KIOCL | ಮಂಗಳೂರು ಕಾರ್ಖಾನೆ ಮುಚ್ಚಲು ರಾಜ್ಯ ಸರ್ಕಾರ ಷಡ್ಯಂತ್ರ; ಎಚ್‌ಡಿಕೆ ಆರೋಪ
KIOCL ಕರ್ನಾಟಕಕ್ಕೆ ಏನು ಬೇಕು ಎಂಬುದರ ಬಗ್ಗೆ ರಾಜ್ಯದ ಯಾರೊಬ್ಬರೂ ಈವರೆಗೂ ನನ್ನ ಮುಂದೆ ಬಂದು ಚರ್ಚೆ ಮಾಡಿಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪಿಸಿದ್ದಾರೆ.;
ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಯ (KIOCL) ಮಂಗಳೂರು ಕಾರ್ಖಾನೆ ಮುಚ್ಚಿಸಲು ರಾಜ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರ ಷಡ್ಯಂತ್ರ ನಡೆಸಿದೆ ಎಂದು ಕೇಂದ್ರದ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಕೇಂದ್ರ ಸಚಿವನಾಗಿ ಏಳು ತಿಂಗಳಾಯಿತು. ನನ್ನ ಎರಡೂ ಇಲಾಖೆಗಳ ಎಲ್ಲಾ ಕಾರ್ಖಾನೆ, ಕಂಪನಿಗಳಿಗೆ ಭೇಟಿ ನೀಡಿದ್ದೇನೆ. ನನ್ನ ಮನವಿಗಳನ್ನು ಪ್ರಧಾನಿ ಮೋದಿ ಅವರು ದೊಡ್ಡ ಮನಸ್ಸಿನಿಂದ ಪುರಸ್ಕರಿದ್ದಾರೆ. ಆದರೆ, ಕರ್ನಾಟಕಕ್ಕೆ ಇಂತಹದ್ದು ಬೇಕು ಎಂದು ರಾಜ್ಯದ ಯಾರೊಬ್ಬರೂ ನನ್ನ ಮುಂದೆ ಬಂದು ಚರ್ಚೆ ಮಾಡಿಲ್ಲ ಎಂದರು.
ಸಚಿವನಾಗಿ ಅಧಿಕಾರ ವಹಿಸಿಕೊಂಡ ಮೇಲೆ ಮೊದಲನೇ ಸಹಿಯನ್ನು ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ ಉಳಿಸಲು ಹಾಕಿದ್ದೇನೆ. 2011ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರವೇ ಒಪ್ಪಿಗೆ ನೀಡಿದ್ದ ಸಂಡೂರಿನ ದೇವದಾರಿ ಗಣಿ ಯೋಜನೆ ಅನುಷ್ಠಾನಕ್ಕೆ ಹಣಕಾಸು ನೆರವು ಪಡೆಯಲು ಅನುಮತಿ ಕೊಡುವ ಬಗ್ಗೆ ನಾನು ಹಣಕಾಸು ಸಚಿವಾಲಯಕ್ಕೆ ಶಿಫಾರಸು ಮಾಡಿದೆ. ಅದನ್ನೇ ತಿರುಚಿ ಹೇಳಿದ ಕಾಂಗ್ರೆಸ್ ನಾಯಕರು, ನನ್ನ ಮೇಲಿನ ರಾಜಕೀಯ ಹಗೆತನಕ್ಕೆ ವ್ಯವಸ್ಥಿತವಾಗಿ ಅಡ್ಡಿಪಡಿಸಿದರು ಎಂದು ದೂರಿದರು.
ಕುದುರೆಮುಖ ಕಂಪನಿಯ ಮಂಗಳೂರು ಕಾರ್ಖಾನೆ ಮುಚ್ಚಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಏನೇನು ಷಡ್ಯಂತ್ರ ಮಾಡಬೇಕೋ ಎಲ್ಲವನ್ನೂ ಮಾಡಿತು ಎಂದು ನೇರ ಆರೋಪ ಮಾಡಿದರಲ್ಲದೆ, ದೇವದಾರಿ ಗಣಿ ಯೋಜನೆಗೆ ರಾಜ್ಯ ಸರ್ಕಾರ ಅಡ್ಡಿಪಡಿಸಿದ ಕಾರಣದಿಂದ ಮಂಗಳೂರಿನ ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಕಾರ್ಖಾನೆಯಲ್ಲಿ ನೂರಾರು ಕಾರ್ಮಿಕರು ಕೆಲಸ ಕಳೆದುಕೊಂಡರು. ಅವರೆಲ್ಲರೂ ನನ್ನಲ್ಲಿ ಬಂದು ದುಃಖ ತೋಡಿಕೊಂಡರು. ನನ್ನ ರಾಜ್ಯದ ಪ್ರತಿಷ್ಠಿತ ಕಾರ್ಖಾನೆಗೆ ಬೀಗ ಬೀಳಬಾರದು ಎಂಬ ಸದುದ್ದೇಶದಿಂದ ಕುದುರೆಮುಖ ಕಂಪನಿಯನ್ನು ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ (NMDC) ದಲ್ಲಿ ವಿಲೀನ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ರಾಜಕೀಯ ಪ್ರತಿಷ್ಠೆಯಿಂದ ಕೈಗಾರಿಕೆಗಳ ಕತ್ತು ಹಿಸುಕಲು ಪ್ರಯತ್ನ ಮಾಡುತ್ತಿದ್ದರೆ ನರೇಂದ್ರ ಮೋದಿ ಅವರ ಸರ್ಕಾರ ಅವುಗಳಿಗೆ ಜೀವ ಕೊಡುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು.
ಹೆಚ್‌ಎಂಟಿ ವಿಷಯದಲ್ಲಿಯೂ ಅಡ್ಡಿ
ಹೆಚ್‌ಎಂಟಿಗೆ ಜೀವ ಕೊಡಲು ನಾನು ಹೊರಟರೆ ಅದಕ್ಕೂ ರಾಜ್ಯ ಕಾಂಗ್ರೆಸ್ ಸರ್ಕಾರ ಕೊಕ್ಕೆ ಹಾಕುತ್ತಿದೆ. ಅರಣ್ಯ ಇಲಾಖೆ ಭೂಮಿ ಅಂತ ಕಿತಾಪತಿ ಶುರು ಮಾಡಿದೆ. ಅವರಿಗೆ ಅಭಿವೃದ್ಧಿ ಬೇಕಿಲ್ಲ, ಕೇವಲ ರಾಜಕೀಯ ಬೇಕಷ್ಟೇ. ಜನತೆಗೆ ಶಾಶ್ವತವಾಗಿ ಬದುಕು ರೂಪಿಸಿ ಕೊಡುವ ಉದ್ದೇಶ ಇಲ್ಲ. ಕೇವಲ ಚುನಾವಣೆ ರಾಜಕೀಯಕ್ಕಾಗಿ ಶಾಶ್ವತ ಅಭಿವೃದ್ಧಿಯನ್ನು ಕಾಂಗ್ರೆಸ್ ಸರ್ಕಾರ ಹಾಳು ಮಾಡುತ್ತಿದೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಮುಂದೆ ಏನನ್ನೂ ಚರ್ಚೆ ಮಾಡದೇ ಬಜೆಟ್ ನಲ್ಲಿ ಏನನ್ನು ಕೊಟ್ಟಿಲ್ಲ ಎಂದು ಈಗ ಹುಯಿಲೆಬ್ಬಿಸಿದರೆ ಉಪಯೋಗವೇನು? ಪ್ರಸ್ತಾವನೆಗಳನ್ನು ತಂದು ಕೊಡುವುದು ಬಿಟ್ಟು ಪ್ರಧಾನಿ ಮುಂದೆ ಮಾತನಾಡುವ ಶಕ್ತಿ ಇಲ್ಲ ಎಂದರೆ ಹೇಗೆ? ನನಗೆ ಕನ್ನಡಿಗರು ಕೊಟ್ಟಿರುವ ಶಕ್ತಿಯಿಂದಲೇ ವೈಜಾಗ್ ಸ್ಟೀಲ್ ಕಾರ್ಖಾನೆ ಉಳಿಸಲು ಸಾಧ್ಯವಾಯಿತು. ಅದಕ್ಕೆ ಮೋದಿ ಅವರು ಕೊಟ್ಟ ಸಹಕಾರವನ್ನು ನಾನೆಂದೂ ಮರೆಯಲಾರೆ ಎಂದು ಸಚಿವರು ಹೇಳಿದರು.
ಮೊನ್ನೆ ನಾನು ವೈಜಾಗ್‌ಗೆ ಹೋದಾಗ ವಿಮಾನ ನಿಲ್ದಾಣದಿಂದ 14 ಕಿ.ಮೀ. ದೂರ ಮೆರವಣಿಗೆ ಮಾಡಿದರು ಅಲ್ಲಿನ ಜನ. ಅವರು ತೋರಿದ ಪ್ರೀತಿ, ವಿಶ್ವಾಸವನ್ನು ಎಲ್ಲಾ ಕನ್ನಡಿಗರೂ ಸಮರ್ಪಣೆ ಮಾಡುತ್ತೇನೆ. ಅವರು ಕೊಟ್ಟ ಶಕ್ತಿಯಿಂದಲೇ ಇದೆಲ್ಲಾ ಆಗಿದೆ ಎಂದು ಹೇಳಿದರು.
ಭದ್ರಾವತಿ ಕಾರ್ಖಾನೆಗೂ ಮರುಜೀವ
ಭದ್ರಾವತಿಯಲ್ಲಿ ಮೈಸೂರು ಮಹಾರಾಜರು ಮತ್ತು ಸರ್ ಎಂ ವಿಶ್ವೇಶ್ವರಯ್ಯ ಅವರು ಕಟ್ಟಿರುವ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ಮುಚ್ಚಿ ಹೋಗಿದೆ. ಅದಕ್ಕೆ ಮರು ಜೀವ ಪ್ರಯತ್ನಕ್ಕೂ ಕೈ ಹಾಕಿದ್ದೇನೆ. ಅದಕ್ಕೆ ಈ ಕಾಂಗ್ರೆಸ್ ಸರ್ಕಾರ ಎಷ್ಟರಮಟ್ಟಿಗೆ ಬೆಂಬಲ ಕೊಡುತ್ತೋ, ಬಿಡುತ್ತೋ ಗೊತ್ತಿಲ್ಲ. ಈಚೆಗೆ ಜಾರ್ಖಂಡ್ ರಾಜ್ಯದ ಬೋಕಾರೋ ಉಕ್ಕು ಕಾರ್ಖಾನೆಗೆ ಭೇಟಿ ನೀಡಿದ್ದೆ. ಅಲ್ಲಿ ವಿಸ್ತರಣಾ ಯೋಜನೆಗೆ ₹20,000 ಕೋಟಿ ಹೂಡಿಕೆ ಮಾಡುತ್ತಿದ್ದೇವೆ. ಬೇರೆ ರಾಜ್ಯ ರಾಜ್ಯಗಳಲ್ಲಿ ನಾವು ಕೆಲಸ ಮಾಡುತ್ತೇವೆ ಎಂದು ಹೋದರೆ ಅಲ್ಲಿನ ನಾಯಕರು ಪಕ್ಷಾತೀತವಾಗಿ ಸಹಕಾರ ಕೊಡುತ್ತಾರೆ. ನಮ್ಮವರಿಗೆ ಏನಾಗಿದೆ? ಕುಮಾರಸ್ವಾಮಿ ಕರ್ನಾಟಕಕ್ಕೆ ಬರುತ್ತಾನೆ ಎಂದರೆ ಇವರಿಗೆ ಹೊಟ್ಟೆನೋವು ಆಗುತ್ತದೆ ಎಂದು ಕೇಂದ್ರ ಸಚಿವರು ಬೇಸರ ವ್ಯಕ್ತಪಡಿಸಿದರು.
ಬಜೆಟ್ ಟೀಕಿಸುವ ನೈತಿಕತೆ ಕಾಂಗ್ರೆಸ್ಸಿಗರಿಗಿಲ್ಲ
ದೇಶದಲ್ಲಿ ಸುದೀರ್ಘ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ರಾಜ್ಯಕ್ಕೆ ಏನು ಮಾಡಿದೆ ಎನ್ನುವುದು ಗೊತ್ತಿದೆ. ಕೇಂದ್ರ ಬಜೆಟ್ ಬಗ್ಗೆ ಟೀಕೆ ಮಾಡುವುದಕ್ಕೆ ಕಾಂಗ್ರೆಸ್‌ನವರಿಗೆ ಏನು ನೈತಿಕತೆ ಇದೆ ಎಂದು ಸಚಿವ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ವಿಕಸಿತ ಭಾರತ ಸಾಕಾರಕ್ಕೆ ಸಮಗ್ರ ಆಯವ್ಯಯವನ್ನು ಕೇಂದ್ರದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ. ಎಲ್ಲಾ ರಾಜ್ಯಗಳಿಗೂ ಆದ್ಯತೆ ಕೊಟ್ಟಿದ್ದಾರೆ ಎಂದರು.
ಪ್ರತಿಯೊಂದು ಜಿಲ್ಲೆ, ರಾಜ್ಯಕ್ಕೆ ಕಾರ್ಯಕ್ರಮಗಳನ್ನು ಘೋಷಣೆ ಮಾಡುವ ಬದಲು ಸಮಗ್ರ ಭಾರತವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕಾರ್ಯಕ್ರಮ ಘೋಷಣೆ ಮಾಡಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳು ಎಲ್ಲಾ ರಾಜ್ಯಗಳ ಎಲ್ಲಾ ಜಿಲ್ಲೆಗಳ ಜನರಿಗೂ ಮುಟ್ಟುತ್ತವೆ ಎಂದು ಸಚಿವರು ಹೇಳಿದರು.
ಮುಂದಿನ ಮಾರ್ಚ್ ನಲ್ಲಿ ರಾಜ್ಯದಲ್ಲಿಯೂ ಇವರು ಬಜೆಟ್ ಮಂಡನೆ ಮಾಡುತ್ತಾರೆ ಅಲ್ಲವೇ, ಆಗ ನೋಡೋಣ ಇವರು ಎಷ್ಟು ಜಿಲ್ಲೆಗಳಿಗೆ, ತಾಲ್ಲೂಕುಗಳಿಗೆ ಏನೇನು ಕೊಡುತ್ತಾರೆ ಎಂದು ಎಂದು ಕುಟುಕಿದರು.
ಸಿದ್ದರಾಮಯ್ಯ ಅವರ ಹೇಳಿಕೆಗಳನ್ನು ಗಮನಿಸಿದ್ದೇನೆ. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂತು. 1983ರವರೆಗೆ ಕಾಂಗ್ರೆಸ್ ರಾಜ್ಯ, ರಾಷ್ಟ್ರದಲ್ಲಿ ಅಧಿಕಾರದಲ್ಲಿತ್ತು. ಹಾರಂಗಿ, ಹೇಮಾವತಿ, ವಾಟೆಹೊಳೆ, ಕಬಿನಿ ಜಲಾಶಯಗಳ ನಿರ್ಮಾಣಕ್ಕೆ ಕೇಂದ್ರದಿಂದ ನಯಾಪೈಸೆ ದುಡ್ಡು ಕೊಡಲಿಲ್ಲ. ಐವತ್ತು ವರ್ಷ ದೇಶ ಆಳಿ ಈ ಯೋಜನೆಗಳಿಗೆ ದುಡ್ಡು ಕೊಟ್ಟರಾ ಅವರು. ದೇವೇಗೌಡರು ಪ್ರಧಾನಮಂತ್ರಿ ಆಗಿದ್ದಾಗ ಆಕ್ಸಿಲರೇಟೆಡ್ ಇರಿಗೇಷನ್ ಸ್ಕೀಂ ಅನ್ನು ಇಡೀ ದೇಶದಲ್ಲಿ ಜಾರಿಗೆ ತಂದರು. ಆಗ ಉತ್ತರ ಕರ್ನಾಟಕಕ್ಕೆ 15ರಿಂದ 20 ಸಾವಿರ ಕೋಟಿ ರೂಪಾಯಿ ಅನುದಾನ ಕೊಟ್ಟರು. ಕಾಂಗ್ರೆಸ್ ನವರು ಏನು ಕೊಟ್ಟರು. ಮೈಸೂರು ಮಹಾರಾಜರು, ಸರ್ ಎಂ ವಿಶ್ವೇಶ್ವರಯ್ಯ ಅವರು ಕಟ್ಟಿದ್ದ ಕೆಆರ್ ಎಸ್ ನಿಂದ ಹಾಗೂ ದೇವೇಗೌಡರ ಹೋರಾಟದ ಫಲವಾಗಿ ನಿರ್ಮಾಣವಾದ ಹಾರಂಗಿ, ಕಬಿನಿ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಟ್ಟುಕೊಂಡು ಕೂತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಕುಮಾರಸ್ವಾಮಿ, ಪ್ರಹ್ಲಾದ್ ಜೋಷಿ ಕೇಂದ್ರದಲ್ಲಿ ಮಂತ್ರಿಗಳಾಗಿದ್ದಾರೆ. ಪ್ರಧಾನಮಂತ್ರಿ ಮುಂದೆ ಮಾತನಾಡುವ ಶಕ್ತಿ ಇಲ್ಲ ಎಂದು ಹೇಳುತ್ತಾರೆ. ನಾನು ಎರಡು ಇಲಾಖೆಗಳ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದೇನೆ. ನೆರೆಯ ಆಂಧ್ರ ಪ್ರದೇಶದಲ್ಲಿ ವೈಜಾಗ್ ಸ್ಟೀಲ್ ಕಾರ್ಖಾನೆಯ ಖಾಸಗೀಕರಣಕ್ಕೆ ಕೇಂದ್ರ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ಒಮ್ಮೆ ಸಂಪುಟದಲ್ಲಿ ಕೈಗೊಂಡ ನಿರ್ಧಾರವನ್ನು ಪರಿಶೀಲನೆ ಮಾಡಿದ ಉದಾಹರಣೆ ಇಲ್ಲ. ಸಾಮಾನ್ಯವಾಗಿ ಮಾಡುವುದೂ ಇಲ್ಲ. ಮಂತ್ರಿಯಾದ ನಾನು ಮೇಲೆ ಆ ಕಾರ್ಖಾನೆಗೆ ಭೇಟಿ ಕೊಟ್ಟೆ. ಅಲ್ಲಿನ ಪರಿಸ್ಥಿತಿಯನ್ನು ಖುದ್ದು ಅವಲೋಕನ ಮಾಡಿದೆ. ನಂತರ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದೆ. ಆರ್ಥಿಕ ಸಚಿವರ ಮನವೊಲಿಸಿ ಆ ಕಾರ್ಖಾನೆಗೆ ಜೀವ ಕೊಟ್ಟಿದ್ದೇನೆ. ಉಕ್ಕು ಕ್ಷೇತ್ರದಲ್ಲಿ ಆ ಕಾರ್ಖಾನೆಯನ್ನು ನಂಬರ್ ಒನ್ ಸ್ಥಾನಕ್ಕೆ ತರುತ್ತೇವೆ. ನನ್ನ ಬಗ್ಗೆ ಲಘುವಾಗಿ ಮಾತನಾಡುವ ಕಾಂಗ್ರೆಸ್ ನಾಯಕರು ವಿಶಾಖಪಟ್ಟಣಕ್ಕೆ ಹೋಗಿ ನೋಡಲಿ ಎಂದು ತರಾಟೆಗೆ ತೆಗೆದುಕೊಂಡರು.
ನರೇಂದ್ರ ಮೋದಿ ಅವರು ಯಾವಾಗಲೂ ವಿಕಸಿತ, ಆತ್ಮನಿರ್ಭರ ಭಾರತ ಬಗ್ಗೆ ಹೇಳುತ್ತಾರೆ. ಸ್ವಾತಂತ್ರ್ಯ ಶತಮಾನೋತ್ಸವ ಆಚರಣೆ ಮಾಡುವುದರೊಳಗೆ ನಮ್ಮ ದೇಶ ವಿಶ್ವದಲ್ಲಿ ಅಗ್ರ ಸ್ಥಾನಕ್ಕೆರಬೇಕು. ಅದಕ್ಕೆ ಅನೇಕ ಕಾರ್ಯಕ್ರಮಗಳನ್ನು ತರಲು ಮೋದಿಯವರ ಪ್ರಯತ್ನಗಳು ನಡೆದಿವೆ. ಅವರು ಅವಿರತವಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ವಿಶೇಷವಾಗಿ ನಾಲ್ಕು ಕ್ಷೇತ್ರಗಳಿಗೆ ಉತ್ತೇಜನ ನೀಡಿದ್ದಾರೆ. ಬಡತನ, ನಿರುದ್ಯೋಗ, ರೈತರ ಸಮಸ್ಯೆ, ಮಹಿಳೆಯರು ಸ್ವಾವಲಂಬಿಯಾಗಿ ಬರಲು ಆರ್ಥಿಕ ಶಕ್ತಿ ತುಂಬಲು ಬಜೆಟ್‌ನಲ್ಲಿ ಆದ್ಯತೆ ನೀಡಿದ್ದಾರೆ ಎಂದು ಹೇಳಿದರು.