Mysore Dasara | ಇಂದು, ನಾಳೆ ಆಗಸದಲ್ಲಿ ಚಿತ್ತಾರ ಮೂಡಿಸಲಿದೆ ಡ್ರೋಣ್‌ ಪ್ರದರ್ಶನ

ಇದೇ ಮೊದಲ ಬಾರಿಗೆ ವ್ಯವಸ್ಥೆ ಮಾಡಿರುವ ಡ್ರೋಣ್‌ ಶೋನಲ್ಲಿ 1,500 ಸಾವಿರ ಡ್ರೋನ್‌ ಆಗಸದಲ್ಲಿ ಬೆಳಕಿನ‌ ಚಿತ್ತಾರ ಮೂಡಿಸಲಿವೆ.

Update: 2024-10-06 10:05 GMT

ವಿಶ್ವಪ್ರಸಿದ್ಧ ಮೈಸೂರು ದಸರಾದಲ್ಲಿ ಇಂದಿನಿಂದ ಡ್ರೋಣ್‌ ಪ್ರದರ್ಶನ ಆರಂಭವಾಗಲಿದೆ. ಅ. 6, 7, 11 ಮತ್ತು 12ರಂದು ಡ್ರೋನ್ ಪ್ರದರ್ಶನ ಇರಲಿದೆ. ಅ. 6 ಮತ್ತು7 ರಂದು ಬನ್ನಿಮಂಟಪದ ಕವಾಯತು ಮೈದಾನದಲ್ಲಿ ಡ್ರೋಣ್‌ ವೀಕ್ಷಣೆಗೆ ಉಚಿತ ಮತ್ತು ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಮೈಸೂರಿನ ಪ್ರಧಾನ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸೆಸ್ಕ್‌ ತಾಂತ್ರಿಕ ವಿಭಾಗದ ನಿರ್ದೇಶಕ ಮುನಿ ಗೋಪಾಲರಾಜು ಅವರು, ಮುಖ್ಯಮಂತ್ರಿಗಳ ಸಲಹೆಯಂತೆ ಸ್ಥಳೀಯ ವೃತ್ತಿಪರರಿಂದ ಹೆಚ್ಚು ವಿನ್ಯಾಸ ಹಾಗೂ ಆಕರ್ಷಕ ರೀತಿಯಲ್ಲಿ ದಸರಾ ದೀಪಾಲಂಕಾರ ಮಾಡಲಾಗಿದೆ. ಪ್ರತಿ ರಸ್ತೆ ಹಾಗೂ ವೃತ್ತಗಳಲ್ಲಿ ಹೆಚ್ಚು ಮುತುವರ್ಜಿಯಿಂದ ಅಲಂಕಾರ ಮಾಡಲಾಗಿದೆ. ಈ ಬಾರಿಯ ದಸರಾ ಡ್ರೋನ್ ಶೋ‌ ಪ್ರವಾಸಿಗರಿಗೆ ವಿಶೇಷ ಅನುಭೂತಿ ನೀಡಲಿದೆ ಎಂದರು.

ಅ.11 ಹಾಗೂ 12ರಂದು ನಡೆಯುವ ಡ್ರೋನ್ ಶೋ ವೀಕ್ಷಣೆಗೆ ಪಾಸ್ ವ್ಯವಸ್ಥೆ ಇದೆ. ಇದೇ ಮೊದಲ ಬಾರಿಗೆ ವ್ಯವಸ್ಥೆ ಮಾಡಿರುವ ಡ್ರೋಣ್‌ ಶೋನಲ್ಲಿ 1,500 ಸಾವಿರ ಡ್ರೋನ್‌ ಆಗಸದಲ್ಲಿ ಬೆಳಕಿನ‌ ಚಿತ್ತಾರ ಮೂಡಿಸಲಿವೆ. ದೀಪಾಲಂಕಾರದ ಜೊತೆಗೆ ವಿದ್ಯುತ್‌ ರಥ ನಿರ್ಮಿಸಲಾಗಿದ್ದು, ಈ ರಥ ನಗರದ ಹಲವೆಡೆಗಳಲ್ಲಿ ಸಂಚರಿಸಲಿದೆ ಎಂದು ತಿಳಿಸಿದರು.

ವಿದ್ಯುತ್ ದೀಪದಿಂದ ದೂರವಿರಿ

ನಗರದಲ್ಲಿ ಕೆಲವು ದಿನಗಳಿಂದ ಮಳೆ ಸುರಿಯುತ್ತಿದ್ದು, ಕೆಲವೊಮ್ಮೆ ವಿದ್ಯುತ್ ಸೋರಿಕೆ ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಾರ್ವಜನಿಕರು ದೀಪಾಲಂಕಾರ ವೀಕ್ಷಿಸುವ ವೇಳೆ ಆದಷ್ಟು ದೂರವಿರಿ ಎಂದು ಸೆಸ್ಕ್‌ ಮನವಿ ಮಾಡಿದೆ.

ದಸರಾ ದೀಪಾಲಂಕಾರ ಉಪ ಸಮಿತಿ ಅಧ್ಯಕ್ಷ ಸೈಯ್ಯದ್ ಇಕ್ಬಾಲ್, ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕಿ ಜಿ.ಶೀಲಾ, ಅಧೀಕ್ಷಕ ಎಂಜಿನಿಯರ್‌ ಸುನೀಲ್‌ ಸೇರಿದಂತೆ ಸೆಸ್ಕ್‌ ಅಧಿಕಾರಿಗಳು, ಉಪ ಸಮಿತಿ ಸದಸ್ಯರು ಇದ್ದರು.

Tags:    

Similar News