌ಐಟಿ ತನಿಖೆ ನಡೆಸುತ್ತಿರುವ ಹೊತ್ತಿಗೆ ಜಾರಿ ನಿರ್ದೇಶನಾಲಯವು (ಇ.ಡಿ) ತನಿಖೆ ಆರಂಭಿಸಿತ್ತು. ನಾಗೇಂದ್ರ ಅವರ ವಿಚಾರಣೆ ನಡೆಸಿದ್ದ ಇ.ಡಿ. ಅವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಕರ್ನಾಟಕ ಪೊಲೀಸ್ ಮತ್ತು ಸಿಬಿಐ ದಾಖಲಿಸಿದ ಎಫ್‌ಐಆರ್‌ಗಳ ಆಧಾರದ ಮೇಲೆ ಇಡಿ ತನಿಖೆಯನ್ನು ಪ್ರಾರಂಭಿಸಿತು. ಸುಮಾರು 89.62 ಕೋಟಿ ರೂ.ಗಳನ್ನು ನಿಗಮದ ಖಾತೆಗಳಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ತೆರೆಯಲಾದ ನಕಲಿ ಖಾತೆಗಳಿಗೆ ವರ್ಗಾಯಿಸಿ ನಂತರ ಆ ಹಣವವನ್ನು ಶೆಲ್ ಕಂಪನಿಗಳಿಗೆ ಮೂಲಕ ಅಕ್ರಮ ಎಸಗಲಾಗಿದೆ ಎಂದು ಆರೋಪ ಪಟ್ಟಿಯಲ್ಲಿ ಇಡಿ ಬಹಿರಂಗಪಡಿಸಿದೆ.