Man- Animal Conflict | ಮಾನವ– ವನ್ಯಜೀವಿ ಸಂಘರ್ಷ: ರಾಜ್ಯದಲ್ಲಿ ವಾರಕ್ಕೊಬ್ಬರ ಸಾವು!

ಕರ್ನಾಟಕದಲ್ಲಿ ಕಳೆದ ಒಂದು ದಶಕದ ಅವಧಿಯಲ್ಲಿ ಉಂಟಾದ ಮಾನವ-ಪ್ರಾಣಿ ಸಂಘರ್ಷದಲ್ಲಿ 600ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಆನೆ, ಹುಲಿ ಹಾಗೂ ಚಿರತೆ ಸೇರಿದಂತೆ ಕಾಡು ಪ್ರಾಣಿಗಳ ಹಾವಳಿ ವಿಪರೀತವಾಗಿದೆ.;

By :  Hitesh Y
Update: 2024-04-03 11:54 GMT
ಕರ್ನಾಟಕದಲ್ಲಿ ಮಾನವ – ಪ್ರಾಣಿ ಸಂಘರ್ಷ (ಚಿತ್ರಕೃಪೆ: pexels)

ಕರ್ನಾಟಕದಲ್ಲಿ ಕಳೆದ ಒಂದು ದಶಕದ ಅವಧಿಯಲ್ಲಿ ಉಂಟಾದ ಮಾನವ- ವನ್ಯಜೀವಿ ಸಂಘರ್ಷದಲ್ಲಿ 600ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಆನೆ, ಹುಲಿ ಹಾಗೂ ಚಿರತೆ ಸೇರಿದಂತೆ ಕಾಡು ಪ್ರಾಣಿಗಳ ಹಾವಳಿ ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು, ಸರಾಸರಿ ವಾರಕ್ಕೆ ಒಬ್ಬರು ವನ್ಯಜೀವಿ ದಾಳಿಗೆ ಬಲಿಯಾಗುತ್ತಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ 2023ರಲ್ಲಿ ಚಿಕ್ಕಮಗಳೂರಿನ ಕೆಲವೆಡೆ ಆನೆ ದಾಳಿ ತಡೆಯ ವಿಷಯದಲ್ಲಿ ಸರ್ಕಾರಗಳ ವೈಫಲ್ಯ ಖಂಡಿಸಿ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಇದೀಗ ಲೋಕಸಭೆ ಚುನಾವಣೆ ಕಾವೇರಿದೆ. ಈ ಬಾರಿಯೂ ವನ್ಯಜೀವಿ – ಮಾನವ ಸಂಘರ್ಷ ವಿಷಯ ರಾಜಕೀಯ ಚರ್ಚೆಯ ವಿಷಯವಾಗುವ ಸಾಧ್ಯತೆ ಇದೆ. ಅರಣ್ಯ ಇಲಾಖೆಯ ಪ್ರಕಾರ ರಾಜ್ಯದಲ್ಲಿ ಪ್ರಾಣಿಗಳ ದಾಳಿಯಿಂದ ಕಳೆದ ಒಂದು ದಶಕದ ಅವಧಿಯಲ್ಲಿ 600ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಅಂದರೆ ವಾರಕ್ಕೆ ಒಬ್ಬರು ಕಾಡು ಪ್ರಾಣಿಗಳ ದಾಳಿಯಿಂದಲೇ ಮೃತಪಟ್ಟಿದ್ದಾರೆ.

ಕರ್ನಾಟಕ ಅರಣ್ಯ ಇಲಾಖೆ ತನ್ನ ಅಧಿಕೃತ ವೆಬ್‌ ತಾಣದಲ್ಲಿ ಪ್ರಕಟಿಸಿರುವಂತೆ, ಕರ್ನಾಟಕದಲ್ಲಿ 2010-11 ರಿಂದ 2023-24ರ ನಡುವೆ (ಈ ವರ್ಷ ಮಾರ್ಚ್ 6 ರವರೆಗೆ) 618 ಜನರು ಮಾನವ- ವನ್ಯಜೀವಿ ಸಂಘರ್ಷದಲ್ಲಿ ಸಾವನ್ನಪ್ಪಿದ್ದಾರೆ. ಅದರಲ್ಲಿ ಆನೆಗಳ ದಾಳಿಯಿಂದ ಸಾವಿನ್ನಪ್ಪಿದವರ ಸಂಖ್ಯೆಯೇ ಹೆಚ್ಚು. ಆನೆ ದಾಳಿಯಿಂದ 416 ಜನ ಸಾವನ್ನಪಿದ್ದಾರೆ. ಚಿರತೆ ದಾಳಿಯಿಂದ 38 ಜನ, ಕರಡಿ ದಾಳಿಯಿಂದ 36 ಜನ, ಹುಲಿ ದಾಳಿಯಿಂದ 34 ಮತ್ತು ಕಾಡುಹಂದಿ ದಾಳಿಯಿಂದ 32 ಜನ ಸಾವನ್ನಪ್ಪಿದ್ದಾರೆ.

2024-25ನೇ ಸಾಲಿನಲ್ಲಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗಕ್ಕೆ ಒಟ್ಟು 151 ಕೋಟಿ ರೂ. ಮೀಸಲಿರಿಸಲಾಗಿತ್ತು. ರೈಲ್ವೆ ಬ್ಯಾರಿಕೇಡ್‌ಗಳ ನಿರ್ಮಾಣಕ್ಕೆ ಬರೋಬ್ಬರಿ 60 ಕೋಟಿ ಸೇರಿದಂತೆ ವನ್ಯಜೀವಿಗಳಿಗೆ ಸಂಬಂಧಿಸಿದ ಎಲ್ಲಾ ಕಾಮಗಾರಿಗಳಿಗೆ ಈ ಮೊತ್ತದ ಅನುದಾನ ಮೀಸಲಿಡಲಾಗಿದೆ. ಕರ್ನಾಟಕದಲ್ಲಿ ಅಂದಾಜು 6,400 ಆನೆಗಳಿವೆ. ಅದರಲ್ಲಿ 350 ಆನೆಗಳು ಕಾಡಿನಿಂದ ಹೊರ ಬರುತ್ತಿವೆ. ಈ ರೀತಿ ಕಾಡಿನಿಂದ ಹೊರಗೆ ಬರುತ್ತಿರುವ ಆನೆಗಳಲ್ಲಿ 18-30 ವರ್ಷ ವಯಸ್ಸಿನ ಯುವ ಆನೆಗಳ ಪ್ರಮಾಣವೇ ಹೆಚ್ಚು ಎಂದು ಕರ್ನಾಟಕ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ವರದಿ ತಿಳಿಸಿದೆ.

6 ಜಿಲ್ಲೆಗಳಲ್ಲಿ ಸಮಸ್ಯೆ

ಕರ್ನಾಟಕದಲ್ಲಿ ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು, ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರಮುಖವಾಗಿ ಮಾನವ- ವನ್ಯಜೀವಿ ಸಂಘರ್ಷ ಇದೆ. ಇದರೊಂದಿಗೆ ಬನ್ನೇರುಘಟ್ಟ ಸೇರಿದಂತೆ ಕರ್ನಾಟಕದ ಕೆಲವು ಪ್ರದೇಶಗಳಲ್ಲೂ ಆನೆ, ಹುಲಿ ಹಾಗೂ ಚಿರತೆಗಳಿಂದ ಮನುಷ್ಯರ ಮೇಲೆ ದಾಳಿ ನಡೆದಿರುವುದು ವರದಿಯಾಗಿದೆ.

ಇನ್ನು ಬನ್ನೇರುಘಟ್ಟ, ಚಾಮರಾಜನಗರ, ಮೈಸೂರು, ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಕಳೆದ ಒಂದು ದಶಕದ ಅವಧಿಯಲ್ಲಿ ಕಾಡುಪ್ರಾಣಿಗಳ ದಾಳಿಯಿಂದ 600ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿ ಕಾಫಿ ತೋಟ, ಅಡಿಕೆ ತೋಟ ಹಾಗೂ ಬಾಳೆ ತೋಟಗಳಿಗೆ ಆನೆಗಳ ಹಿಂಡು ನುಗ್ಗಿ ಬೆಳೆ ಹಾನಿ ಮಾಡುವುದು ಬಹುದೊಡ್ಡ ಸಮಸ್ಯೆ. ಕರ್ನಾಟಕದ ಕಾಡಂಚಿನ ಪ್ರದೇಶಗಳಲ್ಲೂ ಇತ್ತೀಚಿನ ವರ್ಷದಲ್ಲಿ ವನ್ಯಜೀವಿ – ಮಾನವ ಸಂಘರ್ಷ ಹೆಚ್ಚಾಗಿದೆ.

ಅಂಕಿ- ಅಂಶ

2023-24ರ ವರೆಗೆ ಮಾನವ – ಪ್ರಾಣಿ ಸಂಘರ್ಷದಲ್ಲಿ ಮೃತಪಟ್ಟವರು: 618

ಆನೆ ದಾಳಿಯಿಂದ ಸಾವನ್ನಪ್ಪಿದವರು: 416

ಚಿರತೆ ದಾಳಿಯಿಂದ ಸಾವನ್ನಪ್ಪಿದವರು: 38

ಕರಡಿ ದಾಳಿಯಿಂದ ಸಾವನ್ನಪ್ಪಿದವರು: 36

ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಸಿದ್ಧತೆ

ಮಾನವ– ಪ್ರಾಣಿ ಸಂಘರ್ಷ ಹೆಚ್ಚಾಗಿ ಇರುವ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ರೈಲ್ವೆ ಬ್ಯಾರಿಕೇಡ್‌ಗಳನ್ನು ನಿರ್ಮಿಸಲು ಸಮೀಕ್ಷೆ ನಡೆಸಲಾಗಿತ್ತು. 640 ಕಿ.ಮೀ ಉದ್ದಕ್ಕೆ ರೈಲ್ವೆ ಬ್ಯಾರಿಕೇಡ್‌ಗಳ ಅಗತ್ಯವಿರುವ ಅಂದಾಜು ಮಾಡಲಾಗಿತ್ತು. ಅದರ ಪ್ರಮಾಣ ಇದೀಗ 750 ಕಿ.ಮೀ.ಗೆ ಹೆಚ್ಚಿದ್ದು, ಬ್ಯಾರಿಕೇಡ್ ನಿರ್ಮಿಸುವ ಕಾರ್ಯ ಮುಂದುವರಿದಿದೆ ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

15 ವರ್ಷಗಳಿಂದ ಸಮಸ್ಯೆ

ಆನೆ ಹಾಗೂ ಕಾಡು ಪ್ರಾಣಿಗಳ ದಾಳಿಯನ್ನು ತಪ್ಪಿಸುವಂತೆ ಕಳೆದ 15 ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಸಮಾನ ಮನಸ್ಕರು ʼಪರಿಸರಕ್ಕಾಗಿ ನಾವುʼ ಎನ್ನುವ ಸಂಘಟನೆ ಹೆಸರಿನಲ್ಲಿ ಹೋರಾಟ ನಡೆಸುತ್ತಿದ್ದೇವೆ. ಎಲ್ಲಾ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದರೂ ಸಮಸ್ಯೆ ತಾರ್ಕಿಕ ಅಂತ್ಯ ಕಂಡಿಲ್ಲ ಎಂದು ಹಾಸನದ ಪರಿಸರವಾದಿ ಅತ್ತಿಹಳ್ಳಿ ದೇವರಾಜ್ ದೂರಿದರು.

ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಅವರು, ರಾಜಕೀಯ ಪಕ್ಷಗಳು ಲೋಕಸಭೆ ಚುನಾವಣಾ ಪ್ರಣಾಳಿಕೆಯಲ್ಲಿ ಮಾನವ- ವನ್ಯಜೀವಿ ಸಂಘರ್ಷ ವಿಷಯವನ್ನೂ ಪ್ರಸ್ತಾಪಿಸಬೇಕು. ಈ ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಬೇಕು ಎಂದು ಆಗ್ರಹಿಸಲಿದ್ದೇವೆ ಎಂದರು.


ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿಯ 8 ಹಳ್ಳಿಗಳಲ್ಲಿ ಕಾಡಾನೆ ಸಮಸ್ಯೆ ಇದೆ. ಆನೆಗಳ ಹಾವಳಿ ಹೆಚ್ಚುತ್ತಲ್ಲೇ ಇದೆ. ಈ ಭಾಗದಲ್ಲಿ ಜಮೀನು ಬಿಟ್ಟು ಕೊಡುತ್ತೇವೆ. ಆನೆ ಹಾವಳಿ ತಪ್ಪಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ, ಇದಕ್ಕೆ ಸರ್ಕಾರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದನೆ ಸಿಕ್ಕಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಭೇಟಿ ಮಾಡಿ ಅವರ ಗಮನಕ್ಕೂ ತರಲಾಗಿದೆ. ಇದೀಗ ಲೋಕಸಭೆ ಚುನಾವಣೆ ಎದುರಾಗಿದ್ದು, ವನ್ಯಜೀವಿ – ಮಾನವ ಸಂಘರ್ಷ ವಿಷಯ ಗಂಭೀರವಾಗಿ ಪರಿಗಣಿಸುವಂತೆ ರಾಜಕೀಯ ಪಕ್ಷಗಳಿಗೆ ಒತ್ತಾಯಿಸಲಿದ್ದೇವೆ ಎಂದು ಹೇಳಿದರು.

ಸಂಘರ್ಷ ತಡೆಗೆ ಕ್ರಮ

ಕರ್ನಾಟಕದಲ್ಲಿ ಮಾನವ– ವನ್ಯಜೀವಿ ಸಂಘರ್ಷ ತಡೆಗೆ ಕ್ರಮ ವಹಿಸಲಾಗಿದೆ ಎಂದು ಕರ್ನಾಟಕ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್. ಎನ್ ಅವರು ತಿಳಿಸಿದರು.

ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಅವರು, ಮಿತಿಮೀರಿದ ಅಭಿವೃದ್ಧಿಯಿಂದ ಮಾನವ-ವನ್ಯಜೀವಿಗಳ ಮುಖಾಮುಖಿ ಹೆಚ್ಚಾಗುತ್ತಿದೆ. ಅರಣ್ಯನಾಶದಿಂದಾಗಿ ಕೃಷಿ ಭೂಮಿಯ ಕಡೆ ವನ್ಯಜೀವಿಗಳು ವಲಸೆ ಬರುವ ಪರಿಸ್ಥಿತಿ ಎದುರಾಗಿದೆ. ಇದನ್ನು ತಡೆಯುವುದಕ್ಕೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಅರಣ್ಯ ಪ್ರದೇಶಗಳಲ್ಲಿ ಆಹಾರ ಮತ್ತು ನೀರಿನ ಕೊರತೆ, ಆಗಾಗ್ಗೆ ಎದುರಾಗುವ ಹವಾಮಾನ ಬದಲಾವಣೆ ಕಾಡು ಪ್ರಾಣಿಗಳು ನಗರ ಅಥವಾ ಕಾಡಂಚಿನ ಗ್ರಾಮಗಳಿಗೆ ಬರಲು ಕಾರಣವಾಗುತ್ತಿದೆ. ಅರಣ್ಯ ಅತಿಕ್ರಮಣವನ್ನು ತಡೆಗಟ್ಟಲು ಮತ್ತು ಮಾನವ-ಆನೆ ಸಂಘರ್ಷಗಳನ್ನು ತಗ್ಗಿಸಲು ರಾಜ್ಯ ಸರ್ಕಾರವು ಹಾಸನ, ಚಿಕ್ಕಮಗಳೂರು, ಮೈಸೂರು, ಕೊಡಗು, ಚಾಮರಾಜನಗರ, ರಾಮನಗರ ಮತ್ತು ಬೆಂಗಳೂರುಗಳಲ್ಲಿ ಜಿಲ್ಲಾ ಆನೆ ಕಾರ್ಯಪಡೆಗಳನ್ನು ಸ್ಥಾಪಿಸಿದೆ. ಇದಲ್ಲದೇ ಸ್ಥಳೀಯರ ಸಹಕಾರದೊಂದಿಗೆ ವನ್ಯಜೀವಿ - ಮಾನವ ಸಂಘರ್ಷ ತಪ್ಪಿಸುವ ಕೆಲಸ ನಡೆದಿದೆ ಎಂದರು.

Tags:    

Similar News