ರಸ್ತೆ ಗುಂಡಿ| ಸಿಲಿಕಾನ್ ಸಿಟಿ ತೊರೆಯಲು ಮುಂದಾದ ಕಂಪೆನಿ, ಐಟಿ ದಿಗ್ಗಜರ ಅಸಮಾಧಾನ; ಆಂಧ್ರ ʼರೆಡ್ ಕಾರ್ಪೆಟ್ʼ
ಈ ನಿರ್ಧಾರ ಐಟಿ-ಬಿಟಿ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು ಐಟಿ ದಿಗ್ಗಜ ಮೋಹನ್ ದಾಸ್ ಪೈ, ಕಿರಣ್ ಮಜುಂದಾರ್ ಷಾ ಸೇರಿದಂತೆ ಹಲವರು, ಸರ್ಕಾರದ ಆಡಳಿತ ನಿರ್ವಹಣೆಯ ಲೋಪದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.;
ಬೆಂಗಳೂರಿನಲ್ಲಿರುವ ಬ್ಲಾಕ್‌ಬಕ್ ಕಚೇರಿ
ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಹಾಗೂ ರಸ್ತೆ ಗುಂಡಿಗಳ ಸಮಸ್ಯೆಗೆ ಬೇಸತ್ತು ಬೆಂಗಳೂರು ಮೂಲದ ಡಿಜಿಟಲ್ ಟ್ರಕ್ಕಿಂಗ್ ಪ್ಲಾಟ್‌ಫಾರ್ಮ್ ʼಬ್ಲ್ಯಾಕ್‌ಬಕ್ʼ ತನ್ನ ಕಚೇರಿಯನ್ನು ಬೇರೆಡೆ ಸ್ಥಳಾಂತರಿಸಲು ನಿರ್ಧರಿಸಿದೆ. ಕಂಪೆನಿಯ ಈ ನಿರ್ಧಾರ ಐಟಿ-ಬಿಟಿ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಸರ್ಕಾರದ ಅಸಮರ್ಪಕ ನಿರ್ವಹಣೆ ವಿರುದ್ಧ ಐಟಿ ಕಂಪೆನಿಗಳ ದಿಗ್ಗಜರಾದ ಮೋಹನ್ ದಾಸ್ ಪೈ, ಕಿರಣ್ ಮಜುಂದಾರ್ ಸೇರಿ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ರಸ್ತೆ ಗುಂಡಿ ಹಾಗೂ ಸಂಚಾರ ದಟ್ಟಣೆಗೆ ಮೂಗು ಮುರಿಯುತ್ತಿರುವ ಕಂಪೆನಿಗಳ ಅಸಮಾಧಾನವನ್ನೇ ಲಾಭ ಮಾಡಿಕೊಳ್ಳಲು ಯತ್ನಿಸುತ್ತಿರುವ ನೆರೆಯ ಆಂಧ್ರ ಪ್ರದೇಶ, ತೆಲಂಗಾಣ, ಕೇರಳ ಹಾಗೂ ತಮಿಳುನಾಡು ಸರ್ಕಾರಗಳು ಕೆಂಪು ಹಾಸು ಹಾಸುತ್ತಿವೆ. ಬ್ಲಾಕ್‌ಬಕ್ ಕಂಪನಿಯು ಬೆಂಗಳೂರು ಬಿಟ್ಟು ಹೊರ ನಡೆಯುವುದಾಗಿ ಹೇಳಿರುವುದು ಇಲ್ಲಿನ ಆಡಳಿತ ವೈಫಲ್ಯಕ್ಕೆ ಹಿಡಿದ ಕೈನ್ನಡಿ ಎಂದು ಐಟಿ ಸಂಸ್ಥೆಗಳ ದಿಗ್ಗಜರು ಆರೋಪಿಸಿದ್ದಾರೆ.
ಬ್ಲಾಕ್ ಬಕ್ ಬೆದರಿಕೆಗೆ ಕಳವಳ ವ್ಯಕ್ತಪಡಿಸಿರುವ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಅವರು, ಇದು ಗಂಭೀರ ಸಮಸ್ಯೆ. ರಾಜ್ಯ ಸರ್ಕಾರ ತುರ್ತಾಗಿ ಸಮಸ್ಯೆ ಸರಿಪಡಿಸಬೇಕು ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.
ದಯವಿಟ್ಟು ಗಮನಿಸಿ, ಕಂಪನಿಗಳು ಹೊರವರ್ತುಲ ರಸ್ತೆಯಿಂದ ಸ್ಥಳಾಂತರಗೊಳ್ಳುತ್ತಿವೆ. ಇಲ್ಲಿ ಆಶಾದಾಯಕ ಪರಿಸ್ಥಿತಿ ಇಲ್ಲ ಎಂದು ಸಿಎಂ, ಡಿಸಿಎಂ ಹಾಗೂ ಪ್ರಿಯಾಂಕ್ ಖರ್ಗೆ ಅವರನ್ನು ಟ್ಯಾಗ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬ್ಲ್ಯಾಕ್ ಬಕ್ ಕಂಪೆನಿ ಟ್ವೀಟ್ ಏನು?
ಬ್ಲ್ಯಾಕ್ ಬಕ್ ಕಂಪನಿಯ ಸಿಇಒ ಮತ್ತು ಸಹ ಸಂಸ್ಥಾಪಕ ರಾಜೇಶ್ ಕುಮಾರ್ ಯಬಾಜಿ ತಮ್ಮ ಸಾಮಾಜಿಕ ಮಾಧ್ಯಮ ʼಎಕ್ಸ್ʼ ನಲ್ಲಿ ಬೆಂಗಳೂರು ತೊರೆಯುವುದಾಗಿ ಸಂದೇಶ ಪ್ರಕಟಿಸಿದ್ದರು. ಅದಕ್ಕೆ ಅವರು ಸಾಕಷ್ಟು ಕಾರಣಗಳನ್ನು ಪಟ್ಟಿ ಮಾಡಿದ್ದರು. ನಗರದಲ್ಲಿ ರಸ್ತೆ ಗುಂಡಿಗಳು ಹೆಚ್ಚಾಗಿದ್ದು, ವಿಪರೀತ ದೂಳು ಮತ್ತು ಟ್ರಾಫಿಕ್‌ನಿಂದಾಗಿ ಸಹೋದ್ಯೋಗಿಗಳು ಕಚೇರಿಗೆ ಬರಲು ಸರಾಸರಿ 90 ನಿಮಿಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಇಲ್ಲಿನ ಪರಿಸ್ಥಿತಿ ಇನ್ನೂ ಐದು ವರ್ಷ ಕಳೆದರೂ ಸರಿ ಹೋಗುವಂತೆ ಕಾಣುತ್ತಿಲ್ಲ. ಕಳೆದ 9 ವರ್ಷಗಳಿಂದ ಬೆಂಗಳೂರಿನ ಬೆಳ್ಳಂದೂರಿನಲ್ಲಿ ಮನೆ ಹಾಗೂ ಕಚೇರಿ ಮಾಡಿಕೊಂಡಿರುವ ನಮಗೆ ತುಂಬಾನೇ ಕಷ್ಟ ಆಗುತ್ತಿದೆ ಎಂದು ಆರೋಪಿಸಿದ್ದಾರೆ.
ಬ್ಲ್ಯಾಕ್‌ಬಕ್ ಕಚೇರಿಯು ಬೆಂಗಳೂರಿನ ಐಟಿ ಕಾರಿಡಾರ್‌ಗಳಲ್ಲಿ ಪ್ರಮುಖ ಕಂಪನಿಯಾಗಿದೆ. ಬ್ಲ್ಯಾಕ್‌ಬಕ್‌ನ ಒಟ್ಟು ಮಾರುಕಟ್ಟೆ ಮೌಲ್ಯ 10,900 ಕೋಟಿ ರೂ.ಹೆಚ್ಚಾಗಿದೆ. ಇದು ಜಿಂಕಾ ಲಾಜಿಸ್ಟಿಕ್ಸ್ ಸೊಲ್ಯೂಷನ್ಸ್ ಹೆಸರಿನಲ್ಲಿ 2015ರಿಂದ ಕಾರ್ಯನಿರ್ವಹಿಸುತ್ತಿದೆ.
ಆಂಧ್ರ ಸರ್ಕಾರದಿಂದ ಆಹ್ವಾನ
ಕರ್ನಾಟಕ ಸರ್ಕಾರ ದೇವನಹಳ್ಳಿ ಬಳಿಯ ರೈತರ ಭೂಮಿಯನ್ನು ಏರೋಸ್ಪೇಸ್ ಯೋಜನೆಗಳಿಗಾಗಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಹಿಂದಕ್ಕೆ ಪಡೆದಿದೆ. ಈ ನಿರ್ಧಾರದ ಬೆನ್ನಲ್ಲೇ, ಆಂಧ್ರಪ್ರದೇಶ ಸರ್ಕಾರವು ಏರೋಸ್ಪೇಸ್ ಉದ್ಯಮದಲ್ಲಿ ಹೂಡಿಕೆ ಮಾಡಲು ಇಚ್ಛಿಸುವ ಕಂಪನಿಗಳನ್ನು ತನ್ನ ರಾಜ್ಯಕ್ಕೆ ಆಹ್ವಾನಿಸಿತ್ತು. ಇದು ಕರ್ನಾಟಕಕ್ಕೆ ಆಂಧ್ರದಿಂದ ಬಂದ ಪರೋಕ್ಷ ಸವಾಲಾಗಿತ್ತು.
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ದೇವನಹಳ್ಳಿ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ನಿರ್ಧಾರ ಪ್ರಕಟಿಸಿತ್ತು. ರೈತರ ಪ್ರತಿಭಟನೆ ಮತ್ತು ಸೂಕ್ತ ಪರಿಹಾರದ ಬೇಡಿಕೆಗಳ ಹಿನ್ನೆಲೆಯಲ್ಲಿ ರೈತರ ಹಿತದೃಷ್ಟಿಯಿಂದ ಭೂಸ್ವಾಧೀನ ಪ್ರಕ್ರಿಯೆ ಮರುಪರಿಶೀಲಿಸಿ ಹಿಂದಕ್ಕೆ ಪಡೆದಿತ್ತು.
ಕರ್ನಾಟಕದ ಈ ನಿರ್ಧಾರವು ಏರೋಸ್ಪೇಸ್ ಉದ್ಯಮದಲ್ಲಿ ಹೂಡಿಕೆ ಮಾಡಲು ಯೋಜಿಸಿದ್ದ ಕೆಲವು ಕಂಪನಿಗಳಲ್ಲಿ ಗೊಂದಲ ಸೃಷ್ಟಿಸಿತ್ತು. ಇದೇ ಅವಕಾಶ ಬಳಸಿಕೊಂಡ ಆಂಧ್ರಪ್ರದೇಶದ ಉದ್ಯಮ ಸಚಿವ ನಾರಾ ಲೋಕೇಶ್ ಅವರು ಬೆಂಗಳೂರಿನ ಹೊರವಲಯದಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲಗಳನ್ನು ಪ್ರಸ್ತಾಪಿಸಿ "ಏರೋಸ್ಪೇಸ್ ಉದ್ಯಮಗಳು ಆಂಧ್ರಪ್ರದೇಶದ ಕಡೆ ಏಕೆ ಬರಬಾರದು?" ಎಂದು ಎಕ್ಸ್ನಲ್ಲಿ ಪೋಸ್ಟ್ ಪ್ರಕಟಿಸಿದ್ದರು.
ನಾರಾ ಲೋಕೇಶ್ ತಮ್ಮ ರಾಜ್ಯದಲ್ಲಿ ಹೂಡಿಕೆ ಮಾಡಲು ಉದ್ಯಮಿಗಳಿಗೆ ಬಹಿರಂಗ ಆಹ್ವಾನ ನೀಡಿದ್ದು, ಏರೋಸ್ಪೇಸ್ ಉದ್ಯಮಕ್ಕಾಗಿ ಬೆಂಗಳೂರಿನ ಹೊರವಲಯದಲ್ಲಿ ಇರುವಂತಹ 8 ಸಾವಿರ ಎಕರೆ ಭೂಮಿ ತಮ್ಮಲ್ಲಿ ಸಿದ್ಧವಿದೆ ಎಂದು ತಿಳಿಸಿದ್ದಾರೆ. ಆಂಧ್ರಪ್ರದೇಶದ ಹೊಸ ಸರ್ಕಾರವು ಉದ್ಯಮ ಸ್ನೇಹಿ ನೀತಿಗಳನ್ನು ಅಳವಡಿಸಿಕೊಂಡಿದ್ದು, ಹೂಡಿಕೆದಾರರಿಗೆ ಉತ್ತಮ ಮೂಲಸೌಕರ್ಯ ಮತ್ತು ಅವಕಾಶಗಳನ್ನು ಒದಗಿಸಲು ಸಿದ್ಧವಿದೆ ಎಂದು ಲೋಕೇಶ್ ಭರವಸೆ ನೀಡಿದ್ದರು.
ಇದೀಗ ಬ್ಲಾಕ್‌ಬಕ್ ಕಂಪನಿ ಬೆಂಗಳೂರಿನಿಂದ ಹೊರ ನಡೆಯಲು ನಿರ್ಧರಿಸಿರುವುದರಿಂದ ಆಂಧ್ರಪ್ರದೇಶದ ಐಟಿ-ಬಿಟಿ ಸಚಿವ ನಾರಾ ಲೋಕೇಶ್ ತಮ್ಮ ರಾಜ್ಯಕ್ಕೆ ಆಹ್ವಾನಿಸಿದ್ದಾರೆ.