ಆಗಸ್ಟ್ 5ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ಇಂದು ಸಭೆ; ಪರ್ಯಾಯ ವ್ಯವಸ್ಥೆಗೆ ಸರ್ಕಾರದ ಸಿದ್ಧತೆ

ಈ ಮಧ್ಯೆ, ಮುಷ್ಕರವನ್ನು ತಡೆಯುವ ಪ್ರಯತ್ನವಾಗಿ ಬಿಎಂಟಿಸಿಯು 'ಡ್ಯೂಟಿ ರೋಟಾ' ಕೌನ್ಸಿಲಿಂಗ್​ಗೆ ಕರೆ ನೀಡಿದೆ.;

Update: 2025-08-02 05:04 GMT

ಸಾರಿಗೆ ನೌಕರರು ಸರ್ಕಾರಕ್ಕೆ ಮುಷ್ಕರದ ಎಚ್ಚರಿಕೆ ನೀಡಿದ್ದಾರೆ. 

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ (ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ) ನೌಕರರು ಆಗಸ್ಟ್ 5 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ, ರಾಜ್ಯ ಸರ್ಕಾರವು ಮುಷ್ಕರವನ್ನು ಎದುರಿಸಲು ಸಜ್ಜಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಲು ಮುಂದಾಗಿದೆ.

ಮುಷ್ಕರದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಇಂದು (ಆಗಸ್ಟ್ 2) ಖಾಸಗಿ ಬಸ್ ಮಾಲೀಕರ ಸಂಘದೊಂದಿಗೆ ಸಭೆ ನಡೆಸುತ್ತಿದೆ. ಅಲ್ಲದೆ, ಸಾರಿಗೆ ಇಲಾಖೆಯ ಆಯುಕ್ತರು ಇಂದು ಮಧ್ಯಾಹ್ನ 12 ಗಂಟೆಗೆ ನೌಕರರ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ, ಮುಷ್ಕರವನ್ನು ಹಿಂಪಡೆಯುವಂತೆ ಮನವೊಲಿಸುವ ಪ್ರಯತ್ನ ಮಾಡಲಿದ್ದಾರೆ. ಒಂದು ವೇಳೆ ಮಾತುಕತೆ ವಿಫಲವಾದರೆ, ಸರ್ಕಾರಿ ಬಸ್​ಗಳನ್ನು ಓಡಿಸಲು ಖಾಸಗಿ ಚಾಲಕರನ್ನು ಬಳಸಿಕೊಳ್ಳುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

ಬಿಎಂಟಿಸಿ ನಡೆಗೆ ವಿರೋಧ

ಈ ಮಧ್ಯೆ, ಮುಷ್ಕರವನ್ನು ತಡೆಯುವ ಪ್ರಯತ್ನವಾಗಿ ಬಿಎಂಟಿಸಿಯು 'ಡ್ಯೂಟಿ ರೋಟಾ' ಕೌನ್ಸಿಲಿಂಗ್​ಗೆ ಕರೆ ನೀಡಿದೆ. ಆಗಸ್ಟ್ 4ರಿಂದ ಈ ಕೌನ್ಸಿಲಿಂಗ್ ನಡೆಸಲು ಮುಂದಾಗಿದ್ದು, ಸಾಮಾನ್ಯವಾಗಿ ವರ್ಷಕ್ಕೊಮ್ಮೆ ನಡೆಯುವ ಈ ಪ್ರಕ್ರಿಯೆಯನ್ನು ಆರು ತಿಂಗಳಲ್ಲೇ ಕರೆದಿರುವುದು ಮುಷ್ಕರ ಹತ್ತಿಕ್ಕುವ ತಂತ್ರ ಎಂದು ಸಾರಿಗೆ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಈ ಕ್ರಮವನ್ನು ಮುಂದೂಡುವಂತೆ ಕೆಎಸ್​​​ಆರ್​​ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಫೆಡರೇಷನ್ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದೆ.

ಸಾರಿಗೆ ನೌಕರರ ಪ್ರಮುಖ ಬೇಡಿಕೆಗಳು:

* 38 ತಿಂಗಳ ಬಾಕಿ ಇರುವ ವೇತನವನ್ನು ತಕ್ಷಣ ಪಾವತಿಸಬೇಕು.

* ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನ ನೀಡಬೇಕು.

* ನಿಗಮಗಳಲ್ಲಿ ಖಾಸಗೀಕರಣ, ಭ್ರಷ್ಟಾಚಾರ ಮತ್ತು ಕಾರ್ಮಿಕರ ಕಿರುಕುಳವನ್ನು ನಿಲ್ಲಿಸಬೇಕು.

* ನಗದು ರಹಿತ ವೈದ್ಯಕೀಯ ಸೌಲಭ್ಯವನ್ನು ಜಾರಿಗೊಳಿಸಬೇಕು.

* 2020 ಮತ್ತು 2021ರ ಮುಷ್ಕರಗಳ ವೇಳೆ ದಾಖಲಾದ ಎಲ್ಲಾ ಮೊಕದ್ದಮೆಗಳನ್ನು ಹಿಂಪಡೆಯಬೇಕು.

* ವಿದ್ಯುತ್ ಬಸ್ಗಳಿಗೆ ನಿಗಮದ ಚಾಲಕರನ್ನೇ ನಿಯೋಜಿಸಬೇಕು ಮತ್ತು ಅವುಗಳ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡುವುದನ್ನು ಕೈಬಿಡಬೇಕು.

Tags:    

Similar News