25 ವರ್ಷಗಳ ನಂತರ ಮತ್ತೆ ಬಂದ ‘ಮೇಘಮಾಲೆ’ಯ ಸುನಾದ್‍ ರಾಜ್‍

ಸುನಾದ್‍ ರಾಜ್‍ ಈಗ 25 ವರ್ಷಗಳ ನಂತರ ‘ನಿಂಬಿಯಾ ಬನಾದ ಮ್ಯಾಗ’ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ವಾಪಸ್ಸಾಗಿದ್ದಾರೆ.;

Update: 2025-04-04 06:25 GMT
25 ವರ್ಷಗಳ ನಂತರ ಮತ್ತೆ ಬಂದ ‘ಮೇಘಮಾಲೆ’ಯ ಸುನಾದ್‍ ರಾಜ್‍

90ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಗಮನಸೆಳೆದ ನಾಯಕರ ಪೈಕಿ ಸುನಾದ್‍ ರಾಜ್‍ ಸಹ ಒಬ್ಬರು. ‘ಮೇಘಮಾಲೆ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಅವರು, ಆ ನಂತರ ‘ಗಣೇಶ ಐ ಲವ್‍ ಯೂ’, ‘ಮಧುರ ಮೈತ್ರಿ’ ಮತ್ತು ‘ಕಡ್ಲಿಮಟ್ಟಿ ಸ್ಟೇಶನ್‍ ಮಾಸ್ಟರ್’ ಚಿತ್ರಗಳಲ್ಲಿ ನಟಿಸಿದರು. ‘ಕಡ್ಲಿಮಟ್ಟಿ ಸ್ಟೇಶನ್‍ ಮಾಸ್ಟರ್’ ಚಿತ್ರದ ನಂತರ ಚಿತ್ರರಂಗದಿಂದ ದೂರವೇ ಇದ್ದ ಸುನಾದ್‍ ರಾಜ್‍, ಈಗ 25 ವರ್ಷಗಳ ನಂತರ ‘ನಿಂಬಿಯಾ ಬನಾದ ಮ್ಯಾಗ’ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ವಾಪಸ್ಸಾಗಿದ್ದಾರೆ.

ಇಷ್ಟು ದಿನ ಅವರು ಎಲ್ಲಿದ್ದರು, ಏನು ಮಾಡುತ್ತಿದ್ದರು ಎಂದರೆ ಮೈಸೂರಿನಲ್ಲಿ ವ್ಯಾಪಾರ ಮಾಡುತ್ತಿದ್ದರಂತೆ. ಚಿತ್ರರಂಗದ ಕೆಲವು ಕೆಟ್ಟ ಬೆಳವಣಿಗಳಿಂದ ಬೇಸರಗೊಂಡಿದ್ದ ಅವರು ಚಿತ್ರರಂಗದಿಂದ ದೂರವೇ ಉಳಿದಿದ್ದಾಗಿ ಹೇಳುತ್ತಾರೆ. ಚಿತ್ರರಂಗದಿಂದ ದೂರವಿದ್ದರೂ, ಅಭಿನಯವನ್ನು ಬಹಳ ಮಿಸ್‍ ಮಾಡಿಕೊಳ್ಳುತ್ತಿದ್ದರಂತೆ.

ಈ ಕುರಿತು ಮಾತನಾಡುವ ಅವರು, ‘ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆ ಇದ್ದೇ ಇತ್ತು. ಆದರೆ, ಹಲ್ಲಿದ್ದವನಿಗೆ ಕಡಲೆ ಇಲ್ಲ, ಕಡಲೆ ಇದ್ದವನಿಗೆ ಹಲ್ಲಿಲ್ಲ ಎಂಬ ಸನ್ನಿವೇಶ ನನ್ನ ಜೀವನದಲ್ಲಿ ಆಯಿತು. ‘ಮೇಘಮಾಲೆ’ ಸಂದರ್ಭದಲ್ಲಿ ಡಾ. ರಾಜಕುಮಾರ್, ವಿಷ್ಣುವರ್ಧನ್‍, ಅಂಬರೀಶ್‍, ಶಿವಣ್ಣ, ರವಿಚಂದ್ರನ್ ಮುಂತಾದ ದೊಡ್ಡದೊಡ್ಡ ಕಲಾವಿದರು ಇದ್ದರು. ಆ ಸಂದರ್ಭದಲ್ಲಿ ಬಂದು ನಾನು ಸ್ವಲ್ಪ ಹೆಸರು ಮಾಡಿದೆ ಎಂಬ ಖುಷಿಯಿದೆ. ಇವತ್ತಿಗೂ ಜನ ನನ್ನನ್ನು ಗುರುತಿಸುತ್ತಾರೆ ಎಂದರೆ ಅದಕ್ಕೆ ಕಾರಣ ಡಾ. ರಾಜಕುಮಾರ್. ಅವರು ಹಾಡಿದ ‘ಮೇಘಮಾಲೆ’ ಹಾಡು ನನ್ನ ಪಾಲಿಗೆ ಭಿಕ್ಷೆ. ಇವತ್ತಿಗೂ ನಾನು ಎಲ್ಲೇ ಹೋದರೂ, ‘ಮೇಘಮಾಲೆ’ ಸುನಾದ್‍ ರಾಜ್‍ ಎಂದು ಗುರುತಿಸುತ್ತಾರೆ. ಆ ಸಿನಿಮಾ ಬಿಡುಗಡೆಯಾಗಿ 30 ವರ್ಷಗಳಾಗಿವೆ. ಆದರೂ ಇವತ್ತಿಗೂ ನಾನು ಎಲ್ಲಿಗೇ ಹೋದರೂ ಜನ ಗುರುತು ಹಿಡಿಯುತ್ತಾರೆ’ ಎನ್ನುತ್ತಾರೆ ಸುನಾದ್‍ ರಾಜ್‍.

ಜನ ಈಗಲೂ ‘ಮೇಘಮಾಲೆ’ ಮತ್ತು ಅದರ ಶೀರ್ಷಿಕೆ ಗೀತೆಯನ್ನು ನೆನಪಿಸಿಕೊಳ್ಳುತ್ತಾರಂತೆ. ‘ನಾನು ಸಿನಿಮಾ ಬಿಟ್ಟು ಬಹಳ ವರ್ಷ ಆಯಿತು, ಬೆಂಗಳೂರಿಗೆ ಬಂದರೂ ಗಾಂಧಿನಗರದ ಕಡೆ ಬರುವುದಿಲ್ಲ. ಆದರೂ ಬಹಳಷ್ಟು ನೀವು ಸಿನಿಮಾ ಬಿಡಬಾರದು, ಇನ್ನಷ್ಟು ಮಾಡಬೇಕು ಎಂದು ಹೇಳುತ್ತಿರುತ್ತಾರೆ. ‘ಮೇಘಮಾಲೆ’ ಚಿತ್ರದ ಹಾಡನ್ನು ಕೇಳುತ್ತೇವೆ’ ಎನ್ನುತ್ತಾರೆ. ನನ್ನೊಳಗೂ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ಪ್ರತಿಭೆ ಇಲ್ಲದಿದ್ದರೆ ಪರವಾಗಿಲ್ಲ. ಎಲ್ಲವೂ ಇದ್ದು, ಸಿನಿಮಾ ಮಾಡುತ್ತಿಲ್ಲ ಎಂಬ ಬೇಸರವಿತ್ತು. ಹೀಗಿರುವಾಗಲೇ, ‘ನಿಂಬಿಯಾ ಬನಾದ ಮ್ಯಾಗ’ ಚಿತ್ರದಲ್ಲಿ ನಟಿಸುವ ಅವಕಾಶ ಬಂತು’ ಎನ್ನುತ್ತಾರೆ.

ನಿರ್ದೇಶಕ ಅಶೋಕ್‍ ಬಂದು ಒಂದು ಪಾತ್ರ ಮಾಡಿ ಎಂದು ಹೇಳಿದಾಗ, ಅವರಿಗೆ ಸುನಾದ್‍ ರಾಜ್‍ ಒಂದು ವಿಷಯ ಹೇಳಿದರಂತೆ. ‘ನಾನು ಉದ್ಧಕೂದಲು ಬಿಟ್ಟಿದ್ದೇನೆ. ಕೂದಲು ಕಟ್‍ ಮಾಡಿಸಿಕೊಳ್ಳೋಕೆ ಆಗಲ್ಲ. ಈ ಕೂದಲು ಹಾಗೆ ಉಳಿಸಿಕೊಂಡು ಪಾತ್ರ ಮಾಡಬಹುದು ಎನ್ನುವುದಾದರೆ ಮಾಡುತ್ತೇನೆ ಎಂದೆ. ಅದಕ್ಕೆ ನಿರ್ದೇಶಕರು ಈ ಪಾತ್ರಕ್ಕೆ ನಾನು ಹೊಂದುತ್ತೇನೆ ಎಂದಾಗ, ಒಪ್ಪಿ ಸಿನಿಮಾದಲ್ಲಿ ನಟಿಸಿದೆ. ಈ ಪಾತ್ರವನ್ನು ಜನ ಇಷ್ಟಪಡುತ್ತಾರೆ ಎಂಬ ನಂಬಿಕೆ ನನಗಿದೆ’ ಎನ್ನುತ್ತಾರೆ.

ಈ ಚಿತ್ರವೇನೋ ಆಯಿತು, ಮುಂದಿನ ದಿನಗಳಲ್ಲಿ ಅವರು ಅಭಿನಯಿಸುತ್ತಾರಾ ಎಂಬ ಪ್ರಶ್ನೆಗೆ, ‘ಒಳ್ಳೆಯ ಪಾತ್ರಗಳಿದ್ದರೆ ಖಂಡಿತಾ ಮಾಡುತ್ತೇನೆ’ ಎನ್ನುತ್ತಾರೆ. ‘ತೆಲುಗು ಚಿತ್ರವೊಂದರಲ್ಲಿ ವಿಲನ್‍ ಪಾತ್ರ ಮಾಡಿ ಎಂದು ಯಾರೋ ಕೇಳಿದರು. ನನಗೆ ಇಷ್ಟವಿಲ್ಲ. ನನ್ನ ಮೊದಲ ಆದ್ಯತೆ ಕನ್ನಡ. ಕನ್ನಡ ಚಿತ್ರಗಳಲ್ಲಿ ಒಳ್ಳೆಯ ಪಾತ್ರಗಳು ಸಿಕ್ಕರೆ ಖಂಡಿತಾ ಮಾಡುತ್ತೇನೆ. ನಾನು ಮದರಾಸಿನ ಫಿಲಂ ಇನ್‍ಸ್ಟಿಟ್ಯೂಟ್‍ನಲ್ಲಿ ಓದುತ್ತಿದ್ದಾಗ, ಕೆ. ಬಾಲಚಂದರ್​​  ನಿರ್ದೇಶನದ ‘ವಾನಮೆ ಇಲ್ಲೈ’ ಎಂಬ ಚಿತ್ರದಲ್ಲಿ ಪಾತ್ರ ಮಾಡುವುದಕ್ಕೆ ಅವಕಾಶ ಬಂತು. ಆದರೆ, ನಾನು ಕನ್ನಡಾಭಿಮಾನಿ. ಕನ್ನಡದಲ್ಲಿಯೇ ಸಿನಿಮಾ ಮಾಡಬೇಕು ಎಂದು ‘ಮೇಘಮಾಲೆ’ ಚಿತ್ರ ಮಾಡಿದೆ. ತಮಿಳಿನಲ್ಲಿ ನಟಿಸಬೇಕು ಎಂದರೆ, ಅಲ್ಲಿ ಸಾಕಷ್ಟು ಪರಿಚಯದವರಿದ್ದಾರೆ. ನನಗೆ ಕನ್ನಡದಲ್ಲೇ ನಟಿಸಬೇಕು ಎಂಬ ಆಸೆ. ಹಾಗಾಗಿ, ಕನ್ನಡದಲ್ಲಿ ಅವಕಾಶ ಸಿಕ್ಕರೆ ನಟಿಸುತ್ತೇನೆ’ ಎನ್ನುತ್ತಾರೆ ಸುನಾದ್‍ ರಾಜ್‍.

Tags:    

Similar News