ಸಿಎಂ ಮನೆಗೆ ಹೋಗುವ ಕಾಲ ಬಂದಿದೆ: ಛಲವಾದಿ ನಾರಾಯಣಸ್ವಾಮಿ

ಬಿಜೆಪಿಯಲ್ಲಿ ಯೋಗ ನಡೆಯುವುದಿಲ್ಲ; ಯೋಗ್ಯತೆಗೆ ಅವಕಾಶ ಕೊಡುತ್ತಾರೆ ಎಂದು ರಾಜ್ಯ ವಿಧಾನಪರಿಷತ್ತಿನ ನೂತನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಹೇಳಿದ್ದಾರೆ.

Update: 2024-07-23 11:58 GMT
ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ
Click the Play button to listen to article

ಬಿಜೆಪಿಯಲ್ಲಿ ಯೋಗ ನಡೆಯುವುದಿಲ್ಲ; ಯೋಗ್ಯತೆಗೆ ಅವಕಾಶ ಕೊಡುತ್ತಾರೆ ಎಂದು ರಾಜ್ಯ ವಿಧಾನಪರಿಷತ್ತಿನ ನೂತನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.

ಹೊಸ ಹುದ್ದೆಗೆ ನೇಮಕಗೊಂಡ ಬಳಿಕ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನಕ್ಕೆ ಇಂದು ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಇಂಥ ಸ್ಥಾನಕ್ಕೆ ಬರಲು ಕಾಂಗ್ರೆಸ್ಸಿನಲ್ಲಿ ಯೋಗ ಮತ್ತು ಕೆಲವೊಂದು ವಿದ್ಯೆಗಳೂ ಬೇಕು ಎಂದು ತಿಳಿಸಿದರು. ಪಕ್ಷ ನಿಷ್ಠೆ, ಬದ್ಧತೆಯನ್ನು ಗುರುತಿಸಿ ನನಗೆ ಈ ಮಹತ್ವದ ಜವಾಬ್ದಾರಿ ನೀಡಿದ್ದಾರೆ ಎಂದು ಹೇಳಿದರು.

ತಳ ಸಮುದಾಯಗಳನ್ನು ಸಂಘಟಿಸಿ ಪಕ್ಷ ಸಂಘಟನೆಗೆ ಶ್ರಮಿಸುವೆ ಎಂದು ಅವರು ತಿಳಿಸಿದರು. ಸರಕಾರ ಮಾಡುವ ತೊಂದರೆ, ನ್ಯೂನತೆಗಳನ್ನು ಸಮಾಜಕ್ಕೆ ತಿಳಿಸುವೆ. ಪರಿಶಿಷ್ಟ ಜಾತಿ, ಪಂಗಡಗಳಿಗೆ ಮಾಡಿದ ಅನ್ಯಾಯದ ವಿರುದ್ಧ ಹೋರಾಟ ಮಾಡಲಿದ್ದೇವೆ ಎಂದು ಪ್ರಕಟಿಸಿದರು. ಈ ಜವಾಬ್ದಾರಿ ಕೊಟ್ಟ ಪಕ್ಷದ ಮುಖಂಡರಿಗೆ, ಇದಕ್ಕೆ ಕಾರಣಕರ್ತರಾದ ಪರಿಶಿಷ್ಟ ಸಮುದಾಯದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.

ಖಜಾನೆ ಲೂಟಿ ಮಾಡುವುದು, ಪರಿಶಿಷ್ಟರ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದ ಹಣವನ್ನು ಖಾಸಗಿ ವ್ಯಕ್ತಿಯ ಖಾತೆಗೆ ವರ್ಗಾಯಿಸಿ, ಹಣ ಪಡೆದು ಬಳಸಿಕೊಳ್ಳುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಗೊತ್ತಿದೆ. ಈಗ ಸಿಕ್ಕಿಬಿದ್ದಿದ್ದಾರೆ. ನಾವು ನೂರು ಹೋರಾಟ ಮಾಡಿದರೆ, ಅವರು ಹುಡುಕಿ ಒಂದಾದರೂ ಹೋರಾಟ ಮಾಡಬೇಕಲ್ಲವೇ? ಅದಕ್ಕಾಗಿಯೇ ಇವತ್ತು ಇ.ಡಿ. ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅದರಲ್ಲಿ ಹುರುಳಿಲ್ಲ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ಕೊಟ್ಟರು.

ಇ.ಡಿ., ಸಿಬಿಐ ತಂದದ್ದು ಕಾಂಗ್ರೆಸ್ ಸರಕಾರ ಅಲ್ಲವೇ? ತಂದ ಮೇಲೆ ನೀವು ಕೆಲಸ ಮಾಡಬೇಡಿ ಎನ್ನುವುದಾದರೆ, ಆ ಮಾತನಾಡಲು ಅವರಿಗೆ ಏನು ಯೋಗ್ಯತೆ ಇದೆ ಎಂದು ಕೇಳಿದರು. ಸಿದ್ದರಾಮಯ್ಯನವರು ಮನೆಗೆ ಹೋಗುವ ಕಾಲ ಬಂದಿದೆ. ಅದಕ್ಕಾಗಿ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂದು ನುಡಿದರು.

ಸಿದ್ದರಾಮಯ್ಯರಿಗೆ ಧನ್ಯವಾದ ಹೇಳಲೇಬೇಕು..

ಯಾರೂ ಸಿದ್ದರಾಮಯ್ಯ ಅವರನ್ನು ರಕ್ಷಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ನಾಯಕರೂ ಏನೂ ಮಾಡಲಾಗದು. ಅವರು ಮನೆಗೆ ಹೋಗುವ ಕಾಲ ಬಂದಿದೆ ಎಂದರಲ್ಲದೆ, ಕಳ್ಳ ಮನೆಗೆ ನುಗ್ಗಿದ ಮೇಲೆ ಎಷ್ಟು ಕದ್ದ ಎಂಬುದು ಪ್ರಶ್ನೆಯಲ್ಲ. ಹಿಂದಿನ ಬಾಗಿಲಿಂದ ಬಂದನೇ? ಮುಂದಿನ ಬಾಗಿಲಿಂದ ನುಗ್ಗಿದನೇ ಎಂಬ ಪ್ರಶ್ನೆಯಿಲ್ಲ. ಕದ್ದಿದ್ದು ನಿಜ. ಲೂಟಿ ಆಗಿರುವುದು ನಿಜ ಎಂದಿದ್ದಾರಲ್ಲವೇ; ಅದಕ್ಕಂತೂ ಅವರಿಗೆ ಧನ್ಯವಾದ ಹೇಳಲೇಬೇಕು ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.

ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಬಾಲಗಂಗಾಧರನಾಥ ತಿಲಕ್ ಅವರ ಜನ್ಮದಿನದ ಸಂದರ್ಭದಲ್ಲಿ ನಾವೆಲ್ಲರೂ ಅವರನ್ನು ಸ್ಮರಿಸುತ್ತಿದ್ದೇವೆ. ತಿಲಕ್ ಅವರು ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸಲು ಪ್ರೇರಕರು ಎಂದು ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು ತಿಳಿಸಿದರು. ಸ್ವಾತಂತ್ರ್ಯದ ಹೋರಾಟಕ್ಕೆ ಅವರು ವೇಗ ನೀಡಿದ್ದರು ಎಂದು ಹೇಳಿದರು.

ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನೇಮಕವು ಬಿಜೆಪಿಯ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಮಾತಿಗೆ ಪೂರಕ. ಛಲವಾದಿ ಅವರಿಗೆ ಅರ್ಹತೆಯ ಆಧಾರದಲ್ಲಿ ಈ ಹುದ್ದೆ ಲಭಿಸಿದೆ ಎಂದು ಶುಭ ಹಾರೈಸಿದರು.

ಮಾಜಿ ಶಾಸಕ ಎನ್.ಮಹೇಶ್ ಅವರು, ಛಲವಾದಿ ನಾರಾಯಣಸ್ವಾಮಿ ಅವರ ಆಯ್ಕೆಗಾಗಿ ಎಲ್ಲ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರು. ಛಲವಾದಿಯವರು ದಲಿತರು, ಶೋಷಿತರ ಪರವಾಗಿ ಕಳೆದ 40 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದವರು. ಅವರ 40 ವರ್ಷಗಳ ಹೋರಾಟಕ್ಕೆ ಬಿಜೆಪಿ ಗೌರವ, ನ್ಯಾಯ ಮತ್ತು ಮರ್ಯಾದೆಯನ್ನು ನೀಡಿದೆ ಎಂದು ತಿಳಿಸಿದರು.

Tags:    

Similar News