ಒತ್ತಡದಲ್ಲಿ ಶಿಕ್ಷಕರು| ಬೆನ್ನುಬೆನ್ನಿಗೆ ಬಂತು ಜಾತಿ ಗಣತಿ, ಚುನಾವಣಾ ಕಾರ್ಯ! ರಜೆಯಿಲ್ಲ, ಬಿಡುವಿಲ್ಲ... ಪಾಠಕ್ಕೆಲ್ಲಿದೆ ಪುರುಸೊತ್ತು?
ದೈನಂದಿನ ಕಾರ್ಯಗಳ ಮೇಲೆ ಒತ್ತಡಗಳು ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಗಣತಿ, ಚುನಾವಣಾ ಕಾರ್ಯಗಳಿಗೆ ನಿಯೋಜನೆಗೊಳ್ಳಲು ನಿರಾಕರಿಸಿದರೂ ಶಿಕ್ಷಕರು ಸರ್ಕಾರದ ಆದೇಶದಿಂದಾಗಿ ಮಾಡಲೇಬೇಕಾದ ಅನಿವಾರ್ಯತೆ ಇದೆ.
ರಾಜ್ಯದಲ್ಲಿ ಗಣತಿ ಕಾರ್ಯ, ಚುನಾವಣಾ ಕಾರ್ಯಗಳು ಆರಂಭಗೊಂಡರೆ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರಿಗೆ ಇನ್ನಿಲ್ಲದ ಬೇಡಿಕೆ ಇರುತ್ತದೆ. ಆದರೆ, ಈ ವರ್ಗದ ಸಿಬ್ಬಂದಿಗೆ ದೈನಂದಿನ ಕಾರ್ಯಗಳ ಮೇಲೆ ಇನ್ನಿಲ್ಲದ ಒತ್ತಡಗಳು ಹೆಚ್ಚಾಗುತ್ತವೆ. ಈ ಹಿನ್ನೆಲೆಯಲ್ಲಿ ಗಣತಿ ಕಾರ್ಯ, ಚುನಾವಣಾ ಕಾರ್ಯಗಳಿಗೆ ನಿಯೋಜನೆಗೊಳ್ಳಲು ನಿರಾಕರಿಸಿದರೂ ಸರ್ಕಾರದ ಆದೇಶದಿಂದಾಗಿ ಮಾಡಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ.
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕೆ ಶಿಕ್ಷಕರ, ಆಶಾ ಕಾರ್ಯಕರ್ತರನ್ನು ಬಳಸಿಕೊಳ್ಳಲಾಗುತ್ತಿದೆ. ಈ ಬಾರಿ ದಸರಾ ಹಬ್ಬದ ರಜೆಯ ಸಂದರ್ಭದಲ್ಲಿ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುತ್ತಿದೆ. ಇದು ಶಿಕ್ಷಕರಿಗೆ ಶೈಕ್ಷಣಿಕ ಕಾರ್ಯದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಆದರೆ, ವೈಯಕ್ತಿಕ ಕಾರ್ಯಗಳಿಗೆ ಸಂಚಕಾರ ಬಂದಿದೆ. ರಜೆಯ ಸಂದರ್ಭದಲ್ಲಿ ಕುಟುಂಬದೊಂದಿಗೆ ಕಾಲ ಕಳೆಯುವ ಸುಯೋಗ ತಪ್ಪಿದಂತಾಗಿದೆ. ಇದು ಶಿಕ್ಷಕ ವರ್ಗದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಶಾಲೆಗಳಿಗೆ ದಸರಾ ರಜೆ ಸೆ.20 ರಿಂದ ಅ.7 ರವರೆಗೆ ನಿಗದಿಯಾಗಿದೆ. ಆದರೆ, ಶಿಕ್ಷಕರಿಗೆ ರಜೆ ನೀಡದೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಸಮೀಕ್ಷೆಗೆ ರಾಜ್ಯಾದ್ಯಂತ 1.50 ಲಕ್ಷ ಶಿಕ್ಷಕರನ್ನು ಬಳಕೆ ಮಾಡಲಾಗುತ್ತಿದೆ. ಇದರಲ್ಲಿ ಭಾಗವಹಿಸುವ ಶಿಕ್ಷಕರಿಗೆ ತರಬೇತಿ ನಡೆಯುತ್ತಿದೆ. ರಾಜ್ಯದಲ್ಲಿ 46 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿದ್ದು, 1.77 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಿಕ್ಷಕರು ಮಕ್ಕಳಿಗೆ ಬೋಧನೆ ಮಾಡುವುದಷ್ಟೇ ಅಲ್ಲ, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನೂ ಮಾಡಬೇಕಾಗಿದೆ. ಜಾತಿ ಸಮೀಕ್ಷೆ, ಜನಗಣತಿ ಹಾಗೂ ಚುನಾವಣಾ ಕಾರ್ಯಕ್ಕೂ ಶಿಕ್ಷಕರನ್ನೇ ನೇಮಿಸಲಾಗುತ್ತಿದೆ. ಹೀಗಾಗಿ, ಶಿಕ್ಷಕರಿಗೆ ಮಕ್ಕಳಿಗೆ ಬೋಧಿಸುವುದಕ್ಕಿಂತ ಇತರೆ ಕಾರ್ಯಗಳ ಭಾರವೇ ಹೆಚ್ಚಾಗಿದೆ.
ರಾಜ್ಯ ಸರ್ಕಾರವೇ ಘೋಷಿಸಿರುವಂತೆ 2025-26ನೇ ಸಾಲಿನ ಶೈಕ್ಷಣಿಕ ವರ್ಷದ 365 ದಿನಗಳಲ್ಲಿ 123 ರಜೆಗಳಿವೆ. ಇದರಲ್ಲಿ ಶಾಲಾ ಕರ್ತವ್ಯದ ದಿನಗಳು 242 ಇರುತ್ತದೆ. ಈ ಅವಧಿಯಲ್ಲೇ ಕ್ಷೀರ ಭಾಗ್ಯ, ಮಧ್ಯಾಹ್ನದ ಬಿಸಿಯೂಟ, ಮೊಟ್ಟೆ-ಬಾಳೆಹಣ್ಣು ವಿತರಣೆ, ಮಾಸಿಕ ಪರೀಕ್ಷೆ ಆಯೋಜನೆ, ರಾಗಿ ಮಾಲ್ಟ್ ವಿತರಣೆಯಂತಹ ಕಾರ್ಯಗಳನ್ನೂ ನಿರ್ವಹಿಸಬೇಕಿದೆ. ಅಷ್ಟೇ ಅಲ್ಲದೇ ಶೈಕ್ಷಣಿಕ ವರ್ಷದ ಆರಂಭದಲ್ಲಿ ಶಾಲಾ ಸಮವಸ್ತ್ರ, ಶೂ-ಸಾಕ್ಸ್, ಪಠ್ಯಪುಸ್ತಕ ವಿಸ್ತರಣೆಯಂತಹ ಜವಾಬ್ದಾರಿಗಳೂ ಶಿಕ್ಷಕರ ಹೆಗಲೇರುತ್ತಿವೆ. ಈ ಎಲ್ಲ ಕಾರ್ಯಗಳ ಜತೆಗೆ ಚುನಾವಣೆ, ಸಮೀಕ್ಷೆ ಸೇರಿದಂತೆ ಇತರೆ ಸರ್ಕಾರಿ ಯೋಜನೆಗಳಲ್ಲೂ ತೊಡಗಿಸಿಕೊಳ್ಳಬೇಕಿದೆ.
ಪರೀಕ್ಷಾ ಮೌಲ್ಯಮಾಪನಕ್ಕೆ ಅಡ್ಡಿ
ಗಣತಿ ಕಾರ್ಯ, ಚುನಾವಣೆ ಕಾರ್ಯಗಳಲ್ಲಿ ಶಿಕ್ಷಕರನ್ನು ನಿಯೋಜನೆ ಮಾಡುವುದರಿಂದ ಪರೀಕ್ಷಾ ಮೌಲ್ಯಮಾಪನ ಕಾರ್ಯಕ್ಕೆ ತೀವ್ರ ಅಡಚಣೆ ಉಂಟಾಗುತ್ತದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದಲ್ಲಿ ಪರೀಕ್ಷೆ ಮುಗಿದು ಮೌಲ್ಯ ಮಾಪನ ಮಾಡುವ ಕಾರ್ಯ ನಡೆಯಲಿದೆ. ಆದರೆ, ಶಿಕ್ಷಕರನ್ನು ಸರ್ಕಾರವು ಗಣತಿ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳುತ್ತಿವೆ. ಇದರಿಂದ ಪರೀಕ್ಷಾ ಮೌಲ್ಯಮಾಪನ ಕಾರ್ಯಕ್ಕೆ ಪೆಟ್ಟು ಬೀಳಲಿದೆ. ಅಲ್ಲದೇ, ಚುನಾವಣಾ ಕಾರ್ಯಕ್ಕೆ ನಿಯೋಜನೆ ಮಾಡಿರುವುದರಿಂದಲೂ ಸಮಸ್ಯೆಯಾಗುತ್ತದೆ ಎಂಬುದು ಶಿಕ್ಷಕರ ಅಳಲಾಗಿದೆ.
ಶಿಕ್ಷಕರು ಮತಗಟ್ಟೆ ಕರ್ತವ್ಯ, ಮತ ಎಣಿಕೆ, ಮತದಾರರ ಪಟ್ಟಿ ಪರಿಷ್ಕರಣೆ ಮುಂತಾದ ಚುನಾವಣಾ ಕಾರ್ಯಗಳಲ್ಲಿ ತೊಡಗುವುದರಿಂದ ಪರೀಕ್ಷಾ ಉತ್ತರಪತ್ರಿಕೆಗಳ ಮೌಲ್ಯಮಾಪನ ಸಮಯಕ್ಕೆ ಮುಗಿಯುವುದಿಲ್ಲ. ಮೌಲ್ಯಮಾಪನ ಮುಂದೂಡಿಕೆಯಿಂದ ಶಿಕ್ಷಕರಿಗೆ ಇತರೆ ಕಾರ್ಯಗಳ ಜತೆ ಈ ಕಾರ್ಯವೂ ಹೊರೆಯಾಗಲಿದೆ. ಚುನಾವಣಾ ಕಾರ್ಯ, ಗಣತಿ ಕಾರ್ಯದಿಂದ ಶಿಕ್ಷಣ ವ್ಯವಸ್ಥೆಯ ಶಿಸ್ತಿನಲ್ಲಿಯೇ ವ್ಯತ್ಯಯ ಉಂಟಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗೆ ಧಕ್ಕೆಯಾಗುತ್ತಿದೆ ಎಂದು ಹೇಳಲಾಗಿದೆ.
ಬಿಸಿಯೂಟದ ಜವಾಬ್ದಾರಿಯೂ ಸಹ ಶಿಕ್ಷಕರ ಮೇಲೆ:
ಬಿಸಿಯೂಟ ಯೋಜನೆ ಶಾಲಾ ಮಕ್ಕಳ ಪೌಷ್ಠಿಕತೆಗೆ ಸಹಕಾರಿಯಾದರೂ, ಇದರ ಸಂಪೂರ್ಣ ಜವಾಬ್ದಾರಿ ಶಿಕ್ಷಕರ ಮೇಲಾಗಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಶಾಲೆಗಳಲ್ಲಿನ ಬಿಸಿಯೂಟಕ್ಕೆ ಬೇಕಾದ ಸಾಮಾನು ಖರೀದಿ, ಅಕ್ಕಿ–ದಾಳ ಹಂಚಿಕೆ, ಅಡುಗೆಗಾರರ ಮೇಲ್ವಿಚಾರಣೆ, ಲೆಕ್ಕಪತ್ರ ನಿರ್ವಹಣೆ, ವರದಿ ಸಲ್ಲಿಕೆ ಮುಂತಾದ ಕಾರ್ಯಗಳನ್ನು ಶಿಕ್ಷಕರೇ ನಿರ್ವಹಿಸುತ್ತಿದ್ದಾರೆ. ಇದಲ್ಲದೆ, ಅಡುಗೆ ಸಾಮಗ್ರಿಗಳ ಪೂರೈಕೆ ವಿಳಂಬ, ಹಣ ಬಿಡುಗಡೆ ತಡ, ಗುಣಮಟ್ಟದ ಕೊರತೆ ಇಂತಹ ಸಮಸ್ಯೆಗಳನ್ನೂ ಶಿಕ್ಷಕರೇ ಎದುರಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಜತೆಗೆ ಗಣತಿ ಕಾರ್ಯ, ಚುನಾವಣಾ ಕಾರ್ಯಗಳ ಹೊಣೆಗಾರಿಕೆಯೂ ಸಹ ತಲೆಬಿಸಿಯಾಗಿದೆ ಎಂಬುದು ಶಿಕ್ಷಕರ ಅಭಿಪ್ರಾಯವಾಗಿದೆ.
ಚುನಾವಣಾ ಸಮೀಕ್ಷೆಯ ಹೊರೆ
ಗಣತಿ ಕಾರ್ಯ ಮುಗಿಯುತ್ತಿದ್ದಂತೆ ಶಿಕ್ಷಕರಿಗೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಸಂಬಂಧ ಮತದಾರರ ಸಮೀಕ್ಷೆ ಕಾರ್ಯ ಪ್ರಾರಂಭವಾಗಲಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಿರುವ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ಮತ್ತಷ್ಟು ಹೊರೆಯಾಗುವ ಸಾಧ್ಯತೆ ಇದೆ. ಜಿಲ್ಲಾ, ತಾಲೂಕು ಪಂಚಾಯಿತಿಗಳಲ್ಲಿಯೂ ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಇದರ ತರಬೇತಿಯಲ್ಲಿಯೂ ಪಾಲ್ಗೊಂಡು ಸಮೀಕ್ಷೆ ಕಾರ್ಯ ನಡೆಸಬೇಕು.
ಈ ನಡುವೆ, ಮುಖ್ಯ ಚುನಾವಣಾಧಿಕಾರಿ ಕಚೇರಿಯು ಮತದಾರರ ಪಟ್ಟಿಯನ್ನು ವಿಶೇಷ ಪರಿಷ್ಕರಣೆ ನಡೆಸಲು ತೀರ್ಮಾನಿಸಿದೆ. ಕೇಂದ್ರ ಚುನಾವಣಾ ಆಯೋಗದಿಂದ ಆದೇಶ ಬರುತ್ತಿದ್ದಂತೆ ವಿಶೇಷ ಪರಿಷ್ಕರಣೆ ಕಾರ್ಯವನ್ನು ಪ್ರಾರಂಭಿಸಲಿದೆ. ಆ ಕಾರ್ಯಕ್ಕೂ ಶಿಕ್ಷಕರನ್ನು ಬಳಕೆ ಮಾಡಿಕೊಳ್ಳಲಿದೆ. ಶಾಲೆಗಳಲ್ಲಿ ತರಗತಿ ನಡೆಸುವುದರ ಜತೆಗೆ ಸಾಲು ಸಾಲು ಬರುವ ಚುನಾವಣಾ ಸಮೀಕ್ಷೆ, ಗಣತಿ ಸಮೀಕ್ಷೆ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಇದು ಶಿಕ್ಷಕರಿಗೆ ಹೊರೆಯಾಗಲಿದ್ದು, ವಿದ್ಯಾರ್ಥಿಗಳ ಕಲಿಕೆಗೂ ಸಮಸ್ಯೆಯಾಗಲಿದೆ ಎಂದು ಹೇಳಲಾಗಿದೆ. ಹೀಗಾಗಿ ಸರ್ಕಾರವು ಯಾವ ರೀತಿಯಲ್ಲಿ ಸಮೀಕ್ಷೆ ನಡೆಸುವ ಕಾರ್ಯವನ್ನು ಯಾವ ರೀತಿಯಲ್ಲಿ ನಡೆಸಲಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ. ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗದಂತೆ ಸಮೀಕ್ಷೆಯಲ್ಲಿ ಶಿಕ್ಷಕರನ್ನು ತೊಡಗಿಸಿಕೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕು.
ಶಿಕ್ಷಕರಿಗೆ ಅನ್ಯಕಾರ್ಯದ ನಿಯೋಜನೆ ಬೇಡ
ಚುನಾವಣಾ ಕಾರ್ಯಕ್ಕೆ ಶಿಕ್ಷಕರನ್ನು ನಿಯೋಜಿಸುತ್ತಿರುವುದರಿಂದ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದ್ದು, ಶಿಕ್ಷಕರ ಬದಲಿಗೆ ಇತರೆ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಹಾಗೂ ಶಿಕ್ಷಕೇತರ ಸಿಬ್ಬಂದಿಯನ್ನು ನಿಯೋಜಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಪತ್ರ ಬರೆದಿದ್ದರು. ಅಲ್ಲದೇ, ಶಿಕ್ಷಕರ ಸಂಘದ ಜತೆ ನಡೆಸಿದ ಸಭೆಯಲ್ಲಿ ಶಿಕ್ಷಕ ವರ್ಗದ ಮುಖಂಡರು ಚುನಾವಣಾ ಕಾರ್ಯಗಳಿಗಾಗಿ ಶಿಕ್ಷಕರನ್ನು ಬೂತ್ ಮಟ್ಟದ ಅಧಿಕಾರಿಗಳಾಗಿ (ಬಿಎಲ್‌ಒ) ನೇಮಕ ಮಾಡುವುದರಿಂದ ತರಗತಿ ಪಾಠಗಳಿಗೆ ತೊಂದರೆಯಾಗುತ್ತಿದೆ. ಶಿಕ್ಷಕರನ್ನು ಬೋಧನಾ ಕಾರ್ಯ ಹೊರತುಪಡಿಸಿ, ಅನ್ಯ ಕಾರ್ಯಗಳಿಗೆ ಬಳಸಬಾರದು ಎಂದು ಆಗ್ರಹಿಸಿದ್ದರು. ಈ ಸಂಬಂಧ ಶಾಲಿನಿ ರಜನೀಶ್ ಅವರು ಪತ್ರ ಬರೆದಿದ್ದರು. ಶಾಲಿನಿ ರಜನೀಶ್ ಮಾತ್ರವಲ್ಲದೇ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಸಹ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯಕ್ಕೆ ಶಿಕ್ಷಕರನ್ನು ನಿಯೋಜಿಸಬಾರದು ಎಂದು ಕೋರಿ ಪತ್ರ ಬರೆದಿದ್ದರು.
ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ನಿರಾಕರಣೆ
ಸರ್ಕಾರದ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ ಜಂಟಿ ಮುಖ್ಯ ಚುನಾವಣಾಧಿಕಾರಿ ಎಸ್. ಯೋಗೇಶ್ವರ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ನಿಯೋಜಿಸಿರುವ ಶಿಕ್ಷಕರನ್ನು ಸಾರ್ವಜನಿಕ ಹಿತಾಸಕ್ತಿ ಅಡಿಯಲ್ಲಿ ಹಿಂಪಡೆಯಬೇಕು ಎಂಬ ಕೋರಿಕೆ ಪರಿಗಣಿಸಲು ಸಾಧ್ಯವಿಲ್ಲ. ರಜಾ ದಿನಗಳು ಹಾಗೂ ಬೋಧಕೇತರ ಸಮಯದಲ್ಲಿ ಬೋಧಕ ಸಿಬ್ಬಂದಿಯನ್ನು ಚುನಾವಣಾ ಕಾರ್ಯ, ಮತದಾರರ ಪಟ್ಟಿಯ ಪರಿಷ್ಕರಣಾ ಕಾರ್ಯಕ್ಕೆ ನಿಯೋಜನೆ ಮಾಡಲು ಸುಪ್ರೀಂಕೋರ್ಟ್ ಸಹ ಸಮ್ಮತಿಸಿದೆ. ಭಾರತ ಚುನಾವಣಾ ಅಯೋಗವೂ ಈ ಕುರಿತು ಸುತ್ತೋಲೆ ಹೊರಡಿಸಿದೆ ಎಂದಿದ್ದರು.
ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಆನೇಕಲ್ ತಾಲೂಕಿನ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು, ಗಣತಿ ಕಾರ್ಯ ಆಗಲಿ, ಚುನಾವಣಾ ಕಾರ್ಯಗಳಾಗಲಿ ಭಾಗವಹಿಸುವುದು ಶಿಕ್ಷಕರಿಗೆ ಹೆಚ್ಚುವರಿ ಜವಾಬ್ದಾರಿ. ಮನಸ್ಸಿಲ್ಲದಿದ್ದರೂ ಸರ್ಕಾರಿ ಆದೇಶವನ್ನೂ ಪಾಲನೆ ಮಾಡದೆ ಬೇರೆ ದಾರಿ ಇಲ್ಲವಾಗಿದೆ. ಈ ಬಾರಿಯ ಗಣತಿ ಕಾರ್ಯಕ್ಕೆ ಒಂದು ಮನೆಗೆ 100 ರೂ.ನಂತೆ ನಿಗದಿ ಮಾಡಲಾಗಿದೆ ಎಂಬ ಮಾಹಿತಿ ಇದೆ. ಪ್ರತಿ ಶಿಕ್ಷಕರಿಗೆ 20 ಸಾವಿರ ರೂ. ಸಿಗುವ ಸಾಧ್ಯತೆ ಇದೆ. ರಜೆಯಲ್ಲಿ ಗಣತಿ ಕಾರ್ಯವು ರಜೆಯಲ್ಲಿ ಮಾಡಲು ತಿಳಿಸಿರುವುದರಿಂದ ಕುಟುಂಬದ ಜತೆ ಇರಲು ಸಾಧ್ಯವಾಗುವುದಿಲ್ಲ. ಅನಿವಾರ್ಯವಾಗಿ ಮಾಡಲೇಬೇಕಾಗಿದೆ ಎಂದು ಅಸಮಾಧಾನ ತೋಡಿಕೊಂಡರು.
ಇನ್ನು ಎಸ್‌ಐಆರ್‌ಗೆ ಬಳಸಿಕೊಳ್ಳುವ ಮಾಹಿತಿ ಇದೆ. ಯಾವ ಸಮಯದಲ್ಲಿ ಈ ಕಾರ್ಯ ಮಾಡಲಾಗುತ್ತದೆ ಎಂಬುದು ಗೊತ್ತಿಲ್ಲ. ಶಿಕ್ಷಕರಿಗೆ ಹಲವು ಸಮಸ್ಯೆಗಳಿದ್ದರೂ ಅವುಗಳ ನಡುವೆ ಮಾಡಬೇಕಾಗಿದೆ. ಸರ್ಕಾರದ ಸೂಚನೆ ಪಾಲನೆ ಮಾಡದಿದ್ದರೆ ಶಿಸ್ತು ಕ್ರಮದ ಬೆದರಿಕೆ ಹಾಕಲಾಗುತ್ತದೆ ಎಂದು ತಿಳಿಸಿದರು.
ಆಶಾ ಕಾರ್ಯಕರ್ತೆಯರಿಂದಲೂ ನಿರಾಕರಣೆ
ಗಣತಿ ಕಾರ್ಯ ಮತ್ತು ಚುನಾವಣಾ ಕಾರ್ಯಕ್ಕೆ ನಿಯೋಜನೆಯಾಗಲು ಆಶಾ ಕಾರ್ಯಕರ್ತೆಯರು ಸಹ ನಿರಾಕರಿಸಿದ್ದಾರೆ. ಹೆಚ್ಚಿನ ಭತ್ಯೆ ನೀಡದೆ ಆಶಾ ಕಾರ್ಯಕರ್ತರನ್ನು ಬಳಸಿಕೊಳ್ಳಲಾಗುತ್ತದೆ. ಗಣತಿ ಕಾರ್ಯಕ್ಕೂ ಬಳಕೆ ಮಾಡಲಾಗುತ್ತಿದ್ದು, ಹಲವು ನಿಬಂಧನೆಗಳನ್ನು ಹಾಕಲಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಆರೋಗ್ಯ ಇಲಾಖೆಯ ಅಡಿ ಗ್ರಾಮ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರು ಈಗ ಚುನಾವಣಾ ಹಾಗೂ ಗಣತಿ ಕಾರ್ಯದಲ್ಲೂ ನಿಯೋಜನೆಯಾಗುತ್ತಿದ್ದಾರೆ. ಇದರ ಪರಿಣಾಮವಾಗಿ ಅವರ ಮೂಲ ಸೇವಾ ಕಾರ್ಯಕ್ಕೆ ತೊಂದರೆ ಉಂಟಾಗುತ್ತಿದೆ. ಗ್ರಾಮೀಣ ಆರೋಗ್ಯ ಸೇವೆ, ತಾಯಿ–ಮಗು ಆರೈಕೆ, ಲಸಿಕಾ ಕಾರ್ಯಕ್ರಮ, ಆರೋಗ್ಯ ಜಾಗೃತಿ, ಗರ್ಭಿಣಿಯರ ತಪಾಸಣೆ ಮುಂತಾದ ಕೆಲಸಗಳನ್ನು ನಿರ್ವಹಿಸುವ ಆಶಾ ಕಾರ್ಯಕರ್ತೆಯರು ಈಗ ಚುನಾವಣಾ ಕರ್ತವ್ಯ, ಮನೆಮನೆಗೆ ಹೋಗಿ ಜನಗಣತಿ ಮಾಹಿತಿ ಸಂಗ್ರಹಣೆ, ಮತದಾರರ ಪಟ್ಟಿ ಪರಿಷ್ಕರಣೆ ಮುಂತಾದ ಹೆಚ್ಚುವರಿ ಕಾರ್ಯಗಳಲ್ಲಿ ತೊಡಗಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಆರೋಗ್ಯ ಸೇವೆಗಳಿಗೆ ಸಮಯ ನೀಡಲು ಸಾಧ್ಯವಾಗದೆ, ತುರ್ತು ಆರೋಗ್ಯ ಸೇವೆಯಲ್ಲಿಯೇ ವ್ಯತ್ಯಯ ಉಂಟಾಗಿದೆ ಎಂದು ಆಶಾ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಆಶಾ ಕಾರ್ಯಕರ್ತೆ ಸಂಘದ ರಾಜ್ಯ ಕಾರ್ಯದರ್ಶಿ ನಾಗಲಕ್ಷ್ಮೀ, ಸರ್ಕಾರವು ತಾರತಮ್ಯ ಧೋರಣೆಯನ್ನು ಅನುಸರಿಸುತ್ತದೆ. ಗಣತಿ ಕಾರ್ಯಕ್ಕೆ ಶಿಕ್ಷಕರಿಗೆ 20 ಸಾವಿರ ರೂ. ಭತ್ಯೆ ನೀಡುತ್ತದೆ. ಆದರೆ, ಆಶಾ ಕಾರ್ಯಕರ್ತೆಯರಿಗೆ ಕೇವಲ 2 ಸಾವಿರ ರೂ. ನೀಡುತ್ತಿದೆ. ಇದಲ್ಲದೇ, ಚುನಾವಣಾ ಕಾರ್ಯಗಳಿಗೂ ಸಹ ಬಳಸಿಕೊಳ್ಳಲಾಗುತ್ತದೆ. ಈ ವೇಳೆಯಲ್ಲಿಯೂ ಸರಿಯಾದ ಭತ್ಯೆ ನೀಡುವುದಿಲ್ಲ. ಅಂಗನವಾಡಿ ಕಾರ್ಯಕರ್ತೆಯರ ಪರಿಸ್ಥಿತಿಯು ಸಹ ಆಶಾ ಕಾರ್ಯಕರ್ತೆಯರ ಪರಿಸ್ಥಿತಿಗಿಂತ ಭಿನ್ನವಾಗಿಲ್ಲ. ಯಾವುದೇ ಹೆಚ್ಚುವರಿ ಕಾರ್ಯಕ್ಕೂ ಸರ್ಕಾರವು ಸಮರ್ಪಕವಾದ ಭತ್ಯೆಯನ್ನು ನೀಡಬೇಕು ಎಂದು ಹೇಳಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರಿಂದಲೂ ಅಸಮಾಧಾನ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಹಲವಾರು ಹೊಣೆಗಾರಿಕೆಗಳನ್ನು ಹೊತ್ತುಕೊಂಡು ದುಡಿಯುತ್ತಿದ್ದರೂ, ಅವರಿಗೆ ಸರಿಯಾದ ಸೌಲಭ್ಯ ಮತ್ತು ಮಾನ್ಯತೆ ದೊರೆಯುತ್ತಿಲ್ಲ ಎಂಬ ಅಸಮಾಧಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ನಡುವೆ, ಗಣತಿ, ಚುನಾವಣಾ ಕಾರ್ಯಕ್ಕೆ ನಿಯೋಜನೆ ಮಾಡುತ್ತಿರುವುದಕ್ಕೂ ಅಸಮಾಧಾನ ವ್ಯಕ್ತವಾಗುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರು ಶಿಶು ಪೋಷಣಾ ಯೋಜನೆ, ತಾಯಿ–ಮಗು ಆರೋಗ್ಯ, ಪೌಷ್ಠಿಕ ಆಹಾರ ವಿತರಣೆ, ಲಸಿಕಾ ಕಾರ್ಯಕ್ರಮ, ಶೈಶವ ಶಿಕ್ಷಣ ಮುಂತಾದ ಪ್ರಮುಖ ಕರ್ತವ್ಯಗಳನ್ನು ನಿರ್ವಹಿಸುತ್ತಿರುವ ಸಂದರ್ಭದಲ್ಲಿ, ಅವರಿಗೆ ಚುನಾವಣಾ ಮತ್ತು ಗಣತಿ ಕಾರ್ಯಗಳನ್ನು ಹೇರಿಕೆ ಮಾಡುವುದು ಹೆಚ್ಚುವರಿ ಕೆಲಸವಾಗುತ್ತದೆ. ಅಲ್ಲದೇ, ಈ ಕಾರ್ಯಕ್ಕೆ ಸೂಕ್ತವಾದ ಭತ್ಯೆಯನ್ನು ಸಹ ನೀಡುವುದಿಲ್ಲ ಎಂಬ ಬೇಸರಗಳು ವ್ಯಕ್ತವಾಗಿವೆ.
ಚುನಾವಣಾ ಕಾರ್ಯದಿಂದ ಮುಕ್ತಿ?
ಅಂಗನವಾಡಿ ಕಾರ್ಯಕರ್ತೆಯರಿಗೆ ಚುನಾವಣೆ ಕೆಲಸಗಳಿಂದ ವಿನಾಯಿತಿ ನೀಡಲು ಸರ್ಕಾರ ತೀರ್ಮಾನಿಸಿದೆ. ಇದರೊಂದಿಗೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಎಲ್ಲಾ ಸಂಘಟನೆಗಳ ಹಲವು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ. ಮುಂದಿನ ಅಕ್ಟೋಬರ್‌ನಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರೊಂದಿಗೆ ಚರ್ಚೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಆದರೆ ಮುಖ್ಯ ಚುನಾವಣಾಧಿಕಾರಿ ಕಚೇರಿಯು ನಿರಾಕರಿಸಿರುವುದರಿಂದ ಸರ್ಕಾರದ ತೀರ್ಮಾನ ಅನುಷ್ಠಾನಗೊಳ್ಳಲಿದೆಯೇ ಏಂಬುದು ಯಕ್ಷ ಪ್ರಶ್ನೆಯಾಗಿದೆ.
ಶಿಕ್ಷಕರನ್ನು ಹೆಚ್ಚಾಗಿ ಬಳಸಿಕೊಳ್ಳುವುದಿಲ್ಲ
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯಕ್ಕೆ ಶಿಕ್ಷಕರ ಬಳಕೆ ಕುರಿತು ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್, ಈ ಬಾರಿಯ ವಿಶೇಷ ಪರಿಷ್ಕರಣೆ ಕಾರ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರನ್ನು ಬಳಸಿಕೊಳ್ಳುವುದಿಲ್ಲ. ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಇತರೆ ಸರ್ಕಾರಿ ಇಲಾಖೆಯ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುವುದು. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಈ ಬಾರಿ ಆರು ಸಾವಿರ ರೂ. ವಿಶೇಷ ಭತ್ಯೆ ನೀಡಲು ತೀರ್ಮಾನಿಸಲಾಗಿದೆ. ಈಗಾಗಲೇ ಇವರು 12 ಸಾವಿರ ರೂ. ಪಡೆಯುತ್ತಿದ್ದು, ಹೆಚ್ಚುವರಿಯಾಗಿ ಆರು ಸಾವಿರ ರೂ. ಪಡೆಯುವುದರಿಂದ ಒಟ್ಟು 18 ಸಾವಿರ ರೂ. ಆಗಲಿದೆ ಎಂದು ಹೇಳಿದರು.