ಕರ್ನಾಟಕ ಕಾಂಗ್ರೆಸ್‌: ಮತ್ತೆ ಮುನ್ನಲೆಗೆ ಬಂದ ಸಮುದಾಯವಾರು ಡಿಸಿಎಂ ಹುದ್ದೆ ಬೇಡಿಕೆ

Update: 2024-06-24 12:53 GMT

ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ  ಇದೀಗ ಕರ್ನಾಟಕ ಕಾಂಗ್ರೆಸ್‌ನಲ್ಲಿ ಮತ್ತೆ ಸಮುದಾಯವಾರು ಉಪಮುಖ್ಯಮಂತ್ರಿಗಳ ನೇಮಕ ವಿಚಾರ ಮುನ್ನಲೆಗೆ ಬಂದಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ವಿವಿಧ ಸಚಿವರು ಧ್ವನಿ ಎತ್ತಲು ಪ್ರಾರಂಭಿಸಿದ್ದಾರೆ.

ಅದರಲ್ಲೂ ಸಿದ್ದರಾಮಯ್ಯ ಅವರ ಬಣದಲ್ಲಿರುವ ನಾಯಕರಾದ ಜಮೀರ್ ಅಹಮದ್ ಖಾನ್, ಸತೀಶ್ ಜಾರಕಿಹೊಳಿ ಅವರು ಇತ್ತೀಚೆಗೆ ಈ ವಿಚಾರವಾಗಿ ಮಾತನಾಡಿದ್ದು ಇದೀಗ ಸಚಿವ ಕೆಎನ್ ರಾಜಣ್ಣ ಅವರು ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಲು ಹೆಚ್ಚು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ನಡುವೆ  , ಕಾಂಗ್ರೆಸ್ ನಾಯಕರು ಶೀಘ್ರದಲ್ಲೇ ದೆಹಲಿಗೆ ತೆರಳಿ ಹೈಕಮಾಂಡ್ ಜತೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಈಗಾಗಲೇ ಸಚಿವ ಸತೀಶ್ ಜಾರಕಿಹೊಳಿ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದ್ದು, ಇತರ ನಾಯಕರೂ ಹೈಕಮಾಂಡ್ ಭೇಟಿಯಾಗುವ ಸಾಧ್ಯತೆ ಇದೆ.

ಒಂದೇ ಉಪಮುಖ್ಯಮಂತ್ರಿ ಸ್ಥಾನ ಬೇಕೆಂಬುದು ಡಿಸಿಎಂ  ಡಿಕೆ ಶಿವಕುಮಾರ್‌  ಅವರ ಒಲವಾಗಿದ್ದು,  ಸಮೂದಾಯಗಳನ್ನು ಆಧರಿಸಿ ಉಪಮುಖ್ಯಮಂತ್ರಿ ಹುದ್ದೆಗಳನ್ನು ನೀಡಬೇಕೆಂಬುದು ಡಾ. ಜಿ. ಪರಮೇಶ್ವರ, ಸತೀಶ್‌ ಜಾರಕಿಹೊಳಿ, ಎನ್‌. ರಾಜಣ್ಣ ಮತ್ತಿತರರ ನಾಯಕರ ಅಹವಾಲು. ವಿಶೇಷ ಎಂದರೆ, ಅವರೆಲ್ಲರೂ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರ ಬೆಂಬಲಿಗ ಸಚಿವರು. ಈ ನಡುವೆ ಎಐಸಿಸಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ ಖರ್ಗೆ ಅವರು ʼಡಿಸಿಎಮ ಹುದ್ದೆ ಬಯಸುವವರು ವರಿಷ್ಠರ ಬಳಿ ಹೋಗಿ ಕೇಳಲಿ, ಯಾರೂ ಬೇಡ ಅಂದಿಲ್ಲ. ಸಿಎಂ ಹುದ್ದೆಯನ್ನೂ ಕೇಳಲಿ, ಯಾರು ಬೇಡ ಅಂದವರು? ಡಿಸಿಎಂ ಮಾಡುವುದರಿಂದ ಎಲ್ಲವೂ ಸರಿಯಾಗುತ್ತದೆ ಎನ್ನುವುದಾದರೆ ಸಿಎಂ ಒಬ್ಬರನ್ನು ಬಿಟ್ಟು‌ ಇಡೀ ಸಂಪುಟ ಡಿಸಿಎಂ ಆಗಲಿ. ಹಾಗೆ ಮಾಡಲು ಆಗುತ್ತಾ? ನಮ್ಮ ಕೆಲಸ ಏನು ಎಂದು ಪ್ರಿಯಾಂಕ್ ಖರ್ಗೆ ಖಾರವಾಗಿ ಪ್ರಶ್ನಿಸಿದ್ದಾರೆ. ಆ ಮೂಲಕ ಪರೋಕ್ಷವಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಸಂದೇಶವನ್ನು ಸಿದ್ದರಾಮಯ್ಯ ಬಣದವರಿಗೆ ರವಾನಿಸಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಲೋಕಸಭಾ ಚುನಾವಣೆಗೂ ಮುಂಚಿತವಾಗಿ ಸಹಕಾರ ಸಚಿವ ಕೆಎನ್‌ ರಾಜಣ್ಣ ಅವರು, ಸಮುದಾಯವಾರು ಡಿಸಿಎಂ ಸ್ಥಾನಗಳನ್ನು ಸೃಷ್ಟಿಸಿಬೇಕೆಂದು ಹೇಳಿಕೆ ನೀಡಿದ್ದರು.  ಹಕ್ಕೊತ್ತಾಯ ಪ್ರತಿಪಾದಿಸಿದ್ದರು. ಸಮುದಾಯದ ನಾಯಕರಿಗೆ ಡಿಸಿಎಂ ಹುದ್ದೆ ನೀಡುವುದರಿಂದ ಆಯಾ ಜಾತಿಗಳು ಪಕ್ಷದ ಜತೆಗೆ ನಿಲ್ಲಲಿದ್ದು, ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗುತ್ತದೆʼʼ ಎಂದು ಅವರು ವಾದಿಸಿದ್ದರು. ಈ ಅಭಿಪ್ರಾಯಕ್ಕೆ ಗೃಹ ಸಚಿವ ಡಾ.ಜಿ. ಪರಮೇಶ್ವರ್‌, ಸತೀಶ್‌ ಜಾರಕಿಹೊಳಿ ಸೇರಿ ಹಲವರು ಸಹಮತ ವ್ಯಕ್ತಪಡಿಸಿದ್ದರು. ಅವರ ಆಂತರಿಕ ಸಭೆಗಳೂ ಆಗಾಗ ನಡೆಯುತ್ತಲೇ ಇದ್ದವು.

ಸಿಎಂ ಸ್ಥಾನದ ರೇಸ್‌ನಲ್ಲಿದ್ದ ಡಿಕೆ ಶಿವಕುಮಾರ್‌ ಅವರಿಗೆ ಸಂಪುಟದಲ್ಲಿ ಮಹತ್ವಕ್ಕಾಗಿ ಏಕ ಡಿಸಿಎಂ ಹುದ್ದೆ ಸೃಷ್ಟಿಸಲಾಗಿದೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಬಸವರಾಜ ರಾಯರೆಡ್ಡಿ ಹೊಸ ಸೂತ್ರವೊಂದನ್ನು ಪ್ರಸ್ತಾಪಿಸಿದ್ದರು. ಅದರಂತೆ ಡಿಕೆ ಶಿವಕುಮಾರ್‌ ಅವರನ್ನು ಪ್ರಧಾನ ಡಿಸಿಎಂ (ಪ್ರಿನ್ಸಿಪಲ್‌ ಡಿಸಿಎಂ) ಎಂದೂ, ಉಳಿದವರನ್ನು ಡಿಸಿಎಂ ಎಂದು ಮಾಡಬಹುದು ಎಂದು ವಾದಿಸಿದ್ದರು. ಈ ಚರ್ಚೆ ತೀವ್ರಗೊಂಡ ಬೆನ್ನಲ್ಲೆ ಕಸಿವಿಸಿಗೊಂಡಿದ್ದ ಡಿಸಿಎಂ ಡಿಕೆ ಶಿವಕುಮಾರ್‌ ಅವರು ವರಿಷ್ಠರಿಗೆ ದೂರು ನೀಡಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್‌ ಮೂಲಕ ಸಂಬಂಧಪಟ್ಟ ಸಚಿವರಿಗೆ ಎಚ್ಚರಿಕೆಯನ್ನೂ ಕೊಡಿಸಿದ್ದರು. ಖರ್ಗೆ ಅವರ ಮಧ್ಯಪ್ರವೇಶದ ಬಳಿಕ ಈ ಚರ್ಚೆ ತಾತ್ಕಾಲಿಕವಾಗಿ ನಿಂತಿತ್ತು.

ಇದೀಗ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆಯಾಗಿದ್ದು, ಕಾಂಗ್ರೆಸ್‌ಗೆ ನಿರೀಕ್ಷಿತ ಸ್ಥಾನಗಳು ಬಂದಿಲ್ಲ. 'ಮಿನಿ ಸಮರ' ಎಂಬಂತೆ ಜಿಲ್ಲಾ, ತಾಲೂಕು ಪಂಚಾಯಿತಿ ಹಾಗೂ ಬಿಬಿಎಂಪಿ ಚುನಾವಣೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಸಮುದಾಯವಾರು ಡಿಸಿಎಂ ನೇಮಕ ಬೇಡಿಕೆ ಬಗ್ಗೆ ಆಕಾಂಕ್ಷಿ ಸಚಿವರುಗಳು ಒಬ್ಬಬ್ಬರಾಗಿ ಹೇಳಿಕೆ ನೀಡಲು ಶುರು ಮಾಡಿದ್ದಾರೆ.

ಆಕಾಂಕ್ಷಿಗಳು ಯಾರೆಲ್ಲಾ?

ಡಿಸಿಎಂ ಸ್ಥಾನಕ್ಕಾಗಿ ಸಾಕಷ್ಟು ಮಂದಿ ಆಕಾಂಕ್ಷಿಗಳು ಇದ್ದಾರೆ. ಈ ಪೈಕಿ ಡಾ. ಜಿ ಪರಮೇಶ್ವರ್ ( ಎಸ್‌ಸಿ), ಎಂಬಿ ಪಾಟೀಲ್ ( ಲಿಂಗಾಯತ), ಜಮೀರ್ ಅಹ್ಮದ್ ಖಾನ್ ( ಮುಸ್ಲಿಂ) ಸತೀಶ್ ಜಾರಕಿಹೊಳಿ ( ಎಸ್‌ಟಿ), ಕೆಎನ್‌ ರಾಜಣ್ಣ ( ಎಸ್‌ಟಿ), ರಾಮಲಿಂಗಾ ರೆಡ್ಡಿ ( ರೆಡ್ಡಿ) ಡಿಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಹೊಸ ಡಿಸಿಎಂ ಹುದ್ದೆ ಅಗತ್ಯ ಕುರಿತು ಸ್ಪಷ್ಟತೆ ಮೂಡಲಿ ಎಂದು ಶುಕ್ರವಾರ (ಜೂ.೨೧)ದಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಬಲವಾಗಿ ಪ್ರತಿಪಾದಿಸಿದ್ದಾರೆ. ಇದರೊಂದಿಗೆ ಹುದ್ದೆಯ ಮಹತ್ವಕ್ಕಾಗಿ ಒಂದೇ ಡಿಸಿಎಂ ಸ್ಥಾನ ಮುಂದುವರಿಕೆ ಬಯಸಿದ ಡಿಕೆ ಶಿವಕುಮಾರ್‌ ಹಾಗೂ ಪಕ್ಷದ ನೆಲೆ ಬಲಪಡಿಸಲು ಸಮುದಾಯವಾರು ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಸಬೇಕೆಂಬ ಖುದ್ದು ಆಕಾಂಕ್ಷಿಗಳೂ ಆಗಿರುವ ಕೆಲವು ಹಿರಿಯ ಸಚಿವರ ನಡುವಿನ ಹಗ್ಗ ಜಗ್ಗಾಟಕ್ಕೆ ವೇದಿಕೆ ಸೃಷ್ಟಿಯಾಗಿದೆ. ಕಳೆದ ಐದಾರು ತಿಂಗಳ ಹಿಂದೆಯೇ ಹೊಸ ಡಿಸಿಎಂ ನೇಮಕ ವಿಚಾರ ಚರ್ಚೆಗೆ ಬಂದಿತ್ತು. ಆದರೆ, ಚುನಾವಣೆ ಕಾಲಕ್ಕೆ ಇದೆಲ್ಲಾಅಪ್ರಸ್ತುತ ಎಂದಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಲೋಕಸಭೆ ಚುನಾವಣೆ ಮುಗಿಯುವ ವರೆಗೆ ತುಟಿಬಿಚ್ಚದಂತೆ ಖುದ್ದು ಫರ್ಮಾನು ಹೊರಡಿಸಿದ್ದರು. ಇದರಿಂದ ತಾತ್ಕಾಲಿಕವಾಗಿ ತಣ್ಣಗಾಗಿದ್ದ ಬೇಡಿಕೆ ಈಗ ಮತ್ತೆ ಜೋರಾಗಿದೆ.

ಪಕ್ಷದ ಮತ ಬ್ಯಾಂಕ್‌ ಗಟ್ಟಿ ಮಾಡಿಕೊಳ್ಳಲು ಸಮುದಾಯವಾರು ಡಿಸಿಎಂ ಹುದ್ದೆ ಬೇಡಿಕೆ ಪ್ರಸ್ತಾವನೆಗೆ ಪೂರಕವಾಗಿ ದಲಿತರಲ್ಲಿ ಎಸ್‌ಸಿ, ಎಸ್‌ಟಿ, ಅಲ್ಯಸಂಖ್ಯಾತ (ಮುಸ್ಲಿಂ), ಲಿಂಗಾಯತರಿಗೆ ತಲಾ ಒಂದೊಂದು ಡಿಸಿಎಂ ಹುದ್ದೆ ಸೃಷ್ಟಿಸಬೇಕು ಎಂಬುದಾಗಿತ್ತು. ಕೆಲವು ಹಿರಿಯ ಸಚಿವರು ಹಾಗೂ ದಲಿತ ಸಚಿವರ ಡಿನ್ನರ್‌ ಮೀಟಿಂಗ್‌ಗಳೂ ಆಗಿಂದಾಗ್ಗೆ ನಡೆಯುತ್ತಿದ್ದುದು ಈ ಹಕ್ಕೊತ್ತಾಯಕ್ಕೆ ಬಲ ತುಂಬುತ್ತಲೇ ಇತ್ತು. ಚುನಾವಣೆ ಮುಗಿದು ನಿರೀಕ್ಷಿತ ಸ್ಥಾನ ಸಿಗದೆ ಪಕ್ಷಕ್ಕೆ ಹಿನ್ನಡೆಯಾಗಿರುವ ಬೆಳವಣಿಗೆ ನಡುವೆ ಹೆಚ್ಚುವರಿ ಡಿಸಿಎಂ ನೇಮಕ ವಿಚಾರ ಮತ್ತೊಮ್ಮೆ ಮಹತ್ವ ಪಡೆದುಕೊಳ್ಳುತ್ತಿದೆ.

ಡಿಸಿಎಂ, ನಾಯಕರ ಹೇಳಿಕೆಗಳು

ʻʻಹೆಚ್ಚುವರಿಯಾಗಿ ಡಿಸಿಎಂ ನೇಮಕ ಕುರಿತಂತೆ ಸಾಮೂಹಿಕ ಚರ್ಚೆ ಆಗಬೇಕು. ಎಐಸಿಸಿ ಹೈಕಮಾಂಡ್‌ ಮಟ್ಟದಲ್ಲಿ ಚರ್ಚೆ ಆಗಬೇಕು. ಸಿಎಂ ಮಟ್ಟದಲ್ಲೂ ಚಿಂತನೆ ಆಗಬೇಕು. ಚರ್ಚೆ ನಡೆಯುವುದರಿಂದ ಡಿಸಿಎಂ ಹುದ್ದೆ ಅಗತ್ಯದ ಬಗ್ಗೆ ದಾರಿ ಸ್ಪಷ್ಟವಾಗಲಿದೆʼʼ ಎಂದು ಸತೀಶ್‌ಜಾರಕಿಹೊಳಿ ಅವರು ಪ್ರತಿಪಾದಿಸಿದ್ದಾರೆ.

ಭಾನುವಾರ ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ರಾಜಣ್ಣ ಅವರು, ʻʻನಾಯಕರನ್ನು ನಿರ್ಲಕ್ಷಿಸಿದರೆ ವಿವಿಧ ಸಮುದಾಯಗಳ ಜನರು ಪಕ್ಷದ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಾರೆ. ಒಂದು ವರ್ಗದ ಜನರು ಮಾತ್ರ ಅಧಿಕಾರವನ್ನು ಉಳಿಸಿಕೊಂಡರೆ, ವಿವಿಧ ಸಮುದಾಯಗಳನ್ನು ಪ್ರತಿನಿಧಿಸುತ್ತಿರುವವರು ದೂರ ಹೋಗಬಹುದು. ಆ ಹಿನ್ನೆಲೆಯಲ್ಲಿ ಹೆಚ್ಚಿನ ಡಿಸಿಎಂ ಹುದ್ದೆಗಳ ಅಗತ್ಯವನ್ನು ಪ್ರತಿಪಾದಿಸುತ್ತಿದ್ದೇನೆʼʼ ಎಂದು ಹೇಳಿದ್ದಾರೆ.

ʻʻಲಿಂಗಾಯತ, ಎಸ್‌ಸಿ/ಎಸ್‌ಟಿ ಮತ್ತು ಅಲ್ಪಸಂಖ್ಯಾತ ಸಮುದಾಯದ ಶಾಸಕರು ತಲಾ ಒಂದು ಡಿಸಿಎಂ ಹುದ್ದೆಯನ್ನು ಹೊಂದಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ಬಿಜೆಪಿ ಹಲವಾರು ರಾಜ್ಯಗಳಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಿದ್ದು, ಈ ಮೂಲಕ ಮಾದರಿಯಾಗಿದೆ. ಉಪ ಮುಖ್ಯಮಂತ್ರಿಗಳು ಸಚಿವರಂತೆ ಯಾವುದೇ ಹೆಚ್ಚುವರಿ ಸವಲತ್ತುಗಳನ್ನು ಪಡೆಯುವುದಿಲ್ಲ, ಈ ಹುದ್ದೆಯು ಗೌರವವನ್ನು ಹೆಚ್ಚಿಸುತ್ತದೆ ಅಲ್ಲದೆ, ಸಮುದಾಯಗಳ ಜನರು ಹೆಮ್ಮೆಪಡುತ್ತಾರೆ ಮತ್ತು ತಮ್ಮನ್ನು ಗುರ್ತಿಸಿದ್ದಕ್ಕಾಗಿ ಪಕ್ಷಕ್ಕೆ ಕೃತಜ್ಞತೆ ಸಲ್ಲಿಸುತ್ತಾರೆ. ಇದು ಜನರ ವಿಶ್ವಾಸ ಗಳಿಸುವ ಮಾರ್ಗವಾಗಿದೆʼʼ ಎಂದಿದ್ದಾರೆ.

ʻʻಲೋಕಸಭೆ ಚುನಾವಣೆಯಲ್ಲಿ ಪಕ್ಷ ಬ್ಯುಸಿಯಾಗಿದ್ದ ಕಾರಣ ಈ ವಿಷಯವನ್ನುಪ್ರಸ್ತಾಪಿಸಲಿಲ್ಲ, ಈಗ ಜಮೀರ್ ಅಹಮದ್ ಖಾನ್, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ಸಚಿವರು ಪ್ರಸ್ತಾಪಿಸಿದ್ದಾರೆ, ಆದರೆ, ಈ ಬಗ್ಗೆ ನಿರ್ಧಾರ ಕೈಗೊಳ್ಳುವುದು ಕೇಂದ್ರ ನಾಯಕತ್ವಕ್ಕೆ ಬಿಟ್ಟದ್ದುʼʼ ಎಂದಿದ್ದಾರೆ.

ರಾಜಣ್ಣ ಅವರ ಈ ಹೇಳಿಕೆಗಳ ಬೆನ್ನಲ್ಲೇ ಬೀದರ್‌ನಲ್ಲಿ ಪ್ರತಿಕ್ರಿಯಿಸಿದ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರು, ʻʻನಾನು ಮತ್ತು ರಹೀಂಖಾನ್‌ ಅವರು ಈ ವಿಚಾರದಲ್ಲಿ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಅದೇ ರೀತಿ ಪರಮೇಶ್ವರ್‌, ಜಾರಕಿಹೊಳಿ, ರಾಜಣ್ಣ ಹಾಗೂ ಎಂಬಿ ಪಾಟೀಲ್‌ ಅವರು ತಮ್ಮತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ನಮ್ಮದು ಹೈಕಮಾಂಡ್‌ ಪಕ್ಷ ಹಾಗಾಗಿ ಹೈಕಮಾಂಡ್‌ ತೀರ್ಮಾನ ತೆಗೆದುಕೊಳ್ಳುತ್ತದೆʼʼ ಎಂದು ಹೇಳಿದ್ದಾರೆ.

ಡಿಕೆ ಸುರೇಶ್‌ ವ್ಯಂಗ್ಯ

ಇನ್ನು ಇದೇ ವಿಚಾರವಾಗಿ ಮಾತನಾಡಿರುವ ಮಾಜಿ ಸಂಸದ ಡಿಕೆ ಸುರೇಶ್ ಅವರು, ʻʻಡಿಸಿಎಂ ಸ್ಥಾನ ಚರ್ಚೆಯ ಬಗ್ಗೆ ಮಾಹಿತಿಯಿಲ್ಲ, ಪಕ್ಷ ತೀರ್ಮಾನ ಮಾಡಿ ಇನ್ನೂ 5 ಡಿಸಿಎಂಗಳನ್ನು ಮಾಡಿದರೆ ಒಳ್ಳೆಯದು. ಇಲ್ಲಿ ಡಿಕೆ ಶಿವಕುಮಾರ್ ಅವರ ವಿಚಾರ ಮಾತ್ರ ಅಲ್ಲ. 8 ಬಾರಿ ಗೆದ್ದ ರಾಮಲಿಂಗರೆಡ್ಡಿ ಇದ್ದಾರೆ. 8 ವರ್ಷಗಳ ಕಾಲ ಪಕ್ಷದ ಅಧ್ಯಕ್ಷರಾಗಿದ್ದ ಪರಮೇಶ್ವರ್ ಇದ್ದಾರೆ. ಕಾರ್ಯಾಧ್ಯಕ್ಷರಾಗಿದ್ದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ‌ ಇದ್ದಾರೆ. ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಎಂ ಬಿ ಪಾಟೀಲ್ ಇದ್ದಾರೆ. ಮುಸ್ಲಿಂ ಸಮುದಾಯದಲ್ಲಿ ಪ್ರಬಲ ನಾಯಕ ಜಮೀರ್ ಅಹ್ಮದ್ ಸಾಹೇಬರು ಇದ್ದಾರೆ. ಒಕ್ಕಲಿಗರಲ್ಲಿ ಹಿರಿಯ ನಾಯಕರಾಗಿ ಕೃಷ್ಣಭರೇಗೌಡ ಇದ್ದಾರೆ. ಮಂಡ್ಯದಿಂದ ಚಲುವರಾಯಸ್ವಾಮಿ, ದಿನೇಶ್ ಗುಂಡೂರಾವ್ , ದೇಶಪಾಂಡೆ ಇದ್ದಾರೆ. ಇವರೆಲ್ಲರನ್ನೆಲ್ಲಾ ಮಾಡಬಹುದು ಎಂದು ವ್ಯಂಗ್ಯವಾಡಿದ್ದಾರೆ. ಎಲ್ಲಾ ಸಮುದಾಯಗಳಿಗೂ ಅವಕಾಶ ನೀಡಬೇಕು ಅಲ್ಲವೇ? ಸಾಮಾಜಿಕ ನ್ಯಾಯ ಮತ್ತು  ಪಕ್ಷ ಬಲವರ್ಧನೆಗಾಗಿ..." ಎಂದು ವ್ಯಂಗ್ಯವಾಡಿದ್ದಾರೆ.

ಒಂದು ಕಡೆ ಸಿದ್ದರಾಮಯ್ಯ ಬಣದ ನಾಯಕರು, ಸಮುದಾಯವಾರು ಡಿಸಿಎಂ ಹುದ್ದೆ ನೀಡುವುದರಿಂದ ಆಯಾ ಜಾತಿಗಳು ಪಕ್ಷದ ಜತೆಗೆ ನಿಲ್ಲುತ್ಥಾರೆ ಎನ್ನುವ ವಾದವನ್ನು ಹೈಕಮಾಂಡ್‌ ಮುಂದೆ ಇಡಲು ನಿರ್ಧರಿಸಿದ್ದಾರೆ. ಮತ್ತೊಂದೆಡೆ, ಡಿಕೆ ಶಿವಕುಮಾರ್‌ ಬಣದವರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಈ ಕೋಲಾಹಲದ ಪರಿಣಾಮ ಏನಾಗಬಹುದು ಎಂಬುದು ಕಾದು ನೋಡಬೇಕಿದೆ.

Tags:    

Similar News