ಮಕ್ಕಳ ಅಪಹರಣ, ನಾಪತ್ತೆ ಪ್ರಕರಣಗಳ ಪತ್ತೆಗೆ ಎಸ್‌ಟಿಎಫ್‌

ಮಕ್ಕಳ ನಾಪತ್ತೆಗೆ ಸಂಬಂಧಿಸಿದಂತೆ ಪ್ರತಿ ತಿಂಗಳು ಕಾನೂನು ಸೇವಾ ಪ್ರಾಧಿಕಾರಕ್ಕೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ರಚಿಸಲಾಗಿದೆ.;

Update: 2025-07-09 03:27 GMT

ರಾಜ್ಯದಲ್ಲಿ ಮಕ್ಕಳ ಅಪಹರಣ, ನಾಪತ್ತೆ ಮತ್ತು ಪತ್ತೆಯಾಗದೇ ಉಳಿದಿರುವ ಪ್ರಕರಣಗಳನ್ನು ಸಮರ್ಥವಾಗಿ ನಿಭಾಯಿಸಿ, ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗದಂತೆ ನಿಗಾ ವಹಿಸಲು  ರಾಜ್ಯ ಸರ್ಕಾರ ವಿಶೇಷ ಕಾರ್ಯಪಡೆ (STF) ರಚಿಸಲು ನಿರ್ಧರಿಸಿದೆ.

ಕಳೆದ ಜೂ.20 ರಂದು ವಿಧಾನ ಮಂಡಲದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸಭೆಯಲ್ಲಿ ಮಕ್ಕಳ ನಾಪತ್ತೆ ಪ್ರಕರಣ, ನಾಪತ್ತೆಗೆ ಕಾರಣಗಳು ಹಾಗೂ ಪತ್ತೆಯಾಗದೆ ಬಾಕಿಯಿರುವ ಪ್ರಕರಣಗಳ ಕುರಿತು ಗಂಭೀರ ಚರ್ಚೆ ನಡೆದಿದ್ದು, ನಾಪತ್ತೆಯಾದ ಮಕ್ಕಳ ಪತ್ತೆಗೆ ಹೆಚ್ಚು ಆದ್ಯತೆ ನೀಡುವಂತೆ ಸೂಚಿಸಲಾಗಿತ್ತು. ಆ ಹಿನ್ನೆಲೆಯಲ್ಲಿ  ಜೂ. 24 ರಂದು ವಿವಿಧ ಇಲಾಖೆಗಳೊಂದಿಗೆ ಪರಿಶೀಲನೆ ನಡೆಸಿದ್ದು, ಜಿಲ್ಲಾವಾರು ಇತ್ಯರ್ಥವಾಗದೆ ಬಾಕಿ ಉಳಿದಿರುವ ಪ್ರಕರಣಗಳನ್ನು ಅವಲೋಕಿಸಲಾಗಿದೆ. ಮಕ್ಕಳ ನಾಪತ್ತೆಗೆ ಸಂಬಂಧಿಸಿದಂತೆ ಪ್ರತಿ ತಿಂಗಳು ಕಾನೂನು ಸೇವಾ ಪ್ರಾಧಿಕಾರಕ್ಕೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಕಾರ್ಯಪಡೆಗಳನ್ನು ರಚಿಸಲಾಗಿದೆ.

ಜಿಲ್ಲಾವಾರು ಅಪಹರಣಕ್ಕೊಳಗಾದ ಮತ್ತು ಕಾಣೆಯಾದ ಮಕ್ಕಳ ಬಗ್ಗೆ ದಾಖಲಾಗಿರುವ ದೂರುಗಳನ್ನು ಈ ಕಾರ್ಯಪಡೆ ಪರಿಶೀಲಿಸಲಿದೆ.  ಕಾರ್ಯಪಡೆಗೆ  ಬೆಂಗಳೂರು ನಗರ ಜಿಲ್ಲೆಯ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ಎಸಿಪಿ ಹಾಗೂ ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಎಸ್‌ಪಿ ಹಾಗೂ ಪೊಲೀಸ್ ಆಯುಕ್ತರು ಅಧ್ಯಕ್ಷರಾಗಿರುತ್ತಾರೆ.  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಅಪರ ಜಿಲ್ಲಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು,  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕರು,  ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು, ಜಿಲ್ಲಾ ಬಾಲ ನ್ಯಾಯ ಮಂಡಳಿಯ ಒಬ್ಬರು ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಮಕ್ಕಳ ವಿಶೇಷ ಪೊಲೀಸ್ ಘಟಕದ ಮುಖ್ಯಸ್ಥರು, ಮಾನವ ಕಳ್ಳ ಸಾಗಾಣಿಕೆ ವಿರೋಧಿ ಘಟಕ, ಪ್ಯಾರಾಲೀಗಲ್ ವಾಲಂಟಿಯರ್ಸ್, ಮಕ್ಕಳ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಎರಡು ಸ್ವಯಂ ಸೇವಾ ಸಂಸ್ಥೆಗಳು ಸದಸ್ಯತ್ವ ಹೊಂದಿರುತ್ತವೆ.  ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯು ಸದಸ್ಯ ಕಾರ್ಯದರ್ಶಿ ಆಗಿರಲಿದ್ದಾರೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ಕಾರ್ಯಪಡೆಯ ಜವಾಬ್ದಾರಿಗಳೇನು?

  • ಕಾರ್ಯಪಡೆಯು ಪ್ರತಿ ತಿಂಗಳು ಸಭೆ ಕರೆದು ಜಿಲ್ಲೆಯಲ್ಲಿ ದಾಖಲಾದ ಮಕ್ಕಳ ಅಪಹರಣ, ಕಾಣೆಯಾದ ಮಕ್ಕಳ ದೂರುಗಳ ಕುರಿತಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಬೇಕು.
  • ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಅದೇ ತಿಂಗಳ ಅಂತ್ಯದೊಳಗೆ ಮಕ್ಕಳ ರಕ್ಷಣಾ ನಿರ್ದೇಶನಾಲಯಕ್ಕೆ ಕಡ್ಡಾಯವಾಗಿ ವರದಿ ಸಲ್ಲಿಸಬೇಕು.
  • ಕಾಣೆಯಾದ ಮಕ್ಕಳ ಪೋಷಕರನ್ನು ಸಭೆಗೆ ಕರೆದು ದೂರಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಪಡೆದು ಮಗುವಿನ ಪತ್ತೆಗೆ ಕ್ರಮ ವಹಿಸುವುದು ಹಾಗೂ ಪೋಷಕರಿಗೆ ಆಪ್ತ ಸಮಾಲೋಚನೆ ಮೂಲಕ ನೈತಿಕ ಬೆಂಬಲ ಮತ್ತು ಮಾನಸಿಕ ಧೈರ್ಯ ತುಂಬಬೇಕು.
  • ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಪತ್ತೆ ಹಚ್ಚಲು ಸಾಧ್ಯವಾಗದ ಪ್ರಕರಣಗಳ ಕುರಿತು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಿಲ್ಲಾ ಮಟ್ಟದಲ್ಲಿ ವಿಶೇಷ ಅಂದೋಲನ ಆಯೋಜಿಸಿ, ಅನುಪಾಲನೆ ಮಾಡಬೇಕು.
  • ಅಪಹರಣ ಮತ್ತು ಕಾಣೆಯಾದ ಮಕ್ಕಳ ಕಳ್ಳ ಸಾಗಾಣಿಕೆ ಕುರಿತಂತೆ ಸ್ವಸಹಾಯ ಗುಂಪುಗಳು, ಸಮುದಾಯಗಳನ್ನು ಒಳಗೊಂಡಂತೆ ಅರಿವು ಕಾರ್ಯಕ್ರಮ ಮತ್ತು ಚಟುವಟಿಕೆ ಹಮ್ಮಿಕೊಳ್ಳುವುದು.
  • ಅಪಹರಣದ ಹಿನ್ನೆಲೆಗಳ ವಿಶ್ಲೇಷಣೆ, ಮಕ್ಕಳ ಮೇಲಾಗುವ ಪರಿಣಾಮಗಳ ಕುರಿತು ಅಧ್ಯಯನ ಮತ್ತು ಮೌಲ್ಯಮಾಪನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು.

ಕಾರ್ಯಪಡೆ ರಚನೆಗೆ ಸ್ವಾಗತ

ಕರ್ನಾಟಕದಲ್ಲಿ ಕಾಣೆಯಾದ ಮಕ್ಕಳ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಸರ್ಕಾರ ಕಾರ್ಯಪಡೆ ರಚಿಸಿರುವುದು ಸ್ವಾಗತಾರ್ಹ.  ಪ್ರತಿ ಜಿಲ್ಲೆಯಲ್ಲೂ ರಚಿಸಲಿರುವ ಕಾರ್ಯಪಡೆಯಲ್ಲಿ ಎರಡು ಸ್ವಯಂಸೇವಾ ಸಂಸ್ಥೆಗಳ ಸದಸ್ಯರಿಗೆ ಅವಕಾಶ ನೀಡಿರುವುದು ಒಳ್ಳೆಯ ಕ್ರಮ.  ಕಾಣೆಯಾದ ಮಕ್ಕಳ ಅಂಕಿಅಂಶ ಗಮನಿಸಿದರೆ ಆತಂಕವಾಗುತ್ತದೆ ಎಂದು ಮಕ್ಕಳ ಹಕ್ಕುಗಳ ಕಾರ್ಯಕರ್ತ ನಾಗಸಿಂಹ ಜಿ.ರಾವ್ ತಿಳಿಸಿದ್ದಾರೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಮಂಡಳಿಯ 2022ರ ವರದಿಯಂತೆ ಭಾರತದಲ್ಲಿ 83,000ಕ್ಕೂ ಹೆಚ್ಚು ಮಕ್ಕಳು ಕಾಣೆಯಾಗಿದ್ದಾರೆ. ಶೇ 71 ಹೆಣ್ಣು ಮಕ್ಕಳು ಇದರಲ್ಲಿದ್ದಾರೆ.  ಕರ್ನಾಟಕದಲ್ಲಿ 2022ರಲ್ಲಿ ಸುಮಾರು 3,000 ಪ್ರಕರಣಗಳು ದಾಖಲಾಗಿವೆ.  2018-2023ರ ಅವಧಿಯಲ್ಲಿ ಭಾರತದಲ್ಲಿ 2,75,125 ಮಕ್ಕಳು ಕಾಣೆಯಾಗಿದ್ದು, 2,12,825 ಹೆಣ್ಣು ಮಕ್ಕಳು, 62,237 ಗಂಡು ಮಕ್ಕಳು ಕಾಣೆಯಾಗಿದ್ದರು. ಆ ಪೈಕಿ 2,40,502 ಮಕ್ಕಳನ್ನು ಪತ್ತೆ ಮಾಡಲಾಗಿದೆ. 34,623 ಮಂದಿ ಮಕ್ಕಳನ್ನು ಪತ್ತೆ ಮಾಡಲಾಗಿಲ್ಲ ಎಂದು ರಾವ್‌ ಹೇಳಿದ್ದಾರೆ. 

Tags:    

Similar News