ವಾಲ್ಮೀಕಿ ನಿಗಮ ಹಗರಣ | ಬಳ್ಳಾರಿ ಮತದಾರರಿಗೆ ನಿಗಮದ 14.80 ಕೋಟಿ ರೂ.: ಜಾರಿ ನಿರ್ದೇಶನಾಲಯ

ಬಳ್ಳಾರಿ ಲೋಕಸಭಾ ಕ್ಷೇತ್ರದ 7 ಲಕ್ಷಕ್ಕೂ ಹೆಚ್ಚು ಮತದಾರರಿಗೆ ಕಾಂಗ್ರೆಸ್‌ನ ಮೂವರು ಶಾಸಕರ ಮೂಲಕ 14.80 ಕೋಟಿ ರೂ ಹಂಚಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಹೇಳಿದೆ.

Update: 2024-10-16 07:50 GMT
ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ
Click the Play button to listen to article

'ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದ್ದ ಹಣದಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದ 7 ಲಕ್ಷಕ್ಕೂ ಹೆಚ್ಚು ಮತದಾರರಿಗೆ ಕಾಂಗ್ರೆಸ್‌ನ ಮೂವರು ಶಾಸಕರ ಮೂಲಕ 14.80 ಕೋಟಿ ರೂ ಹಂಚಲಾಗಿದೆ' ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಹೇಳಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಪ್ರಾಥಮಿಕ ಆರೋಪ ಪಟ್ಟಿಯಲ್ಲಿ 'ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಇ. ತುಕಾರಾಂ ಅವರ ಪರವಾಗಿ ಮತ ಚಲಾಯಿಸುವಂತೆ ಓಲೈಸಲು ಮತದಾರರಿಗೆ ತಲಾ 200 ರೂ ಹಂಚಲಾಗಿದೆ' ಎಂದು ವಿವರಿಸಲಾಗಿದೆ.

'ಬಳ್ಳಾರಿ ಲೋಕಸಭಾ ಕ್ಷೇತ್ರದ ಮತಗಟ್ಟೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಒಟ್ಟು 72 ಲಕ್ಷ ರೂ ಹಂಚಲಾಗಿದೆ. ಮತದಾನದ ವೇಳೆ ಮತಗಟ್ಟೆಯಲ್ಲಿ ಕೆಲಸ ನಿರ್ವಹಿಸಿದ ಕಾರ್ಯಕರ್ತರಿಗೆ ತಲಾ 10,000 ರೂ ವೆಚ್ಚ ಮಾಡಲಾಗಿದೆ' ಎಂಬ ವಿವರ ಆರೋಪ ಪಟ್ಟಿಯಲ್ಲಿದೆ.

'ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾಗಿದ್ದ, ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಅವರ ಆಪ್ತ ಸಹಾಯಕ ವಿಜಯ್ ಕುಮಾ‌ರ್ ಗೌಡ ವಿಚಾರಣೆ ವೇಳೆ ಈ ಬಗ್ಗೆ ಮಾಹಿತಿ ನೀಡಿದ್ದರು. ನಾಗೇಂದ್ರ ಅಣತಿಯಂತೆ ಕಾಂಗ್ರೆಸ್‌ನವರಾದ ಬಳ್ಳಾರಿ ನಗರ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿ, ಕಂಪ್ಲಿಯ ಶಾಸಕ ಗಣೇಶ್ ಮತ್ತು ಕೂಡ್ಲಿಗಿಯ ಶಾಸಕ ಎನ್.ಟಿ.ಶ್ರೀನಿವಾಸಗೆ ಹಣ ನೀಡಲಾಗಿತ್ತು' ಎಂದು ಆರೋಪ ಪಟ್ಟಿ ಉಲ್ಲೇಖಿಸಿದೆ.

'ಯಾರಿಗೆ ಹಣ ಹಂಚಲಾಗಿದೆ ಎಂಬುದರ ದಾಖಲೆಗಳು ವಿಜಯ್ ಕುಮಾರ್ ಮೊಬೈಲ್ ಮತ್ತು ಮನೆಯಲ್ಲಿ ದೊರೆತಿದ್ದವು. ಬಳ್ಳಾರಿ ನಗರ, ಕಂಪ್ಲಿ ಮತ್ತು ಕೂಡ್ಲಿಗಿ ವಿಧಾನಸಭಾ ಕ್ಷೇತ್ರಗಳ ಮತದಾರರ ಚೀಟಿಯ ಪಟ್ಟಿಗಳು ದೊರೆತಿದ್ದವು. ಉಳಿದ ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳ ಪೈಕಿ ಕೆಲವು ಮತದಾರರ ಪಟ್ಟಿ ದೊರೆತಿದ್ದವು. ಹೀಗೆ 14 ಲಕ್ಷ ಮತದಾರರ ವಿವರ ಲಭ್ಯವಾಗಿದ್ದು, ಅವುಗಳಲ್ಲಿ 7.40 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರಿನ ಮುಂದೆ '200 ಮತ್ತು `ರೈಟ್' ಎಂದು ಗುರುತು ಮಾಡಲಾಗಿದೆ' ಎಂದು ಇ.ಡಿ ಮೂಲಗಳು ಮಾಹಿತಿ ನೀಡಿವೆ.

'ನಿಗಮದಿಂದ ದೋಚಲಾದ ಹಣದಲ್ಲಿ 20 ರೂ ಕೋಟಿಯನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ವೆಚ್ಚ ಮಾಡಲಾಗಿದೆ. ಮತದಾರರಿಗೆ ಮತ್ತು ಕಾರ್ಯಕರ್ತರಿಗೆ ಒಟ್ಟು 15.52 ರೂ ಕೋಟಿ ನೀಡಲಾಗಿದೆ. ಸುಮಾರು 4 ರೂ ಕೋಟಿಯನ್ನು ಮದ್ಯ ಖರೀದಿಗೆ ಮತ್ತು ಸುಮಾರು 50 ಲಕ್ಷ ರೂ ವನ್ನು ಓಡಾಟಕ್ಕೆ ವೆಚ್ಚ ಮಾಡಲಾಗಿದೆ' ಎಂದು ಇ.ಡಿ ಮೂಲಗಳು ತಿಳಿಸಿವೆ.

ಈ ಪ್ರಕರಣ ಪತ್ತೆಯಾಗುತ್ತಿದ್ದಂತೆ ರಾಜಕೀಯ ವಾಕ್ಸಮರ ಜೋರಾಗಿತ್ತು. ಸಚಿವ ಸ್ಥಾನದಿಂದ ನಾಗೇಂದ್ರ ಅವರನ್ನು ಕೈಬಿಡುವಂತೆ ಬಿಜೆಪಿ-ಜೆಡಿಎಸ್ ಪಕ್ಷಗಳು ಆಗ್ರಹಿಸಿದ್ದವು. ಈ ಮಧ್ಯೆ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿತ್ತು. ಈ ಬೆಳವಣಿಗೆ ಬೆನ್ನಲ್ಲೇ, ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ನೀಡಿದ್ದರು. ಅವರನ್ನು ವಿಚಾರಣೆಗೆ ಒಳಪಡಿಸಿದ್ದ ಇ.ಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಮಂಗಳವಾರವಷ್ಟೇ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹಲವು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

Tags:    

Similar News