ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೈಸೂರಿನ ಮೂವರು ಯುವತಿಯರು ಸಾವು

ವಾರಾಂತ್ಯದ ವಿನೋದಕ್ಕೆಂದು ರೆಸಾರ್ಟ್‌ಗೆ ಬಂದಿದ್ದ ಮೂವರು ಯುವತಿಯರು ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿರುವ ಧಾರುಣ ಘಟನೆ ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.;

Update: 2024-11-17 12:42 GMT
ಯುವತಿಯರು ಸಾವಿಗೀಡಾದ ಈಜುಕೊಳ

ವಾರಾಂತ್ಯದ ವಿನೋದಕ್ಕೆಂದು ರೆಸಾರ್ಟ್‌ಗೆ ಬಂದಿದ್ದ ಮೂವರು ಯುವತಿಯರು ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೈಸೂರು ಮೂಲದ ಮೂವರು ಸ್ನೇಹಿತರು  ಮಂಗಳೂರು ಕಡೆಗೆ ಪ್ರವಾಸಕ್ಕೆಂದು ಆಗಮಿಸಿ ರೆಸಾರ್ಟ್‌ನಲ್ಲಿ ತಂಗಿದ್ದರು. ಅವರೆಲ್ಲರೂ ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳು. ಭಾನುವಾರ ಆಟವಾಡಲು ಸ್ವಿಮ್ಮಿಂಗ್ ಪೂಲ್‌ಗೆ ಇಳಿದ  ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. 

ಮೈಸೂರಿನ ವಿಜಯನಗರದ ಹೆಬ್ಬಾಳ ಎರಡನೇ ಹಂತದಲ್ಲಿರುವ ದೇವರಾಜ್ ಮೊಹಲ್ಲಾದ ಕೀರ್ತನಾ ಎನ್ (21), ಮೈಸೂರಿನ ಕುರಿಬರಹಳ್ಳಿಯ 4ನೇ ಕ್ರಾಸ್‌ನ ನಿಶಿತಾ ಎಂ ಡಿ (21) ಮತ್ತು ಮೈಸೂರಿನ ಕೆಆರ್ ಮೊಹಲ್ಲಾದ ರಾಮಾನುಜ ರಸ್ತೆಯ ಪಾರ್ವತಿ ಎಸ್ (20) ಮೃತಪಟ್ಟವರು. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸರಿಯಾಗಿ ಈಜು ಬರದೇ ನೀರಿಗಿಳಿದಿದ್ದರು  

ಮಂಗಳೂರಿನ ಸೋಮೇಶ್ವರ ಗ್ರಾಮದ ಪೆರಿಬೈಲ್‌ನ ಬಟ್ಟಪ್ಪಾಡಿ ಕ್ರಾಸ್ ರಸ್ತೆಯಲ್ಲಿರುವ ವಾಜ್ಕೊ ರೆಸಾರ್ಟ್‌ನಲ್ಲಿ ಭಾನುವಾರ ಬೆಳಗ್ಗೆ 10.05ಕ್ಕೆ ಈ ಘಟನೆ ನಡೆದಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ತಿಳಿಸಿದ್ದಾರೆ. ಮೂವರು ಯುವತಿಯರು ನವೆಂಬರ್ 16 ರಂದು ರೆಸಾರ್ಟ್ ತಲುಪಿದ್ದು, ರಾತ್ರಿ ಅಲ್ಲಿಯೇ ತಂಗಿದ್ದರು. ಭಾನುವಾರ ಬೆಳಗ್ಗೆ ಬೆಳಿಗ್ಗೆ 10 ಗಂಟೆಗೆ ಮೂವರು ಯುವತಿಯರು ಈಜುಕೊಳಕ್ಕೆ ಇಳಿಸಿದ್ದಾರೆ. ಯುವತಿಯರು ಈಜುಕೊಳದ ನೀರಿನ ಕಡೆಗೆ ಮೊಬೈಲ್ ಫೋನ್‌ನ ವಿಡಿಯೋ ಕ್ಯಾಮೆರಾ ಆನ್ ಮಾಡಿ ಈಜುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಈ ವೇಳೆ ಕೊಳದ ಒಂದು ಬದಿ ಆರು ಅಡಿಯಷ್ಟು ಆಳವಿದ್ದು, ಆಯತಪ್ಪಿ ಒಬ್ಬಳು ಮುಳುಗಿದ್ದಾಳೆ. ಆಕೆಯ ರಕ್ಷಣೆಗೆ ತೆರಳಿದ ಉಳಿದ ಇಬ್ಬರೂ ಮುಳುಗಿ  ಮೃತಪಟ್ಟಿದ್ದಾರೆ ಸಾಧ್ಯತೆ ಇದೆ ಎಂದು ಅನುಪಮ್ ಅಗರವಾಲ್ ತಿಳಿಸಿದ್ದಾರೆ.

ರಕ್ಷಕರೇ ಇಲ್ಲ 

ಸಾಮಾನ್ಯವಾಗಿ ರೆಸಾರ್ಟ್‌ಗಳಲ್ಲಿನ ಈಜುಕೊಳಗಳ ಬಳಿ ಜೀವ ರಕ್ಷಕ ಸಾಧನಗಳನ್ನುಗಾರ್ಡ್‌ಗಳನ್ನು ನಿಯೋಜಿಸಿರುತ್ತಾರೆ. ಕೊಳದ ಆಳವನ್ನು ಸ್ಪಷ್ಟವಾಗಿ ನಮೂದಿಸಿ ಸುರಕ್ಷತಾ ಪರಿಸ್ಥಿತಿಗಳನ್ನು ವಿವರಿಸುತ್ತಾರೆ. ಆದರೆ ಘಟನಾ ಸ್ಥಳದಲ್ಲಿ ಜೀವರಕ್ಷಕ ಸಾಧನಗಳು ಇಲ್ಲದೇ ಇರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಕೊಳದ ಆಳವನ್ನು ಕೂಡ ಸ್ಥಳದಲ್ಲಿ ನಮೂದಿಸಿಲ್ಲ. ರೆಸಾರ್ಟ್ ಅಧಿಕಾರಿಗಳ ಕಡೆಯಿಂದ ಕೆಲವು ಲೋಪಗಳಾಗಿವೆ.  ಘಟನೆ ವೇಳೆ ರೆಸಾರ್ಟ್‌ನಲ್ಲಿ ಏಳು ನೌಕರರು ಇದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಹುಡುಗಿಯರು ಅಲಾರಾಂ ಒತ್ತಿದರೂ ಅವರಲ್ಲಿ ಯಾರೂ ಸಹಾಯಕ್ಕಾಗಿ ಧಾವಿಸಿಲ್ಲ. ಘಟನೆಯ ವೇಳೆ ರೆಸಾರ್ಟ್‌ನಲ್ಲಿ ಹೆಚ್ಚಿನ ಸಿಬ್ಬಂದಿ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ. 

ಈ ಕುರಿತು ಮಾತನಾಡಿದ ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್, ಪೊಲೀಸರು ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿ, ರೆಸಾರ್ಟ್‌ಗೆ ಸೀಲ್ ಹಾಕಲಾಗುವುದು. ರೆಸಾರ್ಟ್‌ನಲ್ಲಿರುವ ಎಲ್ಲಾ ಅತಿಥಿಗಳನ್ನು ಹೊರಕ್ಕೆ ಕಳುಹಿಸಲಾಗಿದೆ. ಸ್ಥಳೀಯ ಸಂಸ್ಥೆಯಿಂದ ನೀಡಲಾಗುವ ಟ್ರೇಡ್ ಲೈಸೆನ್ಸ್ ಮತ್ತು ಇತರೆ ಪರವಾನಗಿಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. 

Tags:    

Similar News