Mysore MUDA case | ಸ್ವಾರಸ್ಯಕರ ಚರ್ಚೆಗೆ ಸಾಕ್ಷಿಯಾದ ವಿ ಸೋಮಣ್ಣ-ಸಿದ್ದರಾಮಯ್ಯ ಮುಖಾಮುಖಿ

ಸಿದ್ದರಾಮಣ್ಣನ ವಿಚಾರದಲ್ಲಿ ಏನಿದ್ದರೂ ನನ್ನದು ನೇರ ಮಾತು. ಬೇರೆಯವರ ಹಾಗೆ ಹೆದರಿಸುವುದು, ಹಿಂದೊಂದು, ಮುಂದೊಂದು ಮಾಡುವುದು ನನಗೆ ಗೊತ್ತಿಲ್ಲ ಎಂದು ಕೇಂದ್ರ ಸಚಿವ ವಿ ಸೋಮಣ್ಣ ಹೇಳಿದರು.;

Update: 2024-11-18 10:25 GMT

ರಾಜಕೀಯದಲ್ಲಿ ಬದ್ಧವೈರಿಗಳಂತೆ ಕಂಡರೂ ಬಹುಪಾಲು ನಾಯಕರು ನಿಜಜೀವನದಲ್ಲಿ ಅತ್ಯಾಪ್ತರಾಗಿ, ಸ್ನೇಹ ಸಂಬಂಧ ಕಾಪಾಡಿಕೊಂಡು ಬಂದಿರುವ ನಿದರ್ಶಗಳಿವೆ. ಅದೇ ರೀತಿ ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ವಿ. ಸೋಮಣ್ಣ ಕೂಡ ಪಕ್ಷ ಬೇರೆಯಾದರೂ ಸ್ನೇಹ ಒಂದೇ ಎಂಬ ಭಾವನೆಯಲ್ಲಿ ರಾಜಕೀಯ ಮಾಡಿಕೊಂಡು ಬಂದಿದ್ದಾರೆ.

ಹೊರಗೆ ಈ ಇಬ್ಬರೂ ನಾಯಕರು ಬದ್ಧವೈರಿಗಳಂತೆ ಕಂಡರೂ ಸ್ನೇಹದ ವಿಷಯದಲ್ಲಿ ಕುಚುಕು ಗೆಳೆಯರೇ ಆಗಿದ್ದಾರೆ. ಒಟ್ಟಿಗೆ ರಾಜಕೀಯ ಪ್ರವೇಶಿಸಿದ ಈ ನಾಯಕರು ಈಗ ದೊಡ್ಡ ಸ್ಥಾನಗಳಲ್ಲಿದ್ದಾರೆ. ಹೀಗಿದ್ದರೂ ಸ್ನೇಹ, ಸ್ನೇಹಿತರಿಗೆ ಕೊಂಚ ಕಳಂಕ ಅಂಟಿದರೂ ಸಹಿಸುವುದಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ.

ಬೆಂಗಳೂರಿನ ರಮಣಶ್ರೀ ಹೋಟೆಲ್ ಆವರಣದಲ್ಲಿ ಸೋಮವಾರ ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಮುಖಾಮುಖಿಯಾಗಿ ಮುಡಾ ಹಗರಣ ಕುರಿತು ಸ್ವಾರಸ್ಯಕರ ಚರ್ಚೆ ನಡೆಸಿದರು.

ಇಬ್ಬರೂ ನಗುನಗುತ್ತಲೇ ಮುಡಾ ಹಗರಣದ ತಪ್ಪು ಒಪ್ಪುಗಳನ್ನು ಚರ್ಚಿಸಿದ್ದು ಗಮನ ಸೆಳೆಯಿತು. ಸಿಎಂ ಸಿದ್ದರಾಮಯ್ಯ ಅವರಿಗೆ ಎದುರಾದ ವಿ. ಸೋಮಣ್ಣ ಕುಶಲೋಪರಿ ವಿಚಾರಿಸಿದರು. ಬಳಿಕ ಮುಡಾ ನಿವೇಶನ ಕುರಿತು ಪ್ರಸ್ತಾಪಿಸಿ, ಅಂದೇ ನಾನು ಹೇಳಿದ್ದೆ. ನನ್ನ ಮಾತು ಕೇಳಿದ್ದರೆ ಇಷ್ಟೆಲ್ಲ ಆಗುತ್ತಿತ್ತಾ, ಸಣ್ಣ ವಿಚಾರಕ್ಕೆ ಏನೆಲ್ಲಾ ಆಗುತ್ತಿದೆ ನೋಡಿ. ನೀವು ಅಂದೇ ಮಾತು ಕೇಳಬೇಕಿತ್ತು. ನಿವೇಶನಗಳನ್ನು ಅಂದೇ ಹಿಂದಿರುಗಿಸಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಅದು ಹಾಗಲ್ಲ, ಸುಳ್ಳು ಹೇಳ್ತಾವ್ರೆ ಕಣಯ್ಯಾ. ನನ್ನ ಮಾತು ಕೇಳು, ಹಾಗಾದರೆ, ಭೂಸ್ವಾಧೀನ ಕಾಯ್ದೆಯ ಬಗ್ಗೆ ಹೇಳು ನೋಡೋಣ. ಸುಮ್ಮನೆ ಗೊತ್ತಿಲ್ಲದೇ ಏನೇನೋ ಮಾತನಾಡಬೇಡ ಎಂದು ನಯವಾಗಿಯೇ ಗದರಿದರು.

ಅಷ್ಟಕ್ಕೂ ಸುಮ್ಮನಾಗದ ಸೋಮಣ್ಣ, ನಾನು ಸಿದ್ದರಾಮಣ್ಣನ ವಿಚಾರದಲ್ಲಿ ಏನಿದ್ದರೂ ನೇರ ಮಾತು. ಬೇರೆಯವರ ಹಾಗೆ ಹೆದರಿಸುವುದು, ಹಿಂದೊಂದು, ಮುಂದೊಂದು ಮಾಡುವುದು, ಮಾತನಾಡುವುದು ನನಗೆ ಗೊತ್ತಿಲ್ಲ ಎಂದು ಸುತ್ತಲೂ ನೆರೆದಿದ್ದ ಜನರಿಗೆ ಒಪ್ಪಿಸಿದರು.

ಇನ್ನು ಸಿದ್ದರಾಮಯ್ಯ ಹಾಗೂ ಸೋಮಣ್ಣ ಕಳೆದ ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಪರಸ್ಪರ ಎದುರಾಳಿಗಳಾಗಿ ಸ್ಪರ್ಧಿಸಿದ್ದರೂ ವೈಯಕ್ತಿಕ ಟೀಕೆ ಮಾಡಿಕೊಂಡಿರಲಿಲ್ಲ. ಅಭಿವೃದ್ಧಿ, ಜಾತಿ ಲೆಕ್ಕಾಚಾರದಲ್ಲಿ ಮತಯಾಚನೆ ಮಾಡಿದ್ದರು. ಟಿಕೆಟ್‌ ಘೋಷಣೆ ಸಂದರ್ಭದಲ್ಲಿ ಸೋಮಣ್ಣ ಕಾಂಗ್ರೆಸ್‌ ಸೇರುವ ಕುರಿತು ಸಾಕಷ್ಟು ವದಂತಿಗಳು ಹರಿದಾಡಿದ್ದವು. ಆದರೆ, ಕೊನೆ ಕ್ಷಣದಲ್ಲಿ ಸೋಮಣ್ಣಗೆ ಬಿಜೆಪಿ ಟಿಕೆಟ್‌ ಘೋಷಿಸಿ, ಸಿಎಂ ಎದುರು ಸ್ಪರ್ಧೆಗೆ ಇಳಿಸಿತ್ತು.

ಈಚೆಗೆ ಮುಡಾ ಹಗರಣ ಕುರಿತ ಬಿಜೆಪಿ ನಾಯಕರ ಆರೋಪಗಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಭ್ರಷ್ಟಾಚಾರದ ಕಳಂಕವಿಲ್ಲ. ವಿರೋಧ ಪಕ್ಷಗಳು ನನ್ನ ಮೇಲೆ ವೃಥಾ ಆರೋಪ ಮಾಡುತಿದ್ದಾರೆ. ನನ್ನ ಶ್ರೀಮತಿಯನ್ನು ವಿವಾದದಲ್ಲಿ ಎಳೆದು ತಂದಿದ್ದಾರೆ. ನನ್ನನ್ನು ಮುಟ್ಟಲು ಬಂದರೆ ಜನ ಸುಮ್ಮನೆ ಬಿಡಲ್ಲ ಎಂದು ಹೇಳಿದ್ದರು.

ಸಿಎಂ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ವಿ. ಸೋಮಣ್ಣ, ಹೌದು ಸಿದ್ದರಾಮಯ್ಯ ಅವರನ್ನು ಮುಟ್ಟಿದರೆ ಪೊಲೀಸರು ಹಿಡಿದು ಕೇಸ್ ಹಾಕುತ್ತಾರೆ ಎಂದು ವ್ಯಂಗ್ಯವಾಡಿದ್ದರು. ಮುಂದುವರಿದು, ಸಿದ್ದರಾಮಯ್ಯ ಹಿರಿಯ ಮತ್ತು ಅನುಭವಿ ರಾಜಕಾರಣಿ. ಅವರಾಡುವ ಮಾತು ಜನಸಾಮಾನ್ಯರಿಗೆ ಸ್ಪಂದಿಸುವಂತಿರಬೇಕು. ಜನರ ಭಾವನೆಗಳಿಗೆ ತದ್ವಿರುದ್ಧವಾಗಿ ಅವರು ಮಾತಾಡಬಾರದು. ಮೈಸೂರಲ್ಲಿ ಅವರಾಡಿದ ಮಾತು ಅವರ ವಿವೇಚನೆಗೆ ಬಿಟ್ಟದ್ದು ಎಂದು ಹೇಳಿದ್ದರು.

ಮುಡಾ ಹಗರಣ ಕುರಿತಂತೆ ಗದಗಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಲಿನ ಮೇಲೆ ಒಂದು ಕಲ್ಲು ಹಾಕಿಕೊಳ್ಳುವ ಬದಲು ಹತ್ತಾರು ಕಲ್ಲು ಹಾಕಿಕೊಂಡು ಔಷಧಿ ಇಲ್ಲದ ಹಾಗೇ ಗಾಯ ಮಾಡಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದರು.

ಸಿಎಂ ಸಿದ್ದರಾಮಯ್ಯ ಹಾಗೂ ನಾನು ಒಟ್ಟಿಗೆ ರಾಜಕೀಯಕ್ಕೆ ಬಂದವರು. ಮುಡಾ ಪ್ರಕರಣವನ್ನು ಸಿಎಂ ಅರ್ಥ ಮಾಡಿಕೊಳ್ಳುತ್ತಿಲ್ಲ. ಆತ್ಮಸಾಕ್ಷಿ ಬಗ್ಗೆ ಮಾತನಾಡುವ ಮೊದಲು ನಿವೇಶನಗಳನ್ನು ವಾಪಸ್ ಕೊಡಬೇಕಿತ್ತು. ವ್ಯವಸ್ಥೆಯಲ್ಲಿ ಯಾರೂ ದೊಡ್ಡವರಲ್ಲ. ಕಾನೂನು ಎಲ್ಲರಿಗೂ ಒಂದೇ’ ಎಂದು ಸಲಹೆ ನೀಡಿದ್ದರು.

ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯ ವಿಧಾನಸಭೆ ಅಧಿವೇಶನದಲ್ಲಿ ಸಿದ್ದರಾಮಯ್ಯ ಅವರು ದೇವೇಗೌಡರು, ಜೆ.ಎಚ್.ಪಟೇಲರು, ರಾಮಕೃಷ್ಣ ಹೆಗಡೆಯಾವರ ಪಂಕ್ತಿಯಲ್ಲಿರಬೇಕು ಎಂದು ಹೋಲಿಕೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ ಅವರ ನಾನು ಸಿದ್ದರಾಮಯ್ಯ ಅಷ್ಟೇ. ಬೇರೆಯವರಿಗೆ ಹೋಲಿಕೆ ಮಾಡುವ ದೊಡ್ಡ ವ್ಯಕ್ತಿಯಲ್ಲ ಎಂದು ಕುಟುಕಿದ್ದರು.

ಸಿದ್ದರಾಮಯ್ಯ ಹಾಗೂ ಸೋಮಣ್ಣ ಅವರು ಒಂದೇ ಅವಧಿಯಲ್ಲಿ ರಾಜಕೀಯಕ್ಕೆ ಬಂದಿದ್ದು, ಅಂದಿನಿಂದಲೂ ಇವರಿಬ್ಬರು ತಮ್ಮ ಸ್ನೇಹ ಉಳಿಸಿಕೊಂಡು ಬಂದಿದ್ದಾರೆ. ಸಿದ್ದರಾಮಯ್ಯ ಅವರು ಭಾರತೀಯ ಲೋಕದಳದಿಂದ ರಾಜಕೀಯ ಆರಂಭಿಸಿ, ಜನತಾ ಪಕ್ಷದಲ್ಲಿ ಮುನ್ನಡೆದರೆ, ಸೋಮಣ್ಣ ಅವರು ಜನತಾ ಪಕ್ಷದ ಸದಸ್ಯರಾಗಿ ರಾಜಕೀಯ ಪ್ರವೇಶಿಸಿದ್ದರು.

Tags:    

Similar News