ಲೋಕಸಭೆಗೆ ಆಯ್ಕೆ | ಶಾಸಕ ಸ್ಥಾನಕ್ಕೆ ಹೆಚ್‌ ಡಿ ಕುಮಾರಸ್ವಾಮಿ ರಾಜೀನಾಮೆ

Update: 2024-06-15 08:09 GMT

ಕೇಂದ್ರದ ನೂತನ ಎನ್‌ಡಿಎ ಸರ್ಕಾರದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‌ ಡಿ ಕುಮಾರಸ್ವಾಮಿ ಇಂದು ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಚನ್ನಪಟ್ಟಣ ಕ್ಷೇತ್ರದಿಂದ 2023ರ ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಗೆಲುವು ಸಾಧಿಸುವ ಮೂಲಕ ಶಾಸಕರಾಗಿದ್ದರು ಆನಂತರ 2024ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಆಯ್ಕೆಯಾಗಿ ಕೇಂದ್ರ ಸಚಿವರಾಗಿರುವ ಅವರು ಸಂಸದ ಸ್ಥಾನ ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ. ಹಾಗಾಗಿ ಇಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರನ್ನು ಭೇಟಿಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಚನ್ನಪಟ್ಟಣ ವಿಧಾನಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ.

ಸಚಿವ ಹೆಚ್​ಡಿ ಕುಮಾರಸ್ವಾಮಿ ಅವರು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಿಪಿ ಯೋಗೇಶ್ವರ್ ವಿರುದ್ಧ‌ 15,215 ಮತಗಳಿಂದ ಗೆದ್ದಿದ್ದರು. ಒಟ್ಟು 95,892 ಮತಗಳನ್ನು ಪಡೆದಿದ್ದರು. ಬಿಜೆಪಿ ಅಭ್ಯರ್ಥಿ ಸಿಪಿ ಯೋಗೇಶ್ವರ್ 80,677 ಮತಗಳನ್ನು ತಮ್ಮದಾಗಿಸಿಕೊಂಡಿದ್ದರು. ಇನ್ನು, ಕಾಂಗ್ರೆಸ್​ ನ‌ ಗಂಗಾಧರ್ ಎಸ್ 15,344 ಮತ‌ಗಳನ್ನು ಪಡೆದಿದ್ದರು.

ಇದೀಗ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್​ ಪಕ್ಷದ ವರಿಷ್ಠ ಎಚ್​ ಡಿ ಕುಮಾರಸ್ವಾಮಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ತೀವ್ರ ಜಿದ್ದಾಜಿದ್ದಿಯಲ್ಲಿ ಅವರು ಕಾಂಗ್ರೆಸ್​ ಅಭ್ಯರ್ಥಿ ಸ್ಟಾರ್​ ಚಂದ್ರು ವಿರುದ್ಧ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಭಾರೀ ಕೈಗಾರಿಕಾ ಸಚಿವರಾಗಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ವಿಜೇತರಾಗಿ ಸಂಸತ್‌ ಗೆ ಆಯ್ಕೆಯಾಗಿರುವ ಮತ್ತೋರ್ವ ಶಾಸಕ ಇ. ತುಕಾರಾಂ ಅವರು ಬಳ್ಳಾರಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರು ಕಳೆದ ವಿಧಾನಸಭೆ ಚುನಾವನೆಯಲ್ಲಿ ಬಳ್ಳಾರಿಯಿಂದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿ ಜಯ ಸಾಧಿಸಿದ್ದರು. ಇದೀಗ ಸಂಸದರಾಗಿ ಆಯ್ಕೆಯಾಗಿ, ಸಂಸತ್‌ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಶುಕ್ರವಾರ ಬೆಂಗಳೂರಿಗೆ ಮರಳಿ ರಾಜೀನಾಮೆ ನೀಡಿದ್ದು, ವಿಧಾನಸಭಾಧ್ಯಕ್ಷರ ಅನುಮತಿ ಮೇರೆಗೆ ನಿನ್ನೆಯೇ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ.

ಈ ತುಕಾರಾಂ ಕೂಡ ರಾಜೀನಾಮೆ

ಸಂಡೂರು ಕ್ಷೇತ್ರದಿಂದ ಸತತ ನಾಲ್ಕು ಬಾರಿ ಕಾಂಗ್ರೆಸ್‌‍ ಶಾಸಕರಾಗಿ ಆಯ್ಕೆಯಾಗಿದ್ದ ಈ ತುಕಾರಾಂ ಅವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಶ್ರೀರಾಮುಲು ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದರು. ಶ್ರೀರಾಮುಲು ವಿರುದ್ಧ 98,992 ಮತಗಳಿಂದ ತುಕಾರಾಂ ಜಯಭೇರಿ ಭಾರಿಸಿದ್ದರು. ಕಾಂಗ್ರೆಸ್‌ನ ಇ. ತುಕಾರಾಮ್‌ ಅವರು 7,30,845 ಮತಗಳು ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ಶ್ರೀರಾಮುಲಗೆ 6,31,853 ಮತಗಳು ಬಂದಿದ್ದವು.

ಅವರೂ ಕೂಡ ಶಾಸಕ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ.

ಇದೇ ರೀತಿ ಹಾವೇರಿ ಲೋಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿರುವ ಮಾಜಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಕೂಡಾ ಯಾವುದೇ ಕ್ಷಣದಲ್ಲಿ ತಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಪ್ರಸ್ತುತ ಅವರು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.

ನಿಯಮಗಳ ಪ್ರಕಾರ ಯಾವುದೇ ಒಬ್ಬ ಅಭ್ಯರ್ಥಿ ಏಕಕಾಲಕ್ಕೆ ಎರಡು ಸದನಗಳ ಸದಸ್ಯರಾಗುವಂತಿಲ್ಲ. ಆರು ತಿಂಗಳೊಳಗೆ ಯಾವುದಾದರೂ ಒಂದು ಸ್ಥಾನಕ್ಕೆ ರಾಜೀನಾಮೆ ನೀಡಿ, ಒಂದು ಸದನದ ಸದಸ್ಯರಾಗಬೇಕೆಂಬ ನಿಯಮವಿದೆ. ತೆರವಾಗಲಿರುವ ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳಿಗೆ ಸದ್ಯದಲ್ಲೇ ಕೇಂದ್ರ ಚುನಾವಣಾ ಆಯೋಗ ಉಪಚುನಾವಣೆಗೆ ದಿನಾಂಕ ಪ್ರಕಟಿಸುವ ಸಾಧ್ಯತೆ ಇದೆ.

Tags:    

Similar News