Tungabhadra Dam Gate Break| ತುಂಗ ಭದ್ರಾ ಜಲಾಶಯ ಕ್ರೆಸ್ಟ್‌ಗೇಟ್‌ ಹಾನಿ; ಧುಮ್ಮುಕ್ಕಿದ ನದಿ; ಪ್ರವಾಹದ ಭೀತಿ

ಆಗಸ್ಟ್‌ 11 ರ ಮುಂಜಾವ 19 ನೇ ಗೇಟ್ ಒಡೆದಿರುವುದರಿಂದ ನದಿ ನೀರಿನ ರಭಸ ಹೆಚ್ಕಾಗಿದೆ. ಹೆಚ್ಚಿನ ಅನಾಹುತ ತಪ್ಪಿಸುವ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳು ಇತರ ಗೇಟ್‌ಗಳನ್ನು ತೆರೆದು ನೀರಿನ ಒತ್ತಡ ಕಡಿಮೆ ಮಾಡಲು ಪ್ರಯತ್ನಿಸಿದ್ದಾರೆ. ಪ್ರಸ್ತುತ ಜಲಾಶಯದ ಹೊರಹರಿವು 1 ಲಕ್ಷ ಕ್ಯೂಸೆಕ್ ದಾಟಿದೆ.

Update: 2024-08-11 08:24 GMT

ರಾಜ್ಯದ ಬೃಹತ್ ಜಲಾಶಯಗಲ್ಲಿ ಒಂದಾಗಿರುವ ಹೊಸಪೇಟೆಯ ತುಂಗಭದ್ರಾ ಜಲಾಶಯದಲ್ಲಿ ಭಾರೀ ಅವಘಡ ಸಂಭವಿಸಿದ್ದು,  ಕ್ರೆಸ್ಟ್‌ಗೇಟ್ ಒಂದು ನದಿ ರಭಸಕ್ಕೆ ಕೊಚ್ಚಿ ಹೋಗಿದೆ. ತುಂಗಭದ್ರಾ ಅಣೆಕಟ್ಟಿನ ಗೇಟ್ ಒಡೆದು, ಪ್ರವಾಹದ ನೀರು ಕೆಳ ಪ್ರದೇಶಗಳಿಗೆ ಹರಿಯುತ್ತಿದ್ದು, ಪ್ರವಾಹದ ಭೀತಿ ಎದುರಾಗಿದೆ.  ನದಿಗೆ 1 ಲಕ್ಷ ಕ್ಯೂಸೆಕ್‌ಗೂ ಅಧಿಕ ಪ್ರಮಾಣದ ನೀರು ಹರಿಸಲಾಗುತ್ತಿದ್ದು,  ಪ್ರವಾಹ ಎಚ್ಚರಿಕೆ ನೀಡಲಾಗಿದೆ.

ಗೇಟ್ ನಂಬರ್ 19 ಒಡೆದುಹೋಗಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿ ತೀರದ ಜನರು ಜಾಗರೂಕರಾಗಿರಿ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಸುತ್ತುಮುತ್ತಲಿನ ಕಾಲುವೆಗಳು ಮತ್ತು ಹೊಳೆಗಳನ್ನು ದಾಟದಂತೆ ಎಚ್ಚರಿಕೆ ನೀಡಲಾಗಿದೆ. 70 ವರ್ಷಗಳ ಅಸ್ತಿತ್ವದಲ್ಲಿ ತುಂಗಭದ್ರಾ ಅಣೆಕಟ್ಟು ಅನುಭವಿಸಿದ ಮೊದಲ ಹಾನಿ ಇದಾಗಿದೆ. . 1953 ರಲ್ಲಿ ಕಾರ್ಯಾರಂಭ ಮಾಡಿದ ಅಣೆಕಟ್ಟು ಕರ್ನಾಟಕಕ್ಕೆ ಮಾತ್ರವಲ್ಲದೆ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೂ ನೀರನ್ನು ಒದಗಿಸುತ್ತದೆ.

ತುಂಗಭದ್ರಾ ನಂತರ  ಕೃಷ್ಣಾ ನದಿ ತೀರದ ನಿವಾಸಿಗಳು ಜಾಗೃತರಾಗಿರಲು ತಿಳಿಸಲಾಗಿದೆ.  1,633 ಅಡಿ ಎತ್ತರದಷ್ಟು ನೀರು ನಿಲ್ಲುವ ತುಂಗಭದ್ರಾ ಜಲಾಶಯವು ರಾಜ್ಯದ ಬೃಹತ್ ಜಲಾಶಯಗಳಲ್ಲಿ ಒಂದು. ಪ್ರಸ್ತುತ ಜಲಾಶಯವು ಭರ್ತಿಯಾಗಿದ್ದು, 105.78 ಟಿಎಂಸಿಯಷ್ಟು (ಪೂರ್ಣ ಸಾಮರ್ಥ್ಯಕ್ಕೆ) ನೀರು ನಿಂತಿತ್ತು. ಶನಿವಾರ (ಆಗಸ್ಟ್ 10) ಒಳಹರಿವು 40,925 ಕ್ಯೂಸೆಕ್ ಇತ್ತು. ಜಲಾಶಯಕ್ಕೆ 28,133 ಕ್ಯೂಸೆಕ್ ನೀರು ಹರಿಬಿಡಲಾಗುತ್ತಿತ್ತು. ಆಗಸ್ಟ್‌ 11 ರ ಮುಂಜಾವ  19 ನೇ ಗೇಟ್ ಒಡೆದಿರುವುದರಿಂದ ನದಿ ನೀರಿನ ರಭಸ ಹೆಚ್ಕಾಗಿದೆ.  ಹೆಚ್ಚಿನ ಅನಾಹುತ ತಪ್ಪಿಸುವ ದೃಷ್ಟಿಯಿಂದ  ಮುನ್ನೆಚ್ಚರಿಕೆ ಕ್ರಮವಾಗಿ  ಅಧಿಕಾರಿಗಳು ಇತರ ಗೇಟ್‌ಗಳನ್ನು ತೆರೆದು ನೀರಿನ ಒತ್ತಡ ಕಡಿಮೆ ಮಾಡಲು ಪ್ರಯತ್ನಿಸಿದ್ದಾರೆ.  ಪ್ರಸ್ತುತ ಜಲಾಶಯದ ಹೊರಹರಿವು 1 ಲಕ್ಷ ಕ್ಯೂಸೆಕ್ ದಾಟಿದೆ.

ತುಂಗಭದ್ರಾ ಜಲಾಶಯ ಯೋಜನೆಯು 1953 ರಲ್ಲಿ ನಿರ್ಮಾಣಗೊಂಡಿದ್ದು,  ಕರ್ನಾಟಕ ಮತ್ತು ಆಂಧ್ರ ಪ್ರದೇಶ ಸರ್ಕಾರಗಳು ಜಂಟಿಯಾಗಿ ಜಲಾಶಯದ ಆಡಳಿತ ಮತ್ತು ನಿರ್ವಹಣೆಯ ಜವಾವ್ದಾರಿ ಹೊತ್ತುಕೊಂಡಿವೆ. ಇದೀಗ ತುಂಡಾಗಿರುವ ಚೈನ್‌ಲಿಂಕ್‌ ಗೇಟ್‌ ಅನ್ನು 70 ವರ್ಷಗಳ ಹಿಂದೆ ಅಳವಡಿಸಲಾಗಿತ್ತು. ಒಂದು ಕಬ್ಬಿಣದ ಹಲಗೆಯನ್ನು ಮತ್ತೊಂದು ಕಬ್ಬಿಣದ ಹಲಗೆಗೆ ಬೆಸುಗೆ (ವೆಲ್ಡಿಂಗ್) ಹಾಕಿ ಚೈನ್‌ ಲಿಂಕ್ ಗೇಟ್ ರೂಪಿಸಲಾಗುತ್ತದೆ. ಇಂಥ ಬೆಸುಗೆ ಸಡಿಲವಾದ ಕಾರಣ ಈ ಅನಾಹುತ ಸಂಭವಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಮಾಹಿತಿ ತರಿಸಿಕೊಂಡ ಸಿಎಂ

ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ ಕಟ್ ಘಟನೆ ಕುರಿತಂತೆ ಜಲ ಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚರ್ಚೆ ನಡೆಸಿ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ.

ಮುಖ್ಯಮಂತ್ರಿಗಳು ಮಂಗಳವಾರ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಮುಖ್ಯಮಂತ್ರಿಗಳು ಭಾನುವಾರ ಬೆಳಗ್ಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಅವರೊಂದಿಗೆ ಮಾತುಕತೆ ನಡೆಸಿ ಸಂಪೂರ್ಣ ವಿವರ ಪಡೆದರು. ಯಾವುದೇ ಹಾನಿ ಸಂಭವಿಸದಂತೆ ಮುಂಜಾಗ್ರತೆ ವಹಿಸುವಂತೆ ಸೂಚಿಸಿದರು.

ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರೊಂದಿಗೂ ಸಿಎಂ ಚರ್ಚಿಸಿದರು.

ಆಂಧ್ರದಲ್ಲೂ ಆತಂಕ

ರಾಜ್ಯದ ಮಲೆನಾಡು ಪ್ರದೇಶಗಳಲ್ಲಿ ಭಾರೀ ಮಳೆಯ ನಂತರ 133 ಟಿಎಂಸಿ ಸಾಮರ್ಥ್ಯದ ತುಂಗಭದ್ರಾ ಅಣೆಕಟ್ಟಿನ ನೀರಿನ ಮಟ್ಟವನ್ನು ಹೆಚ್ಚಿಸಿದೆ. ಆಂಧ್ರ ಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (APSDMA) ರಂದು ಭಾನುವಾರ (ಆಗಸ್ಟ್ 11) ಕೃಷ್ಣಾ ನದಿ ತೀರದ ಜನರು ಗೇಟ್ ನಂಬರ್ ನಂತರ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ

 ಆಂಧ್ರ ಪ್ರದೇಶದ ಕರ್ನೂಲ್‌ ಜಿಲ್ಲೆಯ ಜನರು ಕೋಸಿರಿ, ಮಂತ್ರಾಲಯ, ನಂದಾವರಂ ಮತ್ತು ಕೌತಾಳಂನಲ್ಲಿ ಎಚ್ಚರಿಕೆ ವಹಿಸಬೇಕು. ಎಂದು APSDMA ವ್ಯವಸ್ಥಾಪಕ ನಿರ್ದೇಶಕ ಆರ್ ಕೂರ್ಮನಾಧ್ ಅವರು ಸುದ್ದಿ ವರದಿಗಳ ಪ್ರಕಾರ ತಿಳಿಸಿದ್ದಾರೆ. ಈ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಹದ ಎಚ್ಚರಿಕೆ ನೀಡಲಾಗಿದೆ.

Tags:    

Similar News