ರಾಜ್ಯಪಾಲರ ವಿರುದ್ಧ ಹೇಳಿಕೆ‌ । ಐವಾನ್ ಡಿಸೋಜ ಮನೆ ಮೇಲೆ ಕಲ್ಲು ತೂರಾಟ

Update: 2024-08-22 06:40 GMT

ರಾಜ್ಯಪಾಲರ ವಿರುದ್ಧ ವಿವಾದಾತ್ಮಕ ಹೇಳಿಕೆ‌ ನೀಡಿದ್ದ ಕಾಂಗ್ರೆಸ್ ನಾಯಕ, ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಅವರ ಮಂಗಳೂರಿನ ವೆಲೆನ್ಸಿಯಾದಲ್ಲಿರುವ ಮನೆ ಮೇಲೆ ಕಲ್ಲು ತೂರಾಟ ನಡೆದಿದೆ.

ಬುಧವಾರ ರಾತ್ರಿ ಈ ಕೃತ್ಯ ನಡೆದಿದ್ದು, ಬೈಕ್ ನಲ್ಲಿ ಬಂದಿದ್ದ ಐದಾರು ಮಂದಿ ಹೆಲ್ಮೆಟ್‌ ಧರಿಸಿದ್ದ ದುಷ್ಕರ್ಮಿಗಳು ಈ ಕೃತ್ಯ ನಡೆಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಕಲ್ಲು ತೂರಾಟದಿಂದ ಯಾರಿಗೂ ಗಾಯವಾಗಿಲ್ಲ. ಆದರೆ ಮನೆಯ ಕಿಟಕಿಯ ಫ್ರೇಮ್‌ಗೆ ಕಲ್ಲು ಬಡಿದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕೆ ಪಾಂಡೇಶ್ವರ ಠಾಣಾ ಪೊಲೀಸರು ಭೇಟಿ ನೀಡಿ, ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದ್ದಾರೆ.

ಐವಾನ್ ಡಿಸೋಜ ರಾಜ್ಯಪಾಲರ ವಿರುದ್ಧ ಏನು ಹೇಳಿದ್ದರು?

ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಪ್ರಕರಣದಲ್ಲಿ ವಿಚಾರಣೆಗೆ ಅನುಮತಿ ನೀಡಿದ್ದ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್‌ ಪಕ್ಷ ಸಂಘಟಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ್ದ ಐವಾನ್ ಡಿಸೋಜ, ʻʻರಾಜ್ಯಪಾಲರು ಈ ಕೂಡಲೇ ದೆಹಲಿಗೆ ವಾಪಸ್ ಹೋಗಬೇಕು. ಒಂದು ವೇಳೆ ರಾಷ್ಟ್ರಪತಿಯವರು ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳದಿದ್ದರೆ, ಬಾಂಗ್ಲಾ ದೇಶದಲ್ಲಿ ಅಲ್ಲಿನ ಪ್ರಧಾನಿ ರಾತ್ರೋರಾತ್ರಿ ಓಡಿ ಹೋಗಿರುವ ಪರಿಸ್ಥಿತಿ ರಾಜಭವನದ ಕಚೇರಿಗೂ ಬರಲಿದೆʼʼ ಎಂದು ಹೇಳಿದ್ದರು.

ತಮ್ಮ ಹೇಳಿಕೆ ಬಗ್ಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಸ್ಪಷ್ಟನೆ ನೀಡಿರುವ ಐವಾನ್ ಡಿಸೋಜ, ʻʻರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿದ್ದಾರೆ. ಇದರ ವಿರುದ್ಧ ಪ್ರತಿಭಟನೆ ಇತ್ತು, ಸಂವಿಧಾನ ಬದ್ಧ ಅಧಿಕಾರ ಇರುವವರು ಸರಿಯಾಗಿ ತೀರ್ಮಾನ ಮಾಡಬೇಕು. ಕಾನೂನನ್ನು ಸರಿಯಾಗಿ ಪಾಲನೆ ಮಾಡದಿದ್ದರೆ ಬಾಂಗ್ಲಾದೇಶದ ರೀತಿಯಲ್ಲಿ ಘಟನೆ ನಡೆಯುತ್ತದೆ. ಇದನ್ನು ನಾನು ಉದಾಹರಣೆಯಾಗಿ ಹೇಳಿಕೆ‌ ನೀಡಿದ್ದೇನೆ ಅಷ್ಟೇ" ಎಂದು ಹೇಳಿದ್ದರು.

"ಅಂತಹ ಪರಿಸ್ಥಿತಿ ತರಿಸಿಕೊಳ್ಳುವುದು ಬೇಡ ಎಂದು ಹೇಳಿದ್ದೇನೆ. ಬಿಜೆಪಿ, ಜೆಡಿಎಸ್‌ಗೆ ಬೇಕಾಗಿರುವುದು ರಾಜಕೀಯ ‌ಮಾತ್ರ, ಕಾಂಗ್ರೆಸ್ ನಾಯಕರ ಬಗ್ಗೆ ಅವರೆಲ್ಲ ಏನು ಮಾತನಾಡಿದ್ದಾರೆ. ಅದರ ಬಗ್ಗೆ ಪರಾಮರ್ಶೆ ‌ಮಾಡಿಕೊಳ್ಳಲಿ, ನಾನು ಬಾಂಗ್ಲಾದೇಶದ ಘಟನೆಯನ್ನು ಉದಾಹರಣೆಯಾಗಿ ಮಾತ್ರ ಕೊಟ್ಟಿದ್ದೇನೆ. ಬಾಂಗ್ಲಾದೇಶ ನನ್ನ ಮಾಡೆಲ್ ಎಂದು ಹೇಳಿಲ್ಲ, ನನ್ನ ಹೇಳಿಕೆಯನ್ನು ತಿರುಚಿದ್ದಾರೆ. ಕುಮಾರಸ್ವಾಮಿ ಪ್ರಾಸಿಕ್ಯೂಷನ್ ಬಗ್ಗೆ ಯಾಕೆ ಬಿಜೆಪಿ ಮಾತನ್ನಾಡುವುದಿಲ್ಲ? ಬಾಂಗ್ಲಾದೇಶ ನಮ್ಮ ಮಿತ್ರ ರಾಷ್ಟ್ರ, ಅಲ್ಲಿಯ ಪ್ರಧಾನಿ ಎಲ್ಲಿ ಬಂದು ಎಲ್ಲಿ ಕೂತಿದ್ದಾರೆ. ಇದರ ಬಗ್ಗೆ ಕೂಡ ಮಾತನಾಡಿ, ನಾನು ಜವಾಬ್ದಾರಿಯಿಂದ ಮಾತನಾಡಿದ್ದೇನೆ" ಎಂದು ಸ್ಪಷ್ಟಪಡಿಸಿದ್ದರು.

"ಬಾಂಗ್ಲಾದೇಶದ ಜೊತೆ ನಂಟಿದ್ದರೆ ತನಿಖೆ ಮಾಡಲಿ, ಎಳ್ಳಷ್ಟು ತಪ್ಪಿದ್ದರೂ ಶಿಕ್ಷೆ ಕೊಡಲಿ. ವಿಧಾನ ಪರಿಷತ್ ಸ್ಥಾನ ಜನರು ಕೊಟ್ಟಿದ್ದು, ನಾನು ಚುನಾಯಿತನಾಗಿ ಬಂದಿದ್ದೇನೆ. ಗವರ್ನರ್ ಬಗ್ಗೆ ನಾವು ಇಲ್ಲಿಯವರೆಗೆ ಮಾತನಾಡಿರಲಿಲ್ಲ. ಬಿಜೆಪಿಯ ಹೊಸ ಶಾಸಕರು ಸಿಎಂ ಬಗ್ಗೆ ಏನೆಲ್ಲ ಮಾತನಾಡಿದ್ದಾರೆ, ಹಿರಿಯ ರಾಜಕಾರಣಿಗೆ ಏನೆಲ್ಲ ಮಾತನಾಡಿದ್ದಾರೆ. ಹಿಂದೂ, ಮುಸ್ಲಿಂ ದಂಗೆ ಏಳಿಸಬೇಕು ಅನ್ನೋದು ಅವರ ಚಿಂತನೆ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂಬುದು ನಮ್ಮ ಚಿಂತನೆ" ಎಂದು ಐವಾನ್‌ ಡಿಸೋಜ ಹೇಳಿದ್ದರು.

Tags:    

Similar News