ಧರ್ಮಸ್ಥಳ ಪ್ರಕರಣ: ಅನಾಮಿಕ ವ್ಯಕ್ತಿಯ ಗುರುತು ರಕ್ಷಣೆಗೆ 'ಎಐ ನಿರೋಧಕ' ಮಾಸ್ಕ್ ಬಳಕೆ
ಈಗಾಗಲೇ SIT ತನಿಖೆ ಆರಂಭಿಸಿದ್ದು, ಸೋಮವಾರ ಮಹಜರು ಮಾಡಲು ಆತ ಶವ ಹೂತಿಟ್ಟಿದ್ದೇನೆ ಎನ್ನಲಾದ ಸ್ಥಳಗಳಿಗೆ ಆತನನ್ನು ಪೊಲೀಸರು ಕರೆತಂದಿದ್ದಾರೆ.;
ಶವವನ್ನು ಹೂಳಲಾಗಿದೆಯೇ ಎಂದು ಪತ್ತೆ ಹಚ್ಚಲು ಸ್ಥಳ ಮಹಜರು ಪ್ರಕ್ರಿಯೆ ಆರಂಭವಾಗಿದೆ.
ಧರ್ಮಸ್ಥಳದಲ್ಲಿ ದಶಕದ ಹಿಂದೆ ನೂರಾರು ಶವಗಳನ್ನು ತಾನೇ ಹೂತುಹಾಕಿರುವುದಾಗಿ ಹೇಳಿಕೊಂಡಿರುವ ಅನಾಮಿಕ ವ್ಯಕ್ತಿಯ ಹೇಳಿಕೆಯು ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ವಿಶೇಷ ತನಿಖಾ ದಳ (ಎಸ್ಐಟಿ) ಈತನನ್ನು ಸ್ಥಳ ಮಹಜರಿಗೆ ಕರೆತಂದಿದೆ. ಈ ವೇಳೆ, ಆತನ ಗುರುತನ್ನು ರಹಸ್ಯವಾಗಿಡಲು ಎಸ್ಐಟಿ ಒಂದು ವಿಶಿಷ್ಟ ತಂತ್ರಜ್ಞಾನ ಆಧಾರಿತ ಮಾಸ್ಕ್ ಅನ್ನು ಬಳಸಿದೆ.
ಸೋಮವಾರ ಮಹಜರು ನಡೆಸುವಾಗ ಮತ್ತು ಎಸ್ಐಟಿ ಕಚೇರಿಗೆ ಕರೆತಂದಾಗ, ಆ ಅನಾಮಿಕ ವ್ಯಕ್ತಿಯ ಮುಖವನ್ನು ಬಿಳಿ ಮತ್ತು ಕೇಸರಿ ಗೆರೆಗಳಿರುವ ವಿಶೇಷ ಮಾಸ್ಕ್ ಮೂಲಕ ಸಂಪೂರ್ಣವಾಗಿ ಮುಚ್ಚಲಾಗಿತ್ತು. ಈ ಮಾಸ್ಕ್ ಕೇವಲ ವಿನ್ಯಾಸಕ್ಕಾಗಿರಲಿಲ್ಲ, ಬದಲಿಗೆ ಅದರ ಹಿಂದೆ ಮಹತ್ವದ ತಾಂತ್ರಿಕ ರಹಸ್ಯ ಅಡಗಿದೆ.
ಎಐ ಪತ್ತೆಗೆ ಅಸಾಧ್ಯವಾಗಿಸುವ ಮಾಸ್ಕ್
ಸಾಮಾನ್ಯ ಮಾಸ್ಕ್ಗಳನ್ನು ಬಳಸಿದಾಗ, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಸಹಾಯದಿಂದ ಮಾಸ್ಕ್ ಹಾಕಿಕೊಂಡಿರುವ ವ್ಯಕ್ತಿಯ ಮುಖವನ್ನು ಗುರುತಿಸಲು ಸಾಧ್ಯವಿದೆ. ಕೆಲವು ಎಐಗಳು ಸಂಪೂರ್ಣವಾಗಿ ಪತ್ತೆಹಚ್ಚಲು ಸಾಧ್ಯವಾಗದಿದ್ದರೂ, ಸಾಕಷ್ಟು ಹೋಲಿಕೆಯನ್ನು ನೀಡಬಲ್ಲವು. ಇದನ್ನು ತಡೆಯುವ ಉದ್ದೇಶದಿಂದ ಪೊಲೀಸರು ಈ ವಿಶೇಷ ಮಾಸ್ಕ್ ಅನ್ನು ಬಳಸಿದ್ದಾರೆ ಎಂದು ಹೇಳಲಾಗಿದೆ.
ಬಿಳಿ ಗೆರೆಗಳು ಮತ್ತು ಕೇಸರಿ ಬಣ್ಣವನ್ನು ಹೊಂದಿರುವ ಈ ಮಾಸ್ಕ್ಗಳನ್ನು ಎಐಗಳು ಸುಲಭವಾಗಿ ಓದಲು ಅಥವಾ ಡಿಕೋಡ್ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಮಾಸ್ಕ್ ಹಾಕಿಕೊಂಡಿರುವ ವ್ಯಕ್ತಿಯ ಮುಖವನ್ನು ಎಐ ಸಹಾಯದಿಂದ ಗುರುತಿಸುವುದು ಅಸಾಧ್ಯವಾಗುತ್ತದೆ. ಈ ಮೂಲಕ ಎಸ್ಐಟಿ ಅನಾಮಿಕ ವ್ಯಕ್ತಿಯ ಗುರುತನ್ನು ಸಾರ್ವಜನಿಕವಾಗಿ ಬಹಿರಂಗವಾಗದಂತೆ ಸಂಪೂರ್ಣವಾಗಿ ರಹಸ್ಯವಾಗಿಡಲು ಈ ಮಾಸ್ಕ್ ಅಳವಡಿಸಿದೆ ಎಂಬುದಾಗಿ ವರದಿಯಾಗಿದೆ.
ಮಹಜರು ಸಂದರ್ಭದಲ್ಲಿ, ನೇತ್ರಾವತಿ ನದಿ ಸ್ನಾನಘಟ್ಟದ ಪಕ್ಕದ ಕಾಡಿನಲ್ಲಿ ತಾನು ತಲೆಬುರುಡೆಗಳನ್ನು ತಂದ ಸ್ಥಳ ಮತ್ತು ಶವಗಳನ್ನು ಹೂತಿದ್ದ ಸ್ಥಳಗಳಲ್ಲಿ ಇನ್ನಷ್ಟು ಮೂಳೆಗಳು ಇರುವುದನ್ನು ಈ ಅನಾಮಿಕ ವ್ಯಕ್ತಿ ಎಸ್ಐಟಿ ತಂಡಕ್ಕೆ ತೋರಿಸಿದ್ದಾನೆ. ಈ ಮಾಹಿತಿ ಆಧಾರದಲ್ಲಿ ಅರಣ್ಯದ ಒಳಭಾಗದಲ್ಲಿ ಶವ ಸಮಾಧಿಗಳೆಂದು ಶಂಕಿಸಲಾದ ಸ್ಥಳಗಳ ಮೇಲೆ ಗುರುತು ಹಾಕುವ ಪ್ರಕ್ರಿಯೆಯನ್ನು ಆರಂಭಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.