Trump Warning | ಟ್ರಂಪ್ ಎಚ್ಚರಿಕೆ: ಕರ್ನಾಟಕ ಫಾಕ್ಸ್‌ಕಾನ್ ಐಫೋನ್ ಘಟಕಕ್ಕೆ ಸಮಸ್ಯೆಯಿಲ್ಲ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೂ ಭಾರತದಲ್ಲಿ ಐಫೋನ್ ಬಿಡಿಭಾಗಗಳ ಉತ್ಪಾದನೆಗೂ ಸಂಬಂಧವಿಲ್ಲ. 50,000 ಉದ್ಯೋಗ ನಿರೀಕ್ಷೆಯ ದೇವನಹಳ್ಳಿ ಘಟಕ ಜೂನ್ ತಿಂಗಳಿಂದ ಅಧಿಕೃತವಾಗಿ ಆರಂಭವಾಗಲಿದೆ.;
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚೆಗೆ ಕತಾರ್‌ನ ದೋಹಾದಲ್ಲಿ ಆಪಲ್ ಕಂಪೆನಿ ಸಿಇಒ ಟಿಮ್ ಕುಕ್ ಜತೆಗಿನ ಭೇಟಿಯ ವೇಳೆ ʼಭಾರತದಲ್ಲಿ ಐಫೋನ್ ಉತ್ಪಾದನೆ ಕುರಿತಂತೆ ನೀಡಿದ ಹೇಳಿಕೆ ರಾಜ್ಯದ ಔದ್ಯೋಗಿಕ ಕ್ಷೇತ್ರದಲ್ಲಿ ಆತಂಕ ಸೃಷ್ಟಿಸಿತ್ತು. ಆದರೆ, ಕರ್ನಾಟಕ ಸರ್ಕಾರದ ಬೃಹತ್ ಕೈಗಾರಿಕಾ ಸಚಿವಾಲಯವು ಟ್ರಂಪ್ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ್ದು, ರಾಜ್ಯದಲ್ಲಿ ಐಫೋನ್ ಉತ್ಪಾದನಾ ಘಟಕಗಳಿಗೆ ಯಾವುದೇ ಸಮಸ್ಯೆ ಇಲ್ಲ. ಟ್ರಂಪ್ ಹೇಳಿಕೆಗೂ ಭಾರತದಲ್ಲಿ ಐಫೋನ್ ಬಿಡಿಭಾಗಗಳ ಉತ್ಪಾದನೆಗೂ ಸಂಬಂಧವಿಲ್ಲ. ರಾಜ್ಯದಲ್ಲಿ ಕಾರ್ಯಾರಂಭ ಮಾಡಿರುವ ಫಾಕ್ಸ್‌ಕಾನ್ ಕಂಪೆನಿ ಸುಗಮವಾಗಿ ಕಾರ್ಯ ನಿರ್ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ಮೇ 15 ರಂದು ದೋಹಾದಲ್ಲಿ ನಡೆದ ವ್ಯಾಪಾರ ಸಮ್ಮೇಳನದಲ್ಲಿ ಮಾತನಾಡಿದ್ದ ಡೊನಾಲ್ಡ್ ಟ್ರಂಪ್ ಅವರು ಭಾರತದಲ್ಲಿ ಐಫೋನ್ ಘಟಕ ಆರಂಭಿಸಬಾರದು ಎಂದು ಆ್ಯಪಲ್ ಸಿಇಒ ಟಿಮ್ ಕುಕ್ ಹೇಳಿದ್ದರು. ಅಮೆರಿಕಾ ಮಾರುಕಟ್ಟೆಗೆ ಭಾರತದಲ್ಲಿ ಐಫೋನ್‌ಗಳನ್ನು ತಯಾರಿಸುವುದಕ್ಕೆ ಅವರು ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದರು. ಬದಲಾಗಿ ಅಮೆರಿಕಾದಲ್ಲಿ ಉತ್ಪಾದನೆ ಹೆಚ್ಚಿಸಬೇಕು ಎಂದು ಸೂಚಿಸಿದ್ದರು. ಟ್ರಂಪ್ ಅವರ ಈ ಹೇಳಿಕೆಯು ಭಾರತದಲ್ಲಿನ ಉತ್ಪಾದನಾ ಯೋಜನೆಗಳ ಭವಿಷ್ಯದ ಬಗ್ಗೆ ಒಂದು ಕ್ಷಣ ಆತಂಕ ಮೂಡಿಸಿತ್ತು. ಪ್ರಮುಖವಾಗಿ ಕರ್ನಾಟಕ ಹಾಗೂ ತಮಿಳುನಾಡಿಗೆ ಇದು ಬೇಸರದ ಸಂಗತಿಯಾಗಿತ್ತು.
ಕರ್ನಾಟಕದಲ್ಲಿ ಸುಗಮ ಕಾರ್ಯಾಚರಣೆ
ಕರ್ನಾಟಕದಲ್ಲಿ ಆ್ಯಪಲ್‌ನ ಐಫೋನ್ ಉತ್ಪಾದನೆಗೆ ಸಂಬಂಧಿಸಿ ಎರಡು ಪ್ರಮುಖ ಘಟಕಗಳಿವೆ. ಬೆಂಗಳೂರು ಸಮೀಪದ ಕೋಲಾರ ಜಿಲ್ಲೆಯಲ್ಲಿರುವ ಟಾಟಾ ಎಲೆಕ್ಟ್ರಾನಿಕ್ಸ್ ಘಟಕವು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಕೇಂದ್ರವು ಹಿಂದೆ ವಿಸ್ಟ್ರಾನ್ ಕಂಪನಿಯ ಅಧೀನದಲ್ಲಿತ್ತು. ಎರಡನೇ ಪ್ರಮುಖ ಘಟಕವನ್ನು ಫಾಕ್ಸ್‌ಕಾನ್ ಕಂಪನಿಯು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ದೇವನಹಳ್ಳಿಯಲ್ಲಿ ಸ್ಥಾಪಿಸಿದೆ.
ದೇವನಹಳ್ಳಿಯ ಫಾಕ್ಸ್‌ಕಾನ್ ಘಟಕವು 300 ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಾಣವಾಗಿದ್ದು, ಇದಕ್ಕಾಗಿ ಸುಮಾರು 22,000 ಕೋಟಿ ರೂಪಾಯಿಗಳ ಬೃಹತ್ ಹೂಡಿಕೆ ಮಾಡಲಾಗಿದೆ. ಈ ಘಟಕದಿಂದ ಸುಮಾರು 50,000 ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಜೂನ್ 2025 ರಲ್ಲಿ ಇಲ್ಲಿ ಉತ್ಪಾದನೆ ಆರಂಭಗೊಳ್ಳುವ ಸಾಧ್ಯತೆಗಳಿದ್ದು, 2027ರ ವೇಳೆಗೆ ಪೂರ್ಣ ಪ್ರಮಾಣದ ಕಾರ್ಯಾಚರಣೆಗೆ ಬರಲಿದೆ ಎಂದು ರಾಜ್ಯ ಸರ್ಕಾರದ ಮೂಲಗಳು ಖಚಿತಪಡಿಸಿವೆ.
ಘಟಕದ ನಿರ್ಮಾಣ ಬಹುತೇಕ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಟ್ರಂಪ್ ಅವರ ಹೇಳಿಕೆಯಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಕರ್ನಾಟಕ ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.
ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, "ಎಲ್ಲವೂ ಸಿದ್ಧವಾಗಿದೆ. ಫಾಕ್ಸ್‌ಕಾನ್ ಘಟಕದಲ್ಲಿ ಅಗ್ನಿಶಾಮಕ ಸುರಕ್ಷತೆ ಮತ್ತು ಭದ್ರತಾ ಕ್ರಮಗಳು ಸೇರಿದಂತೆ ಕೆಲವು ಉಪಕ್ರಮಗಳನ್ನು ಅಂತಿಮಗೊಳಿಸಬೇಕಾಗಿದೆ. ಯೋಜನೆಯು ಶೀಘ್ರದಲ್ಲೇ ಪ್ರಾರಂಭವಾಗುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನಾನು ಇದಕ್ಕಾಗಿ ಕಾಯುತ್ತಿದ್ದೆ ಮತ್ತು ಇದು ಕರ್ನಾಟಕಕ್ಕೆ ಹೆಮ್ಮೆಯ ಕ್ಷಣವಾಗಿರುತ್ತದೆ" ಎಂದು ಹೇಳಿದ್ದಾರೆ.
ಫಾಕ್ಸ್‌ಕಾನ್ ಸಿಇಒ ಮತ್ತು ಅಧ್ಯಕ್ಷ ಲ್ಯೂ ಯಂಗ್ ವೇ ಅವರು ಬೆಂಗಳೂರು ಘಟಕ ವೀಕ್ಷಣೆಗೆ ಬಂದ ಸಂದರ್ಭದಲ್ಲಿ ಸ್ವಾಗತಿಸುತ್ತಿರುವ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ
ಉತ್ತರ ಕರ್ನಾಟಕದವರಿಗೂ ಉದ್ಯೋಗಾವಕಾಶ
ದೇವನಹಳ್ಳಿಯಲ್ಲಿ ಕಾರ್ಯಾರಂಭಿಸಿರುವ ಫಾಕ್ಸ್‌ಕಾನ್ ಕಂಪನಿಯಲ್ಲಿ ಉತ್ತರ ಕರ್ನಾಟಕದವರಿಗೂ ಉದ್ಯೋಗಾವಕಾಶ ಒದಗಿಸಲು ಸರ್ಕಾರ ನಿರ್ಧರಿಸಿದೆ. ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಡಿಪ್ಲೊಮಾ, ಐಟಿಐ ಹಾಗೂ ಎಂಜಿನಿಯರಿಂಗ್ ಪದವೀಧರರಿಗಾಗಿ ಉದ್ಯೋಗ ಮೇಳ ಆಯೋಜಿಸಿ ಉದ್ಯೋಗ ಒದಗಿಸುವ ಚಿಂತನೆ ಇದೆ.
ಫಾಕ್ಸ್ ಕಂಪೆನಿಯು 50 ಸಾವಿರ ಉದ್ಯೋಗಾವಕಾಶ ಒದಗಿಸಲಿದೆ. ಈ ಪೈಕಿ 10ಸಾವಿರ ಉದ್ಯೋಗಗಳನ್ನು ಉತ್ತರ ಕರ್ನಾಟಕದವರಿಗೆ ನೀಡಲಾಗುವುದು. ಉದ್ಯೋಗ ಮೇಳಗಳ ಮೂಲಕ ಹಂತ ಹಂತವಾಗಿ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಇತರೆ ರಾಜ್ಯಗಳಲ್ಲೂ ಐಫೋನ್ ಹೆಜ್ಜೆ
ಕರ್ನಾಟಕದ ಜೊತೆಗೆ, ತಮಿಳುನಾಡಿನಲ್ಲಿಯೂ ಐಫೋನ್ ಉತ್ಪಾದನಾ ಘಟಕಗಳು ಸಕ್ರಿಯವಾಗಿವೆ. ಶ್ರೀಪೆರಂಬದೂರಿನಲ್ಲಿರುವ ಫಾಕ್ಸ್‌ಕಾನ್ ಘಟಕದಲ್ಲಿ ಸುಮಾರು 40,000 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಚೆನ್ನೈ ಸಮೀಪದ ಪೆಗಾಟ್ರಾನ್ ಘಟಕವು ಈಗ ಟಾಟಾ ಎಲೆಕ್ಟ್ರಾನಿಕ್ಸ್ ಪಾಲುದಾರಿಕೆಯಲ್ಲಿ ಉತ್ಪಾದನೆ ನಡೆಸುತ್ತಿದೆ. ಹೊಸೂರಿನಲ್ಲಿ ಟಾಟಾ ಎಲೆಕ್ಟ್ರಾನಿಕ್ಸ್‌ನ ಮತ್ತೊಂದು ಘಟಕವು ಕಾರ್ಯಾಚರಣೆಯಲ್ಲಿದೆ.
ಆಂಧ್ರಪ್ರದೇಶದ ತಿರುಪತಿಯಲ್ಲಿ ಸನ್ನಿ ಒಪೊಟೆಕ್ ಕಂಪನಿ, ಕ್ಯಾಮೆರಾ ಮಾಡ್ಯೂಲ್‌ಗಳನ್ನು, ತಮಿಳುನಾಡಿನ ಒರಗಡಂನಲ್ಲಿ ಫಾಕ್ಸ್‌ಲಿಂಕ್ ಚಾರ್ಜಿಂಗ್ ಕೇಬಲ್‌ಗಳನ್ನು ತಯಾರಿಸುತ್ತಿವೆ. ಮಹಾರಾಷ್ಟ್ರದ ಪುಣೆಯಲ್ಲಿ ಜಬಿಲ್ ಕಂಪನಿ ಏರ್‌ಪಾಡ್ ಬಿಡಿಭಾಗಗಳನ್ನು ತಯಾರಿಸುತ್ತಿದ್ದು, ಶೀಘ್ರದಲ್ಲೇ ಏರ್‌ಪಾಡ್ ಉತ್ಪಾದನೆ ಆರಂಭಿಸುವ ಯೋಜನೆಯಲ್ಲಿದೆ. ತೆಲಂಗಾಣದಲ್ಲಿ ಫಾಕ್ಸ್‌ಕಾನ್ ಈಗಾಗಲೇ ಏರ್‌ಪಾಡ್‌ಗಳ ರಫ್ತು ಆಧಾರಿತ ಉತ್ಪಾದನೆ ಪ್ರಾರಂಭಿಸಿದೆ.
ಸರ್ಕಾರ ಮತ್ತು ಆ್ಯಪಲ್ ಸ್ಪಷ್ಟನೆ ಏನು?
ದೇವನಹಳ್ಳಿಯ ಫಾಕ್ಸ್‌ಕಾನ್ ಘಟಕವು ಉತ್ಪಾದನೆಗೆ ಸಿದ್ಧವಾಗಿದೆ ಎಂದು ಕರ್ನಾಟಕ ಸರ್ಕಾರದ ಮೂಲಗಳು ತಿಳಿಸಿವೆ. ಇದು ರಾಜ್ಯದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಗೆ ಪ್ರಮುಖ ಕೊಡುಗೆ ನೀಡಲಿದೆ. ಬೃಹತ್ ಕೈಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, "ಭಾರತವು ಮೊಬೈಲ್ ಉತ್ಪಾದನೆಯಲ್ಲಿ ಪ್ರಮುಖ ಕೇಂದ್ರವಾಗಿ ಬೆಳೆದಿದೆ. ಆ್ಯಪಲ್‌ನಂತಹ ಕಂಪನಿಗಳು ರಾಜಕೀಯ ಹೇಳಿಕೆಗಳ ಬದಲಿಗೆ ಜಾಗತಿಕ ಸ್ಪರ್ಧಾತ್ಮಕತೆಯ ಆಧಾರದ ಮೇಲೆ ತಮ್ಮ ಹೂಡಿಕೆ ನಿರ್ಧಾರ ತೆಗೆದುಕೊಳ್ಳುತ್ತವೆ," ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಭಾರತದಲ್ಲಿನ ತಮ್ಮ ಹೂಡಿಕೆ ಯೋಜನೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಆಪಲ್ ಕಂಪನಿಯ ಮೂಲಗಳು ದೃಢಪಡಿಸಿವೆ.
"ಭಾರತವು ನಮ್ಮ ಜಾಗತಿಕ ಪೂರೈಕೆ ಸರಪಳಿಯಲ್ಲಿ ಪ್ರಮುಖ ಭಾಗವಾಗಿ ಮುಂದುವರಿಯಲಿದೆ. ನಮ್ಮ ಉತ್ಪಾದನಾ ಯೋಜನೆಗಳು ಯಥಾವತ್ತಾಗಿವೆ," ಎಂದು ಆಪಲ್ ಪ್ರತಿನಿಧಿಗಳು ಭಾರತ ಸರ್ಕಾರಕ್ಕೆ ಭರವಸೆ ನೀಡಿದ್ದಾರೆ. ಈ ಹೇಳಿಕೆಗಳು ಟ್ರಂಪ್ ಅವರ ಒತ್ತಡದ ಹೊರತಾಗಿಯೂ ಭಾರತದಲ್ಲಿ ಆ್ಯಪಲ್ ಕಂಪನಿ ತನ್ನ ಉತ್ಪಾದನೆಯನ್ನು ಗಣನೀಯವಾಗಿ ವಿಸ್ತರಿಸುತ್ತಿದೆ.
ಚೀನಾದಲ್ಲಿನ ಉತ್ಪಾದನಾ ಸವಾಲುಗಳು, ಅಮೆರಿಕಾ-ಚೀನಾ ವ್ಯಾಪಾರ ಸಂಘರ್ಷಗಳ ಹಿನ್ನೆಲೆಯಲ್ಲಿ ಆ್ಯಪಲ್ ತನ್ನ ಜಾಗತಿಕ ಪೂರೈಕೆ ಸರಪಳಿಯನ್ನು ವೈವಿಧ್ಯಗೊಳಿಸುತ್ತಿದೆ. ಇದರ ಭಾಗವಾಗಿ ಭಾರತದಲ್ಲಿ ಉತ್ಪಾದನೆ ವಿಸ್ತರಿಸುತ್ತಿದೆ. ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ಫಾಕ್ಸ್‌ಕಾನ್ ಈ ವಿಸ್ತರಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ವಿಶ್ಲೇಷಕರ ಪ್ರಕಾರ, 2025ರ ವೇಳೆಗೆ ಭಾರತವು ಒಟ್ಟು ಐಫೋನ್ ಸಾಗಣೆಯಲ್ಲಿ ಶೇ. 20-25 ರಷ್ಟು ಪಾಲು ಹೊಂದುವ ನಿರೀಕ್ಷೆಯಿದೆ. ಇದು ಹಿಂದಿನ ವರ್ಷದ ಶೇ. 12-14 ಕ್ಕಿಂತ ಹೆಚ್ಚಳವಾಗಿರಲಿದೆ.
ಆ್ಯಪಲ್ ಕಂಪೆನಿ ಬಿಡಿಭಾಗಗಳ ಉತ್ಪಾದನೆ ಹಾಗೂ ಪೂರೈಕೆ ಸರಪಳಿಯಿಂದ ಭಾರತದಲ್ಲಿ ಸುಮಾರು 2 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಅಂದಾಜಿಸಲಾಗಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿಕೆಯಂತೆ, 2025ನೇ ಹಣಕಾಸು ವರ್ಷದಲ್ಲಿ ಭಾರತದಿಂದ 1.5 ಲಕ್ಷ ಕೋಟಿ ರೂಪಾಯಿ ಮೌಲ್ಯದ ಐಫೋನ್‌ಗಳನ್ನು ರಫ್ತು ಮಾಡಲಾಗಿದೆ.