ಮೇಲ್ಮನೆ ನಾಮನಿರ್ದೇಶನ ಕಗ್ಗಂಟು ಅಂತ್ಯ: ರಮೇಶ್ ಬಾಬು, ಆರತಿ ಕೃಷ್ಣ ಸ್ಥಾನ ಅಬಾಧಿತ; ಮಟ್ಟು, ಸಾಗರ್‌ಗೆ ಕೊಕ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿತ ಪಟ್ಟಿಯನ್ನು ಈಗಾಗಲೇ ರಾಜಭವನಕ್ಕೆ ಕಳುಹಿಸಿದ್ದು, ರಾಜ್ಯಪಾಲರಿಂದ ಅಧಿಕೃತ ಆದೇಶ ಹೊರಬೀಳುವುದು ಮಾತ್ರ ಬಾಕಿಯಿದೆ.;
ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದ್ದ ವಿಧಾನ ಪರಿಷತ್ತಿನ ನಾಲ್ಕು ನಾಮನಿರ್ದೇಶಿತ ಸ್ಥಾನಗಳ ಆಯ್ಕೆ ಪ್ರಕ್ರಿಯೆಗೆ ಕೊನೆಗೂ ತೆರೆಬಿದ್ದಿದೆ. ಹಲವು ತಿಂಗಳುಗಳ ಕಾಲದ ಹಗ್ಗಜಗ್ಗಾಟ, ಆಂತರಿಕ ಭಿನ್ನಮತ ಮತ್ತು ರಾಜಕೀಯ ಲೆಕ್ಕಾಚಾರಗಳ ನಂತರ ಕಾಂಗ್ರೆಸ್ ಹೈಕಮಾಂಡ್ ಅಂತಿಮ ಪಟ್ಟಿಗೆ ಅನುಮೋದನೆ ನೀಡಿದ್ದು, ಈ ಮೂಲಕ ರಾಜ್ಯ ನಾಯಕರ ಆಯ್ಕೆಗೆ ಮನ್ನಣೆ ನೀಡಿದೆ.
ಹೊಸ ಪಟ್ಟಿಯ ಪ್ರಕಾರ, ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥರಾದ ರಮೇಶ್ ಬಾಬು, ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ, ಕೆಪಿಸಿಸಿ ಎಸ್‌ಸಿ ಘಟಕದ ಅಧ್ಯಕ್ಷ ಎಫ್.ಎಚ್. ಜಕ್ಕಪ್ಪನವರ್ ಮತ್ತು ಹಿರಿಯ ಪತ್ರಕರ್ತ ಕೆ. ಶಿವಕುಮಾರ್ ಅವರು ಮೇಲ್ಮನೆಯನ್ನು ಪ್ರವೇಶಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿತ ಪಟ್ಟಿಯನ್ನು ಈಗಾಗಲೇ ರಾಜಭವನಕ್ಕೆ ಕಳುಹಿಸಿದ್ದು, ರಾಜ್ಯಪಾಲರಿಂದ ಅಧಿಕೃತ ಆದೇಶ ಹೊರಬೀಳುವುದು ಮಾತ್ರ ಬಾಕಿಯಿದೆ.
ಹಿಂದಿನ ಪಟ್ಟಿಗೆ ಆಕ್ಷೇಪ, ಬದಲಾವಣೆ
ಈ ಹಿಂದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಮೇಶ್ ಬಾಬು, ಆರತಿ ಕೃಷ್ಣ ಅವರೊಂದಿಗೆ ಹಿರಿಯ ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಮತ್ತು ಕಲಬುರಗಿ ಮೂಲದ ದಲಿತ ಮುಖಂಡ ಡಿ.ಜಿ. ಸಾಗರ್ ಅವರ ಹೆಸರಿದ್ದ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಿದ್ದರು. ಆದರೆ, ಈ ಪಟ್ಟಿಗೆ ರಾಜ್ಯ ಕಾಂಗ್ರೆಸ್‌ನ ಪ್ರಮುಖ ನಾಯಕರಿಂದಲೇ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ವಿಶೇಷವಾಗಿ, ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮತ್ತು ಮೂಲ ಕಾಂಗ್ರೆಸಿಗರನ್ನು ಕಡೆಗಣಿಸಲಾಗಿದೆ ಎಂಬ ಅಸಮಾಧಾನ ಭುಗಿಲೆದ್ದಿತ್ತು. ಈ ಆಂತರಿಕ ವಿರೋಧದ ಕಾರಣದಿಂದಾಗಿ ಹೈಕಮಾಂಡ್ ಪಟ್ಟಿಯನ್ನು ತಡೆಹಿಡಿದು, ಮರುಪರಿಶೀಲನೆಗೆ ಸೂಚಿಸಿತ್ತು.
ಹಲವು ಸುತ್ತಿನ ಮಾತುಕತೆಗಳ ನಂತರ, ಅಂತಿಮವಾಗಿ ದಿನೇಶ್ ಅಮಿನ್‌ಮಟ್ಟು ಮತ್ತು ಡಿ.ಜಿ. ಸಾಗರ್ ಅವರನ್ನು ಕೈಬಿಟ್ಟು, ಅವರ ಸ್ಥಾನಕ್ಕೆ ಎಫ್.ಎಚ್. ಜಕ್ಕಪ್ಪನವರ್ ಮತ್ತು ಕೆ. ಶಿವಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಬದಲಾವಣೆಯ ಮೂಲಕ ಪಕ್ಷದೊಳಗಿನ ಅಸಮಾಧಾನವನ್ನು ಶಮನಗೊಳಿಸುವ ಮತ್ತು ಪ್ರಾದೇಶಿಕ ಹಾಗೂ ಜಾತಿ ಸಮೀಕರಣವನ್ನು ಸರಿದೂಗಿಸುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಿದೆ.
ಆಯ್ಕೆಯ ಹಿಂದಿನ ಜಾತಿ ಮತ್ತು ರಾಜಕೀಯ ಲೆಕ್ಕಾಚಾರ
ರಮೇಶ್ ಬಾಬು: ಹಿಂದುಳಿದ ವರ್ಗಕ್ಕೆ ಸೇರಿದ ಬಲಿಜ ಸಮುದಾಯದವರಾಗಿದ್ದು, ಈ ಹಿಂದೆ ಜೆಡಿಎಸ್‌ನಲ್ಲಿದ್ದು ಪರಿಷತ್ ಸದಸ್ಯರಾಗಿದ್ದರು. ನಂತರ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ, ಪಕ್ಷದ ವಕ್ತಾರರಾಗಿ ಸಕ್ರಿಯರಾಗಿದ್ದಾರೆ.
ಡಾ. ಆರತಿ ಕೃಷ್ಣ: ಒಕ್ಕಲಿಗ ಸಮುದಾಯದ ಪ್ರತಿನಿಧಿಯಾಗಿದ್ದಾರೆ. ಇವರು ಮಾಜಿ ಸಚಿವ ಬೇಗಾನೆ ರಾಮಯ್ಯ ಅವರ ಪುತ್ರಿ. ಎಐಸಿಸಿ ಕಾರ್ಯದರ್ಶಿಯಾಗಿ ಮತ್ತು ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆಯಾಗಿ ಗುರುತಿಸಿಕೊಂಡಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಅನುಭವ ಹೊಂದಿದ್ದು, ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ.
ಎಫ್.ಎಚ್. ಜಕ್ಕಪ್ಪನವರ್: ಪರಿಶಿಷ್ಟ ಜಾತಿಯ (ಎಡಗೈ) ಸಮುದಾಯಕ್ಕೆ ಸೇರಿದ ಇವರು, ಕಾಂಗ್ರೆಸ್‌ನ ದಲಿತ ಘಟಕದ ರಾಜ್ಯಾಧ್ಯಕ್ಷರಾಗಿ ಮತ್ತು ಟ್ರೇಡ್ ಯೂನಿಯನ್ ನಾಯಕರಾಗಿ ಕೆಲಸ ಮಾಡಿದ್ದಾರೆ.
ಡಾ. ಕೆ. ಶಿವಕುಮಾರ್: ಪರಿಶಿಷ್ಟ ಜಾತಿಯ (ಬಲಗೈ) ಸಮುದಾಯಕ್ಕೆ ಸೇರಿದವರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರೆಂದು ಗುರುತಿಸಿಕೊಂಡಿದ್ದಾರೆ. ಮೈಸೂರು ಮೂಲದವರಾದ ಇವರು, ಕೋಲಾರ ಜಿಲ್ಲೆಯಲ್ಲಿ ಶಿಕ್ಷಣ ಪಡೆದು ಪತ್ರಿಕೋದ್ಯಮದಲ್ಲಿ ಉನ್ನತ ಸ್ಥಾನಕ್ಕೇರಿದ್ದಾರೆ. 'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯ ಹಿರಿಯ ಸ್ಥಾನಿಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಪಿಎಚ್.ಡಿ ಪದವೀಧರರೂ ಆಗಿದ್ದಾರೆ.
ಈ ನಾಲ್ವರ ನಾಮನಿರ್ದೇಶನದೊಂದಿಗೆ, ಯು.ಬಿ. ವೆಂಕಟೇಶ್, ಪ್ರಕಾಶ್ ಕೆ. ರಾಥೋಡ್, ಕೆ.ಎ. ತಿಪ್ಪೇಸ್ವಾಮಿ ಅವರ ನಿವೃತ್ತಿ ಮತ್ತು ಸಿ.ಪಿ. ಯೋಗೇಶ್ವರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳು ಭರ್ತಿಯಾಗಲಿವೆ.