ಅಸಮಾಧಾನಕ್ಕೆ ಕಾರಣವಾಯ್ತು ಸುರ್ಜೇವಾಲಾ ನಡೆಸಿದ ಅಸಮಾಧಾನ ಶಮನ ಸಭೆ
ಹಲವು ಶಾಸಕರು ಮತ್ತು ಸಚಿವರು ಸುರ್ಜೇವಾಲಾ ಅವರ ಈ ಏಕಾಏಕಿ ಸಭೆ ನಡೆಸಿದ ಕ್ರಮದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಸಭೆ ನಡೆಸಿದ್ದರೆ ಶಾಸಕರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.;
ರಣದೀಪ್ ಸಿಂಗ್ ಸುರ್ಜೇವಾಲಾ
ರಾಜ್ಯ ಕಾಂಗ್ರೆಸ್‌ನಲ್ಲಿ ಭುಗಿಲೆದ್ದಿರುವ ಶಾಸಕರ ಅಸಮಾಧಾನವನ್ನು ತಣಿಸಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನಡೆಸಿದ ಸಭೆ ಈಗ ಸ್ವತಃ ಹೊಸ ಅಸಮಾಧಾನಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿ ಸುರ್ಜೇವಾಲಾ ಏಕಾಏಕಿ ಶಾಸಕರ ಸಭೆ ನಡೆಸಿರುವುದು ಹಲವು ಶಾಸಕರು ಮತ್ತು ಸಚಿವರ ಕೆಂಗಣ್ಣಿಗೆ ಗುರಿಯಾಗಿದೆ.
ಹಲವು ಶಾಸಕರು ಮತ್ತು ಸಚಿವರು ಸುರ್ಜೇವಾಲಾ ಅವರ ಈ ಏಕಾಏಕಿ ಸಭೆ ನಡೆಸಿದ ಕ್ರಮದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಸಭೆ ನಡೆಸಿದ್ದರೆ ಶಾಸಕರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹಳೇ ಮೈಸೂರು ಭಾಗದ 40ಕ್ಕೂ ಹೆಚ್ಚು ಶಾಸಕರೊಂದಿಗೆ ಸುರ್ಜೇವಾಲಾ ಅವರು ಪ್ರತ್ಯೇಕವಾಗಿ (ಒನ್ ಟು ಒನ್) ಚರ್ಚೆ ನಡೆಸಿದ್ದರು. ಈ ವೇಳೆ ಅಭಿವೃದ್ಧಿ, ಅನುದಾನ ಸೇರಿದಂತೆ ವಿವಿಧ ಆಯಾಮಗಳಲ್ಲಿ ಶಾಸಕರ ಅಭಿಪ್ರಾಯಗಳನ್ನು ಲಿಖಿತ ರೂಪದಲ್ಲಿ ದಾಖಲಿಸಿಕೊಂಡು ದೆಹಲಿಗೆ ತೆರಳಿ ಹೈಕಮಾಂಡ್‌ಗೆ ವರದಿ ಸಲ್ಲಿಸಿದ್ದರು.
ಸಿಎಂ ಇಲ್ಲದೆ ಸಭೆ ಸರಿಯಲ್ಲ": ಶಾಸಕರ ಆಕ್ಷೇಪ
ಶಾಸಕರ ಬೇಕು ಬೇಡಗಳನ್ನು ಆಲಿಸಬೇಕಿರುವುದು ಶಾಸಕಾಂಗ ಪಕ್ಷದ ನಾಯಕರಾದ ಮುಖ್ಯಮಂತ್ರಿಗಳೇ ಹೊರತು ಅವರ ಅನುಪಸ್ಥಿತಿಯಲ್ಲಿ ಉಸ್ತುವಾರಿ ಮಾತ್ರ ಸಭೆ ನಡೆಸಿದ್ದು ಸರಿಯಲ್ಲ ಎಂದು ಹಲವು ಶಾಸಕರು ಮತ್ತು ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅನುದಾನ ಹಂಚಿಕೆ ಮಾಡುವವರು ಮುಖ್ಯಮಂತ್ರಿಗಳೇ ಆಗಿರುವುದರಿಂದ, ಸಿದ್ದರಾಮಯ್ಯ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಸಮಸ್ಯೆಗಳನ್ನು ಆಲಿಸಬಹುದಿತ್ತು. ಅದು ಬಿಟ್ಟು ಏಕಾಏಕಿ ಸುರ್ಜೇವಾಲಾ ಒಬ್ಬರೇ ಸಭೆ ನಡೆಸಿರುವುದು ಸೂಕ್ತವಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ. ಸುರ್ಜೇವಾಲಾ ಒಬ್ಬರೇ ಸಭೆ ನಡೆಸುವುದಾದರೆ ಶಾಸಕಾಂಗ ಪಕ್ಷದ ಸಭೆಯನ್ನೇ ಕರೆಯಬಹುದಿತ್ತು ಎಂಬ ಅಭಿಪ್ರಾಯವನ್ನು ಅನೇಕ ಶಾಸಕರು ವ್ಯಕ್ತಪಡಿಸಿದ್ದಾರೆ.