ಎಂಜನಿಯರಿಂಗ್ ಕೋರ್ಸುಗಳ ಶುಲ್ಕ ಶೇ. 10ರಷ್ಟು ಹೆಚ್ಚಿಸಿದ ರಾಜ್ಯ ಸರ್ಕಾರ

Update: 2024-07-21 06:43 GMT

ರಾಜ್ಯ ಸರ್ಕಾರ 2024-25ರ ಸಾಲಿನ ಪ್ರವೇಶಕ್ಕೆ ಅನ್ವಯವಾಗುವಂತೆ ಸರ್ಕಾರಿ, ವಿಶ್ವವಿದ್ಯಾನಿಲಯ, ಖಾಸಗಿ ಅನುದಾನಿತ, ಖಾಸಗಿ ಅನುದಾನ ರಹಿತ ಎಂಜಿನಿಯರಿಂಗ್‌, ಆರ್ಕಿಟೆಕ್ಚರ್‌ ಕಾಲೇಜುಗಳ ಶುಲ್ಕವನ್ನು ಶೇ. 10ರಷ್ಟು ಹೆಚ್ಚಿಸಿ ರಾಜ್ಯ ಸರಕಾರ ಆದೇಶಿಸಿದೆ.

ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳ ಶೇ. 100 ಸರ್ಕಾರಿ ಕೋಟಾದ ಸೀಟುಗಳಿಗೆ, ಮೈಸೂರು ವಿಶ್ವವಿನಿದ್ಯಾಲಯ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಘಟಕ ಕಾಲೇಜು ಗಳ ಶೇ. 50 ಎಂಜಿನಿಯರಿಂಗ್‌ ಮತ್ತು ಆರ್ಕಿ ಟೆಕ್ಚರ್‌ ಸೀಟುಗಳಿಗೆ 42,116 ರೂ. ಶುಲ್ಕ ನಿಗದಿಪಡಿಸಲಾಗಿದೆ. ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು ವಿ.ವಿ. (ಯುವಿಸಿಇ)ಗೆ 47,250 ರೂ., ಖಾಸಗಿ ಅನುದಾನಿತ ಕಾಲೇಜು ಮತ್ತು ಖಾಸಗಿ ವಿ.ವಿ.ಗಳ ಸರ್ಕಾರಿ ಕೋಟಾದ ಸೀಟುಗಳಿಗೆ 42,116 ರೂ., ಖಾಸಗಿ ಅನುದಾನರಹಿತ ಎಂಜಿನಿಯರಿಂಗ್‌/ಆರ್ಕಿಟೆಕ್ಚರ್‌ ಕಾಲೇಜುಗಳ ಸರಕಾರಿ ಕೋಟಾದ ಸೀಟುಗಳಿಗೆ 76,135 ರೂ. ಅಥವಾ 84,596 ರೂ. ನಿಗದಿಪಡಿಸಲಾಗಿದೆ.

ಕಾಮೆಡ್‌-ಕೆ ಕೋಟಾದ ಸೀಟುಗಳು ಹಾಗೂ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾಕ ವೃತ್ತಿಪರ ಕಾಲೇಜುಗಳ ಒಕ್ಕೂಟದ ಕಾಲೇಜುಗಳಿಗೆ 1,86,111 ರೂ. ಅಥವಾ 2,61,477 ರೂ., ಶುಲ್ಕವನ್ನು ನಿಗದಿಪಡಿಸಲಾಗಿದೆ. ಅನುದಾನರಹಿತ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳು ಪ್ರತೀ ವಿದ್ಯಾರ್ಥಿಯಿಂದ ಇತರ ಶುಲ್ಕವಾಗಿ ವಾರ್ಷಿಕ 20 ಸಾವಿರ ರೂ. ಮೀರದಂತೆ ಪ್ರಥಮ ವರ್ಷದ ಶುಲ್ಕವಾಗಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಶೇ. 15ರಷ್ಟು ಶುಲ್ಕ ಏರಿಕೆಗೆ ಬೇಡಿಕೆ ಸಲ್ಲಿಸಿದ್ದವು. ಆದರೆ ಸರ್ಕಾರ ಶೇ. 10ರಷ್ಟು ಶುಲ್ಕ ಏರಿಸಲು ತೀರ್ಮಾನಿಸಿತ್ತು. ಅದರಂತೆ ಹೊಸ ಶುಲ್ಕ ಸಂರಚನೆಯನ್ನು ಉನ್ನತ ಶಿಕ್ಷಣ ಇಲಾಖೆ ಪ್ರಕಟಿಸಿದೆ.

ಕಳೆದ ವರ್ಷ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಸರ್ಕಾರಿ ಕೋಟಾದ ಸೀಟುಗಳಿಗೆ 40,860 ರೂ., ಯುವಿಸಿಇ ಕಾಲೇಜು 45,000 ರೂ., ಅನುದಾನ ರಹಿತ ಮತ್ತು ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಿಗೆ 69,214 ರೂ. ಅಥವಾ 76,905 ರೂ., ಕಾಮೆಡ್‌-ಕೆ ಸೀಟುಗಳಿಗೆ ಹಾಗೂ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾಕ ವೃತ್ತಿಪರ ಕಾಲೇಜುಗಳ ಒಕ್ಕೂಟದ ಕಾಲೇಜುಗಳಿಗೆ 1,69,192 ಅಥವಾ 2,33,706 ರೂ. ಶುಲ್ಕ ನಿಗದಿಯಾಗಿತ್ತು.

Tags:    

Similar News