The Federal Explainer | ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ | ಏನಿದು ಅಕ್ರಮ? ಹೇಗಾಯ್ತು?

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಪಿ ಚಂದ್ರಶೇಖರನ್‌ ಆತ್ಮಹತ್ಯೆ ಮತ್ತು ನಿಗಮದ 90 ಕೋಟಿ ರೂಪಾಯಿ ಅಕ್ರಮ ವರ್ಗಾವಣೆ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಪ್ರತಿಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಬಿ ನಾಗೇಂದ್ರ ಅವರ ರಾಜೀನಾಮೆಗೆ ಪಟ್ಟು ಹಿಡಿದಿವೆ.

Update: 2024-06-02 12:45 GMT

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಪಿ ಚಂದ್ರಶೇಖರನ್‌ ಆತ್ಮಹತ್ಯೆ ಮತ್ತು ನಿಗಮದ 90 ಕೋಟಿ ರೂಪಾಯಿ ಅಕ್ರಮ ವರ್ಗಾವಣೆ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಪ್ರತಿಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಬಿ ನಾಗೇಂದ್ರ ಅವರ ರಾಜೀನಾಮೆಗೆ ಪಟ್ಟು ಹಿಡಿದಿವೆ.

ನಿಗಮದಲ್ಲಿ ನಡೆದಿರುವ ಅಕ್ರಮ ಹಣಕಾಸು ವರ್ಗಾವಣೆಯ ಕುರಿತು ಆರು ಪುಟಗಳ ಡೆತ್‌ ನೋಟ್‌ ಬರೆದಿಟ್ಟು ಮೇ 26ರಂದು ಅಧೀಕ್ಷಕ ಪಿ ಚಂದ್ರಶೇಖರನ್‌ ಶಿವಮೊಗ್ಗದ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಆತ್ಮಹತ್ಯೆ ಮತ್ತು ಸುದೀರ್ಘ ಡೆತ್‌ನೋಟ್‌ ಮೂಲಕ ಬಹುಕೋಟಿ ಹಗರಣ ಬಯಲಿಗೆ ಬಂದಿದೆ.

ಇದೀಗ ಬಿಜೆಪಿ ಮತ್ತು ಜೆಡಿಎಸ್‌ ಸೇರಿದಂತೆ ಪ್ರತಿಪಕ್ಷಗಳು ಹಣ ವರ್ಗಾವಣೆಯಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ ನಾಗೇಂದ್ರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವಿದೆ. ಹಾಗಾಗಿ ಅವರು ಕೂಡಲೇ ರಾಜೀನಾಮೆ ನೀಡಬೇಕು ಮತ್ತು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸುತ್ತಿವೆ.

ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿರುವ ಈ ಹಗರಣ ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಭಾರೀ ಮುಜಗರ ತಂದಿದ್ದು, ಸ್ವತಃ ಮುಖ್ಯಮಂತ್ರಿಗಳೇ ಪ್ರತಿಪಕ್ಷಗಳ ವಾಗ್ದಾಳಿಗೆ ಈಡಾಗುತ್ತಿದ್ದಾರೆ. ಆ ಹಿನ್ನೆಲೆಯಲ್ಲಿಯೇ ಅವರು ಪ್ರಕರಣದ ತನಿಖೆಗೆ ಎಸ್‌ಐಟಿ ತನಿಖಾ ತಂಡ ರಚಿಸಿ ಪ್ರಕರಣದ ತನಿಖೆಗೆ ಚಾಲನೆ ನೀಡಿದ್ದಾರೆ. ಜೊತೆಗೆ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಕೂಡ ಅವರು ಸ್ಪಷ್ಟಪಡಿಸಿದ್ದಾರೆ.

ಅಷ್ಟಕ್ಕೂ ಈ ಪ್ರಕರಣವೇನು? ಶಿವಮೊಗ್ಗದಲ್ಲಿ ನಡೆದ ಆತ್ಮಹತ್ಯೆಗೂ ವಾಲ್ಮೀಕಿ ನಿಗಮದಲ್ಲಿ ನಡೆದ ಬಹುಕೋಟಿ ಅಕ್ರಮಕ್ಕೂ ಏನು ಸಂಬಂಧ? ಪ್ರತಿಪಕ್ಷಗಳ ವಾದವೇನು? ಪ್ರಕರಣದಲ್ಲಿ ಯಾರು ಯಾರೆಲ್ಲಾ ಭಾಗಿಯಾದ ಆರೋಪ ಕೇಳಿಬಂದಿದೆ? ಎಂಬ ವಿವರಗಳು ಇಲ್ಲಿವೆ.

ಪ್ರಕರಣವೇನು? ಬೆಳಕಿಗೆ ಬಂದಿದ್ದು ಹೇಗೆ?

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗಾಗಿ ಯೋಜನೆ ರೂಪಿಸುವ ಮತ್ತು ಅನುಷ್ಠಾನಗೊಳಿಸುವ ಸರ್ಕಾರಿ ವ್ಯವಸ್ಥೆಯಾಗಿ ಮಹರ್ಷಿ ವಾಲ್ಮೀಕಿ ವರ್ಗಗಳ ಅಭಿವೃದ್ಧಿ ನಿಗಮ ಕೆಲಸ ಮಾಡುತ್ತಿದ್ದು, ಆ ನಿಗಮದ ಅಧೀಕ್ಷಕರಾಗಿ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಶಿವಮೊಗ್ಗ ಮೂಲದ ಪಿ ಚಂದ್ರಶೇಖರನ್ ಕಳೆದ ಮೇ 26ರಂದು ಶಿವಮೊಗ್ಗದ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಸಾವಿಗೆ ಮುನ್ನ ಅವರು ಬರೆದಿಟ್ಟಿರುವ ಆರು ಪುಟಗಳ ಡೆತ್‌ ನೋಟ್‌ನಲ್ಲಿ ನಿಗಮದ 2024-25ನೇ ಸಾಲಿನ ಯೋಜನೆಗಳಿಗೆ ಮೀಸಲಿಟ್ಟಿದ್ದ ಒಟ್ಟು 187.33 ಕೋಟಿ ಮೊತ್ತದಲ್ಲಿ 89 ಕೋಟಿ ರೂಪಾಯಿ ಅಕ್ರಮ ವರ್ಗಾವಣೆ ನಡೆದಿದೆ ಎಂದು ನಮೂದಿಸಿದ್ದರು. ಈ ಅಕ್ರಮಕ್ಕೆ ನಿಗಮದ ಹಿರಿಯ ಅಧಿಕಾರಿಗಳು ಮತ್ತು ಯೂನಿಯನ್‌ ಬ್ಯಾಂಕಿನ ಅಧಿಕಾರಿಗಳು ಕಾರಣ ಎಂದು ಅವರು ಹೆಸರು ಸಹಿತ ಉಲ್ಲೇಖಿಸಿದ್ದರು.

ಬಹುಕೋಟಿ ಹಗರಣ ಬೆಳಕಿಗೆ ಬರಲು ಅಧಿಕಾರಿಯ ಆತ್ಮಹತ್ಯೆ ಮತ್ತು ಅದಕ್ಕೆ ಮುನ್ನ ಅವರು ಬರೆದಿಟ್ಟಿರುವ ಸುದೀರ್ಘ ಡೆತ್‌ ನೋಟ್‌ ಕಾರಣವಾಯಿತು.

ಅಧಿಕಾರಿಯ ಡೆತ್‌ನೋಟ್‌ನಲ್ಲಿ ಏನಿದೆ?

‌ಅಧಿಕಾರಿ ಚಂದ್ರಶೇಖರನ್‌ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗುವ ಮುನ್ನ ಆರು ಪುಟಗಳ ಡೆತ್‌ನೋಟ್‌ ಬರೆದಿಟ್ಟಿದ್ದಾರೆ. ಆ ಪತ್ರವನ್ನು ಚಂದ್ರಶೇಖರನ್‌ ಅವರ ಪತ್ನಿ ಕವಿತಾ ಅವರು ಶಿವಮೊಗ್ಗದ ವಿನೋಬನಗರ ಪೊಲೀಸ್‌ ಠಾಣೆಗೆ ಮೇ 27ರಂದು ನೀಡಿರುವ ದೂರಿನೊಂದಿಗೆ ಪೊಲೀಸರಿಗೆ ನೀಡಿದ್ದಾರೆ. ಆ ಡೆತ್‌ನೋಟಿನ ಮೊದಲ ಪುಟದಲ್ಲಿಯೇ ಚಂದ್ರಶೇಖರನ್‌ ಅವರು ತಮ್ಮ ಆತ್ಮಹತ್ಯೆಗೆ ನೇರವಾಗಿ ನಿಗಮದ ಅಧಿಕಾರಿಗಳು ಮತ್ತು ಬ್ಯಾಂಕಿನ ಅಧಿಕಾರಿಗಳೇಬ ಕಾರಣ ಎಂದು ಹೆಸರು ಸಹಿತ ಉಲ್ಲೇಖಿಸಿದ್ದಾರೆ.

ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ ಜಿ ಪದ್ಮನಾಭ್‌, ಲೆಕ್ಕಾಧಿಕಾರಿ ಪರಶುರಾಮ ದುರುಗಣ್ಣನವರ್‌, ಯೂನಿಯನ್‌ ಬ್ಯಾಂಕ್‌ ಎಂಜಿ ರಸ್ತೆ ಶಾಖೆಯ ಮುಖ್ಯ ಮ್ಯಾನೇಜರ್‌ ಶುಚಿಸ್ಮಿತಾ ರವುಲ್‌ ಅವರೇ ತಮ್ಮ ಸಾವಿಗೆ ನೇರ ಕಾರಣ ಎಂದು ಚಂದ್ರಶೇಖರನ್‌ ಅವರದ್ದು ಎನ್ನಲಾಗಿರುವ ಡೆತ್‌ನೋಟ್ನಲ್ಲಿ ನಮೂದಿಸಲಾಗಿದೆ.

ನಿಗಮದ ಎಂಡಿ ಅನುದಾನವನ್ನು ನಿಗಮದ ಖಾತೆಯಿಂದ ಒತ್ತಾಯಪೂರ್ವಕವಾಗಿ ವರ್ಗಾಯಿಸಿದ್ದಾರೆ. ನಿಯಮ ಬಾಹಿರವಾಗಿ ನಡೆದಿರುವ ಈ ಹಣ ವರ್ಗಾವಣೆಯಲ್ಲಿ ನನ್ನ ಪಾತ್ರವಿಲ್ಲ. ಆದರೆ, ಕೆಲಸದ ಒತ್ತಡದಲ್ಲಿ ನಾನು ಮಾಡಿರುವ ತಪ್ಪೇನೆಂದರೆ ಖಾತೆಯ ಚೆಕ್‌ ಬುಕ್‌ ಮತ್ತು ಕ್ಯಾಶ್‌ ಬುಕ್‌ ಮುಕ್ತಾಯಗೊಳಿಸಿರುವುದು ಎಂದು ಚಂದ್ರಶೇಖರ್‌ ಡೆತ್‌ನೋಟ್‌ನಲ್ಲಿ ಹೇಳಿದ್ದಾರೆ.

ಪ್ರಕರಣದಲ್ಲಿ ಸಚಿವ ಬಿ ನಾಗೇಂದ್ರ ಪಾತ್ರವೇನು?

ಆತ್ಮಹತ್ಯೆಗೆ ಶರಣಾಗಿರುವ ಚಂದ್ರಶೇಖರನ್‌ ಅವರು ಬರೆದಿಟ್ಟಿರುವ ಡೆತ್‌ನೋಟ್‌ನಲ್ಲಿ ಈ ಅಕ್ರಮ ಹಣ ವರ್ಗಾವಣೆಯ ಬಗ್ಗೆ ನಿಗಮದ ಎಂಡಿಯವರೇ ಸಚಿವರ ಗಮನಕ್ಕೆ ತಂದಿದ್ದಾರೆ. ಅವರ ಕಚೇರಿ ಸಿಬ್ಬಂದಿ ಮೂಲಕ ಈ ವಿಷಯ ಅವರ ಗಮನಕ್ಕೆ ಹೋಗಿದೆ. ಅಕ್ರಮವಾಗಿ ವರ್ಗಾವಣೆಯಾಗಿರುವ ಎಲ್ಲಾ ಹಣವನ್ನು ವಾಪಸ್‌ ತರಿಸಲು ಅವರು ಸೂಚಿಸಿದ್ದಾರೆ. ಅಲ್ಲಿಯವರೆಗೆ ವಿಷಯವನ್ನು ಗೌಪ್ಯವಾಗಿ ಇಡಿ ಎಂದು ಎಂಡಿಯವರು ತಮಗೆ ತಿಳಿಸಿದ್ದಾರೆ ಎಂದು ಚಂದ್ರಶೇಖರ್‌ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಅಲ್ಲದೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಖಾತೆಯ ಸಚಿವರಾಗಿ ಬಿ ನಾಗೇಂದ್ರ ಅವರ ವ್ಯಾಪ್ತಿಯಲ್ಲಿಯೇ ನಿಗಮ ಇದ್ದು, ಅದರ ಆಗುಹೋಗುಗಳ ಹೊಣೆ ಅವರದ್ದೇ ಆಗಿರುತ್ತದೆ. ಆ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಸಚಿವರೇ ಈ ಅಕ್ರಮದ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿವೆ.

ಹಣ ಎಲ್ಲೆಲ್ಲಿಗೆ ಎಷ್ಟೆಷ್ಟು ಹೋಗಿದೆ?

ಅಧಿಕಾರಿಯ ಆತ್ಮಹತ್ಯೆಯೊಂದಿಗೆ ಬಹುಕೋಟಿ ಅಕ್ರಮ ಬಯಲಾಗುತ್ತಲೇ ಎಚ್ಚೆತ್ತುಕೊಂಡಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಕ್ರಮವಾಗಿ ವರ್ಗಾವಣೆಯಾಗಿರುವ ಹಣದ ಬೆನ್ನು ಹತ್ತಿದೆ. ಇಲಾಖೆಯ ಮುಖ್ಯ ಕಾರ್ಯದರ್ಶಿ ಎನ್‌ ಮಂಜುನಾಥ್‌ ಪ್ರಸಾದ್‌ ಅವರು ಹೈದರಾಬಾದ್‌ನ ಬಂಜಾರ ಹಿಲ್ಸ್‌ ನಲ್ಲಿರುವ ರತ್ನಾಕರ ಬ್ಯಾಂಕ್‌ ಲಿಮಿಟೆಡ್‌(ಆರ್‌ಬಿಎಲ್)‌ ಬ್ಯಾಂಕ್‌ ಮುಖ್ಯಸ್ಥರಿಗೆ ಪತ್ರ ಬರೆದು ಬೆಂಗಳೂರಿನ ಎಂಜಿ ರಸ್ತೆಯ ಯೂನಿಯನ್‌ ಬ್ಯಾಂಕ್‌ ಶಾಖೆಯ ನಿಗಮದ ಖಾತೆಯಿಂದ ವರ್ಗಾವಣೆಯಾಗಿರುವ ಹಣದ ಮಾಹಿತಿ ಕೋರಿದ್ದಾರೆ.

ಆ ಪ್ರಕಾರ, ಮಾರ್ಚ್‌ 3-30ರ ನಡುವೆ ವಿವಿಧ ಕಂಪನಿಗಳ ಹೆಸರಿನ ಖಾತೆಗಳಿಗೆ 49.52 ಕೋಟಿ ರೂ. ವರ್ಗಾವಣೆ ನಡೆದಿದೆ. ಮಾರ್ಚ್‌ 30ರಂದು ವಿವಿಧ ವ್ಯಕ್ತಿಗಳ ಎಂಟು ಖಾತೆಗಳಿಗೆ 40.10 ಕೋಟಿ ರೂ. ವರ್ಗಾವಣೆ ನಡೆದಿದೆ. ಈ ಕಂಪನಿಗಳಲ್ಲಿ ಬಹುತೇಕ ಬೆಂಗಳೂರು ಮೂಲದವೇ ಆಗಿದ್ದು, ಕೆಲವು ಕಂಪನಿಗಳ ಹೆಸರಿನಲ್ಲಿ ನಕಲಿ ಖಾತೆ ತೆರೆದು ಹಣ ವರ್ಗಾವಣೆ ಮಾಡಲಾಗಿದೆ. ವಾಸ್ತವವಾಗಿ ಅಂತಹ ಹೆಸರಿನ ಕಂಪನಿಗಳಿಗೂ, ಅದೇ ಹೆಸರಿನಲ್ಲಿ ತೆರೆಯಲಾಗಿರುವ ಖಾತೆಗೂ ಯಾವುದೇ ಸಂಬಂಧವೇ ಇಲ್ಲ ಎಂಬುದು ಕೆಲವು ಪ್ರಕರಣಗಳಲ್ಲಿ ಬೆಳಕಿಗೆ ಬಂದಿದೆ. ಈಗಾಗಲೇ ಕೆಲವು ಕಂಪನಿಗಳು ಈಗಾಗಲೇ ಲಿಖತ ದೂರು ನೀಡಿವೆ.

ಸರ್ಕಾರ ಈವರೆಗೆ ತೆಗೆದುಕೊಂಡಿರುವ ಕ್ರಮವೇನು?

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸರ್ಕಾರ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್‌ ಮತ್ತು ಲೆಕ್ಕಾಧಿಕಾರಿ ದುರುಗಣ್ಣನವರ್‌ ಅವರನ್ನು ಅಮಾನತುಗೊಳಿಸಿತ್ತು. ಅದರ ಬೆನ್ನಲ್ಲೇ ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚಿಸಿದೆ. ಎಸ್‌ ಐಟಿ ತಂಡ ಈಗಾಗಲೇ ಅಮಾನತುಗೊಂಡಿರುವ ಇಬ್ಬರೂ ಅಧಿಕಾರಿಗಳನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದೆ.

ಪ್ರತಿಪಕ್ಷಗಳ ಆಗ್ರಹವೇನು?

ಬಹುಕೋಟಿ ಹಗರಣದಲ್ಲಿ ಕಾಂಗ್ರೆಸ್‌ ಸರ್ಕಾರ ಭಾಗಿಯಾಗಿದೆ. ತೆಲಂಗಾಣದಲ್ಲಿರುವ ತನ್ನದೇ ಸರ್ಕಾರದೊಂದಿಗೆ ಸೇರಿ ಈ ಅಕ್ರಮ ನಡೆಸಿದೆ. ಹಾಗಾಗಿ ಸಚಿವ ಬಿ ನಾಗೇಂದ್ರ ಹಾಗೂ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಮತ್ತು ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಪ್ರತಿಪಕ್ಷ ಬಿಜೆಪಿ ಪಟ್ಟು ಹಿಡಿದಿದೆ.

ಈ ನಡುವೆ, ವರ್ಗಾವಣೆಯಾಗಿರುವ ಒಟ್ಟು ಮೊತ್ತದಲ್ಲಿ ಸುಮಾರು ಮೂವತ್ತು ಕೋಟಿಯಷ್ಟು ಬೃಹತ್‌ ಮೊತ್ತ ತೆಲಂಗಾಣದ ಕಾಂಗ್ರೆಸ್‌ ಸರ್ಕಾರದಲ್ಲಿ ಆಯಕಟ್ಟಿನ ಸ್ಥಾನದಲ್ಲಿರುವ ಪ್ರಭಾವಿ ಮುಖಂಡರೊಬ್ಬರ ಆಪ್ತರ ಖಾತೆಗೆ ಹೋಗಿದೆ ಎಂಬ ಮಾಹಿತಿ ಇಲಾಖೆಯ ಅಧಿಕಾರಿಗಳ ಪರಿಶೀಲನೆ ವೇಳೆ ಪತ್ತೆಯಾಗಿದೆ ಎಂಬ ವರದಿಗಳೂ ಇವೆ. ಜೊತೆಗೆ ಬಹುಕೋಟಿ ಹಗರಣದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಈಗಾಗಲೇ ಯೂನಿಯನ್‌ ಬ್ಯಾಂಕ್‌ ಮುಖ್ಯಸ್ಥರು ಪತ್ರ ಬರೆದಿದ್ದಾರೆ. ಜೊತೆಗೆ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್‌ ಯತ್ನಾಳ್‌ ಕೂಡ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದು ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ.

Tags:    

Similar News