ಮಂಜುನಾಥ್ ಎದುರಿನ ಸೋಲು| ದುಃಖ ಇನ್ನೂ ಮಾಸಿಲ್ಲ ಎಂದ ಡಿ.ಕೆ. ಶಿವಕುಮಾರ್
ಇತ್ತೀಚಿಗಿನ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಮೂರನೇ ಬಾರಿಗೆ ಸ್ಪರ್ಧಿಸಿದ ತಮ್ಮ ಸೋದರ ಡಿ.ಕೆ. ಸುರೇಶ್ ಅವರು ತಮ್ಮ ರಾಜಕೀಯ ಎದುರಾಳಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದ ಡಾ. ಸಿ.ಎನ್. ಮಂಜುನಾಥ್ ಅವರ ಎದುರು ಹೀನಾಯವಾಗಿ ಪರಾಭವಗೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಾವು ಇನ್ನೂ ಸೋಲಿನ ದುಃಖದಿಂದ ಹೊರಬಂದಿಲ್ಲ ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಅವರಿಂದ ತೆರವಾಗುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಡಿ.ಕೆ. ಸುರೇಶ್ ಅವರು ಸ್ಪರ್ಧಿಸುತ್ತಾರೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್ ಅವರು, “ನಾವು ಚನ್ನಪಟ್ಟಣ ಉಪಚುನಾವಣೆ ಬಗ್ಗೆ ಆಲೋಚನೆ ಮಾಡಿಲ್ಲ. ನಾವು ಇನ್ನೂ ಸೋಲಿನ ದುಃಖದಿಂದ ಹೊರಬಂದಿಲ್ಲ. ಸದ್ಯಕ್ಕೆ ಆ ಕ್ಷೇತ್ರದ ಜನ ನಮಗೆ ಕೊಟ್ಟಿರುವ ಮುನ್ನಡೆಗೆ ಧನ್ಯವಾದ ಅರ್ಪಿಸುತ್ತೇನೆ. ಸುರೇಶ್ ಅವರಿಗೆ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವ ಆತುರವಿಲ್ಲ. ಅಲ್ಲಿ ಅನೇಕ ಕಾರ್ಯಕರ್ತರಿದ್ದು, ಮುಂದೆ ನೋಡೋಣ” ಎಂದು ಹೇಳಿದರು.
ಚನ್ನಪಟ್ಟಣದಿಂದ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಳಿಸುವ ಇರಾದೆ ಕುಮಾರಸ್ವಾಮಿ ಅವರಿಗಿದೆ ಎನ್ನಲಾಗಿದೆ. ಹಾಗೇನಾದರೆ ರಾಜಕೀಯ ಸೇಡು ತೀರಿಸಿಕೊಳ್ಳಲು ಸುರೇಶ್ ಅಲ್ಲಿಂದ ಸ್ಪರ್ಧಿಸುತ್ತಾರೆ ಎಂಬ ಮಾಹಿತಿ ಇರುವುದರಿಂದ ಶಿವಕುಮಾರ್ ಅವರಿಗೆ ಆ ಪ್ರಶ್ನೆ ಕೇಳಲಾಗಿತ್ತು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ತಮ್ಮ ಸೋದರನ ಸೋಲಿನ ಬಗ್ಗೆ ವಿವರ ನೀಡಿದ ಡಿ.ಕೆ. ಶಿವಕುಮಾರ್, “ನಾನು ಅತಿಯಾದ ಆತ್ಮವಿಶ್ವಾಸದಲ್ಲಿದ್ದೆ. ನಾನು ರಾಜ್ಯ ಸುತ್ತಬೇಕಾದ ಕಾರಣ ಹೆಚ್ಚು ಸಮಯ ಮೀಸಲಿಡಲು ಆಗಿಲ್ಲ. ಇದು ನನ್ನ ವೈಯಕ್ತಿಕ ಸೋಲು ಎಂದು ನಾನು ಒಪ್ಪಿಕೊಳ್ಳುತ್ತೇನೆ. ಅವರು ಕೂಡ ವಿವಾದರಹಿತ ಅಭ್ಯರ್ಥಿ ಕಣಕ್ಕಿಳಿಸುವ ಮೂಲಕ ಉತ್ತಮ ತಂತ್ರಗಾರಿಕೆ ಮಾಡಿದ್ದಾರೆ. ದಳದಲ್ಲಿ ನಿಂತರೆ ಮತ ಬರುವುದಿಲ್ಲ ಎಂದು ಬಿಜೆಪಿಯಿಂದ ಟಿಕೆಟ್ ನೀಡಲಾಯಿತು. ನಮ್ಮ ಅಭ್ಯರ್ಥಿ ವಿರುದ್ಧ ಆಡಳಿತ ವಿರೋಧಿ ಅಲೆ ಇರಲಿಲ್ಲ. ಸೋಲು ಸೋಲೇ ಅದನ್ನು ಒಪ್ಪಿಕೊಳ್ಳುತ್ತೇವೆ," ಎಂದರು. ಕನಕಪುರದಲ್ಲಿ 50-60 ಸಾವಿರ ಮುನ್ನಡೆ ಪಡೆಯುವ ನಿರೀಕ್ಷೆಯಿತ್ತು. ಮಾಗಡಿ, ಕುಣಿಗಲ್, ರಾಮನಗರದಲ್ಲಿ ನಮಗೆ ಮತ ಬಂದಿವೆ. ನಮಗೆ ಪೆಟ್ಟು ಬಿದ್ದಿದ್ದು ನಗರ ಪ್ರದೇಶದಲ್ಲಿ ಎಂದವರು ವಿಶ್ಲೇಷಿಸಿದ್ದಾರೆ.
ದೇವೇಗೌಡರ ಕುಟುಂಬದ ವಿರುದ್ಧ ನಿಮ್ಮ ಮುಂದಿನ ತಂತ್ರಗಾರಿಕೆ ಏನು ಎಂದು ಕೇಳಿದಾಗ, “ಈ ಹಿಂದೆ ದೇವೇಗೌಡರು, ಕುಮಾರಸ್ವಾಮಿ, ಅನಿತಕ್ಕ, ನಿಖಿಲ್ ಎಲ್ಲರೂ ಸೋತಿದ್ದರು. ಈಗ ಸುರೇಶ್ ಸೋತಿದ್ದಾರೆ ಅಷ್ಟೇ” ಎಂದರು.