Belagavi |ಕೃಷಿ ಹೊಂಡದಲ್ಲಿ ಮುಳುಗಿ ಮೂವರು ಬಾಲಕರು ಸಾವು; ಮುಗಿಲು ಮುಟ್ಟಿದ ಪೋಷಕರ ಆಕ್ರಂಧನ
ಜಮೀನಿನ ಮಾಲೀಕ ಸಂಜೆ ಕೃಷಿ ಹೊಂಡದ ಬಳಿ ಸೈಕಲ್ ಇರುವುದನ್ನು ಗಮನಿಸಿ ಪರಿಶೀಲಿಸಿದಾಗ ಮೂವರು ಬಾಲಕರ ಮೃತದೇಹಗಳು ಕಂಡುಬಂದಿವೆ.;
ಬಿಸಿಲ ಬೇಗೆಯಿಂದ ತಣಿಸಿಕೊಳ್ಳುವ ಜತೆಗೆ ಕೃಷಿಹೊಂಡದಲ್ಲಿ ಈಜು ಕಲಿಯಲು ಹೋಗಿ ಮೂವರು ಶಾಲಾ ಬಾಲಕರು ನೀರಿನಲ್ಲಿ ಮುಳಗಿ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ.
ತಾಲೂಕಿನ ಇಂಗಳಿ ಗ್ರಾಮದ ಬಾಲಕರಾದ ಪೃಥ್ವಿರಾಜ್ ಕೆರಬಾ (13), ಅಥರ್ವಾ ಸೌಂದಲಗೆ (15), ಸಮರ್ಥ ಗಡಕರಿ (13) ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟವರು.
ಗ್ರಾಮದ ಹೊರವಲಯದಲ್ಲಿರುವ ಜಮೀನಿನೊಂದರ ಕೃಷಿ ಹೊಂಡದಲ್ಲಿ ಈಜು ಕಲಿಯಲು ಬಾಲಕರು ಸೈಕಲ್ ನಲ್ಲಿ ತೆರಳಿದ್ದರು. ಕೃಷಿ ಹೊಂಡದ ಆಳ ಗಮನಿಸದೇ ನೀರಿಗೆ ಇಳಿದಾಗ ಈಜು ಬಾರದೇ ಮುಳುಗಿಮೃತಪಟ್ಟಿದ್ದಾರೆ ಎನ್ನಲಾಗಿದೆ.
ಜಮೀನಿನ ಮಾಲೀಕ ಸಂಜೆ ಕೃಷಿ ಹೊಂಡದ ಬಳಿ ಸೈಕಲ್ ಇರುವುದನ್ನು ಗಮನಿಸಿ ಪರಿಶೀಲಿಸಿದಾಗ ಮೂವರು ಬಾಲಕರ ಮೃತದೇಹಗಳು ಕಂಡುಬಂದಿವೆ.
ತಕ್ಷಣವೇ ಪೊಲೀಸರು ಹಾಗೂ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಅಂಕಲಿ ಠಾಣೆ ಪೊಲೀಸರು ಮೃತದೇಹಗಳನ್ನು ಹೊರ ತೆಗೆದರು. ಸ್ಥಳದಲ್ಲಿ ಮೃತ ಬಾಲಕರ ಸಂಬಂಧಿಕರು ಹಾಗೂ ಪೋಷಕರ ಆಕ್ರಂಧನ ಮುಗಿಲು ಮುಟ್ಟಿತ್ತು.
ಶಾಲೆಗಳಿಗೆ ಬೇಸಿಗೆ ರಜೆ ಇದ್ದುದರಿಂದ ಬಾಲಕರು ಈಜು ಕಲಿಯಲು ತೆರಳಿದ್ದರು. ಕೃಷಿ ಹೊಂಡಕ್ಕೆ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದಿರುವುದೇ ಅವಘಡಕ್ಕೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.