Sugarcane Crisis| ಮುಧೋಳದಲ್ಲಿ ಕಬ್ಬಿನ ಟ್ರ್ಯಾಕ್ಟರ್‌ಗಳಿಗೆ ಬೆಂಕಿ: ಜಿಲ್ಲಾ ಉಸ್ತುವಾರಿ ಸಚಿವ ತಿಮ್ಮಾಪೂರ ಭೇಟಿ ಇಂದು

ಟ್ರ್ಯಾಕ್ಟರ್​​ಗಳಿಗೆ ಬೆಂಕಿ ಹಚ್ಚಿರುವ ಘಟನೆಯಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಸ್ಥಳಕ್ಕೆ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

Update: 2025-11-14 05:00 GMT

ಕಬ್ಬಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವಂತೆ ಎಫ್‌ಆರ್‌ಪಿ ದರ ನೀಡುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕಾರ್ಖಾನೆ ಬಳಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್​​ಗಳಿಗೆ ಬೆಂಕಿ ಹಚ್ಚಿದ ಘಟನೆ ಬಳಿಕ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದ್ದು, ಸ್ಥಳಕ್ಕೆ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. 

ರೈತರ ಸಮಸ್ಯೆಗೆ ಸರ್ಕಾರ ಸ್ಪಂದನೆ ಮಾಡಲಿದೆ. ರೈತರು ಶಾಂತ ರೀತಿಯಿಂದ ವರ್ತನೆ ಮಾಡುವಂತೆ ಉಸ್ತುವಾರಿ ಸಚಿವರು ಮನವಿ ಮಾಡಿದ್ದಾರೆ. ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆ ಬಳಿಯಿದ್ದ 100  ಟ್ರ್ಯಾಕ್ಟರ್​​ಗಳಿಗೆ ಬೆಂಕಿ ಹಚ್ಚಲಾಗಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಮೂರು ದಿನಗಳ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಹೊತ್ತಿ ಉರಿದಿದ್ದ ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆ ಸ್ಥಳವು ಇದೀಗ ಹತೋಟಿಗೆ ಬಂದಿದ್ದು, ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಸಚಿವ ತಿಮ್ಮಾಪೂರ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಜತೆಗೆ ಸ್ಥಳೀಯ ರೈತರೊಂದಿಗೆ, ಪೊಲೀಸರೊಂದಿಗೆ ಮಾತುಕತೆ ನಡೆಸಿ ವಾಸ್ತವಾಂಶದ ಮಾಹಿತಿಯನ್ನು ಪಡೆದುಕೊಳ್ಳಲಿದ್ದಾರೆ.

ಪ್ರತಿ ಟನ್​ಗೆ 3,500 ರೂ. ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ಮುಧೋಳ ಪಟ್ಟಣ ಬಂದ್ ಮಾಡಲಾಗಿದೆ. ವಿವಿಧ ಗ್ರಾಮಗಳಿಂದ ಟ್ರ್ಯಾಕ್ಟರ್ ಮೂಲಕ ರೈತರು ಆಗಮಿಸಿ, ಬೃಹತ್ ಪ್ರತಿಭಟನೆ ನಡೆಸಿದ ಕಾರಣ ವ್ಯಾಪಾರಸ್ಥರು ಸಹ ಅಂಗಡಿ ಮುಂಗಟ್ಟು ಬಂದ್ ಮಾಡಿ ಬೆಂಬಲ ನೀಡಿದರು. ಅಟೋ ಚಾಲಕರ ಸಂಘ ಸೇರಿದಂತೆ ಇತರ ಸಂಘಟನೆಯವರು ಸಹ ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ರೈತರ ಹೋರಾಟ ತೀವ್ರ ಸ್ವರೂಪ ಪಡೆದ ಹಿನ್ನೆಲೆ ಜಿಲ್ಲೆಯ ಮೂರು ತಾಲೂಕಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮುಧೋಳ, ಜಮಖಂಡಿ ಹಾಗೂ ರಬಕವಿ ಬನಹಟ್ಟಿ ತಾಲೂಕಿನಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. 

ಕಬ್ಬು ಬೆಳೆಗೆ ಏಕರೂಪ ದರ ನಿಗದಿಗೊಳಿಸುವಂತೆ ಆಗ್ರಹಿಸಿ ನಡೆಯುತ್ತಿರುವ ರೈತರ ಹೋರಾಟ ತೀವ್ರ ಸ್ವರೂಪ ಪಡೆದು ಕೊಂಡಿದೆ. ರೈತರು ಮುಧೋಳದಿಂದ ಮಹಾಲಿಂಗಪುರ ಪಟ್ಟಣಕ್ಕೆ ಸಾಗುತ್ತಿದ್ದ ಕಬ್ಬು ತುಂಬಿದ ಟ್ರ್ಯಾಕ್ಟರ್​​ನ್ನು ನೆಲಕ್ಕುರುಳಿಸಿ, ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ರ್ಯಾಕ್ಟರ್ ಪಲ್ಟಿಯಾಗದ ಹಿನ್ನೆಲೆಯಲ್ಲಿ, ರಾಜ್ಯ ಹೆದ್ದಾರಿ ತುಂಬೆಲ್ಲಾ ಕಬ್ಬು ಚೆಲ್ಲಾಪಿಲ್ಲಿಯಾಗಿ ಬಿಸಾಡಿ ರಸ್ತೆ ತಡೆ ಜೊತೆಗೆ, ರಸ್ತೆಯ ಮೇಲೆ ಬಿದ್ದಿರುವ ಕಬ್ಬಿಗೆ ಬೆಂಕಿ ಹಚ್ಚಿದ್ದಾರೆ.

Tags:    

Similar News